Advertisement

ಸಮಸ್ಯೆ ಸುಳಿಯಲ್ಲಿ ಈಜುತ್ತಿರುವ ಕೊಳ

04:54 PM May 28, 2018 | Team Udayavani |

ಧಾರವಾಡ: ನಾಲ್ಕೈದು ದಶಕ ಇತಿಹಾಸ ಹೊಂದಿರುವ ಹು-ಧಾ ಮಹಾನಗರ ಪಾಲಿಕೆ ವ್ಯಾಪ್ತಿಯ ಇಲ್ಲಿನ ಈಜುಕೊಳ ಇದೀಗ ಸೋರುತ್ತಿದೆ. ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ, ಅದರಲ್ಲೂ ಜಿಲ್ಲಾಧಿಕಾರಿ ನಿವಾಸದ ಸನಿಹದಲ್ಲಿಯೇ ಇರುವ ಈಜುಕೊಳ ಮೂಲಸೌಕರ್ಯಗಳಿಲ್ಲದೆ ಸೊರಗುತ್ತಿದೆ.

Advertisement

ಈಜುಕೊಳದ ತಳಬದಿಗೆ ಧಕ್ಕೆ ಆಗಿರುವ ಕಾರಣ ನೀರು ಸೋರಿಕೆ ಆಗುತ್ತಿದೆ. ನೀರು ಹಿಡಿದಿಡಲು ಹರಸಾಹಸ ಪಡಬೇಕಾದ ಸ್ಥಿತಿ ಒಂದೆಡೆಯಾದರೆ, ನೀರು ಶುದ್ಧೀಕರಣ ಘಟಕವೇ ಸ್ಥಗಿತಗೊಂಡಂತಾಗಿದೆ. ಈಜುಕೊಳದ ತಳಬದಿಯಿಂದ ನೀರು ಸೋರಿಕೆ ತಡೆಯುವ ಕಾರ್ಯ ಈವರೆಗೂ ಫಲಕಾರಿಯಾಗಿಲ್ಲ. ಕಳೆದ 15 ದಿನಗಳಿಂದ ಈಜುಕೊಳಕ್ಕೆ ನೀರು ಪೂರೈಕೆಯಲ್ಲೂ ವ್ಯತ್ಯಯ ಆಗಿದ್ದು, ನೀರು ಬದಲಾವಣೆಯಲ್ಲಿಯೂ ವಿಳಂಬ ಆಗುತ್ತಿದೆ. ಬೇಸಿಗೆ ಕಾಲದಲ್ಲಿ ವಾರದಲ್ಲಿ ಎರಡು ಸಲ ಈಜುಕೊಳದ ನೀರು ಸಂಪೂರ್ಣ ಬದಲಾವಣೆ ಮಾಡಲೇಬೇಕು. ಆದರೆ ನೀರಿನ ಪೂರೈಕೆಯಲ್ಲಿ ಆಗುತ್ತಿರುವ ವ್ಯತ್ಯಯದಿಂದ ತೊಂದರೆ ಆಗುತ್ತಿದೆ.

ಪಾಲಿಕೆ ವತಿಯಿಂದ ಈಜುಕೊಳಕ್ಕೆ ನೇರವಾಗಿ ನೀರು ಪೂರೈಕೆ ವ್ಯವಸ್ಥೆ ಇದ್ದು, ಈಜುಕೊಳಕ್ಕೆ ಬಂದು ಬೀಳುವ ನೀರನ್ನು ಪಂಪ್‌ ಮಾಡಿ ಶುದ್ಧೀಕರಣ ಘಟಕಕ್ಕೆ ಮರು ಪಂಪ್‌ ಮಾಡಬೇಕು. ಆದರೆ ಈಜುಕೊಳದಿಂದ ಶುದ್ಧೀಕರಣ ಘಟಕಕ್ಕೆ ನೀರು ಪೂರೈಸುವ ಪೈಪ್‌ಲೈನ್‌ಗಳು ಹದೆಗೆಟ್ಟಿರುವ ಕಾರಣ ಅಲ್ಪ ಪ್ರಮಾಣದಲ್ಲಿ ನೀರು ಪೂರೈಕೆ ಆಗುತ್ತಿದೆ. ಹೀಗಾಗಿ ಪ್ರತ್ಯೇಕ ಮತ್ತೂಂದು ಮೋಟಾರ್‌ ಅಳವಡಿಸಿ ಈಜುಕೊಳದ ನೀರನ್ನು ಪಂಪ್‌ ಮಾಡುವ ಕೆಲಸವನ್ನುಅಲ್ಲಿನ ಸಿಬ್ಬಂದಿ ಪ್ರತಿ ದಿನ ಮಾಡುತ್ತಿದ್ದಾರೆ.

ಶುದ್ಧೀಕರಣ ಘಟಕ ಬಂದ್‌: ಈಜುಕೊಳದಲ್ಲಿ ಅಳವಡಿಸಿರುವ ಶುದ್ಧೀಕರಣ ಘಟಕ ಇದ್ದೂ ಇಲ್ಲದಂತಾಗಿದೆ. 1972ರಲ್ಲಿ ಅಳವಡಿಸಿದ್ದ ಈ ಘಟಕ ಇದೀಗ ಅಳಿವಿನಂಚಿನಲ್ಲಿದೆ. ನೀರು ಶುದ್ಧೀಕರಣ ಸಾಮರ್ಥಯವನ್ನೇ ಕಳೆದುಕೊಂಡಿದೆ. ಘಟಕಕ್ಕೆ ಅಳವಡಿಸಿರುವ ಪೈಪ್‌ಲೈನ್‌ ಗಳು ಸಂಪೂರ್ಣ ಹದೆಗೆಟ್ಟಿದೆ. ಇದಲ್ಲದೇ ಶುದ್ಧೀಕರಣ ಘಟಕಕ್ಕೆ ನೀರು ಪೂರೈಸುವ ಉಳಿದ ಪೈಪ್‌ಲೈನ್‌ಗಳೂ ಹಳೆಯದಾಗಿದ್ದು, ಆಗಾಗ ಕೆಟ್ಟು ನಿಲ್ಲುವ ಸ್ಥಿತಿಯಿದೆ.

ಹದೆಗೆಟ್ಟಿರುವ ವ್ಯವಸ್ಥೆ: ಇಲ್ಲಿ 7 ಜನ ಸಿಬ್ಬಂದಿ ಕೆಲಸ ಮಾಡುತ್ತಿದ್ದು, ಇನ್ನೂ ಇಬ್ಬರು ಸಿಬ್ಬಂದಿ ಕೊರತೆ ಇದೆ. 7ರಲ್ಲಿ ಇಬ್ಬರಷ್ಟೇ ಕಾಯಂ ನೌಕರರು. ಉಳಿದವರು ಹೊರ ಗುತ್ತಿಗೆ ಆಧಾರದ ಮೇಲೆ ಕಾರ್ಯ ನಿರ್ವಹಣೆ ಮಾಡುತ್ತಿದ್ದಾರೆ. ಪ್ರತಿದಿನ ಒಂದು ತಾಸಿನಂತೆ 6 ಬ್ಯಾಚ್‌ ವ್ಯವಸ್ಥೆ ಮಾಡಲಾಗಿದೆ. ಪ್ರತಿ ಬ್ಯಾಚ್‌ನಲ್ಲಿ 60ರಿಂದ 80 ಜನ ಇದ್ದೇ ಇರುತ್ತಾರೆ. ಆದರೆ ಈಜುಕೊಳದ ಗುಣಮಟ್ಟ ಕುಸಿಯುತ್ತಿರುವ ಹಿನ್ನೆಲೆಯಲ್ಲಿ ಸಾರ್ವಜನಿಕರು ಆತಂಕ ವ್ಯಕ್ತಪಡಿಸುತ್ತಿದ್ದಾರೆ.

Advertisement

ಈಜುಕೊಳ ಆವರಣದಲ್ಲಿ ಶುಚಿತ್ವದ ಕೊರತೆ ಇದೆ. ನೀರಿನ ಗುಣಮಟ್ಟ ದಿನದಿಂದ ದಿನಕ್ಕೆ ಕುಸಿಯುತ್ತಲೇ ಸಾಗಿದೆ. ಸ್ನಾನದ ಕೋಣೆಗಳಲ್ಲಿನ ಶವರ್‌ಗಳು ಸಂಪೂರ್ಣ ಹಾಳಾಗಿವೆ. ಶೌಚಾಲಯಗಳು ಹದೆಗೆಟ್ಟಿದ್ದು, ನಿರ್ವಹಣೆ ಕೊರತೆ ಎದುರಾಗಿದೆ. ಉದ್ಯಾನ ಸಂಪೂರ್ಣ ಹಾಳಾಗಿದ್ದು, ಭದ್ರತಾ ಸಿಬ್ಬಂದಿ ಕೊರತೆಯಿದೆ.

ಸಿಹಿ ನೀಡದ ಬೆಲ್ಲದ; ವಿಳಂಬಗೊಂಡ ಯೋಜನೆ
ಕಳೆದ ಬಾರಿ ಶಾಸಕರಾಗಿ ಆಯ್ಕೆಯಾದಾಗ ಅರವಿಂದ ಬೆಲ್ಲದ ಈಜುಕೊಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದರು. ಬಳಿಕ ಸ್ವಲ್ಪ ರಿಪೇರಿ ಕಾರ್ಯ ಕೈಗೊಂಡು ಸ್ಥಗಿತಗೊಂಡಿದ್ದ ಈಜುಕೊಳ ಪುನಃ ಆರಂಭಕ್ಕೆ ಚಾಲನೆ ಸಿಗುವಂತೆ ಮಾಡಿದ್ದರು. ಆಗಿನ ಮೇಯರ್‌ ಶಿವು ಹಿರೇಮಠ ಅವರೂ ಸಾಥ್‌ ನೀಡಿದ್ದರು. ಅರವಿಂದ ಬೆಲ್ಲದ ತಮ್ಮ ಐದು ವರ್ಷಗಳ ಅವಧಿಯಲ್ಲಿ ಸಾಕಷ್ಟು ಸಲ ಭೇಟಿ ನೀಡಿದ್ದು, ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೊಸ ರೂಪ ಕೊಡುವ ಯೋಜನೆ ಬಗ್ಗೆ ಸಾಕಷ್ಟು ಸಲ ಮಾತನಾಡಿದ್ದರು. ಅವರೇ ಹೇಳಿದಂತೆ 13 ಕೋಟಿ ರೂ. ಯೋಜನೆ ಅನುಷ್ಠಾನಗೊಳಿಸುವ ಹೊಣೆ 2ನೇ ಸಲ ಶಾಸಕರಾಗಿರುವ ಅರವಿಂದ ಬೆಲ್ಲದ ಮೇಲಿದೆ.

1972ರ ಅಕ್ಟೋಬರ್‌ನಲ್ಲಿ ಅಂದಿನ ಯುವಜನ ಕಲ್ಯಾಣ ರಾಜ್ಯ ಸಚಿವ ವಿ.ಎಸ್‌. ಕೌಜಲಗಿ ಅವರಿಂದ ಈಜುಕೊಳ ಲೋಕಾರ್ಪಣೆಗೊಂಡಿತ್ತು. ವರ್ಷಪೂರ್ತಿ ಕಾರ್ಯ ನಿರ್ವಹಿಸುವ ಈಜುಕೊಳದಲ್ಲಿ 5 ವರ್ಷಗಳ ಹಿಂದೆ ಬಾಲಕನೊಬ್ಬ ಮುಳುಗಿ ಸಾವನ್ನಪ್ಪಿದ ಕಾರಣ ಎರಡೂವರೆ ವರ್ಷ ಸ್ಥಗಿತಗೊಂಡಿತ್ತು. ಬಳಿಕ ಜನರ ಬೇಡಿಕೆಯನ್ವಯ ಕಳೆದ ಎರಡೂವರೆ ವರ್ಷಗಳಿಂದ ಮತ್ತೆ ಕಾರ್ಯ ಚಟುವಟಿಕೆ ಮುಂದುವರಿಸಿದೆ. ಆದರೆ ಮೂಲಸೌಕರ್ಯಗಳಿಲ್ಲದೆ ಸೊರಗಿದೆ.

ಈಜುಕೊಳ ಸಂಪೂರ್ಣ ನೆಲಸಮಗೊಳಿಸಿ ರಾಷ್ಟ್ರಮಟ್ಟದ ಈಜುಕೊಳ ಹಾಗೂ ಒಳಾಂಗಣ ಕ್ರೀಡಾಂಗಣ ನಿರ್ಮಿಸಲು ಸಂಸದರ ಅನುದಾನದಡಿ 13 ಕೋಟಿ ರೂ. ಯೋಜನೆ ಸಿದ್ಧಪಡಿಸಲಾಗಿತ್ತು. ಆದರೆ ಈಗಿರುವ ಈಜುಕೊಳ ನೆಲಸಮಗೊಳಿಸಲು ಜಿಲ್ಲಾಡಳಿತ ಅನುಮತಿ ನೀಡಲು ವಿಳಂಬ ಮಾಡಿದ್ದರಿಂದ ಯೋಜನೆ ಅನುಷ್ಠಾನ ತಡವಾಗಿದೆ. ಈಗ ಜಿಲ್ಲಾಧಿಕಾರಿಯಿಂದ ಅನುಮತಿ ದೊರೆತಿದ್ದು, ನಾಲ್ಕೈದು ತಿಂಗಳಲ್ಲಿ ಯೋಜನೆ ಅನುಷ್ಠಾನಕ್ಕೆ ಚಾಲನೆ ಸಿಗಲಿದೆ.
„ಅರವಿಂದ ಬೆಲ್ಲದ, ಶಾಸಕ

ವಾರಾಂತ್ಯದಲ್ಲಿ ಅಥವಾ ಬಿಡುವಿದ್ದಾಗ ಮಕ್ಕಳೊಂದಿಗೆ ಈಜುಕೊಳಕ್ಕೆ ಬರುತ್ತೇನೆ. ಇಲ್ಲಿ ಶುಚಿತ್ವ, ಸಿಬ್ಬಂದಿ ಕೊರತೆ ಇದ್ದು, ನೀರಿನ ಗುಣಮಟ್ಟ ಸಹ ಕುಸಿಯುತ್ತಿದೆ. ಇದೆಲ್ಲವನ್ನೂ ಸರಿಪಡಿಸುವ ಕೆಲಸ ಮಾಡಬೇಕು.ಅಗತ್ಯ ಮೂಲಸೌಲಭ್ಯ ಕಲ್ಪಿಸಬೇಕು.  
„ ರಮೇಶ ಘಟ್ನಟ್ಟಿ, ಮರಾಠಾ ಕಾಲೋನಿ

ನಾನಂತೂ ಈಜು ಕಲಿಯಲಿಲ್ಲ. ಮಗಳಾದರೂ ಕಲಿಯಲಿ ಎಂಬ ಉದ್ದೇಶದಿಂದ ಅವಳನ್ನು ಕರೆದುಕೊಂಡು ಬರುತ್ತೇನೆ. ಈಜುಕೊಳ ಬರೀ ಮೋಜು ಮಸ್ತಿಗಷ್ಟೇ ಉಪಯೋಗ ಆಗದೆ ಮಾಸಿಕ ದರದಲ್ಲಿ ಈಜು ಕಲಿಸುವ ವ್ಯವಸ್ಥೆ ಕಲ್ಪಿಸಿದರೆ ಅನುಕೂಲ.
 ಶಿವಪ್ಪ ಇದಿಯಮ್ಮನವರ,
ಹನುಮಂತ ನಗರ

ಶಶಿಧರ್‌ ಬುದ್ನಿ 

Advertisement

Udayavani is now on Telegram. Click here to join our channel and stay updated with the latest news.

Next