Advertisement

ಸೆನ್ಸಾರ್‌ ಮಂಡಳಿಯಲ್ಲಿ ಸಮಸ್ಯೆಯಲ್ಲದ ಸಮಸ್ಯೆ!

11:21 AM Feb 16, 2017 | Team Udayavani |

ಸೆನ್ಸಾರ್‌ ಮಂಡಳಿಯಲ್ಲಿ ಸಮಸ್ಯೆ ಇದೆಯಾ? – ಹೀಗೊಂದು ಪ್ರಶ್ನೆ ಇದೀಗ ಗಾಂಧಿನಗರಿಗರನ್ನು ಕಾಡದೇ ಇರದು. ಅದಕ್ಕೆ ಕಾರಣ, ಈಗ ಸೆನ್ಸಾರ್‌ ಆಗದೆ ಕೂತಿರುವ ಸಾಲು ಸಾಲು ಸಿನಿಮಾಗಳು. ಹೌದು, ಬರೋಬ್ಬರಿ 13 ಸಿನಿಮಾಗಳು ಸೆನ್ಸಾರ್‌ ಮಂಡಳಿಯಲ್ಲಿ ಸೆನ್ಸಾರ್‌ ಸರ್ಟಿಫಿಕೆಟ್‌ಗೊàಸ್ಕರ ಕಾದು ಕೂತಿವೆ ಎನ್ನಲಾಗುತ್ತಿದೆ. ಹಾಗಾದರೆ, ಸೆನ್ಸಾರ್‌ ಮಂಡಳಿಯಲ್ಲಿ ಏನಾಗುತ್ತಿದೆ? ಅಂಥದ್ದೇನೂ ಆಗಿಲ್ಲ. ಆದರೆ, ಸಿನಿಮಾ ನೋಡೋಕೆ ಅಲ್ಲಿ ಸದಸ್ಯರೇ ಇಲ್ಲ ಎಂಬ ಮಾತು ಕೇಳಿಬರುತ್ತಿದೆ.

Advertisement

ಸದಸ್ಯರು ಇದ್ದರೂ, ಕಾರಣಾಂತರಗಳಿಂದ ಅವರು ಸಿಗುತ್ತಿಲ್ಲ. ಹಾಗಾಗಿ, ಸಿನಿಮಾ ಬಿಡುಗಡೆಗೆ ದಿನಾಂಕ ಘೋಷಣೆ ಮಾಡಿದವರು ಇದೀಗ ಫ‌ಜೀತಿ ಪಡುವಂತಾಗಿದೆ. ಎಸ್‌.ನಾರಾಯಣ್‌ ನಿರ್ದೇಶನದ “ಪಂಟ’ ಸಿನಿಮಾ ಫೆ.17 ರಂದು ರಿಲೀಸ್‌ ಡೇಟ್‌ ಅನೌನ್ಸ್‌ ಮಾಡಿತ್ತು. ಆದರೆ, ಅದು ಅಂದು ಬಿಡುಗಡೆಯಾಗುತ್ತಿಲ್ಲ. ಅದಕ್ಕೆ ಬೇರೆಯದ್ದೇ ಕಾರಣವಿದೆ. ಆದರೆ, “ಶ್ರೀನಿವಾಸ ಕಲ್ಯಾಣ’ ಮತ್ತು “ವರ್ಧನ’ ಚಿತ್ರಗಳು ಈಗಾಗಲೇ ಫೆ 17 ರಂದು ತಮ್ಮ ರಿಲೀಸ್‌ ಡೇಟ್‌ ಅನೌನ್ಸ್‌ ಮಾಡಿದ್ದರೂ, ಬುಧವಾರ ರಾತ್ರಿಯವರೆಗೂ ಸೆನ್ಸಾರ್‌ ಸರ್ಟಿಫಿಕೆಟ್‌ ಸಿಕ್ಕಿಲ್ಲ.

ವಿಚಿತ್ರವೆಂದರೆ, ನಿನ್ನೆ ಮಧ್ಯಾಹ್ನದವರೆಗೂ ಸಿನಿಮಾ ನೋಡುವುದೇ ಅನುಮಾನ ಎಂಬ ಸ್ಥಿತಿ ಇತ್ತು. ಒಂದು ಪಕ್ಷ ಸಂಜೆ ಅಥವಾ ರಾತ್ರಿ ಈ ಎರಡು ಸಿನಿಮಾಗಳನ್ನು ನೋಡಿದ್ದರೂ, ಇಂದು ಸಿಗುವ ಸಾಧ್ಯತೆಗಳಿವೆ. ಇಷ್ಟಕ್ಕೆಲ್ಲಾ ಕಾರಣ, ಸೆನ್ಸಾರ್‌ ಮಂಡಳಿಯಲ್ಲಿ ಸಿನಿಮಾ ನೋಡಲು ಸದಸ್ಯರಿಲ್ಲ ಎಂಬುದು. ಹೀಗಾದರೆ ಈ ವಾರ ರಿಲೀಸ್‌ಗೆ ರೆಡಿಯಾಗಿರುವ ಸಿನಿಮಾಗಳ ಗತಿ ಏನು? ಸೆನ್ಸಾರ್‌ ಆಗದೇ ಇರುವುದಕ್ಕೆ ಮುಖ್ಯ ಕಾರಣವಾದರೂ ಏನು?

ಈ ಕುರಿತು ಸೆನ್ಸಾರ್‌ ಮಂಡಳಿಯ ಪ್ರಾದೇಶಿಕ ಅಧಿಕಾರಿ ಶ್ರೀನಿವಾಸಪ್ಪ “ಉದಯವಾಣಿ’ಗೆ ಉತ್ತರಿಸಿದ್ದಿಷ್ಟು. “ಸೆನ್ಸಾರ್‌ ಮಂಡಳಿಯಲ್ಲಿರುವ ಹತ್ತು ಮಂದಿ ಪುರುಷ ಸದಸ್ಯರು ಅವರವರ ವೈಯಕ್ತಿಕ ಕಾರಣಗಳಿಂದ ಹೊರಗಡೆ ಇದ್ದಾರೆ. ಉಳಿದ ನಾಲ್ಕೈದು ಮಹಿಳಾ ಸದಸ್ಯರು ಸಹ ಕೆಲ ವೈಯಕ್ತಿಕ ಕಾರಣಗಳಿಂದ ಬರಲಾಗುತ್ತಿಲ್ಲ. ಹೀಗಾಗಿ ಸಿನಿಮಾ ನೋಡಲು ಸಾಧ್ಯವಾಗುತ್ತಿಲ್ಲ. ಅದೂ ಅಲ್ಲದೆ, ಮಂಡಳಿಯಲ್ಲೊಂದು ಕಾನೂನು ಇದೆ.

ಯಾವುದೇ ಒಂದು ಸಿನಿಮಾಗೆ ಸೆನ್ಸಾರ್‌ ಮಂಡಳಿ ಸರ್ಟಿಫಿಕೆಟ್‌ ಕೊಡಬೇಕಾದರೆ, ಆ ಚಿತ್ರಕ್ಕೆ ಸಂಬಂಧಿಸಿದವರು, ಸಿನಿಮಾದ ದಾಖಲೆಗಳ ಸಮೇತ ಅರ್ಜಿ ಹಾಕಬೇಕು. 21 ದಿನಗಳ ಒಳಗೆ ಆ ಚಿತ್ರವನ್ನು ವೀಕ್ಷಿಸಿ, ಕಸರ್ಟಿಫಿಕೆಟ್‌ ಕೊಡುವುದು ವಾಡಿಕೆ.  ಸೆನ್ಸಾರ್‌ ಮಂಡಳಿ ಕೊಟ್ಟ ಸರ್ಟಿಫಿಕೆಟ್‌ಗೆ ಸಮಾಧಾನ ಇಲ್ಲವಾದರೆ, ರಿವೈಸಿಂಗ್‌ ಕಮಿಟಿಗೆ ಮೊರೆ ಹೋಗಬಹುದು. ಆದರೆ, ಇಲ್ಲಿ ಉದ್ಭವಿಸಿರುವ ಸಮಸ್ಯೆಯೆಂದರೆ, ಈಗಾಗಲೇ ಸೆನ್ಸಾರ್‌ ಮಂಡಳಿಗೆ ಬಂದಿರುವ ಸಾಕಷ್ಟು ಚಿತ್ರಗಳಿವೆ.

Advertisement

ಅವುಗಳನ್ನು ಒಂದೊಂದೇ ವೀಕ್ಷಿಸಲಾಗುತ್ತಿದೆ. ಆದರೆ, ಕೆಲ ಸಿನಿಮಾಗಳು ಈ ವಾರ ಡೇಟ್‌ ಅನೌನ್ಸ್‌ ಮಾಡಿ, ನಮ್ಮ ಚಿತ್ರ ನೋಡಲು ಸದಸ್ಯರೇ ಇಲ್ಲ ಅಂತ ಹೇಳಿಕೊಂಡರೆ ಏನು ಮಾಡಲಿ. ಅವರು ಅರ್ಜಿ ಹಾಕಿ ಒಂದು ವಾರವೂ ಆಗಿಲ್ಲ. ಅಂಥವರ ಚಿತ್ರ ನೋಡಿ ಸರ್ಟಿಫಿಕೆಟ್‌ ಕೊಡುವುದಾದರೂ ಹೇಗೆ? ನಮ್ಮಲ್ಲಿ ಯಾರು ಮೊದಲು ಬಂದಿರುತ್ತಾರೋ, ಅವರಿಗೆ ಮೊದಲ ಆದ್ಯತೆ. 21 ದಿನಗಳವರೆಗೂ ನಮಗೆ ಚಿತ್ರ ನೋಡಿ ಸರ್ಟಿಫಿಕೆಟ್‌ ನೀಡಲು ಅವಕಾಶ ಇದೆ. 

ಕೆಲವರು ಡೇಟ್‌ ಅನೌನ್ಸ್‌ ಮಾಡಿ, ನಮ್ಮ ಚಿತ್ರ ನೋಡಿ, ಸರ್ಟಿಫಿಕೆಟ್‌ ಕೊಡಿ ಅಂದರೆ, ಮೊದಲು ಬಂದ ಚಿತ್ರಗಳ ಗತಿ ಏನು?  ಮಂಡಳಿಯಲ್ಲಿ ಸದಸ್ಯರೇ ಇಲ್ಲ ಅಂತ ಹೇಳಿಕೆ ನೀಡಿ, ವಿನಾಕಾರಣ ಸಮಸ್ಯೆ ಹುಟ್ಟುಹಾಕೋದು ಸರಿಯಲ್ಲ. ಸಮಸ್ಯೆ ಇದ್ದರೂ, ಅದನ್ನು ನಾವು ಮೇಲಿನ ಅಧಿಕಾರಿಗಳ ಗಮನಕ್ಕೆ ತಂದಿದ್ದೇವೆ. ಎಲ್ಲದ್ದಕ್ಕೂ ಸ್ವಲ್ಪ ಕಾಲವಕಾಶ ಬೇಕಾಗುತ್ತದೆ. ಹಾಗಂತ, ಇಲ್ಲಿ ಯಾವುದೇ ಕೆಲಸಗಳು ನಿಧಾನವಾಗಿ ನಡೆಯುತ್ತಿಲ್ಲ. ಯಾವುದಕ್ಕೂ ತೊಂದರೆ ಆಗುತ್ತಿಲ್ಲ. ಈಗ ಡೇಟ್‌ ಅನೌನ್ಸ್‌ ಮಾಡಿರುವ ಸಿನಿಮಾಗಳ ನಿರ್ದೇಶಕ, ನಿರ್ಮಾಪಕರು ಅವಸರ ಮಾಡಿದರೆ, ಏನು ಮಾಡಲಿ? ಸೆನ್ಸಾರ್‌ ಆಗದೆ ಡೇಟ್‌ ಅನೌನ್ಸ್‌ ಮಾಡಿದ್ದು ಅವರ ತಪ್ಪು.

21 ದಿನಗಳ ಬಳಿಕ ಸರ್ಟಿಫಿಕೆಟ್‌ ನೀಡದಿದ್ದರೆ ಅದು ನಮ್ಮ ತಪ್ಪು. ಆದರೆ, ಇಲ್ಲಿ ಅವರದೇ ತಪ್ಪು ಇಟ್ಟುಕೊಂಡು, ಸೆನ್ಸಾರ್‌ ಮಂಡಳಿ ಸಿನಿಮಾ ನೋಡುತ್ತಿಲ್ಲ ಎಂದರೆ ಹೇಗೆ? ಈಗಲೂ ಅವರಿಗೆ ಒಂದು ಅವಕಾಶ ಕೊಟ್ಟಿದ್ದೇನೆ. ಮೊದಲು ಬಂದಿರುವ ಸಿನಿಮಾಗಳ ನಿರ್ದೇಶಕ, ನಿರ್ಮಾಪಕರ ಬಳಿ ಹೋಗಿ, ಎನ್‌ಓಸಿ ತಂದರೆ, ನಮ್ಮದೇನೂ ಅಭ್ಯಂತರವಿಲ್ಲ. ಅವರ ಚಿತ್ರ ನೋಡಿ ಸರ್ಟಿಫಿಕೆಟ್‌ ಕೊಡ್ತೀನಿ. ನಾನು ಕಾನೂನಾತ್ಮಕ ಕೆಲಸ ಮಾಡುತ್ತಿದ್ದೇನೆ ಹೊರತು, ಬೇರೆ ಯಾವ ಉದ್ದೇಶ ಇಟ್ಟುಕೊಂಡು ಇಲ್ಲಿ ಕೆಲಸ ಮಾಡುತ್ತಿಲ್ಲ’ ಎಂದು ಸ್ಪಷ್ಟಪಡಿಸುತ್ತಾರೆ ಶ್ರೀನಿವಾಸಪ್ಪ.

Advertisement

Udayavani is now on Telegram. Click here to join our channel and stay updated with the latest news.

Next