ತೆಕ್ಕಟ್ಟೆ: ಕುಂದಾಪುರ -ಸುರತ್ಕಲ್ ಕಾಮಗಾರಿಯ ರಾ.ಹೆ. 66 ರಸ್ತೆ ವಿಸ್ತರಣೆಯ ಸಂದರ್ಭ ಕರಾವಳಿಯ ಅದೆಷ್ಟೋ ಗ್ರಾಮೀಣ ಭಾಗದ ಚಾಲಕರಿಗೆ ವಾಹನ ನಿಲುಗಡೆಗೆ ರಸ್ತೆ ಸಮೀಪದಲ್ಲಿ ಸಮರ್ಪಕವಾದ ಸ್ಥಳಗಳಿಲ್ಲದೆ ತೀವ್ರ ತೊಂದರೆ ಅನುಭವಿಸಬೇಕಾದ ಅನಿವಾರ್ಯತೆ ಎದುರಾಗಿರುವುದು ವಾಸ್ತವ. ಪ್ರಸ್ತುತ ತೆಕ್ಕಟ್ಟೆ ಗ್ರಾ.ಪಂ.ವ್ಯಾಪ್ತಿಯಲ್ಲಿನ ರಾ. ಹೆದ್ದಾರಿಯ ಬದಿಯಲ್ಲಿ ವಾಹನ ನಿಲುಗಡೆಗೆ ಎದುರಾಗಿರುವ ಸ್ಥಳದ ಸಮಸ್ಯೆಗಳ ಬಗ್ಗೆ ಸಂಘಟನೆಗಳು ಪರಿಹಾರ ಕಂಡುಕೊಳ್ಳುವ ಬಗ್ಗೆ ಚಿಂತನೆ ಮಾಡಬೇಕಾಗಿದೆ ಎಂದು ತೆಕ್ಕಟ್ಟೆ ಗ್ರಾ.ಪಂ. ಅಧ್ಯಕ್ಷ ಶೇಖರ್ ಕಾಂಚನ್ ಕೊಮೆ ಹೇಳಿದರು.
ಅವರು ಸೆ. 9ರಂದು ತೆಕ್ಕಟ್ಟೆ ಹಯಗ್ರೀವ ಕಲ್ಯಾಣ ಮಂಟಪದಲ್ಲಿ ನಡೆದ ವಾಹನ ಚಾಲಕ-ಮಾಲಕರ ಸಂಘ (ರಿ.) ಇದರ ದ್ವಿತೀಯ ವರ್ಷದ ವಾರ್ಷಿಕ ಮಹಾಸಭೆ ಯನ್ನು ಉದ್ದೇಶಿಸಿ ಮಾತನಾಡಿದರು.
ಇದೇ ಸಂದರ್ಭ ತೆಕ್ಕಟ್ಟೆ ಫ್ರೆಂಡ್ಸ್ (ರಿ.) ಉಚಿತ ಆ್ಯಂಬುಲೆನ್ಸ್ ಸೇವೆಗಾಗಿ ವಿಜಯ ತೆಕ್ಕಟ್ಟೆ ಹಾಗೂ ಜೀವ ರಕ್ಷಕ ಪ್ರಶಸ್ತಿ ಪುರಸ್ಕೃತ ಕೋಟದ ಜೀವರಕ್ಷಕ ನಾಗರಾಜ್ ಪುತ್ರನ್ ಇವರ ಸೇವೆಯನ್ನು ಗುರುತಿಸಿ ಸಮ್ಮಾನಿಸಲಾಯಿತು ಹಾಗೂ ಅಶಕ್ತರಿಗೆ ಸಹಾಯಧನವನ್ನು ವಿತರಿಸಲಾಯಿತು.ವಾಹನ ಚಾಲಕ- ಮಾಲಕರ ಸಂಘದ ಅಧ್ಯಕ್ಷ ಗಂಗಾಧರ ಶೆಟ್ಟಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಕೋಟ ಪೊಲೀಸ್ ಠಾಣಾಧಿಕಾರಿ ಸಂತೋಷ್ ಕಾಯ್ಕಿಣಿ, ಕುಂದಾಪುರ ಬ್ಲಾಕ್ ಕಾಂಗ್ರೆಸ್‌ನ ಅಧ್ಯಕ್ಷ ಎಂ. ಶಿವರಾಮ ಶೆಟ್ಟಿ, ಮಾಜಿ ತಾ.ಪಂ. ಸದಸ್ಯ ಸದಾನಂದ ಶೆಟ್ಟಿ, ಕುಂದಾಪುರದ ಪ್ರಥಮ ದರ್ಜೆಯ ವಿದ್ಯುತ್ ಗುತ್ತಿಗೆದಾರ ಕೆ.ಆರ್. ನಾಯಕ್, ಕೋಟ ಜಿ.ಪಂ. ಸದಸ್ಯ ಬಾರಿಕೆರೆ ರಾಘವೇಂದ್ರ ಕಾಂಚನ್, ಕೋಟ ಠಾಣಾಧಿಕಾರಿ ಸಂತೋಷ್ ಕಾಯ್ಕಿಣಿ, ಸಂಘದ ಗೌರವಾಧ್ಯಕ್ಷ ಉದ್ಯಮಿ ಸಂತೋಷ್ ನಾಯಕ್ ಮತ್ತಿತರರಿದ್ದರು.
ಸಂಘದ ಗೌರವಾಧ್ಯಕ್ಷ ಉದ್ಯಮಿ ಸಂತೋಷ್ ನಾಯಕ್ ಸ್ವಾಗತಿಸಿ, ನವೀನ್ ಕುಲಾಲ್ ವರದಿ ವಾಚಿಸಿ, ಪ್ರವೀಣ ಕುಮಾರ್ ಶೆಟ್ಟಿ ನಿರೂಪಿಸಿ, ವಂದಿಸಿದರು.
ಚಾಲಕರು ನಮ್ಮ ಜೀವ ರಕ್ಷಕರು
ನಮ್ಮ ಜೀವನದಲ್ಲಿ ವೈದ್ಯರಿಗೆ ಮೊದಲ ಸ್ಥಾನದಲ್ಲಿದ್ದು ದ್ವಿತೀಯ ಸ್ಥಾನದಲ್ಲಿ ಅತ್ಯಂತ ಜವಬ್ದಾರಿಯುತವಾದ ಜೀವರಕ್ಷಕರಾಗಿ ವಾಹನ ಚಾಲಕರ ಪಾತ್ರ ಮಹತ್ತರವಾಗಿದ್ದು. ಮಹಾಭಾರತದಲ್ಲಿ ಅರ್ಜುನನ ಸಾರಥಿಯಾಗಿ ಕೃಷ್ಣ ಸೇವೆ ಮಾಡಿದಂತೆ ಸಮಾಜದಲ್ಲಿ ಚಾಲಕ ವೃತ್ತಿಯಲ್ಲಿ ಚಾಣಾಕ್ಷತೆಯನ್ನು ಮೆರೆಯುವ ಜತೆಗೆ ಇನ್ನಿತರ ದುಶ್ಚಟಗಳಿಂದ ದೂರ ಉಳಿದು ಮಾನವೀಯ ಮೌಲ್ಯಗಳನ್ನು ಅಳವಡಿಸಿಕೊಂಡು ಸಮಾಜಕ್ಕೆ ಆದರ್ಶಪ್ರಾಯರಾಗಬೇಕು.
– ಕೆ.ವಿ ನಾಯಕ್, ನಿವೃತ್ತ ಉಪನ್ಯಾಸಕರು, ತೆಕ್ಕಟ್ಟೆ