ಯಲಹಂಕ: ಅಧಿಕಾರ ಕೈತಪ್ಪಲಿದೆ ಎಂಬ ಭಯದಲ್ಲಿರುವ ಪ್ರಧಾನಿ ನರೇಂದ್ರ ಮೋದಿ, ಸುಳ್ಳುಗಳನ್ನು ಹೇಳಿ ಜನರ ದಾರಿ ತಪ್ಪಿಸುತ್ತಿದ್ದಾರೆ ಎಂದು ಪಂಚಾಯತ್ ರಾಜ್ ಹಾಗೂ ಗ್ರಾಮೀಣಾಭಿವೃದ್ಧಿ ಸಚಿವ ಕೃಷ್ಣಬೆೈರೇಗೌಡ ಆರೋಪಿಸಿದರು.
ಜಾಲ ಹೋಬಳಿಯ ವಿದ್ಯಾನಗರ ಕ್ರಾಸ್‌ನಲ್ಲಿರುವ ಸೈನಿಕರ ಬಡಾವಣೆಯಲ್ಲಿ ರಸ್ತೆ ಅಭಿವೃದ್ಧಿ ಕಾಮಗಾರಿ ಹಾಗೂ ಮೈಲನಹಳ್ಳಿಯಿಂದ ಬಾಗಲೂರುವರೆಗೆ 10.1 ಕೋಟಿ ರೂ. ವೆಚ್ಚದಲ್ಲಿ ಕೈಗೆತ್ತಿಕೊಂಡಿರುವ ರಸ್ತೆ ಅಭಿವೃದ್ಧಿ ಕಾಮಗಾರಿಗಳಿಗೆ ಭೂಮಿ ಪೂಜೆ ನೆರವೇರಿಸಿ ಅವರು ಮಾತನಾಡಿದರು.
“ಮುಖ್ಯಮಂತ್ರಿ ಕುಮಾರಸ್ವಾಮಿ ಅವರನ್ನು ಕಾಂಗ್ರೆಸ್ ಕ್ಲರ್ಕ್ ರೀತಿ ನಡೆಸಿಕೊಳ್ಳುತ್ತಿದೆ’ ಎಂಬ ಪ್ರಧಾನಿ ಹೇಳಿಕೆ ಕುರಿತು ಪ್ರತಿಕ್ರಿಯಿಸಿದ ಸಚಿವರು, ಮೋದಿಯವರು ತಾವು ಪ್ರಧಾನಿ ಎಂಬುದನ್ನು ಮರೆತು ಮಾತನಾಡುತ್ತಿದ್ದಾರೆ. ಪಂಚ ರಾಜ್ಯಗಳ ಚುನಾವಣೆ ಪಲಿತಾಂಶ ಕಂಡು, ಈ ಬಾರಿ ಅಧಿಕಾರ ತಮ್ಮ ಕೈತಪ್ಪಲಿದೆ ಎನ್ನುವ ಭಾವನೆ ಅವರಿಗೆ ಬಂದಿದೆ. ಹೀಗಾಗಿ ಕ್ಷುಲ್ಲಕವಾದ ಮಾತುಗಳನ್ನು ಆಡುತ್ತಿದ್ದಾರೆ ಎಂದರು.
ಬರ ಪರಿಹಾರ: ಬರ ಹಿನ್ನೆಲೆಯಲ್ಲಿ ನೂರು ತಾಲೂಕುಗಳಿಗೆ ತಲಾ ಒಂದು ಕೋಟಿ ರೂ. ಅನುದಾನ ನೀಡಿದ್ದೇವೆ. ಬರ ಘೋಷಣೆ ನಂತರ 50 ತಾಲೂಕುಗಳಿಗೆ ತಲಾ 50 ಲಕ್ಷ ನೀಡಿದ್ದೇವೆ. ಹಾಗೇ ಬರ ಇಲ್ಲದ ತಾಲೂಕುಗಳಿಗೂ 25 ಲಕ್ಷ ರೂ. ಹೆಚ್ಚುವರಿ ಅನುದಾನ ನೀಡಿದ್ದೇವೆ. ಕುಡಿಯುವ ನೀರಿನ ಬೇಡಿಕೆ ಇರುವ ಕಡೆ ಕೊಳವೆಬಾವಿ ಕೊರೆಸಲು ಸೂಚಿಸಲಾಗಿದೆ.
ಜನವರಿ ನಂತರ ಗೋಶಾಲೆ ತೆರೆಯಬೇಕಿದ್ದು, ಮೇವು ಸಂಗ್ರಹಿಸುವಂತೆ ಈಗಾಗಲೇ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇವೆ ಎಂದು ಮಾಹಿತಿ ನೀಡಿದರು. ವಿಧಾನ ಪರಿಷತ್ ಸದಸ್ಯ ನಾರಾಯಣಸ್ವಾಮಿ, ಜಿ.ಪಂ ಸದಸ್ಯೆ ಸಂಗೀತಾ ವಿಜಯಕುಮರ್, ತಾ.ಪಂ ಅಧ್ಯಕ್ಷೆ ಜ್ಯೋತಿ ಕಲ್ಲೇಶ್, ಸದಸ್ಯರಾದ ಉದಯ್‌ಶಂಕರ್, ಕಾಂಗ್ರೆಸ್ ಮುಖಂಡರಾದ ಅಶೋಕನ್, ಮಂಜುನಾಥಗೌಡ, ದಾನೇಗೌಡ ಹಾಜರಿದ್ದರು.