Advertisement

ಶೈಕ್ಷಣಿಕ ಪ್ರಗತಿಗೆ ಪ್ರತಿಯೊಬ್ಬರು ಶ್ರಮಿಸಲಿ: ಹಿಟ್ನಾಳ 

05:04 PM Jun 24, 2018 | Team Udayavani |

ಕೊಪ್ಪಳ: ಮಕ್ಕಳ ಭವಿಷ್ಯ ಶೈಕ್ಷಣಿಕ ರಂಗದಲ್ಲಿ ಅಡಗಿದೆ. ಶೈಕ್ಷಣಿಕ ಪ್ರಗತಿಗೆ ಪ್ರತಿಯೊಬ್ಬರು ಶ್ರಮಿಸಬೇಕು ಎಂದು ಶಾಸಕ ಕೆ.ರಾಘವೇಂದ್ರ ಹಿಟ್ನಾಳ ಹೇಳಿದರು. ತಾಲೂಕಿನ ಕವಲೂರು ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಹಮ್ಮಿಕೊಂಡಿದ್ದ ಬಹದ್ದೂರಬಂಡಿ ಸಿ.ಆರ್‌.ಪಿ. ಹನುಮಂತಪ್ಪ ಕುರಿ ಅವರು ಶೈಕ್ಷಣಿಕ ಜಾಗೃತಿ ಗೀತೆಗಳ ಸಿ.ಡಿ. ಬಿಡುಗಡೆ ಹಾಗೂ ವಿಶೇಷ ದಾಖಲಾತಿ ಆಂದೋಲನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

Advertisement

ಪ್ರಸ್ತುತ ದಿನಮಾನಗಳಲ್ಲಿ ಎಲ್ಲ ಕ್ಷೇತ್ರಗಳಲ್ಲಿ ಸ್ಪರ್ಧೆಯು ಹೆಚ್ಚಾಗಿದೆ. ಅಂತಹ ಸ್ಪರ್ಧೆಗೆ ತಕ್ಕಂತೆ ನಾವು ಮಕ್ಕಳನ್ನು ತಯಾರು ಮಾಡಬೇಕು. ಮಗುವಿಗೆ ಕೇವಲ ಪಠ್ಯದಲ್ಲಿ ಇರುವ ವಿಷಯಗಳನ್ನು ಮಾತ್ರ ಬೋಧನೆ ಮಾಡದೆ ಅವರ ಸರ್ವಾಂಗೀಣ ಪ್ರಗತಿಗೆ ಬೇಕಾದಂಥ ಉಪಯುಕ್ತ ಮಾಹಿತಿ ತಿಳಿಸಿ ಕೊಡಬೇಕಿದೆ ಎಂದರು.

ಶಿಕ್ಷಕರು ಸೇರಿದಂತೆ ಪ್ರತಿಯೊಬ್ಬರು ಶಿಕ್ಷಣ ಕ್ಷೇತ್ರದ ಪ್ರಗತಿಗೆ ಶ್ರಮಿಸಬೇಕು. ಅಂದಾಗ ಮಾತ್ರ ಶೈಕ್ಷಣಿಕ ಕ್ಷೇತ್ರದಲ್ಲಿ ಪ್ರಗತಿ
ಸಾಧಿಸಲು ಸಾಧ್ಯವಾಗುತ್ತದೆ. 10ನೇ ತರಗತಿಯ ಫಲಿತಾಂಶದಲ್ಲಿ ಇನ್ನೂ ಹೆಚ್ಚಿನ ಸ್ಥಾನವನ್ನು ಪಡೆಯುವ ರೀತಿಯಲ್ಲಿ ಶಿಕ್ಷಕರು ಕಾರ್ಯನಿರ್ವಹಿಸಬೇಕು. ಸಿ.ಆರ್‌.ಪಿ ಹನುಮಂತಪ್ಪ ಕುರಿ ಅವರು ತಮ್ಮದೇಯಾದ ರೀತಿಯಲ್ಲಿ ಸಾಹಿತ್ಯ ರಚನೆ ಮಾಡಿ ಸಿ.ಅಶ್ವಥ ಅವರ ಶೈಲಿಯಲ್ಲಿ ಶಾಲೆ ಬಿಟ್ಟ ಮಕ್ಕಳ ಬಗ್ಗೆ ಹಾಗೂ ದಾಖಲಾತಿ ಜಾಗೃತಿಯ ಗೀತೆಗಳನ್ನು ಹಾಡುವ ಮೂಲಕ ಶಿಕ್ಷಣ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿರುವುದು ನಿಜಕ್ಕೂ ಶ್ಲಾಘನೀಯ ಎಂದರು.

ವಿಕಲಚೇತನ ನೌಕರರ ಸಂಘದ ರಾಜ್ಯಾಧ್ಯಕ್ಷ ಬೀರಪ್ಪ ಅಂಡಗಿ ಮಾತನಾಡಿ, ಪ್ರಸ್ತುತ ದಿನಗಳಲ್ಲಿ ಪ್ರಾಥಮಿಕ ಶಾಲಾ ಶಿಕ್ಷಕರಿಗೆ ಹೆಚ್ಚಿನ ಕೆಲಸದ ಒತ್ತಡವಿದೆ. ಅದರ ಮಧ್ಯೆಯೂ ಸಿ.ಆರ್‌.ಪಿ.ಹನುಮಂತಪ್ಪ ಕುರಿ ಅವರು ಶೈಕ್ಷಣಿಕ ಹಾಗೂ ಮತದಾನದಂತಹ ಅನೇಕ ಗೀತೆಗಳನ್ನು ರಚಿಸಿ, ಹಾಡುವ ಮೂಲಕ ಸಮಾಜದ ಜಾಗೃತಿಗೆ ಮುಂದಾಗುತ್ತಿರುವುದು ಒಳ್ಳೆಯ ಬೆಳವಣಿಗೆ ಎಂದರು.

ಎಸ್‌.ಡಿ.ಎಂ.ಸಿ ಅಧ್ಯಕ್ಷ ಹೊನಕೇರಪ್ಪ ಮುಕ್ಕಣ್ಣನವರ್‌ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ತಾಲೂಕು ಪಂಚಾಯತಿ ಸದಸ್ಯರಾದ ಶರಣಪ್ಪಗೌಡ ಪಾಟೀಲ, ಯಂಕ್ಕಣ್ಣ , ದೇವಪ್ಪ ಹಳ್ಳಿ, ಅಳವಂಡಿ ವಲಯ ಶಿಕ್ಷಣ ಸಂಯೋಜಕ ಭರಮಪ್ಪ ಕಟ್ಟಿಮನಿ, ಸಿ.ಆರ್‌ .ಪಿ. ಬಸವರಾಜ ಜೀರ್‌, ಚಂದ್ರ ಗಿರಿಯಪ್ಪ, ಹನುಮಂತಪ್ಪ ಕುರಿ, ಮುಖ್ಯೋಪಾಧ್ಯಾಯ ಸಂಗನಗೌಡ ಸೇರಿದಂತೆ ಇತರರು
ಉಪಸ್ಥಿತರಿದ್ದರು. ಮಲ್ಲಿಕಾರ್ಜುನಗೌಡ ನಿರೂಪಿಸಿದರು. ಮಲ್ಲಪ್ಪ ಸ್ವಾಗತಿಸಿದರು. ಅಶೋಕ ಚೌಡಿ ವಂದಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next