Advertisement
ಹಲವು ವರ್ಷಗಳಿಂದ ಪಾಲಿಕೆಗೆ ತೆರಿಗೆ ಬಾಕಿ ಉಳಿಸಿಕೊಂಡಿರುವ ಕಟ್ಟಡ ಮಾಲೀಕರ ವಿರುದ್ಧ ಕ್ರಮಕೈಗೊಳ್ಳುವಂತೆ ಕಂದಾಯ ವಿಭಾಗದ ಜಂಟಿ ಆಯುಕ್ತರು ಆದೇಶ ಹೊರಡಿಸಿದ್ದರು. ಜತೆಗೆ ಡಿಮ್ಯಾಂಡ್ ನೋಟಿಸ್ ಜಾರಿಗೊಳಿಸಿದ ನಂತರವೂ ತೆರಿಗೆ ಪಾವತಿಸದ ಹಾಗೂ ಯಾವುದೇ ಉತ್ತರ ನೀಡದಂತಹ ಆಸ್ತಿಗಳ ಜಪ್ತಿಗೆ ಮುಂದಾಗುವಂತೆ ಅಧಿಕಾರಿಗಳಿಗೆ ಸೂಚಿಸಿದ್ದರು.
Related Articles
Advertisement
ಆದರೆ, ಯಶವಂತಪುರದ ವರ್ಲ್ಡ್ ಟ್ರೇಡ್ ಸೆಂಟರ್ 15 ಕೋಟಿ ರೂ. ತೆರಿಗೆ ಬಾಕಿ ಉಳಿಸಿಕೊಂಡಿದ್ದು, ಪ್ರಕರಣ ನ್ಯಾಯಾಲಯದಲ್ಲಿದೆ. ಇನ್ನು ಮಾರಪ್ಪನಪಾಳ್ಯ ವಾರ್ಡ್ ಇಂಟರ್ ಟೆಕ್ ಸಾಫ್ಟ್ವೇರ್ ಸಂಸ್ಥೆಯವರು ತೆರಿಗೆ ಪಾವತಿಸದೆ ಸತಾಯಿಸುತ್ತಿದ್ದರು. ಆ ಹಿನ್ನೆಲೆಯಲ್ಲಿ ಜಪ್ತಿ ಮಾಡಿ ಬಾಡಿಗೆದಾರರಿಂದ ತೆರಿಗೆ ವಸೂಲಿ ಮಾಡಲಾಗಿದೆ ಎಂದು ಪಶ್ಚಿಮ ವಲಯದ ಜಂಟಿ ಆಯುಕ್ತ ಚಿದಾನಂದ ಮಾಹಿತಿ ನೀಡಿದರು.
ಇನ್ನು ಪೂರ್ವ ವಲಯದಲ್ಲಿ ಸೆಂಟ್ರಲ್ ಮಾಲ್, ಗರುಡಾ ಮಾಲ್, ಸ್ಟಾರ್ ಹೋಟೆಲ್‌ಗಳು ಸೇರಿ 34 ಬೃಹತ್ ವಾಣಿಜ್ಯ ಕಟ್ಟಡಗಳು 35 ಕೋಟಿ ರೂ. ತೆರಿಗೆ ಬಾಕಿ ಉಳಿಸಿಕೊಂಡಿದ್ದವು. ಆ ಪೈಕಿ 10 ಕಟ್ಟಡಗಳಿಂದ ಈಗಾಗಲೇ ತೆರಿಗೆ ಸಂಗ್ರಹಿಸಲಾಗಿದ್ದು, ಇನ್ನು 13 ಕಟ್ಟಡದಾರರು ನ್ಯಾಯಾಲಯದ ಮೆಟ್ಟಿಲೇರಿದ ಪರಿಣಾಮ ತೆರಿಗೆ ಸಂಗ್ರಹ ವಿಳಂಬವಾಗಿದೆ ಎಂದು ಪೂರ್ವ ವಲಯ ಜಂಟಿ ಆಯುಕ್ತ ರವೀಂದ್ರ ಹೇಳಿದರು.
ಗೋಡೆ ಏರಿದ ಬಾಕಿದಾರರ ಹೆಸರು: ಪಾಲಿಕೆಗೆ ತೆರಿಗೆ ಬಾಕಿ ಉಳಿಸಿಕೊಂಡಿರುವವರ ಹೆಸರಿನ ವಿವರವನ್ನು ಸಾರ್ವಜನಿಕರಿಗೆ ತಿಳಿಯುವಂತೆ ಪಾಲಿಕೆ ಕಚೇರಿಗಳ ಗೋಡೆಗಳ ಮೇಲೆ ಅಂಟಿಸಲಾಗಿದೆ. ಇದರಿಂದ ಮುಜುಗರಕ್ಕೆ ಒಳಗಾದ ಹಲವಾರು ಆಸ್ತಿ ಮಾಲೀಕರು ತೆರಿಗೆ ಪಾವತಿಸಲು ಮುಂದಾಗುತ್ತಿದ್ದಾರೆ. ಇದೇ ರೀತಿ ಎಲ್ಲ ವಲಯಗಳಲ್ಲಿಯೂ ಪ್ರಮುಖ 100 ಜನ ಬಾಕಿದಾರರ ಹೆಸರಿನ ವಿವರವನ್ನು ಗೋಡೆಗಳ ಮೇಲೆ ಅಂಟಿಸುವಂತೆ ಉಪಮುಖ್ಯಮಂತ್ರಿಗಳು ಸೂಚನೆ ನೀಡಿದ್ದಾರೆ.
ವಂಚಿಸಿದರೆ ಅಧಿಕಾರಿಗಳ ಅಮಾನತು: ಹಲವಾರು ವರ್ಷಗಳಿಂದ ಪಾಲಿಕೆಗೆ ತೆರಿಗೆ ಪಾವತಿಸದೆ ವಂಚಿಸಿದ ಆಸ್ತಿದಾರರಿಗೆ ನೆರವಾದ ಅಧಿಕಾರಿಗಳನ್ನು ಅಮಾನತುಗೊಳಿಸಲು ಪಾಲಿಕೆ ಮುಂದಾಗಿದೆ. ಆ ಹಿನ್ನೆಲೆಯಲ್ಲಿ ಈಗಾಗಲೇ ಕರ್ತವ್ಯ ಲೋಪವೆಸಗಿದ ಆರೋಪದ ಮೇಲೆ 15 ಕಂದಾಯ ಅಧಿಕಾರಿಗಳು ಹಾಗೂ ಸಹಾಯಕ ಕಂದಾಯ ಅಧಿಕಾರಿಗಳನ್ನು ಅಮಾನತುಗೊಳಿಸಲಾಗಿದೆ ಎಂದು ಹಣಕಾಸು ವಿಭಾಗದ ವಿಶೇಷ ಆಯುಕ್ತ ಲೋಕೇಶ್ ತಿಳಿಸಿದ್ದಾರೆ.
ಪಾಲಿಕೆಗೆ ಆರೇಳು ವರ್ಷಗಳಿಂದ ತೆರಿಗೆ ಬಾಕಿ ಉಳಿಸಿಕೊಂಡಿದ್ದ ಕಟ್ಟಡದಾರರಿಂದ ಈವರೆಗೆ 455 ಕೋಟಿ ರೂ. ತೆರಿಗೆ ಸಂಗ್ರಹಿಸುವ ಮೂಲಕ ಶೇ.27.48ರಷ್ಟು ಗುರಿ ಸಾಧಿಸಿದ್ದು, ಉಳಿದ ಮೂರು ತಿಂಗಳಲ್ಲಿ ಇನ್ನು ಹೆಚ್ಚಿನ ಬಾಕಿ ತೆರಿಗೆ ಸಂಗ್ರಹಿಸುವ ಮೂಲಕ ತೆರಿಗೆ ಪ್ರಮಾಣ ಹೆಚ್ಚಿಸಲಾಗುವುದು. ಜತೆಗೆ ಆರ್ಥಿಕ ವರ್ಷದಲ್ಲಿ ಇನ್ನಷ್ಟು ಪರಿಣಾಮಕಾರಿಯಾಗಿ ತೆರಿಗೆ ಸಂಗ್ರಹಕ್ಕೆ ಕ್ರಮಕೈಗೊಳ್ಳಲಾಗುವುದು.-ಲೋಕೇಶ್, ವಿಶೇಷ ಆಯುಕ್ತರು (ಹಣಕಾಸು)