ಅಡಿಲೇಡ್: ಬಲಗೈ ವೇಗಿ ಹ್ಯಾರಿಸ್ ರೌಫ್ ಅವರ ಘಾತಕ ಬೌಲಿಂಗ್‌ಗೆ ತತ್ತರಿಸಿದ ಆಸ್ಟ್ರೇಲಿಯ, ದ್ವಿತೀಯ ಏಕದಿನ ಪಂದ್ಯದಲ್ಲಿ ಪಾಕಿಸ್ಥಾನಕ್ಕೆ 9 ವಿಕೆಟ್‌ಗಳಿಂದ ಶರಣಾಗಿದೆ. ಸರಣಿ 1-1 ಸಮಬಲಕ್ಕೆ ಬಂದಿದೆ.
ಆಸ್ಟ್ರೇಲಿಯ 35 ಓವರ್‌ಗಳಲ್ಲಿ 163ಕ್ಕೆ ಕುಸಿದರೆ, ಪಾಕಿಸ್ಥಾನ 26.3 ಓವರ್‌ಗಳಲ್ಲಿ ಒಂದೇ ವಿಕೆಟಿಗೆ 169 ರನ್ ಬಾರಿಸಿತು. ರೌಫ್ 29 ರನ್ ವೆಚ್ಚದಲ್ಲಿ 5 ವಿಕೆಟ್ ಉರುಳಿಸಿದರು. ಸರಣಿ ನಿರ್ಣಾಯಕ ಮುಖಾಮುಖೀ ರವಿವಾರ ಪರ್ತ್‌ನಲ್ಲಿ ನಡೆಯಲಿದೆ. ಮೊದಲ ಪಂದ್ಯವನ್ನು ಆಸ್ಟ್ರೇಲಿಯ 2 ವಿಕೆಟ್‌ಗಳಿಂದ ಜಯಿಸಿತ್ತು.
ಆರಂಭಿಕರಾದ ಮ್ಯಾಥ್ಯೂ ಶಾರ್ಟ್ (19) ಮತ್ತು ಜೇಕ್ ಫ್ರೆàಸರ್ ಮೆಕ್‌ಗರ್ಕ್ (13) ಅವರನ್ನು ಶಾಹೀನ್ ಶಾ ಅಫ್ರಿದಿ ಪೆವಿಲಿಯನ್ನಿಗೆ ರವಾನಿಸಿದ ಬಳಿಕ ರೌಫ್ ದಾಳಿ ತೀವ್ರಗೊಂಡಿತು. ಇವರ ಎಸೆತಗಳನ್ನು ತಡೆದು ನಿಲ್ಲಲು ಕಾಂಗರೂ ಬ್ಯಾಟರ್‌ಗಳಿಗೆ ಸಾಧ್ಯವಾಗಲಿಲ್ಲ. ಸ್ಟೀವನ್ ಸ್ಮಿತ್ ಸರ್ವಾಧಿಕ 35 ರನ್ ಮಾಡಿದರು.
ಚೇಸಿಂಗ್ ವೇಳೆ ಸೈಮ್ ಅಯೂಬ್ (82) ಮತ್ತು ಅಬ್ದುಲ್ಲ ಶಫೀಕ್ (ಔಟಾಗದೆ 64) ಅಮೋಘ ಆರಂಭವಿತ್ತರು. ಮೊದಲ ವಿಕೆಟಿಗೆ 20.2 ಓವರ್‌ಗಳಿಂದ 127 ರನ್ ಪೇರಿಸಿ ಆಸೀಸ್ ಬೌಲರ್‌ಗಳನ್ನು ಕಾಡಿದರು.
ಇದು ಅಡಿಲೇಡ್ ಓವಲ್‌ನಲ್ಲಿ 1996ರ ಬಳಿಕ ಪಾಕಿಸ್ಥಾನ ಸಾಧಿಸಿದ ಮೊದಲ ಏಕದಿನ ಗೆಲುವು.
ಸಂಕ್ಷಿಪ್ತ ಸ್ಕೋರ್: ಆಸ್ಟ್ರೇಲಿಯ-35 ಓವರ್‌ಗಳಲ್ಲಿ 163 (ಸ್ಮಿತ್ 35, ಶಾರ್ಟ್ 19, ಇಂಗ್ಲಿಸ್ 18, ಝಂಪ 18, ರೌಫ್ 29ಕ್ಕೆ 5, ಅಫ್ರಿದಿ 26ಕ್ಕೆ 3). ಪಾಕಿಸ್ಥಾನ-26.3 ಓವರ್‌ಗಳಲ್ಲಿ ಒಂದು ವಿಕೆಟಿಗೆ 169 (ಅಯೂಬ್ 82, ಶಫೀಕ್ ಔಟಾಗದೆ 64). ಪಂದ್ಯಶ್ರೇಷ್ಠ: ಹ್ಯಾರಿಸ್ ರೌಫ್.