Advertisement

ಸಣ್ಣ ಕೈಗಾರಿಕೆ ಅಭಿವೃದ್ಧಿಗೆ ಸರ್ಕಾರದ ಮೇಲೆ ಒತ್ತಡ ಅನಿವಾರ್ಯ

12:51 PM Nov 01, 2017 | Team Udayavani |

ಹುಬ್ಬಳ್ಳಿ: ಸಣ್ಣ ಕೈಗಾರಿಕೆ ಪ್ರದೇಶಗಳ ಅಭಿವೃದ್ಧಿ ನಿಟ್ಟಿನಲ್ಲಿ ಸರಕಾರದ ಮೇಲೆ ಒತ್ತಡ ಹಾಕುವುದು ಅನಿವಾರ್ಯವಾಗಿದ್ದು, ರಾಜಕೀಯ ಪ್ರಭಾವ ಇಲ್ಲದಿದ್ದರೆ ಯಾವುದೇ ಕಾರ್ಯಗಳು ನಡೆಯದ ಸ್ಥಿತಿ ನಿರ್ಮಾಣವಾಗಿದೆ ಎಂದು ಕರ್ನಾಟಕ ಸಣ್ಣ ಕೈಗಾರಿಕೆಗಳ (ಕಾಸಿಯಾ) ಸಂಘದ ಅಧ್ಯಕ್ಷ ಹನುಮಂತೇಗೌಡ ಹೇಳಿದರು. 

Advertisement

ಇಲ್ಲಿನ ಗೋಕುಲ ರಸ್ತೆಯ ಕೈಗಾರಿಕೆ ಪ್ರದೇಶದ ಎನ್‌ಕೆಎಸ್‌ಎಸ್‌ಐಎ ಸಭಾಭವನದಲ್ಲಿ ಮಂಗಳವಾರ ನಡೆದ ಸರಬರಾಜುದಾರರ ಅಭಿವೃದ್ಧಿ ಮತ್ತು ಹೂಡಿಕೆದಾರರ ಶೃಂಗಸಭೆ-2017 ಪ್ರಯುಕ್ತ ಜಾಗೃತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ದೇಶದ ಆರ್ಥಿಕ ಪ್ರಗತಿಗೆ ಕೈಗಾರಿಕೆಗಳ ಪಾತ್ರ ದೊಡ್ಡದು. ಆದರೆ, ಕೆಲವೊಂದು ಕೈಗಾರಿಕೆ ಪ್ರದೇಶದಲ್ಲಿ ವಿದ್ಯುತ್‌ ಸರಬರಾಜು ವ್ಯವಸ್ಥೆಯಿಲ್ಲದೆ ಜನರೇಟರ್‌ನಿಂದ ನಡೆಯುತ್ತಿವೆ. ಇನ್ನೂ ಕೆಲ ಕೈಗಾರಿಕೆ ಪ್ರದೇಶಗಳಲ್ಲಿ ಮೂಲಸೌಲಭ್ಯಗಳ ಕೊರತೆ ಸಾಕಷ್ಟಿದೆ ಎಂದರು. 

ರಾಜಕೀಯ ಪ್ರಭಾವ ಇಲ್ಲದೆ ಯಾವುದೇ ಯೋಜನೆ ದೊರೆಯುವುದಿಲ್ಲ ಎನ್ನುವ ಪರಿಸ್ಥಿತಿ ನಿರ್ಮಾಣವಾಗಿದೆ. ಕೈಗಾರಿಕೆ ಪ್ರದೇಶಗಳ ಅಭಿವೃದ್ಧಿಗೆ ನಗರಸಭೆ, ಮಹಾನಗರ ಪಾಲಿಕೆಗಳು ಸಹಕಾರ ನೀಡಬೇಕು. ಪ್ರತಿಯೊಂದು ಯೋಜನೆಯನ್ನು ರಾಜಕೀಯ ದೃಷ್ಟಿಯಿಂದ ನೋಡುತ್ತಿರುವುದು ಸರಿಯಲ್ಲ.

ಕೈಗಾರಿಕೆ ಪ್ರದೇಶಗಳ ಅಭಿವೃದ್ಧಿಗೆ ನೀಡುವ ಅನುದಾನವನ್ನು ಕಾನೂನುಬದ್ಧ ಮಾಡಬೇಕು. ಐಟಿ, ಬಿಟಿ ಕಂಪನಿಗಳಿಗೆ ನೀಡಿದಂತೆ ತೆರಿಗೆ ವಿನಾಯಿತಿಯನ್ನು ಸಣ್ಣ ಕೈಗಾರಿಕೆಗಳಿಗೆ ನೀಡಬೇಕು. ಕೇಂದ್ರ ಸರಕಾರದಿಂದ ಸಣ್ಣ ಕೈಗಾರಿಕೆಗಳಿಗೆ ಯಾವುದೇ ಅನುದಾನ ಸಿಕ್ಕಿಲ್ಲ. 

Advertisement

ಸ್ಟಾರ್ಟ್‌ಅಪ್‌ನಂತಹ ಯೋಜನೆಗಳ ಸೌಲಭ್ಯ ಪಡೆಯಲು ಹರಸಾಹಸ ಪಡುವಂತ ಪರಿಸ್ಥಿತಿಯಿದೆ. ಅಭಿವೃದ್ಧಿಗಾಗಿ ಸರಕಾರದ ಮೇಲೆ ಅಸೊಸಿಯೇಶನ್‌ ಮೂಲಕ ಒತ್ತಡ ಹಾಕಬೇಕಾಗಿದೆ ಎಂದರು. ಬೆಂಗಳೂರಿನಲ್ಲಿ ನ. 23-24 ರಂದು ನಡೆಯಲಿರುವ ಸರಬರಾಜುದಾರರ ಅಭಿವೃದ್ಧಿ ಮತ್ತು ಹೂಡಿಕೆದಾರರ ಶೃಂಗಸಭೆಯಲ್ಲಿ ಪ್ರತಿಯೊಬ್ಬರು ಪಾಲ್ಗೊಳ್ಳಬೇಕು.

ಪ್ರದರ್ಶನ ಮಳಿಗೆಗೆ ಶುಲ್ಕವಿರುವುದಿಲ್ಲ ಎಂದು ಹೇಳಿದರು. ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಹೆಸ್ಕಾಂ ಎಂಡಿ ಎಸ್‌.ಪಿ. ಸಕ್ಕರಿ ಮಾತನಾಡಿದರು. ಕರ್ನಾಟಕ ಸಣ್ಣ ಕೈಗಾರಿಕೆಗಳ ಸಂಘ, ಜಿಲ್ಲಾ ಕೈಗಾರಿಕ ಕೇಂದ್ರ, ಉತ್ತರ  ಕರ್ನಾಟಕ ಸಣ್ಣ ಕೈಗಾರಿಕೆಗಳ ಸಂಘ, ಲಕ್ಕಮನಹಳ್ಳಿ ಕೈಗಾರಿಕೆ ಸಂಘ, ಧಾರವಾಡ ಬೆಳವಣಿಗೆ ಕೇಂದ್ರ, ರಾಯಪುರ ಸಣ್ಣ ಕೈಗಾರಿಕೆಗಳ ಸಂಘ, ಸತ್ತೂರು ಕೈಗಾರಿಕೆಗಳ ಸಂಘ,

ಉತ್ತರ ಕರ್ನಾಟಕ ಪ.ಜಾ/ಪ.ಪಂ ಸಣ್ಣ ಕೈಗಾರಿಕೆಗಳ ಉದ್ದಿಮೆದಾರರ ಸಂಘದ ಆಶ್ರಯದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿತ್ತು. ಎನ್‌ಕೆಎಸ್‌ಎಸ್‌ಐಎ ಅಧ್ಯಕ್ಷ ವಿಶ್ವನಾಥ ಗೌಡರ್‌, ಆರ್‌.ಜಿ. ಭಟ್‌, ನಾಗರಾಜ ಎಲಿಗಾರ, ಶರಣಪ್ಪ ಕೊಟಗಿ, ನಾಗರಾಜ ದಿವಟಿ, ಶ್ಯಾಮಸುಂದರ ಕೋಲಾರ, ಗಣಪತಿ ಸ್ವಾದಿ, ಬಸವರಾಜ ಜವಳಿ, ಪದ್ಮನಾಭ , ಟಿ.ಎಸ್‌. ಉಮಾಶಂಕರ, ಲತಾ ಗಿರೀಶ, ಮಂಜುನಾಥ, ಕೆ.ಎನ್‌. ನರಸಿಂಹಮೂರ್ತಿ ಇತರರಿದ್ದರು. 

Advertisement

Udayavani is now on Telegram. Click here to join our channel and stay updated with the latest news.

Next