ಬೆಂಗಳೂರು: ಪ್ರಸಕ್ತ ಸಾಲಿನ ವೈದ್ಯಕೀಯ (ಯುಜಿ ನೀಟ್) ಕೋರ್ಸು ಪ್ರವೇಶ ಪಡೆದಿರುವ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ವರ್ಷಾರಂಭವಾಗುವುದು ಸ್ವಲ್ಪ ದಿನಗಳ ಕಾಲ ವಿಳಂಬವಾಗುವ ಸಾಧ್ಯತೆಗಳಿವೆ.
ಕರ್ನಾಟಕ ಪರೀಕ್ಷಾ ಪ್ರಾಧಿಕಾರವು (ಕೆಇಎ) ಎಂಜಿನಿಯರಿಂಗ್ ಮತ್ತು ವೈದ್ಯಕೀಯ ಕೋರ್ಸುಗಳ ಪ್ರವೇಶ ಪ್ರಕ್ರಿಯೆಯಲ್ಲಿ ಶುಲ್ಕ ವಿಚಾರಕ್ಕೆ ಸಂಬಂಧಿಸಿದಂತೆ ವಿದ್ಯಾರ್ಥಿಗಳಿಗೆ ತೊಂದರೆಯಾಗಿದೆ. ಈ ಹಿನ್ನೆಲೆಯಲ್ಲಿ ಮೊದಲ ಸುತ್ತಿನಲ್ಲಿ ಸೀಟು ಆಯ್ಕೆ ಮಾಡಿಕೊಂಡಿರುವ ವಿದ್ಯಾರ್ಥಿಗಳಿಗೆ ಕಾಲೇಜು ಪ್ರವೇಶ ಅವಧಿಯನ್ನು ವಿಸ್ತರಿಸಿದೆ.
ಈ ವರೆಗೂ ಕಾಲೇಜು ಪ್ರವೇಶ ಪಡೆದುಕೊಳ್ಳಲು ಫೆ.14ರ ವರೆಗೆ ಅವಕಾಶ ನೀಡಿತ್ತು. ಮತ್ತೆ ಎರಡು ದಿನಗಳ ಕಾಲ ವಿಸ್ತರಣೆ ಮಾಡಿದ್ದು, ಫೆ.16ರ ಸಂಜೆ 5.30ರ ವರೆಗೂ ಅವಕಾಶ ನೀಡಿದೆ. ಆದರೆ, ರಾಜೀವಗಾಂಧಿ ಆರೋಗ್ಯ ವಿಜ್ಞಾನ ವಿಶ್ವವಿದ್ಯಾಲಯ (ಆರ್‌ಜಿಯುಎಚ್‌ಎಸ್) ಮೂಲಗಳ ಪ್ರಕಾರ ಕನಿಷ್ಠ ಇನ್ನೂ ಒಂದು ವಾರಗಳ ಕಾಲ ಸಮಯ ಬೇಕಾಗುತ್ತದೆ ಎಂದು ತಿಳಿದು ಬಂದಿದೆ.
ರಾಷ್ಟ್ರೀಯ ವೈದ್ಯಕೀಯ ಪರಿಷತ್ತು (ಎನ್‌ಎಂಸಿ) ಪ್ರಕಾರ ಸೋಮವಾರದಿಂದ ಕಾಲೇಜುಗಳು ಆರಂಭವಾಗಬೇಕಿತ್ತು. ಆದರೆ, ರಾಜ್ಯದಲ್ಲಿ ಪ್ರವೇಶ ಪ್ರಕ್ರಿಯೆ ವಿಳಂಬವಾಗಿರುವುದರಿಂದ ಮತ್ತು ವಿದ್ಯಾರ್ಥಿಗಳಿಗೆ ಶುಲ್ಕದ ವಿಚಾರದಲ್ಲಿ ತೊಂದರೆಯಾಗಿರುವುದರಿಂದ ಕಾಲೇಜುಗಳ ಆರಂಭ ಸ್ವಲ್ಪ ತಡವಾಗಲಿದೆ ಎನ್ನಲಾಗಿದೆ.
ಈಗಾಗಲೇ ಮೊದಲ ಸುತ್ತಿನಲ್ಲಿ ಶೇ.75ರಷ್ಟು ಸೀಟುಗಳು ಮೊದಲ ಸುತ್ತಿನಲ್ಲಿಯೇ ಆಯ್ಕೆಯಾಗಿವೆ. ಈ ಪೈಕಿ ಖಾಸಗಿ ಕಾಲೇಜುಗಳಲ್ಲಿ ಶೇ.70ರಷ್ಟು ಮತ್ತು ಸರ್ಕಾರಿ ಕಾಲೇಜುಗಳಲ್ಲಿ ಶೇ.30ರಷ್ಟು ವಿದ್ಯಾರ್ಥಿಗಳು ಸೀಟು ಆಯ್ಕೆ ಮಾಡಿಕೊಂಡಿದ್ದಾರೆ. ಗೊಂದಲಗಳು ನಿವಾರಣೆಯಾದರೆ ಕಾಲೇಜುಗಳ ಆರಂಭಕ್ಕೆ ಅನುಕೂಲವಾಗಲಿದೆ ಎಂದು ತಿಳಿದು ಬಂದಿದೆ.