ಕುಂದಗೋಳ: ಸ್ವಾತಂತ್ರ್ಯ ಅಮೃತ ಮಹೋತ್ಸವ ಸಂಭ್ರಮದ ಅಂಗವಾಗಿ ಮುಖ್ಯಮಂತ್ರಿಗಳು ಅಮೃತ ಸರೋವರ ಯೋಜನೆ ಮೂಲಕ ಕೆರೆಗಳ ಪುನಶ್ಚೇತನಕ್ಕೆ ಪ್ರತಿ ಕೆರೆಗೆ 39 ಲಕ್ಷ ರೂ. ಬಿಡುಗಡೆಗೊಳಿಸಿದ್ದಾರೆ. ಆದರೆ ತಾಲೂಕಿನ ಗುಡೇನಕಟ್ಟಿ ಗ್ರಾಪಂ ವ್ಯಾಪ್ತಿಯ ಅಲ್ಲಾಪುರ ಕೆರೆ ಅಭಿವೃದ್ಧಿಗೊಳಿಸದೆ 26 ಲಕ್ಷ ರೂ. ಸಾಮಗ್ರಿ ವೆಚ್ಚ ಹಾಕಲಾಗಿದೆ ಎಂಬ ದೂರು ಕೇಳಿಬರುತ್ತಿದೆ.
ಕೆರೆಗಳು ಅಭಿವೃದ್ಧಿಗೊಂಡರೆ ಅಂತರ್ಜಲಮಟ್ಟ ಹೆಚ್ಚಿ ರೈತರಿಗೆ-ಸಾರ್ವಜನಿಕರಿಗೆ ಅನುಕೂಲವಾಗು ತ್ತದೆ. ಈ ದೃಷ್ಟಿಕೋನದಿಂದ ಮುಖ್ಯಮಂತ್ರಿಗಳ ಮಹತ್ವಾಕಾಂಕ್ಷಿ ಯೋಜನೆಗಳಲ್ಲಿ ಒಂದಾದ ಅಮೃತ ಸರೋವರ ಯೋಜನೆಯ ಅನುದಾನ ತಾಲೂಕಿನಲ್ಲಿ ನುಂಗುವವರ ಪಾಲಾಗುತ್ತಿದೆ ಎಂಬ ಆರೋಪ ದಟ್ಟವಾಗುತ್ತಿದೆ.
ಆ.15ರಂದು ಕಾಮಗಾರಿಗಳನ್ನು ಪೂರ್ಣಗೊಳಿಸಿ ಅಲ್ಲಿ ಧ್ವಜಾರೋಹಣ ಮಾಡಬೇಕೆಂಬುದು ಸಿಎಂ ಅವರ ಕನಸಾಗಿತ್ತು. ಅದರಂತೆ ಈಗಾಗಲೆ ಈ ಗ್ರಾಮದಲ್ಲಿ ಅರೆಬರೆ ಕೆಲಸ ಮಾಡಿ ಎನ್‌ಎಂಆರ್ ನಲ್ಲಿ ಈಗಾಗಲೆ ಕೂಲಿ ಮೊತ್ತ 1,49,247 ರೂ. ಖರ್ಚು ಹಾಕಲಾಗಿದೆ. ಅದರಂತೆ ಸಾಮಗ್ರಿಗಳ ಮೊತ್ತ 26 ಲಕ್ಷ ರೂ.ಗಳನ್ನು ಖರ್ಚು ಹಾಕಿದ್ದಾರೆ. ಆದರೆ ನಿಯಮಗಳನ್ನು ಗಾಳಿಗೆ ತೂರಿ ಮನಬಂದಂತೆ ಹಣವನ್ನು ಖರ್ಚು ಹಾಕಿರುವುದು ಬೆಳಕಿಗೆ ಬಂದಿದೆ. ತಾಪಂ ಇಒ ಡಾ| ಮಹೇಶ ಕುರಿಯವರನ್ನು ಮಾತನಾಡಿಸಿದಾಗ, ಸಾರ್ವಜನಿಕರ ದೂರಿನ ಹಿನ್ನೆಲೆಯಲ್ಲಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಲಾಗಿದೆ.
ಪಿಡಿಒ ಹಾಗೂ ಟಿಎಇ ಅವರಿಗೆ ಈ ವಿಷಯ ಕುರಿತು ಉತ್ತರ ನೀಡುವಂತೆ ಪತ್ರ ಬರೆಯಲಾಗಿದೆ ಎಂದು ಹೇಳಿದರು. ಪಿಆರ್‌ಇಡಿ ಸಹಾಯಕ ಅಧಿಕಾರಿ ಎಸ್.ಆರ್. ವೀರಕರ ಅವರನ್ನು ಮಾತನಾಡಿಸಿದಾಗ, ಈ ವಿಷಯ ಕುರಿತು ಯಾವುದೇ ಮಾಹಿತಿ ನಮ್ಮ ಬಳಿ ಇಲ್ಲ ಎಂದು ಹಾರಿಕೆ ಉತ್ತರ ನೀಡಿದರು. ಗ್ರಾಪಂ ಅಧ್ಯಕ್ಷ ಚಿದಾನಂದ ಕುಸುಗಲ್ ಪ್ರತಿಕ್ರಿಯಿಸಿ, ಪಿಡಿಓ ಹಾಗೂ ಎನ್‌ಆರ್‌ಜಿ ತಾಂತ್ರಿಕ ಸಹಾಯಕ ಅಧಿಕಾರಿಗಳು ನನ್ನ ಗಮನಕ್ಕೆ ತರದೆ ಈ ರೀತಿ ಖರ್ಚು ಹಾಕಿದ್ದಾರೆ ಎಂದು ಹೇಳಿದರು.
ಸರ್ಕಾರ ಅಂತರ್ಜಲ ಮಟ್ಟ ವೃದ್ಧಿಸಲು ಅಮೃತ ಯೋಜನೆಯಡಿ ಕೆರೆಗಳ ಅಭಿವೃದ್ಧಿªಗೆ ಸಾವಿರಾರು ಕೋಟಿ ರೂ. ಹಣ ಬಿಡುಗಡೆ ಮಾಡಿದೆ. ಇದು ಎಷ್ಟರಮಟ್ಟಿಗೆ ಸದುಪಯೋಗವಾಗುತ್ತಿದೆ, ಸದ್ಬಳಕೆಯಾಗುತ್ತಿದೆ ಎಂಬುದು ಯಕ್ಷಪ್ರಶ್ನೆಯಾಗಿದ್ದು, ಸೂಕ್ತ ಮೇಲುಸ್ತುವಾರಿಯಾಗಬೇಕಿದೆ.
ಶೀತಲ ಎಸ್.ಎಂ