ಹೊಸದಿಲ್ಲಿ: ಕಡಿಮೆ ಪ್ರಸಿದ್ಧಿ ಇರುವ, ಹೆಚ್ಚು ಪರಿಚಿತವಲ್ಲದ; ಆದರೆ ಪ್ರಾಮುಖ್ಯವಾಗಿರುವ ಹಲವು ಪ್ರವಾಸಿ ಸ್ಥಳಗಳನ್ನು ಅಭಿವೃದ್ಧಿಪಡಿಸಲು ಕೇಂದ್ರ ಸರಕಾರ ಮುಂದಾಗಿದ್ದು, ಇದಕ್ಕಾಗಿ ರಾಜ್ಯಗಳಿಗೆ ವಿಶೇಷ ಆರ್ಥಿಕ ನೆರವನ್ನು ಪ್ರಕಟಿಸಿದೆ. ಈ ಪಟ್ಟಿಯಲ್ಲಿ ಬೆಂಗಳೂರಿನ ತಾತಗುಣಿ ರೋರಿಚ್ -ದೇವಿಕಾರಾಣಿ ಎಸ್ಟೇಟ್ ಮತ್ತು ಬೆಳಗಾವಿ ಜಿಲ್ಲೆಯ ಸವದತ್ತಿ ಎಲ್ಲಮ್ಮನ ಗುಡ್ಡ ಕೂಡ ಸೇರಿವೆ. ದೇಶಾದ್ಯಂತ ಒಟ್ಟು 40 ಸ್ಥಳಗಳನ್ನು ಆಯ್ಕೆ ಮಾಡಿಕೊಳ್ಳಲಾಗಿದೆ.
ರಾಜ್ಯ/ಕೇಂದ್ರಾಡಳಿತ ಪ್ರದೇಶ ಗಳಿಗೆ ವಿಶೇಷ ನೆರವು (ಎಸ್‌ಎಎಸ್‌ಸಿಐ) ಅಡಿ ಈ ಸ್ಥಳಗಳನ್ನು ಆಯ್ಕೆ ಮಾಡಲಾಗಿದೆ.
ಈ ಪೈಕಿ ರೋರಿಚ್ ಮತ್ತು ದೇವಿಕಾ ರಾಣಿ ಎಸ್ಟೇಟನ್ನು 99.17 ಕೋಟಿ ರೂ. ವೆಚ್ಚದಲ್ಲಿ ಪರಿಸರ ಪ್ರವಾಸೋದ್ಯಮ ಮತ್ತು ಸಾಂಸ್ಕೃತಿಕ ಕೇಂದ್ರವಾಗಿ ರೂಪಿಸಲಾಗುತ್ತದೆ. ಅದೇ ರೀತಿ 100 ಕೋಟಿ ರೂ. ವೆಚ್ಚದಲ್ಲಿ ಯಲ್ಲಮ್ಮನ ಗುಡ್ಡವನ್ನು ಅಭಿವೃದ್ಧಿಪಡಿಸಲಾಗುತ್ತದೆ.
ಎಸ್‌ಎಸ್‌ಸಿಐ ಯೋಜನೆಯಡಿ ಕೇಂದ್ರ ಪ್ರವಾಸೋದ್ಯಮ ಇಲಾಖೆಗೆ ಒಟ್ಟು 83 ಯೋಜನೆಗಳನ್ನು ಸಲ್ಲಿಸಲಾಗಿತ್ತು. ಈ ಪೈಕಿ 23 ರಾಜ್ಯಗಳ 40 ಯೋಜನೆಗಳನ್ನು ಆಯ್ಕೆ ಮಾಡಲಾಗಿದ್ದು, ಸುಮಾರು 3,295 ಕೋಟಿ ರೂ. ವೆಚ್ಚ ಮಾಡಲಾಗುತ್ತದೆ. ಆಯ್ಕೆಯಾದ ರಾಜ್ಯಗಳಿಗೆ ತಮ್ಮ ಯೋಜನೆಗಳನ್ನು ಪೂರ್ಣಗೊಳಿಸಲು 2 ವರ್ಷ ಕಾಲಾವಕಾಶ ನೀಡಲಾಗಿದ್ದು, 2026ರ ಮಾರ್ಚ್‌ಗಿಂತ ಮೊದಲ ಹಣವನ್ನು ಬಿಡುಗಡೆ ಮಾಡಲಾಗುತ್ತದೆ ಎಂದು ಸಚಿವಾಲಯ ತಿಳಿಸಿದೆ. ಈ ಸ್ಥಳಗಳನ್ನು ಪ್ರವಾಸಿ ತಾಣಗಳಾಗಿ ಅಭಿವೃದ್ಧಿಪಡಿಸಿ, ಜಾಗತಿಕ ಮಟ್ಟದಲ್ಲಿ ಗುರುತಿಸುವಂತೆ ಮಾಡುವ ಉದ್ದೇಶ ಸರಕಾರದ್ದಾಗಿದೆ.
ಜನಪ್ರಿಯ ಪ್ರವಾಸಿ ತಾಣಗಳಲ್ಲಿ ಜನದಟ್ಟನೆಯನ್ನು ಕಡಿಮೆ ಮಾಡಲು ಮತ್ತು ದೇಶಾದ್ಯಂತ ಪ್ರವಾಸಿಗರನ್ನು ಇತರ ಸ್ಥಳಗಳಿಗೆ ಸೆಳೆಯಲು ಈ ಯೋಜನೆಯನ್ನು ವಿನ್ಯಾಸಗೊಳಿಸಲಾಗಿದೆ. ಅಷ್ಟೇನೂ ಪ್ರಚಾರದಲ್ಲಿ ಇರದ ಸ್ಥಳಗಳ ಮೇಲೆ ಗಮನ ಕೇಂದ್ರೀಕರಿಸುವ ಮೂಲಕ ಒಟ್ಟು ಪ್ರವಾಸೋದ್ಯಮ ಅನುಭವವನ್ನು ಸುಧಾರಿಸಲು, ಸ್ಥಳೀಯ ಆರ್ಥಿಕತೆಯನ್ನು ಬೆಂಬಲಿಸಲು ಮತ್ತು ಸುಸ್ಥಿರ ವಲಯದ ಬೆಳವಣಿಗೆಯನ್ನು ಉತ್ತೇಜಿಸುವ ಗುರಿಯನ್ನು ಹೊಂದಲಾಗಿದೆ ಎಂದು ಸಚಿವಾಲಯ ತಿಳಿಸಿದೆ.
ತಾತಗುಣಿ ಎಸ್ಟೇಟ್
ರಷ್ಯಾದ ಖ್ಯಾತ ಚಿತ್ರ ಕಲಾವಿದ ಸ್ವೆತಾಸ್ಲೋವ್ ರೋರಿಚ್ ಹಾಗೂ ಅವರ ಪತ್ನಿ, ಖ್ಯಾತ ನಟಿ ದೇವಿಕಾ ರಾಣಿ ನೆಲೆಸಿದ್ದ ಎಸ್ಟೇಟ್ ಇದು. ಇಲ್ಲಿನ ಸರೋವರ ಮತ್ತು ಸಸ್ಯ ಸಂಕುಲವು ವಿವಿಧ ಬಗೆಯ ಪಕ್ಷಿಯ ಆಶ್ರಯ ತಾಣವಾಗಿದೆ. ರೋರಿಚ್ ಹಾಗೂ ದೇವಿಕಾ ರಾಣಿ ಅವರಿಗೆ ಸೇರಿದ ಹಲವು ವರ್ಣಚಿತ್ರಗಳೂ ಇಲ್ಲಿದ್ದು, ಪ್ರವಾಸಿಗರನ್ನು ಆಕರ್ಷಿಸುತ್ತಿದೆ.
ಸವದತ್ತಿ ಎಲ್ಲಮ್ಮ ಗುಡ್ಡ
ಬೆಳಗಾವಿ ಜಿಲ್ಲೆಯ ಸವದತ್ತಿ ಎಲ್ಲಮ್ಮನ ಗುಡ್ಡ ಖ್ಯಾತ ದೇಗುಲವಾಗಿದ್ದು, ದೇವಿ ಎಲ್ಲಮ್ಮನ ಭಕ್ತರು ಅಪಾರ ಸಂಖ್ಯೆಯಲ್ಲಿ ಇಲ್ಲಿಗೆ ಭೇಟಿ ನೀಡುತ್ತಾರೆ. ರಾಷ್ಟ್ರಕೂಟ ಅಥವಾ ಚಾಲುಕ್ಯರ ಅವಧಿಯಲ್ಲಿ ಈ ದೇಗುಲ ನಿರ್ಮಿಸಲಾಗಿದೆ. ಸಂತಾನ ಭಾಗ್ಯಕ್ಕಾಗಿ ಇಲ್ಲಿಗೆ ಹರಕೆ ಹೊರುವ ಸಂಪ್ರದಾಯ ಇದೆ.
ಇತರ ಪ್ರಮುಖ ಸ್ಥಳಗಳು?
ಶಿವಸಾಗರದ ರಂಗ ಘರ್ (ಅಸ್ಸಾಂ)
ಮತ್ಸéಗಂಧ ಸರೋವರ (ಬಿಹಾರ)
ಪೋರ್‌ವೊàರಿಂನ ಟೌನ್ ಸ್ಕ್ವೇರ್(ಗೋವಾ)
ಓರ್ಛಾ (ಮಧ್ಯ ಪ್ರದೇಶ)
ಘಂಡಿಕೋಟ (ಆಂಧ್ರಪ್ರದೇಶ)
ಪಾಸಿಘಾಟ್ (ಅರುಣಾಚಲ ಪ್ರದೇಶ್)
ಜಲ ಮಹಲ್ (ರಾಜಸ್ಥಾನ)
ಅಷ್ಟ ಮುಡಿ ಜೀವವೈವಿಧ್ಯ ಪಾರ್ಕ್ (ಕೇರಳ)