ಕಲಬುರಗಿ: ದಕ್ಷಿಣ ಭಾರತದಲ್ಲಿಯೇ ಪ್ರಥಮವಾಗಿ ಪಿರಾಮಿಡ್ ಮಾದರಿಯಲ್ಲಿ ನಗರದ ಆಕಾಶವಾಣಿ ಕೇಂದ್ರದ ಹಿಂದೆ ಕೆಸರಟಗಿ ರಸ್ತೆಯ ಸಮಾಧಾನದಲ್ಲಿ ನಿರ್ಮಾಣಗೊಂಡಿರುವ ಧ್ಯಾನ ಮಂದಿರದ ಉದ್ಘಾಟನೆ ಹಾಗೂ ಮೌನಯೋಗಿ ಜಡೆಯ ಶಾಂತಲಿಂಗೇಶ್ವರ ಮಹಾಸ್ವಾಮಿಗಳ 75ನೇ ಅಮೃತ ಮಹೋತ್ಸವಕ್ಕೆ ಸಿದ್ಧತೆಗಳು ಭರದಿಂದ ನಡೆದಿವೆ.
ಫೆ. 3 ಹಾಗೂ 4ರಂದು ನಡೆಯುವ ಧ್ಯಾನ ಮಂದಿರ ಉದ್ಘಾಟನೆ ಹಾಗೂ ಮೌನಯೋಗಿಗಳ ಅಮೃತ ಮಹೋತ್ಸವಕ್ಕೆ ರಾಜ್ಯವಲ್ಲದೇ ದೇಶದ ವಿವಿಧ ಭಾಗಗಳಿಂದ ಲಕ್ಷಾಂತರ ಭಕ್ತರು ಪಾಲ್ಗೊಳ್ಳಲಿದ್ದು, ಇದಕ್ಕಾಗಿ ವಸತಿ, ಸಾರಿಗೆ, ದಾಸೋಹ ಸೇರಿದಂತೆ ಇತರ ಎಲ್ಲ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ಮುಖ್ಯ ರಸ್ತೆಯಿಂದ ಸಮಾಧಾನಕ್ಕೆ ಹೋಗುವ ರಸ್ತೆಯ ಸುಧಾರಣೆ ಕಾರ್ಯ ನಡೆದಿದೆ.
ವೇದಿಕೆ ಮಂಟಪ ನಿರ್ಮಾಣ ಸೇರಿದಂತೆ ಇತರ ಕಾರ್ಯಗಳಿಗೆ ಚಾಲನೆ ನೀಡಲಾಗಿದ್ದು, ಭರದಿಂದ ಕಾರ್ಯಗಳು ನಡೆಯುತ್ತಿವೆ. ಫೆ. 3ರಂದು ಬೆಳಗ್ಗೆ 10:30ಕ್ಕೆ ನಾಡಿನ ಅನೇಕ ಹರಗುರು ಚರಮೂರ್ತಿಗಳ ಸಾನ್ನಿಧ್ಯ, ಮಾಜಿ ಮುಖ್ಯಮಂತ್ರಿಗಳ, ಜನಪ್ರತಿನಿಧಿಗಳ ಹಾಗೂ ಭಕ್ತರ ಸಮ್ಮುಖದಲ್ಲಿ ಧ್ಯಾನ ಮಂದಿರದ ಉದ್ಘಾಟನೆ ನೆರವೇರಲಿದೆ.
ಮೈಸೂರು ಸುತ್ತೂರ ಕ್ಷೇತ್ರದ ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮೀಜಿ ಉದ್ಘಾಟಿಸುವರು. ಭಕ್ತ ನಿವಾಸವನ್ನು ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಉದ್ಘಾಟಿಸುವರು. ಅಖೀಲ ಭಾರತ ವೀರಶೈವ ಮಹಾಸಭಾದ ಅಧ್ಯಕ್ಷ ಶಾಮನೂರು ಶಿವಶಂಕರಪ್ಪ ಅಧ್ಯಕ್ಷತೆ ವಹಿಸುವರು.
ಮೌನಯೋಗಿಗಳ ಪಂಚಲೋಹದ ಪುತ್ಥಳಿ ಅನಾವರಣವನ್ನು ಶಕುಂತಲಾತಾಯಿ ಬಸವರಾಜ ಭೀಮಳ್ಳಿ ನೆರವೇರಿಸುವರು. ಫೆ. 4ರಂದು ಬೆಳಗ್ಗೆ 9:00ಕ್ಕೆ ಶ್ವೇತ ಶಾಂತ, ಮೌನಯೋಗಿಗಳ ಜಂಗಮ ಮಹಾಪೂಜೆ ಜರುಗುವುದು. ಸಂಜೆ 4:00ಕ್ಕೆ ಪೂಜ್ಯರ 75ನೇ ಅಮೃತ ಮಹೋತ್ಸವ ಜರುಗಲಿದೆ. ಶಿರಹಟ್ಟಿ ಫಕೀರೇಶ್ವರ ಮಹಾಸಂಸ್ಥಾನದ ನಿರಂಜನ ಜಗದ್ಗುರುಗಳು ಸಾನ್ನಿಧ್ಯ ವಹಿಸುವರು.
ಕೊಪ್ಪಳದ ಗವಿಸಿದೇಶ್ವರ ಮಹಾಸ್ವಾಮಿಗಳು ಉಪದೇಶ ನೀಡುವರು. ಭಾಲ್ಕಿ ಹಿರೇಮಠದ ಡಾ| ಬಸವಲಿಂಗ ಪಟ್ಟದ್ದೇವರು ಅಧ್ಯಕ್ಷತೆ, ಹಾರಕೂಡದ ಡಾ| ಚನ್ನವೀರ ಶಿವಾಚಾರ್ಯ ಮಹಾಸ್ವಾಮಿಗಳು ಸಮ್ಮುಖತೆ ವಹಿಸುವರು. ಸಂಸದ ಡಾ| ಮಲ್ಲಿಕಾರ್ಜುನ ಖರ್ಗೆ, ಮಾಜಿ ಮುಖ್ಯಮಂತ್ರಿ ಧರ್ಮಸಿಂಗ್ ಹಾಜರಿದ್ದರು.
ಅದಕ್ಕಿಂತ ಮುಂಚಿತವಾಗಿ ಜ. 25ರಿಂದ ಫೆಬ್ರುವರಿ 2ರ ವರೆಗೆ ಪ್ರತಿದಿನ ಸಂಜೆ 6:00ಕ್ಕೆ ಸಮಾಧಾನದಲ್ಲಿ ಶಿರಸಿಯ ಜಂಗಮಲಿಂಗ ಚಿಕ್ಕತೊಟ್ಟಿಲಕರ ಬಣ್ಣದ ಮಠದ ಶಿವಲಿಂಗ ಮಹಾಸ್ವಾಮಿಗಳಿಂದ ಪ್ರವಚನ ನಡೆಯಲಿದೆ. ಒಟ್ಟಾರೆ ಎಲ್ಲ ಸಿದ್ಧತೆಗಳನ್ನು ಪೂರ್ಣಗೊಳ್ಳಲು ಹಾಗೂ ಮಹೋತ್ಸವ ಉಸ್ತುವಾರಿಕೆಗೆ ಗಣ್ಯರ ಹಾಗೂ ಭಕ್ತರನ್ನೊಳಗೊಂಡ ಉಪ ಸಮಿತಿಗಳನ್ನು ರಚಿಸಲಾಗಿದೆ.