ಉಹುಂ, ಹಾಗಾಗಬಾರದು. ಹಕ್ಕಿ ಹಾರುವುದನ್ನು ಕಲಿತು ತನ್ನ ಜೀವ ಉಳಿಸಿಕೊಳ್ಳುವಂತೆ ಮನುಷ್ಯರಾದ ಮೇಲೆ ಬರುವ ಸವಾಲುಗಳಿಗೆ ಎದೆಯೊಡ್ಡಿ ನಿಲ್ಲಬೇಕು. ಪ್ರತಿಭೆಯನ್ನು ಮುಂದೊಡ್ಡಿ ಎತ್ತರಕ್ಕೆ ಹಾರಬೇಕು. ಬೆಟ್ಟವನ್ನು ಪುಡಿ ಮಾಡುವಷ್ಟು ಆತ್ಮಶಕ್ತಿ ಯುವಕರಲ್ಲಿ ಇರಬೇಕೇ ಹೊರತು ಬೆಟ್ಟ ಹತ್ತಿದರೆ ಕಾಲು ನೋಯುತ್ತದೆ ಎಂಬ ಮನಸ್ಥಿತಿ ಇರಲೇಬಾರದು.
ನಾನಾಗ ಐದನೇ ತರಗತಿಯಲ್ಲಿ ಓದುತ್ತಿದ್ದೆ. ನಮಗೆಲ್ಲ ಪ್ರಾಣಿ, ಪಕ್ಷಿಗಳನ್ನ ಸಾಕುವುದೆಂದರೆ ಎಲ್ಲಿಲ್ಲದ ಖುಷಿ, ಮತ್ತದು ಹೊಸ ಪ್ರಪಂಚದ ಕನಸಾಗಿತ್ತು. ಆಗ ನಮ್ಮೂರಿನ ಮೂಲಕ ಹಾದು ಹೋಗುವ ನದಿಗೆ ಮೇಲ್ಸೇತುವೆ ಕಟ್ಟಿದ್ದರು. ನಾವು ಪ್ರತಿದಿನ ಅದರ ಮೂಲಕ ಹಾದು ಹೋಗುವಾಗ ಪಾರಿವಾಳದ ಗೂಡೊಂದು ಕಣ್ಣಿಗೆ ಬಿತ್ತು. ನಾನು, ಗೆಳತಿ ಚಂದ್ರಿಕಾ, ಗೆಳೆಯ ಮಧು ಸೇರಿ ಮರಿ ಪಾರಿವಾಳವನ್ನು ಸಾಕುವುದೆಂದು ತೀರ್ಮಾನಿಸಿ ಗೂಡಿಗೆ ಕೈ ಹಾಕಿದೆವು. ಆದರೆ ನಮಗಲ್ಲಿ ಕಂಡದ್ದು ಸುಂದರವಾದ ರೆಕ್ಕೆ ಇದ್ದ, ಮೂಗುತಿ ಹೊಂದಿರದ ಪಕ್ಷಿಯಾಗಿರಲಿಲ್ಲ. ರೋಗ ಬಂದಂತೆ ಕಾಣುತ್ತಿದ್ದ ಚರ್ಮ, ಎಳೆಯ ಗರಿಗಳು ನಮ್ಮ ಆಸೆಗೆ ತಣ್ಣೀರು ಹಾಕಿತು. ಅಲ್ಲಿಯೇ ಬಿಟ್ಟು ಹೋಗೋಣ ಎಂದುಕೊಂಡೆ. ಆದರೆ ಮನುಷ್ಯರು ಮುಟ್ಟಿದ ಮರಿಯನ್ನು ತನ್ನ ವಾಸನಾ ಗ್ರಹಿಕೆಯಿಂದ ಪತ್ತೆ ಹಚ್ಚಿ, ಆ ಮರಿಯನ್ನು ಮತ್ತೆ ಗೂಡಿಗೆ ಮರಳಿಸದೆ ಮನೆಯಿಂದ ಹೊರ ಹಾಕುತ್ತದೆ ತಾಯಿ ಎಂದು ತುಸು ಬುದ್ಧಿವಂತನಾದ ಮಧು ಹೇಳಿದ್ದರಿಂದ ಏನಾದರಾಗಲಿ ಎಂದು ಮನೆಗೆ ಕೊಂಡೊಯ್ದೆವು. ಅದಕ್ಕೆಂದು ಕಾರ್ಡ್ ಬೋರ್ಡ್ ಶೀಟಿನಿಂದ ಡಬ್ಬದಂತೆ ತಯಾರಿಸಿ ಹತ್ತಿ, ಹಾಸಿಗೆಯ ನಾರು ಹಾಸಿ ಅದಕ್ಕೆ ಗೂಡು ತಯಾರಿಸಿದೆವು. ಆ ಪಾರಿವಾಳಕ್ಕೆ, ಸಾಕ್ಷಿ ಎಂದು ಹೆಸರಿಟ್ಟೆವು. ಗೂಡನ್ನು ತಾರಸಿಯ ಮೇಲಿಟ್ಟು, ದಿನವೂ ಸ್ಕೂಲಿಗೆ ಹೋಗುವ ಮುನ್ನ ಅಕ್ಕಿ ನುಚ್ಚು, ರಾಗಿ ನೀರುಣಿಸಿ, ಗೂಡಿಗೆ ಬಿಟ್ಟು ಬಾಗಿಲು ಭದ್ರವಾಗಿಸಿ ಅದರ ಆರೈಕೆ ಮಾಡಿ ಖುಷಿಯಿಂದ ಹೋಗುತ್ತಿದ್ದೆವು. ಸಂಜೆ ಮತ್ತೆ ಯಥಾಪ್ರಕಾರ ಆಹಾರ ನೀಡಿ ಬಾಗಿಲು ಮುಚ್ಚುತ್ತಿದ್ದೆವು. ಅದನ್ನು ನೋಡಿಕೊಳ್ಳುವುದೇ ನಮಗೊಂದು ದೊಡ್ಡ ಕೆಲಸ ಮಾಡಿದ ಸಾಹಸ. ಅದಕ್ಕೆ ಹಸಿವಾಗಲು ಬಿಡದೆ ತಾಯಿ ಮಗುವನ್ನು ಸಾಕುವಂತೆ, ತಿನ್ನುವುದು, ನಡೆಯುವುದನ್ನು ಕಲಿಸಿದೆವು. ಒಂದು ತಿಂಗಳಿನಲ್ಲೇ ಅದಕ್ಕೆ ರೆಕ್ಕೆ- ಪುಕ್ಕ ಮೂಡಿ ಸುಂದರಿ ಕನ್ಯಾಮಣಿಯಂತೆ ತನ್ನ ನೈಜ ಪರಿವಾರದ ಪಾರಿವಾಳದ ರೂಪ ಹೊಂದಿತು. ನಾವೆಲ್ಲರೂ ಆಗ ಸಂಭ್ರಮದಿಂದ ಕುಣಿದಾಡಿದೆವು. ಆದರೆ ನಮಗೆ ಸ್ವಲ್ಪ ದಿನದಲ್ಲೇ ಮತ್ತೂಂದು ನಿರಾಸೆ ಎದುರಾಗಿತ್ತು. ಆ ಪಾರಿವಾಳ ಹಾರುತ್ತಲೇ ಇರಲಿಲ್ಲ. ಸ್ವಲ್ಪ ದೂರ ನಡೆಯುತ್ತಿತ್ತು, ತಿನ್ನುತ್ತಿತ್ತು, ಬೆಚ್ಚಗೆ ಮಲಗುತ್ತಿತ್ತು. ಇಷ್ಟೇ ಅದರ ಜೀವನವಾಗಿತ್ತು. ಸುಂದರವಾಗಿ ಅರಳಿದ ಹೂ ಸುಗಂಧ ಬೀರದಿದ್ದರೆ, ಅಲಂಕಾರ ಸವಿಯುವ ಮನೋಹರ ನಯನರದಿದ್ದರೆ, ರೆಕ್ಕೆ ಬಂದ ಪಕ್ಷಿ ಹಾರದಿದ್ದರೆ ಅದರ ಬದುಕಿನ ಸಾರ್ಥಕತೆ ಏನಿರುತ್ತದೆ ಅಲ್ಲವೇ?
ಆ ಪಕ್ಷಿಗೆ ಹಾರುವ ವಿಷಯದಲ್ಲಿ ಒಂದು ವಾರ ಟ್ರೈನಿಂಗ್ ಕೊಟ್ಟು ಸೋತ ನಾವು ಕಡೆಗೆ ಒಂದು ತೀರ್ಮಾನಕ್ಕೆ ಬಂದೆವು. ಅದನ್ನ ಪ್ರತಿ ದಿನ ಸಂಜೆ ಹತ್ತಿರದ ಕಾಡಿಗೆ ಬಿಟ್ಟು ಬಂದರೆ ಹಾರಾಡುವ ಹಕ್ಕಿಯನ್ನು ನೋಡಿ ಕಲಿಯುತ್ತದೆಂದು. ಅದರಂತೆ ಅಂದು ವೃಕ್ಷಗಳ ನಡುವೆ ಬಿಟ್ಟು ನೋಡುತ್ತಿದ್ದೆವು. ಅದು ಅರ್ಧ ಗಂಟೆಯಾದ ಮೇಲೆ ರೆಕ್ಕೆ ಬಡಿಯಿತು. ಅದು ಇನ್ನೇನು ಹಾರುತ್ತದೆ ಎಂದು ಕಾಯ್ದವರಿಗೆ ಮತ್ತೆ ಅದು ಸುಮ್ಮನೆ ಕುಳಿತಿದ್ದು ನೋಡಿ ನಿರಾಸೆಯಾಗಿ ಅಲ್ಲಿಯೇ ಪಕ್ಕದಲ್ಲಿ ಆಟದಲ್ಲಿ ಮೈ ಮರೆತೆವು. ಮತ್ತೆ ಅದು ರೆಕ್ಕೆ ಬಡಿದ ಸದ್ದು ಕೇಳಿ ಹಾರುವುದನ್ನು ಕಲಿಯುತ್ತದೆ ಎಂದು ಬಂದಾಗ ನಮ್ಮ ಕಣ್ಣ ಮುಂದೆಯೇ ರೊಯ್ಯನೆ ಹಾರಿಬಂದ ಹದ್ದೊಂದು ಪ್ರೀತಿಯಿಂದ ಸಾಕಿದ ಪಾರಿವಾಳವನ್ನು ಎತ್ತಿಕೊಂಡು ಹೋಯಿತು. ನಾವು ನಿಸ್ಸಹಾಯಕರಾಗಿ ಕೈ ಮೀರಿದ ಪರಿಸ್ಥಿತಿ ಎಂದುಕೊಂಡು ಕಣ್ಣೀರಾದೆವು. ಆ ಪಾರಿವಾಳಕ್ಕೆ ಹಾರುವುದು ಗೊತ್ತಿದ್ದರೆ ತನ್ನ ಜೀವವನ್ನು ಉಳಿಸಿಕೊಳ್ಳುತ್ತಿತ್ತೇನೋ.
ಅಂಗೈಯಲ್ಲಿ ಎಲ್ಲ ಸೌಕರ್ಯಗಳು ಸಿಗುವಾಗ ಶತ್ರುವಿನ ಹೆಜ್ಜೆ, ಬದುಕಿನ ಅರ್ಥ ಮರೆತು ಹೋಗುತ್ತೇವೆ. ಇತ್ತೀಚಿನ ಸ್ಪರ್ಧಾತ್ಮಕ ಯುಗದಲ್ಲಿ ಪೋಷಕರು ಬಹಳ ಜತನದಿಂದ ಅಗತ್ಯಕ್ಕೂ ಮೀರಿ ಮಕ್ಕಳಿಗೆ ಎಲ್ಲ ಸೌಲಭ್ಯವನ್ನೂ ಒದಗಿಸುತ್ತಾರೆ. ಮಕ್ಕಳು, ಹಣಕ್ಕೆ, ಊಟಕ್ಕೆ ಪರದಾಡುವ ಅವಶ್ಯವಿರುವುದಿಲ್ಲ. ಬಿಸಿಲಲ್ಲಿ ಒಣಗಬಾರದು, ಮಳೆಯಲ್ಲಿ ನೆನೆಯಬಾರದು, ಚಳಿಯ ತಂಪಿಗೆ ಮೈ ಒಡ್ಡದೆ ಅರಮನೆಯ ಗೊಂಬೆಯಂತೆ ಬೆಳೆಯುತ್ತಾರೆ. ಮತ್ತೂಬ್ಬರ ಮೇಲೆ ಅವಲಂಬಿತರಾಗಿ ಬದುಕುತ್ತಿದ್ದಾರೆ. ಒಂದು ಸಣ್ಣ ಸೋಲಿಗೂ ಬಿಕ್ಕಿ ಅಳುತ್ತಾರೆ. ಪ್ರೇಮ ವೈಫಲ್ಯವಾಗಿಬಿಟ್ಟರಂತೂ, ಆತ್ಮಹತ್ಯೆ ಮಾಡಿಕೊಳ್ಳುವ ಕೆಟ್ಟ ನಿರ್ಧಾರ ಕೈಗೊಂಡು ಬಿಡುತ್ತಾರೆ. ಕಾಂಪಿಟೇಟಿವ್ ಎಕ್ಸಾಮ್‌ನಲ್ಲಿ ನಪಾಸಾದರೆ ಜೀವನವೇ ಮುಗಿದು ಹೋಯಿತು ಎಂದು ಲೆಕ್ಕ ಹಾಕಿ ಆತಂಕಕ್ಕೆ ಈಡಾಗುತ್ತಾರೆ.
ಉಹುಂ, ಹಾಗಾಗಬಾರದು. ಹಕ್ಕಿ ಹಾರುವುದನ್ನು ಕಲಿತು ತನ್ನ ಜೀವ ಉಳಿಸಿಕೊಳ್ಳುವಂತೆ ಮನುಷ್ಯರಾದ ಮೇಲೆ ಬರುವ ಸವಾಲುಗಳಿಗೆ ಎದೆಯೊಡ್ಡಿ ನಿಲ್ಲಬೇಕು. ಪ್ರತಿಭೆಯನ್ನು ಮುಂದೊಡ್ಡಿ ಎತ್ತರಕ್ಕೆ ಹಾರಬೇಕು. ಬೆಟ್ಟವನ್ನು ಪುಡಿ ಮಾಡುವಷ್ಟು ಆತ್ಮಶಕ್ತಿ ಯುವಕರಲ್ಲಿ ಇರಬೇಕೇ ಹೊರತು ಬೆಟ್ಟ ಹತ್ತಿದರೆ ಕಾಲು ನೋಯುತ್ತದೆ ಎಂಬ ಮನಸ್ಥಿತಿ ಇರಲೇಬಾರದು.
ಎಡೆಯೂರು ಪಲ್ಲವಿ