Advertisement

ಪರಿಪೂರ್ಣ ಅಂತ್ಯ: ರೂಟ್‌

06:00 AM Sep 13, 2018 | Team Udayavani |

ಲಂಡನ್‌: ಅಲಸ್ಟೇರ್‌ ಕುಕ್‌ ಅವರಿಗೆ ಗೆಲುವಿನ ವಿದಾಯ ಮತ್ತು ವೇಗಿ ಜೇಮ್ಸ್‌ ಆ್ಯಂಡರ್ಸನ್‌ ಅಂತಿಮ ವಿಕೆಟ್‌ ಕಿತ್ತು ಟೆಸ್ಟ್‌ ಇತಿಹಾಸದ ಶ್ರೇಷ್ಠ ವೇಗದ ಬೌಲರ್‌ ಎಂದೆನಿಸಿಕೊಂಡ ಈ ಭಾರತ ವಿರುದ್ಧದ ಐದು ಪಂದ್ಯಗಳ ಟೆಸ್ಟ್‌ ಸರಣಿ 4-1 ಗೆಲುವಿನೊಂದಿಗೆ ಪರಿಪೂರ್ಣ ರೀತಿಯಲ್ಲಿ ಅಂತ್ಯಗೊಂಡಿದೆ ಎಂದು ಇಂಗ್ಲೆಂಡ್‌ ತಂಡದ ನಾಯಕ ಜೋ ರೂಟ್‌ ಹೇಳಿದ್ದಾರೆ. 

Advertisement

ಲಂಡನ್‌ನಲ್ಲಿ ಮಂಗಳವಾರ ಮುಗಿದ ಐದನೇ ಟೆಸ್ಟ್‌ ಪಂದ್ಯವನ್ನು 118 ರನ್ನುಗಳಿಂದ ಗೆದ್ದ ಇಂಗ್ಲೆಂಡ್‌ ಸರಣಿಯನ್ನು 4-1 ಅಂತರದಿಂದ ತನ್ನದಾಗಿಸಿಕೊಂಡಿದೆ.

ಕೌಂಟಿಯಲ್ಲಿ ಆಡಲು ನಿರಾಕರಿಸಿ ಟೀಕೆಗಳನ್ನು ಎದುರಿಸಿದ್ದ ಲೆಗ್‌ ಸ್ಪಿನ್ನರ್‌ ಅದಿಲ್‌ ರಶೀದ್‌ ಅಪಾಯಕಾರಿ ಕೆಎಲ್‌ ರಾಹುಲ್‌ ಅವರ ವಿಕೆಟನ್ನು ಹಾರಿಸುವ ಮೂಲಕ ಇಂಗ್ಲೆಂಡ್‌ ಗೆಲುವಿಗೆ ಚಾಲನೆ ನೀಡಿದರು. ರಾಹುಲ್‌ ಮತ್ತು ಪಂತ್‌ ಜತೆಯಾಟ ಮುರಿದ ಬಳಿಕ ಭಾರತ ಹಠಾತ್‌ ಕುಸಿಯಿತು.

ವಿದಾಯ ಪಂದ್ಯದಲ್ಲಿ ಇಂಗ್ಲೆಂಡ್‌ ಗೆಲ್ಲುವ ಮೂಲಕ  ಕುಕ್‌ ಸಂಭ್ರಮಪಟ್ಟರೆ ಜಿಮ್ಮಿ ಶ್ರೇಷ್ಠ ವೇಗದ ಬೌಲರ್‌ ಎಂದೆನಿಸಿಕೊಂಡಿದ್ದಾರೆ. ಇದರ ನಡುವೆ ಇಂಗ್ಲೆಂಡ್‌ ಸರಣಿ ಗೆದ್ದಿರುವುದು ಅವರಿಬ್ಬರ ಸಂಭ್ರಮವನ್ನು ಮತ್ತಷ್ಟು ಹೆಚ್ಚಿಸಿದೆ ಎಂದು ರೂಟ್‌ ತಿಳಿಸಿದರು.

ಓವಲ್‌ ಟೆಸ್ಟ್‌ ಆಡಲು ಬಂದಾಗ ಅಗ್ರ ಕ್ರಮಾಂಕದ ಬ್ಯಾಟಿಂಗ್‌ ಬಗ್ಗೆ ಇಂಗ್ಲೆಂಡಿಗೆ ಒತ್ತಡವಿತ್ತು ಮತ್ತು ವಿಕೆಟ್‌ಕೀಪಿಂಗ್‌ ಕುರಿತು ಗೊಂದಲವಿತ್ತು. ಆದರೆ ಎಲ್ಲವೂ ಸುಗಮವಾಗಿ ಸಾಗಿದೆ. ಭಾರತ ಪ್ರತಿಹೋರಾಟ ನೀಡಿದರೂ ಅಸಾಧ್ಯ ಗೆಲುವಿನಿಂದ ದೂರ ಉಳಿಯಿತು ಎಂದು ರೂಟ್‌ ನುಡಿದರು.

Advertisement

ರಶೀದ್‌ ಅವರ ದಾಳಿ ಅತ್ಯದ್ಭುತವಾಗಿತ್ತು. ಕ್ರೀಸ್‌ನಲ್ಲಿ ಗಟ್ಟಿಯಾಗಿ ನಿಂತಿದ್ದ ರಾಹುಲ್‌ಗೆ ಇದರಿಂದ ತೀವ್ರ ಆಘಾತವಾಗಿತ್ತು. ಈ ಎಸೆತವನ್ನು ಶೇನ್‌ ವಾರ್ನ್ ಅವರ ಬಾಲ್‌ ಆಫ್ ದಿ ಸೆಂಚುರಿಗೆ ಹೋಲಿಸಲಾಗಿದೆ. 1993ರ ಆ್ಯಷಸ್‌ ಟೆಸ್ಟ್‌ ಸರಣಿಯ ಮೊದಲ ಪಂದ್ಯದಲ್ಲಿ ಮೈಕ್‌ ಗ್ಯಾಟಿಂಗ್‌ ಅವರ ವಿಕೆಟನ್ನು ಹಾರಿಸಿದ ವಾರ್ನ್ ಎಸೆತವನ್ನು ಬಾಲ್‌ ಆಫ್ ದಿ ಸೆಂಚುರಿ ಎಂದು ಬಣ್ಣಿಸಲಾಗಿತ್ತು.

ಇದೊಂದು ರಶೀದ್‌ ಅವರ ಅದ್ಭುತ ಎಸೆತವಾಗಿತ್ತು. ಈ ಎಸೆತ ತೀಕ್ಷ್ಣವಾಗಿತ್ತು. ಹಾಗಾಗಿ ಅವರು ನಮ್ಮ ತಂಡದಲ್ಲಿದ್ದಾರೆ. ಪಂದ್ಯವನ್ನು ಅಥವಾ ಪರಿಸ್ಥಿತಿಯನ್ನು ತಿರುಗಿಸಬಲ್ಲ ಸಾಮರ್ಥ್ಯ ಅವರಲ್ಲಿದೆ ಎಂದು ರೂಟ್‌ ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next