Advertisement

IPL;ಡೆಲ್ಲಿ ವಿರುದ್ಧ ಬ್ಯಾಟಿಂಗ್ ಆಬ್ಬರ ತೋರಿದ ಹೈದರಾಬಾದ್ ಗೆ 67 ರನ್ ಜಯ

12:15 AM Apr 21, 2024 | Team Udayavani |

ಹೊಸದಿಲ್ಲಿ: ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ಶನಿವಾರ ನಡೆದ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಅಬ್ಬರದ ಬ್ಯಾಟಿಂಗ್ ಪ್ರದರ್ಶಿಸಿ ಮತ್ತೊಂದು ಬೃಹತ್ ಮೊತ್ತ ಕಲೆ ಹಾಕಿದ ಸನ್ ರೈಸರ್ಸ್ ಹೈದರಾಬಾದ್ 67 ರನ್ ಜಯ ಸಾಧಿಸಿದೆ.

Advertisement

ಡೆಲ್ಲಿ ಕ್ಯಾಪಿಟಲ್ಸ್ ಟಾಸ್ ಗೆದ್ದು ಬೌಲಿಂಗ್ ಆಯ್ಕೆ ಮಾಡಿಕೊಂಡಿತು. ಆರಂಭದಿಂದಲೇ ದೈತ್ಯ ಶಕ್ತಿಯಾಗಿ ಅಬ್ಬರಿಸಿದ ಟ್ರಾವಿಸ್ ಹೆಡ್ ಮತ್ತು ಅಭಿಷೇಕ್ ಶರ್ಮ ಸಿಕ್ಸರ್ ಮತ್ತು ಬೌಂಡರಿಗಳ ಸುರಿಮಳೆಗೈದರು. ಡೆಲ್ಲಿ ಬೌಲರ್ ಗಳನ್ನ ಮನಬಂದಂತೆ ದಂಡಿಸಿ 7 ವಿಕೆಟ್ ನಷ್ಟಕ್ಕೆ 266 ರನ್ ಕಲೆ ಹಾಕಿದರು.

12 ಎಸೆತಗಳಲ್ಲಿ 46 ರನ್ ಗಳಿಸಿದ್ದ ಅಭಿಷೇಕ್ ಅವರನ್ನು ಔಟ್ ಮಾಡುವಲ್ಲಿ ಕುಲದೀಪ್ ಯಾದವ್ ಯಶಸ್ವಿಯಾದರು. ಅಕ್ಷರ್ ಪಟೇಲ್ ಅಮೋಘ ಕ್ಯಾಚ್ ಪಡೆದು ಮೊದಲ ವಿಕೆಟ್ ಪಡೆದರು. ಅಭಿಷೇಕ್ 2 ಬೌಂಡರಿ ಮತ್ತು 6 ಭರ್ಜರಿ ಸಿಕ್ಸರ್ ಚಚ್ಚಿದ್ದರು.

ಮನಬಂದಂತೆ ಚೆಂಡನ್ನು ಕ್ರೀಡಾಂಗಣದ ಮೂಲೆ ಮೂಲೆಗೆ ಕಳುಹಿಸಿದ ಹೆಡ್ 32 ಎಸೆತಗಳಲ್ಲಿ 89 ರನ್ ಚಚ್ಚಿದರು. 11 ಬೌಂಡರಿ ಮತ್ತು 6 ಅಮೋಘ ಸಿಕ್ಸರ್ ಗಳನ್ನು ಸಿಡಿಸಿದರು. ಇನ್ನೇನು ವೇಗದ ಶತಕ ಸಿಡಿಸುತ್ತಾರೆ ಎನ್ನುವಷ್ಟರಲ್ಲಿ ಕುಲದೀಪ್ ಯಾದವ್ ಅವರನ್ನು ಔಟ್ ಮಾಡುವಲ್ಲಿ ಯಶಸ್ವಿಯಾದರು. ಸ್ಟಬ್ಸ್ ಕ್ಯಾಚ್ ಪಡೆದರು. ಬಳಿಕ ಬಂದ ಐಡೆನ್ ಮಾರ್ಕ್ರಾಮ್ 1 ರನ್ ಗೆ ಔಟಾದರು. ಹೆನ್ರಿಕ್ ಕ್ಲಾಸೆನ್ 15 ರನ್ ಗೆ ಆಟ ಮುಗಿಸಿದರು. ನಿತೀಶ್ ರೆಡ್ಡಿ ಮತ್ತು ಶಹಬಾಜ್ ಅಹಮದ್ ಕೆಲ ಹೊತ್ತು ಜತೆಯಾಟವಾಡಿದರು. ರೆಡ್ಡಿ 37 ರನ್(27 ಎಸೆತ) ಗಳಿಸಿ ಔಟಾದರು. ಶಹಬಾಜ್ ಅಹ್ಮದ್ ಔಟಾಗದೆ 59(29ಎಸೆತ) ಗಳಿಸಿದರು.

ಬೃಹತ್ ಗುರಿ ಬೆನ್ನಟ್ಟಿದ ಡೆಲ್ಲಿ 25-2 ವಿಕೆಟ್ ಕಳೆದುಕೊಂಡು ಶಾಕ್ ಅನುಭವಿಸಿತು. ಪೃಥ್ವಿ ಶಾ16, ಡೇವಿಡ್ ವಾರ್ನರ್ 1 ರನ್ ಅಷ್ಟೇ ಗಳಿಸಿದರು. ಸಿಡಿದು ನಿಂತ ಜೇಕ್ ಫ್ರೇಸರ್-ಮ್ಯಾಕ್‌ಗುರ್ಕ್ 18 ಎಸೆತಗಳಲ್ಲಿ 65 ರನ್ ಗಳಿಸಿ ಔಟಾದರು. ಅಭಿಷೇಕ್ ಪೊರೆಲ್ 42(22 ಎಸೆತ) ರನ್ ಗಳಿಸಿ ಔಟಾದರು. ಟ್ರಿಸ್ಟಾನ್ ಸ್ಟಬ್ಸ್ 10, ರಿಷಭ್ ಪಂತ್ 44 ರನ್ ಗಳಿಸಿ ಔಟಾದರು. ಉಳಿದ ಆಟಗಾರರಿಗೆ ಗುರಿ ಮುಟ್ಟುವುದು ಅಸಾಧ್ಯವಾಯಿತು. 19.1 ಓವರ್ ಗಳಲ್ಲಿ 199 ರನ್ ಗಳಿಸಲಷ್ಟೇ ಶಕ್ತವಾಯಿತು.

Advertisement

ಹೈದಾರಾಬಾದ್‌ ರೆಕಾರ್ಡ್ಸ್‌
ಪವರ್‌ ಪ್ಲೇಯಲ್ಲಿ 3 ಫಿಫ್ಟಿ
ಟ್ರ್ಯಾವಿಸ್‌ ಹೆಡ್‌ ಪವರ್‌ ಪ್ಲೇಯಲ್ಲಿ 3 ಅರ್ಧ ಶತಕ ಬಾರಿಸಿ ಕ್ರಿಸ್‌ ಗೇಲ್‌, ಸುನೀಲ್‌ ನಾರಾಯಣ್‌ ಜತೆ ಜಂಟಿ ದ್ವಿತೀಯ ಸ್ಥಾನಿಯಾದರು. 6 ಅರ್ಧ ಶತಕ ಬಾರಿಸಿದ ಡೇವಿಡ್‌
ವಾರ್ನರ್‌ಗೆ ಅಗ್ರಸ್ಥಾನ.
16 ಎಸೆತಗಳಲ್ಲಿ 50
ಹೆಡ್‌ ಕೇವಲ 16 ಎಸೆತಗಳಲ್ಲಿ ಅರ್ಧ ಶತಕ ಬಾರಿಸಿ ಅಭಿಷೇಕ್‌ ಶರ್ಮ ಅವರ ಹೈದರಾಬಾದ್‌ ದಾಖಲೆಯನ್ನು ಸರಿದೂಗಿಸಿದರು. ಅಭಿಷೇಕ್‌ ಕಳೆದ ಮುಂಬೈ ಎದುರಿನ ಪಂದ್ಯದಲ್ಲಿ ಈ ಸಾಧನೆ ಮಾಡಿದ್ದರು.
3 ಓವರ್‌ಗಳಲ್ಲಿ ಫಿಫ್ಟಿ
ಹೆಡ್‌ ಮೊದಲ 3 ಓವರ್‌ಗಳಲ್ಲಿ ಅರ್ಧ ಶತಕ ಪೂರೈಸಿ ದ್ವಿತೀಯ ಸ್ಥಾನಿಯಾದರು. ಯಶಸ್ವಿ ಜೈಸ್ವಾಲ್‌ ಮತ್ತು ಕೆ.ಎಲ್‌. ರಾಹುಲ್‌ 2.5 ಓವರ್‌ಗಳಲ್ಲಿ 50 ರನ್‌ ಹೊಡೆದಿದ್ದರು.
5 ಓವರ್‌ಗಳಲ್ಲಿ 100
ಹೈದರಾಬಾದ್‌ ಐಪಿಎಲ್‌ ಚರಿತ್ರೆಯಲ್ಲೇ 5 ಓವರ್‌ಗಳಲ್ಲಿ 100 ರನ್‌ ಪೂರ್ತಿಗೊಳಿಸಿದ ಮೊದಲ ತಂಡವೆನಿಸಿತು. ಚೆನ್ನೈ ಮತ್ತು ಕೆಕೆಆರ್‌ 6 ಓವರ್‌ಗಳಲ್ಲಿ 100 ರನ್‌ ಬಾರಿಸಿದ್ದು ಈವರೆಗಿನ ದಾಖಲೆ ಆಗಿತ್ತು.
ಪವರ್‌ ಪ್ಲೇ ರೆಕಾರ್ಡ್‌
ಹೈದರಾಬಾದ್‌ ಪವರ್‌ ಪ್ಲೇಯಲ್ಲಿ ಅತ್ಯಧಿಕ 125 ರನ್‌ ಬಾರಿಸಿ ನೂತನ ದಾಖಲೆ ಸ್ಥಾಪಿಸಿತು. 2017ರ ಆರ್‌ಸಿಬಿ ಎದುರಿನ ಪಂದ್ಯದಲ್ಲಿ ಕೆಕೆಆರ್‌ 105 ರನ್‌ ಬಾರಿಸಿದ ದಾಖಲೆ ಪತನಗೊಂಡಿತು.
ಪವರ್‌ ಪ್ಲೇಯಲ್ಲಿ 84 ರನ್‌
ಟ್ರ್ಯಾವಿಸ್‌ ಹೆಡ್‌ ಪವರ್‌ ಪ್ಲೇಯಲ್ಲಿ ಹೈದರಾಬಾದ್‌ ಪರ ಅತ್ಯಧಿಕ 84 ರನ್‌ (26 ಎಸೆತ) ಹೊಡೆದರು. 2019ರ ಕೆಕೆಆರ್‌ ಎದುರಿನ ಪಂದ್ಯದಲ್ಲಿ ಡೇವಿಡ್‌ ವಾರ್ನರ್‌ 25 ಎಸೆತಗಳಿಂದ 62 ರನ್‌ ಮಾಡಿದ ದಾಖಲೆ ಮುರಿಯಲ್ಪಟ್ಟಿತು.
10 ಓವರ್‌ ಬ್ಯಾಟಿಂಗ್‌ ದಾಖಲೆ
ಹೈದರಾಬಾದ್‌ ಮೊದಲ 10 ಓವರ್‌ಗಳಲ್ಲಿ ಅತ್ಯಧಿಕ 158 ರನ್‌ ಪೇರಿಸಿ ತನ್ನದೇ ದಾಖಲೆಯನ್ನು ಮುರಿಯಿತು. ಮುಂಬೈ ವಿರುದ್ಧ ಇದೇ ಸೀಸನ್‌ನಲ್ಲಿ 148 ರನ್‌ ಮಾಡಿತ್ತು.

Advertisement

Udayavani is now on Telegram. Click here to join our channel and stay updated with the latest news.

Next