Advertisement

IPL; ಕೆಕೆಆರ್‌ ನೀಡಿದ 262 ರನ್ ಗುರಿ ತಲುಪಿ ದಾಖಲೆ ಬರೆದ ಪಂಜಾಬ್

11:46 PM Apr 26, 2024 | Team Udayavani |

ಕೋಲ್ಕತಾ: ತವರಿನ ‘ಈಡನ್‌ ಗಾರ್ಡನ್ಸ್‌’ನಲ್ಲಿ ಕೋಲ್ಕತಾ ನೈಟ್‌ರೈಡರ್ ರನ್‌ಪ್ರವಾಹ ಹರಿಸಿ 262 ರನ್ ಗುರಿ ನೀಡಿ ದರೂ ಮೀರಿ ನಿಂತ ಪಂಜಾಬ್‌ ಕಿಂಗ್ಸ್‌ ಜಾನಿ ಬೈರ್‌ಸ್ಟೋ ಅವರ ಅಜೇಯ ಅಮೋಘ ಶತಕದ ನೆರವಿನಿಂದ ದಾಖಲೆಯ ಗೆಲುವು ಸಾಧಿಸಿತು.

Advertisement

ಪಂಜಾಬ್ ಕಿಂಗ್ಸ್ ಟಾಸ್ ಗೆದ್ದು ಬೌಲಿಂಗ್ ಆಯ್ಕೆ ಮಾಡಿಕೊಂಡಿತು. ಅಬ್ಬರಿಸಿದ ಕೆಕೆಆರ್ 6 ವಿಕೆಟಿಗೆ 261 ರನ್‌ ಪೇರಿಸಿ ದೊಡ್ಡ ಸವಾಲೊಡ್ಡಿತು.ಗುರಿ ಬೆನ್ನತ್ತಿದ ಪಂಜಾಬ್ 18.4 ಓವರ್ ಗಳಲ್ಲಿ 2ವಿಕೆಟ್ ನಷ್ಟಕ್ಕೆ 262 ರನ್ ಗಳಿಸಿ ಅತ್ಯಮೋಘ ಸ್ಮರಣೀಯ ಜಯದ ದಾಖಲೆ ಬರೆಯಿತು. ಬೈರ್‌ಸ್ಟೋ ಔಟಾಗದೆ 108 ರನ್ ಗಳಿಸಿದರು. 48 ಎಸೆತಗಳಲ್ಲಿ ಗೆಲುವಿನ ಇನ್ನಿಂಗ್ಸ್ ಕಟ್ಟಿದ ಅವರು 8 ಬೌಂಡರಿ ಮತ್ತು 9 ಭರ್ಜರಿ ಸಿಕ್ಸರ್ ಸಿಡಿಸಿದ್ದರು. ಪ್ರಭ್ ಸಿಮ್ರಾನ್ ಸಿಂಗ್ 20 ಎಸೆತಗಳಲ್ಲಿ 54 ರನ್ ಗಳಿಸಿ ರನ್ ಔಟ್ ಆದರು. ರಿಲೀ ರೋಸೌ 26 ರನ್ ಗಳಿಸಿ ಔಟಾದರೆ, ಶಶಾಂಕ್ ಸಿಂಗ್ ಔಟಾಗದೆ 28 ಎಸೆತಗಳಲ್ಲಿ 68 ರನ್ ಚಚ್ಚಿದರು. 2 ಬೌಂಡರಿ ಮತ್ತು 8 ಭರ್ಜರಿ ಸಿಕ್ಸರ್ ಬಾರಿಸಿದರು.
ಐಪಿಎಲ್‌ನಲ್ಲಿ ಗರಿಷ್ಠ ಗುರಿಯನ್ನು ಯಶಸ್ವಿಯಾಗಿ ಬೆನ್ನತ್ತಿದ ದಾಖಲೆ ಪಂಜಾಬ್ ಬರೆಯಿತು. ಈ ಹಿಂದೆ 2020 ರಲ್ಲಿ ಶಾರ್ಜಾದಲ್ಲಿ ರಾಜಸ್ಥಾನ್ ರಾಯಲ್ಸ್ ತಂಡ ಪಂಜಾಬ್ ನೀಡಿದ್ದ 224 ರನ್ ಯಶಸ್ವಿಯಾಗಿ ಬೆನ್ನತ್ತಿ ಗೆಲುವು ಸಾಧಿಸಿತ್ತು.

ಪಂಜಾಬ್ ಆಡಿದ 9ನೇ ಪಂದ್ಯದಲ್ಲಿ 3ನೇ ಗೆಲುವು ತನ್ನದಾಗಿಸಿಕೊಂಡರೆ, ಕೆಕೆಆರ್ 8ನೇ ಪಂದ್ಯದಲ್ಲಿ 3 ನೇ ಸೋಲು ತನ್ನದಾಗಿಸಿಕೊಂಡಿತು.

ಇದು ಐಪಿಎಲ್‌ ಇತಿಹಾಸದಲ್ಲಿ ದಾಖಲಾದ 9 ನೇ 250 ಪ್ಲಸ್‌ ರನ್‌ ಗಳಿಕೆ. ಕೆಕೆಆರ್‌ ತಂಡದ 2ನೇ ಸಾಧನೆ. ಇದೇ ವರ್ಷ ಡೆಲ್ಲಿ ವಿರುದ್ಧ ವಿಶಾಖಪಟ್ಟಣದಲ್ಲಿ 7ಕ್ಕೆ 272 ರನ್‌ ಪೇರಿಸಿತ್ತು. ಎಂದಿನಂತೆ ಸುನೀಲ್‌ ನಾರಾಯಣ್‌- ಫಿಲಿಪ್‌ ಸಾಲ್ಟ್ ಕೆಕೆಆರ್‌ಗೆ ಅಬ್ಬರದ ಆರಂಭ ಕೊಟ್ಟರು. ಪವರ್‌ ಪ್ಲೇಯಲ್ಲಿ 76 ರನ್‌, 10 ಓವರ್‌ಗಳಲ್ಲಿ 137 ರನ್‌ ಹರಿದು ಬಂತು. ಇದು ಮೊದಲ 10 ಓವರ್‌ಗಳಲ್ಲಿ ಕೆಕೆಆರ್‌ ಪೇರಿಸಿದ ಅತ್ಯಧಿಕ ಗಳಿಕೆ. ಇದೇ ವರ್ಷ ಡೆಲ್ಲಿ ವಿರುದ್ಧ ಒಂದಕ್ಕೆ 135 ರನ್‌ ಗಳಿಸಿದ್ದು ದಾಖಲೆ ಆಗಿತ್ತು.

ಸಾಲ್ಟ್-ನಾರಾಯಣ್‌ ಮೊದಲ ವಿಕೆಟಿಗೆ 10.2 ಓವರ್‌ಗಳಲ್ಲಿ 138 ರನ್‌ ಪೇರಿಸಿ ಪಂಜಾಬ್‌ ಬೌಲರ್‌ಗಳನ್ನು ಕಾಡಿದರು. ಇದು ಮೊದಲ ವಿಕೆಟಿಗೆ ಕೆಕೆಆರ್‌ ದಾಖಲಿಸಿದ 4ನೇ ಅತ್ಯಧಿಕ ಗಳಿಕೆ. ಸಾಲ್ಟ್ 37 ಎಸೆತಗಳಿಂದ ಸರ್ವಾಧಿಕ 75 ರನ್‌ ಬಾರಿಸಿದರು (6 ಫೋರ್‌, 6 ಸಿಕ್ಸರ್‌). ಸುನೀಲ್‌ ನಾರಾಯಣ್‌ ಗಳಿಕೆ 32 ಎಸೆತಗಳಿಂದ 71 ರನ್‌ (9 ಬೌಂಡರಿ, 4 ಸಿಕ್ಸರ್‌). ವೆಂಕಟೇಶ್‌ ಅಯ್ಯರ್‌ (39), ಆ್ಯಂಡ್ರೆ ರಸೆಲ್‌ (24), ಶ್ರೇಯಸ್‌ ಅಯ್ಯರ್‌ (28) ಕೂಡ ಬಿರುಸಿನ ಆಟವಾಡಿದರು.

Advertisement

ರಸೆಲ್‌ ಸಿಕ್ಸರ್‌ ದಾಖಲೆ
ಆ್ಯಂಡ್ರೆ ರಸೆಲ್‌ ಕೆಕೆಆರ್‌ ಪರ 200 ಸಿಕ್ಸರ್‌ ಬಾರಿಸಿದ ಮೊದಲ ಆಟಗಾರನೆಂಬ ಹೆಗ್ಗಳಿಕೆಗೆ ಪಾತ್ರರಾದರು. ನಿತೀಶ್‌ ರಾಣಾ 106 ಸಿಕ್ಸರ್‌ಗಳೊಂದಿಗೆ ದ್ವಿತೀಯ ಸ್ಥಾನದಲ್ಲಿದ್ದಾರೆ. ಕೆಕೆಆರ್‌ ಈ ಪಂದ್ಯದಲ್ಲಿ 18 ಸಿಕ್ಸರ್‌ ಸಿಡಿಸಿತು. ತನ್ನ ಸರ್ವಾಧಿಕ ಸಿಕ್ಸರ್‌ಗಳ ದಾಖಲೆಯನ್ನು ಸರಿದೂಗಿಸಿತು. ಮೊನ್ನೆ ಡೆಲ್ಲಿ ವಿರುದ್ಧವೂ 18 ಸಿಕ್ಸರ್‌ ಬಾರಿಸಿತ್ತು.

ಮಿಚೆಲ್‌ ಸ್ಟಾರ್ಕ್‌ ಗಾಯಾಳು
ಕೆಕೆಆರ್‌ ವೇಗಿ ಮಿಚೆಲ್‌ ಮಾರ್ಷ್‌ ಕೈಬೆರಳಿನ ನೋವಿನಿಂದ ಈ ಪಂದ್ಯದಿಂದ ಹೊರಗುಳಿದರು. ಇವರ ಬದಲು ದುಷ್ಮಂತ ಚಮೀರ ಆಡಲಿಳಿದರು.

Advertisement

Udayavani is now on Telegram. Click here to join our channel and stay updated with the latest news.

Next