Advertisement
ಹೌದು, ಇದೆಲ್ಲಾ ರಣ ಬಿಸಿಲಿನ ಎಫೆಕ್ಟ್. ಜಿಲ್ಲೆ ಮಾತ್ರ ವಲ್ಲದೇ ತಿಪಟೂರು ತಾಲೂಕಿನಲ್ಲಿ ಬಿಸಿಲಿನ ಬೇಗೆಗೆ ಜನ ನಲುಗಿ ಹೋಗಿದ್ದಾರೆ. ಮನೆಯಿಂದ ಹೊರ ಬರಲೂ ಹತ್ತಾರು ಬಾರಿ ಯೋಚಿಸುವಂತಾಗಿದೆ.
Related Articles
Advertisement
ಇನ್ನು ವಯಸ್ಸಾದವರು, ಮಹಿಳೆಯರು, ಅನಾರೋಗ್ಯಕ್ಕೀಡಾಗಿರುವವರು, ಚಿಕ್ಕ ಚಿಕ್ಕ ಮಕ್ಕಳಂತೂ ವಿಪರೀತ ಸೆಕೆಗೆ ಸುಸ್ತಾಗಿದ್ದಾರೆ. ಕುಡಿಯುವ ನೀರೂ ಬಿಸಿ ನೀರಿನಂತಾಗಿದ್ದು ನೀರು ಕುಡಿದರೂ ದಾಹ ತೀರುತ್ತಿಲ್ಲ. ಜನರಷ್ಟೇ ಬಿಸಿಲಿಗೆ ನಲುಗುತ್ತಿಲ್ಲ. ಜಾನುವಾರು, ಪ್ರಾಣಿ-ಪಕ್ಷಿಗಳು, ಕುರಿ-ಮೇಕೆ, ನಾಯಿಗಳೂ ವಿಪರೀತ ತಾಪಮಾನ ತಡೆದುಕೊಳ್ಳಲಾಗದೆ ಮರಗಳ ನೆರಳಲ್ಲಿ ಆಶ್ರಯ ಪಡೆಯಲು ಮುಂದಾಗುತ್ತಿವೆ. ಹಾಗೆಯೇ ರಣ ಬಿಸಿಲಿನ ಬೇಗೆ ತಗ್ಗಿ ಮಳೆರಾಯನ ಕೃಪೆ ಯಾವಾಗ ಆಗುವುದೋ ಎಂದು ಜನ ಮಾತಾಡಿಕೊಳ್ಳುತ್ತಿದ್ದಾರೆ.
ಜನರಿಲ್ಲದೇ ಮಾರುಕಟ್ಟೆಗಳಲ್ಲಿ ವ್ಯಾಪಾರ ಕುಸಿತ :
ಸರ್ಕಾರಿ ಕಚೇರಿಗಳಲ್ಲಿ ಕೆಲಸ ಕಾರ್ಯಗಳಿಗೆ ಜನ ಹೋಗಬೇಕೆಂದರೆ ಸುಡು ಬಿಸಿಲಿನಲ್ಲಿ ಹೇಗಪ್ಪಾ ಹೋಗುವುದು ಎಂದು ಚಿಂತಿಸುವಂತಾಗಿದೆ. ದೈನಂದಿನ ಕೆಲಸ ಮಾಡಲೇಬೇಕಾದ ಅನಿವಾರ್ಯತೆ ಇರುವ ಕಾರಣ ಜನ ಛತ್ರಿ, ಟೋಪಿಗಳ ಮೊರೆ ಹೋಗಿದ್ದಾರೆ. ಬಿಸಿಲ ಬೇಗೆಗೆ ತರಕಾರಿಗಳು ಮಧ್ಯಾಹ್ನದ ವೇಳೆಗೆಲ್ಲಾ ಬಾಡಿ ಹೋಗುತ್ತಿವೆ. ಹಣ್ಣು, ತರಕಾರಿಗಳನ್ನು ರಕ್ಷಣೆ ಮಾಡಿಕೊಳ್ಳುವುದಾದರೂ ಹೇಗಪ್ಪ ಎಂದು ವ್ಯಾಪಾರಸ್ಥರೂ ಚಿಂತೆಗೀಡಾಗಿದ್ದಾರೆ. ಬಿಸಿಲ ಹೊಡೆತಕ್ಕೆ ಸಂತೆ, ತರಕಾರಿ ಮಾರುಕಟ್ಟೆ, ಬಟ್ಟೆ ಅಂಗಡಿ ಸೇರಿದಂತೆ ವ್ಯಾಪಾರ ವಹಿವಾಟು ಮಂದಗತಿಯಲ್ಲಿ ಸಾಗುತ್ತಿವೆ. ಯುಗಾದಿ ಹಬ್ಬ ಸಮೀಪವಿದ್ದರೂ ಜನ ತಮ್ಮ ಅಗತ್ಯ ವಸ್ತು ಖರೀದಿಸಲು ಬಿಸಿಲ ಭಯಕ್ಕೆ ಮನೆಯಿಂದ ಹೊರಗೆ ಬರುತ್ತಿಲ್ಲ. ಇದರಿಂದ ನಗರದ ಪ್ರಮುಖ ರಸ್ತೆಗಳಲ್ಲಿ ಜನದಟ್ಟಣೆ ಕಡಿಮೆಯಿದ್ದು ಮಧ್ಯಾಹ್ನ ಸಮಯದಲ್ಲಂತೂ ರಸ್ತೆಗಳೆಲ್ಲಾ ಬಿಕೋ ಎನ್ನುತ್ತಿವೆ.