Advertisement

ಪರಿಷೆಗೆ ಜನ ಸಾಗರ ಪರವಶ

11:28 AM Nov 14, 2017 | |

ಬೆಂಗಳೂರು: ಎತ್ತನೋಡಿದರೂ ಜನವೋ ಜನ. ರಸ್ತೆಯ ಎರಡೂ ಮಗ್ಗುಲಲ್ಲಿ ಕಡೆಲೆಕಾಯಿ ರಾಶಿರಾಶಿ. ಇದು ಬಸವನಗುಡಿಯ ಐತಿಹಾಸಿಕ ಕಡಲೆಕಾಯಿ ಪರಿಷೆಯಲ್ಲಿ ಸೋಮವಾರ ಕಂಡು ಬಂದ ಸಾಮಾನ್ಯ ದೃಶ್ಯ.

Advertisement

ಕೇಂದ್ರ ಸಚಿವ ಅನಂತ್‌ ಕುಮಾರ್‌, ಮೇಯರ್‌ ಸಂಪತ್‌ ರಾಜ್‌, ಶಾಸಕ ರವಿಸುಬ್ರಹ್ಮಣ್ಯ ಸೇರಿ ಗಣ್ಯರು ಬೆಳಗ್ಗೆ ದೊಡ್ಡಬಸವ ದೇವಸ್ಥಾನದ ಎದುರು ಕಡಲೆಕಾಯಿ ತುಲಾಭಾರ ನೆರವೇರಿಸುತ್ತಿದ್ದಂತೆ ಕಡಲೆಕಾಯಿ ಪರಿಷೆಗೆ ಚಾಲನೆ ಸಿಕ್ಕಿದ್ದು, ಬುಧವಾರದ ತನಕವೂ ವೈಭವದಿಂದ ನಡೆಯಲಿದೆ.

ಹೂವಿನ ಅಲಂಕಾರ ಮಾಡಿರುವ ದೊಡ್ಡ ನಂದಿಯ ವಿಗ್ರಹಕ್ಕೆ ಬೆಳಗ್ಗೆ 6 ಗಂಟೆಗೆ 5 ಮೂಟೆ ಕಡಲೆಕಾಯಿ ಅಭಿಷೇಕ ಮಾಡಲಾಗಿದೆ. ವಿಶೇಷ ಪೂಜೆಯ ನಂತರ ಕಡಲೆಕಾಯಿಯನ್ನು ಪ್ರಸಾದದ ರೂಪದಲ್ಲಿ ಭಕ್ತರಿಗೆ ವಿತರಿಸಲಾಯಿತು.

ಹಬ್ಬದ ವಾತಾವರಣ: ಬಸವನಗುಡಿಯ ಬೀದಿ ಬೀದಿಯಲ್ಲೂ ಜನರೇ ತುಂಬಿದ್ದರು. ಕಾಲೇಜು ವಿದ್ಯಾರ್ಥಿಗಳು ಕ್ಲಾಸ್‌ಗೆ ಬಂಕ್‌ ಮಾಡಿ, ತಂಡೋಪತಂಡವಾಗಿ ಪರಿಷೆಗೆ ಬಂದಿದ್ದರು. ದೊಡ್ಡ ಗಣೇಶ ಹಾಗೂ ದೊಡ್ಡ ಬಸವನ ದರ್ಶನಕ್ಕೆ ಬೆಳಗ್ಗೆಯಿಂದಲೇ ಭಕ್ತರು ಸರತಿ ಸಾಲಿನಲ್ಲಿ ನಿಂತಿದ್ದರು. ದೊಡ್ಡ ಗಣೇಶನ ದರ್ಶನದ ನಂತರ ದೊಡ್ಡ ಬಸವನ ದರ್ಶನಕ್ಕೆ ಬೇಕಾದ ವ್ಯವಸ್ಥೆ ಮಾಡಲಾಗಿತ್ತು. ದರ್ಶನ ಪಡೆದ ವಾಪಾಸ್‌ ಬರುವ ಭಕ್ತರಿಗೆ ದೇವಸ್ಥಾನದ ಆವರಣದಲ್ಲೇ ಕಡಲೆ ಪ್ರಸಾದ ವಿತರಿಸಲಾಯಿತು.

ಆಟಿಕೆ ಸದ್ದು: ಮಕ್ಕಳು ಊದುವ ತುತ್ತೂರಿ ಮಕ್ಕಳ ಕೈಯಲ್ಲಿ ಇರಲಿಲ್ಲ. ಯುವಕರು, ಯುವತಿಯರು, ಕಾಲೇಜು ವಿದ್ಯಾರ್ಥಿಗಳು 10-15 ರೂ.ಗಳಿಗೆ ತುತ್ತೂರಿ ಖರೀದಿಸಿ, ಊದಿ ಸದ್ದು ಮಾಡುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು. ಪರಿಷೆ ಉತ್ಸವದಲ್ಲಿ ಕಡಲೆಕಾಯಿ ಜತೆಗೆ ಹಣ್ಣು, ಆಟಿಕೆಯ ಮಾರಾಟವೂ ಜೋರಾಗಿತ್ತು. ಭಕ್ತರು ಅಪಾರ ಸಂಖ್ಯೆಯಲ್ಲಿ ಸೇರಿದ್ದರಾದರೂ, ಕಡಲೆಕಾಯಿ ಖರೀದಿ ಹೇಳುವಷ್ಟೇನು ಇರಲಿಲ್ಲ.

Advertisement

ಶನಿವಾರ, ಭಾನುವಾರ ಒಂದು ಲೀಟರ್‌ ಕಡಲೆಕಾಯಿಗೆ 40ರಿಂದ 60 ರೂ.ಗಳಿಗೆ ಮಾರಾಟ ಮಾಡುತ್ತಿದ್ದ ವ್ಯಾಪಾರಿಗಳು ಸೋಮವಾರ 20 ರೂ.ಗಳಿಗೆ ಇಳಿಸಿದ್ದಾರೆ. ಇದೇ ಪ್ರಮಾಣದಲ್ಲಿ ಖರೀದಿ ಭರಾಟೆ ಸಾಗಿದರೆ, ದರ ಇನ್ನಷ್ಟು ಇಳಿಯುವ ಸಾಧ್ಯತೆ ಇದೆ.

ತಳ್ಳುಗಾಡಿಗಳ ಕಾಟ: ಪರಿಷೆಯಲ್ಲಿ ಸುಮಾರು 2 ಸಾವಿರ ಕಡಲೆಕಾಯಿ ವ್ಯಾಪಾರ ಮಳಿಗೆ ಹಾಕಲಾಗಿದೆ. ಇದರ ಜತೆಗೆ ನೂರರಿಂದ ನೂರೈವತ್ತು ಬೇರೆ ಬೇರೆ ಮಳಿಗೆಗಳು ಇವೆ. ಈ ಮಧ್ಯೆ ತಳ್ಳುಗಾಡಿಯಲ್ಲಿ  ಕಡಲೆಕಾಯಿ, ನೆಲ್ಲಿಕಾಯಿ, ಹಣ್ಣುಗಳ  ವ್ಯಾಪಾರ ಮಾಡುವವರ ಸಂಖ್ಯೆಯೂ ಹೆಚ್ಚಿತ್ತು.  

ಪೊಲೀಸರು ಎಷ್ಟೇ ಶ್ರಮವಹಿಸಿದರೂ ತಳ್ಳುಗಾಡಿಗಳನ್ನು ನಿಯಂತ್ರಿಸಲು ಸಾಧ್ಯವಾಗಿಲ್ಲ. ಈ ವ್ಯಾಪಾರಿಗಳು ಒಂದು ಕಡೆಯಿಂದ ಇನ್ನೊಂದು ಕಡೆಗೆ ಗಾಡಿಯೊಂದಿಗೆ ಸಾಗುತ್ತಿದ್ದರು. ಇದರ ನೇರ ಪರಿಣಾಮ ಮಳಿಗೆ ಹಾಕಿಕೊಂಡು ಕಡಲೆಕಾಯಿ ವ್ಯಾಪಾರ ಮಾಡುತ್ತಿದ್ದವರ ಮೇಲಾಗಿದೆ.

ಕಡಲೆಕಾಯಿ ವ್ಯಾಪಾರ ಹೇಳಿಕೊಳ್ಳುವಷ್ಟೇನು ಇಲ್ಲ.  ಐದು ವರ್ಷದಿಂದ ಪರಿಷೆಗೆ ಬರುತ್ತಿದ್ದೇವೆ. ಈ ವರ್ಷವೇ ಅತ್ಯಂತ ಕಡಿಮೆ ವ್ಯಾಪಾರ. ತಂದಿರುವ ಕಡಲೆಕಾಯಿ ಮಾರಾಟವಾದರೆ ಸಾಕು ಎನ್ನುಷ್ಟಾಗಿದೆ ಎಂದು ಬನಶಂಕರಿಯ ಕಡಲೆಕಾಯಿ ವ್ಯಾಪರಿ ವಾಣಿ ಹೇಳಿದರು.

ಟ್ರಾಫಿಕ್‌ ಜಾಮ್‌: ರಾಮಕೃಷ್ಣ ಆಶ್ರಮದಿಂದ ಬುಲ್‌ಟೆಂಪಲ್‌ ಕಡೆಗೆ ಬರುವ ಎಲ್ಲಾ ವಾಹನಗಳ ಮಾರ್ಗ ಬದಲಿಸಲಾಗಿದೆ. ದೊಡ್ಡ ಬಸವ ರಸ್ತೆಯಿಂದ ವಿವೇಕಾನಂದ ವೃತ್ತದ ತನಕವೂ ವಾಹನ ಸಂಚಾರಕ್ಕೆ ಅವಕಾಶ ಇಲ್ಲ. ರಸ್ತೆಯ ಎರಡು ಭಾಗದಲ್ಲಿ ಕಡೆಲೆಕಾಯಿ ರಾಶಿ ಹಾಕಿಕೊಳ್ಳಲಾಗಿದೆ. ಬಸವನಗುಡಿ ಸುತ್ತಿನ ಭಾಗದಲ್ಲಿ ಟ್ರಾಫಿಕ್‌ ಜಾಮ್‌ ಆಗಿತ್ತು. 

ಕಡಲೆಕಾಯಿ ಪರಿಷೆಗೆ ಪ್ರತಿ ವರ್ಷ ಕುಟುಂಬ ಸಮೇತರಾಗಿ ಬರುತ್ತೇವೆ. ಇಲ್ಲಿಂದ ಕಡಲೆಕಾಯಿ ಕೊಂಡೊಯ್ಯದು ಮನೆಯಲ್ಲಿ ತಿನ್ನುವುದು ವಾಡಿಕೆ. ವರ್ಷದಿಂದ ವರ್ಷಕ್ಕೆ ಪರಿಷೆ ವಿಜೃಂಭಣೆಯಾಗುತ್ತಿದೆ. ಹಬ್ಬ ನೋಡುವುದೇ ಆನಂದ.
-ಸಂತೋಷ್‌, ಗಿರಿನಗರ ನಿವಾಸಿ

Advertisement

Udayavani is now on Telegram. Click here to join our channel and stay updated with the latest news.

Next