ಪಿರಿಯಾಪಟ್ಟಣ: ಕಳೆದ ತಿಂಗಳು ಸುರಿದ ಭಾರೀ ಮಳೆಯಿಂದ ತಾಲೂಕು ಹಾಗೂ ಪಟ್ಟಣದಲ್ಲಿ ಸಾಕಷ್ಟು ಅನಾಹುತಗಳನ್ನು ಸೃಷ್ಟಿಸಿತ್ತು. ಆದರೂ ತಾಲೂಕು ಆಡಳಿತ ಎಚ್ಚೆತ್ತುಕೊಂಡಿಲ್ಲ. ಇದೀಗ ಕಳೆದ ಐದಾರು ದಿನಗಳಿಂದ ಸತತವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಪಟ್ಟಣದ ಬೆಟ್ಟದಪುರ ರಸ್ತೆ (ಪಿರಿಯಾಪಟ್ಟಣ-ಹಾಸನ ಮುಖ್ಯರಸ್ತೆ) ಜಲಾವೃತವಾಗಿದೆ.
ರಸ್ತೆ ಬದಿಯಲ್ಲಿದ್ದ ವಾಣಿಜ್ಯ ಮಳಿಗೆಗಳು ಜಮೀನುಗಳು ಹಾಗೂ ಖಾಸಗಿ ಕಟ್ಟಡಗಳಿಗೆ ಮಳೆ ನೀರು ನುಗ್ಗಿದೆ. ಸಂಚಾರ ವ್ಯವಸ್ಥೆ ಅಸ್ತವ್ಯಸ್ತವಾಗಿದೆ. ಪಟ್ಟಣದಕ್ಕೆ ಹೊಂದಿಕೊಂಡಿರುವ ಚಿಕ್ಕಕೆರೆ ಮತ್ತು ದೊಡ್ಡ ಕೆರೆ ಕೋಡಿ ಬಿದ್ದಿದ್ದು, ನೀರು ಹರಿಯುವ ಕಾಲುವೆಗಳು ಕೆಲವು ಪ್ರಭಾವಿಗಳಿಂದ ಒತ್ತುವರಿ ಮಾಡಿಕೊಂಡಿರುವ ಕಾರಣ ಹಾಗೂ ಕಾಲುವೆಗಳು ಕಿರಿದಾಗಿರುವುದರಿಂದ ಮಳೆ ನೀರು ಸರಾಗವಾಗಿ ಹರಿಯಲು ಸಾಧ್ಯವಾಗುತ್ತಿಲ್ಲ.
ಇದರಿಂದ ಜಮೀನು, ಮನೆಗಳು ಮತ್ತು ವಾಣಿಜ್ಯ ಮಳಿಗೆಗಳಿಗೆ ನುಗ್ಗಿ ರಸ್ತೆಯಲ್ಲೂ ನೀರು ನಿಂತಿದೆ. ವಾಹನ ಸವಾರರು ಹಾಗೂ ಪಾದಚಾರಿಗಳು ಸಂಚರಿಸಲು ಪರದಾಡುತ್ತಿದ್ದಾರೆ. ಹಾಸನ ಮುಖ್ಯ ರಸ್ತೆ ಜಲಾವೃತಗೊಂಡ ವಿಷಯ ತಿಳಿದ ತಹಶೀಲ್ದಾರ್ ಶ್ವೇತ ಎನ್.ರವೀಂದ್ರ ಸ್ಥಳಕ್ಕೆ ಭೇಟಿ ಜೆಸಿಬಿಯ ಮೂಲಕ ರಸ್ತೆಯ ಇಕ್ಕೆಲಗಳಲ್ಲಿ ಕಾಲುವೆ ತೋಡಿಸಿ ನೀರನ್ನು ಹೊರಹಾಕಲು ಪ್ರಯತ್ನಿಸಿದರು.
ಅಧಿಕಾರಿಗಳ ವಿರುದ್ಧ ಆಕ್ರೋಶ: ಈ ಸಂದರ್ಭದಲ್ಲಿ ಪುರಸಭಾ ಸದಸ್ಯ ಪಿ.ಎಸ್.ಪ್ರಕಾಶ್ ಹಾಗೂ ಸ್ಥಳೀಯ ಮುಖಂಡರು ಮಾತನಾಡಿ, ಕಳೆದ 2 ತಿಂಗಳ ಹಿಂದೆಯೂ ಈ ರಸ್ತೆ ಜಲಾವೃತಗೊಂಡಿತ್ತು. ಆ ಸಮಯದಲ್ಲಿ ನೀರನ್ನು ಹೊರಹೋಗುವಂತೆ ಮಾಡುವ ಸಲುವಾಗಿ ರೈತರ ಬೆಳೆಗಳನ್ನು ನಾಶ ಪಡಿಸಿ ಬೆಳೆ ಪರಿಹಾರ ನೀಡುವುದಾಗಿ ತಿಳಿಸಿದ್ದೀರಿ. ಆದರೆ, ಈ ವರೆಗೂ ರೈತರಿಗೆ ಪರಿಹಾರ ನೀಡಿಲ್ಲ, ಈಗ ಅನಗತ್ಯವಾಗಿ ಮತ್ತೆ ಜಮೀನಿನಲ್ಲಿ ಕಾಲುವೆ ತೋಡುವ ಕೆಲಸ ಮಾಡುತ್ತಿದ್ದೀರಿ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಅನಗತ್ಯವಾಗಿ ಜನಸಾಮಾನ್ಯರಿಗೆ ಕಿರುಕುಳ ನೀಡುವ ಬದಲು ಕೆಲವು ಪ್ರಭಾವಿಗಳು ರಾಜಕಾಲುವೆ ಹಾಗೂ ಚರಂಡಿ ಜಾಗಗಳನ್ನು ಒತ್ತುವರಿ ಮಾಡಿಕೊಂಡಿದ್ದಾರೆ. ಅವುಗಳನ್ನು ತೆರವುಗೊಳಿಸಿ ಕಾಲುವೆ ಸರಿಪಡಿಸಿದರೆ ಇಂಥ ಯಾವುದೇ ಸಮಸ್ಯೆಗಳು ತಲೆದೋರುವುದಿಲ್ಲ. ಮೊದಲು ಒತ್ತುವರಿ ತೆರವುಗೊಳಿಸಿ ಎಂದು ಆಗ್ರಹಿಸಿದರು.
ಕಾಲುವೆಗೆ 70 ಲಕ್ಷ ರೂ.ಬಿಡುಗಡೆ: ಇದಕ್ಕೆ ಪ್ರತಿಕ್ರಿಯಿಸಿದ ತಹಶೀಲ್ದಾರ್ ಶ್ವೇತಾ, ಕೋಡಿ ನೀರು ಹರಿಯುವ ಕಾಲುವೆ ನಿರ್ಮಾಣಕ್ಕೆ ರೂ.70 ಲಕ್ಷ ರೂ. ಬಿಡುಗಡೆಯಾಗಿದೆ. ಕೂಡಲೇ ಒತ್ತುವರಿ ಜಾಗಗಳನ್ನು ತೆರವುಗೊಳಿಸಿ ಕಾಲುವೆ ನಿರ್ಮಾಣ ಮಾಡಲಾಗುವುದು ಎಂದು ಭರವಸೆ ನೀಡಿದರು. ಈ ಸಂದರ್ಭದಲ್ಲಿ ಪುರಸಭಾ ಮುಖ್ಯಾಧಿಕಾರಿ ಚಂದ್ರಕುಮಾರ್, ಕಂದಾಯ ನಿರೀಕ್ಷಕ ಮಂಜುನಾಥ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.