ಹುಬ್ಬಳ್ಳಿ: ದೇಶದಲ್ಲಿ ಕೃಷಿ ಬಿಕ್ಕಟ್ಟು ಇಲ್ಲ. ಆದರೆ ರೈತರ ಸಮಸ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಲಿದೆ. ಈ ಬಗ್ಗೆ ಚಿಂತನೆ ಮಾಡುವ ಅವಶ್ಯಕತೆ ಹಿಂದೆಂದಿಗಿಂತಲೂ ಇಂದು ಅತ್ಯವಶ್ಯವಾಗಿದೆ ಎಂದು ಭಾರತೀಯ ಕಿಸಾನ ಸಂಘ(ಬಿಕೆಎಸ್)ದ ಕ್ಷೇತ್ರಿಯ ಸಂಘಟನಾ ಕಾರ್ಯದರ್ಶಿ ದೊಣೂರು ರಾಮು ಹೇಳಿದರು.
ಬಿಕೆಎಸ್-ಕರ್ನಾಟಕ ಪ್ರದೇಶ ಉತ್ತರ ಪ್ರಾಂತ ಧಾರವಾಡ ಜಿಲ್ಲೆಯಿಂದ ಇಲ್ಲಿನ ಗೋಕುಲ ರಸ್ತೆಯ ಹೆಬಸೂರ ಭವನದಲ್ಲಿ ಮಂಗಳವಾರ ಆಯೋಜಿಸಿದ್ದ ಪ್ರಾಂತ
ರೈತ ಸಮ್ಮೇಳನ-2022ರ ಸಮಾರಂಭದಲ್ಲಿ ಅವರು ಸಮಾರೋಪ ಭಾಷಣ ಮಾಡಿದರು.
ದೇಶದಲ್ಲಿ ಮೊದಲು ಆಹಾರವಿಲ್ಲದೆ ಜನ ಹಸಿವಿನಿಂದ ಸಾಯುತ್ತಿದ್ದರು. ಈಗ ಕೃಷಿಕರು ಮತ್ತು ಕೃಷಿ ಸಂಶೋಧಕರೆಲ್ಲ ಕೂಡಿ ಉತ್ಪಾದನೆ ಹೆಚ್ಚಿಸಿದ್ದರಿಂದ ಪರದೇಶಕ್ಕೆ ರಫ್ತು ಮಾಡುವಷ್ಟು ಭಾರತ ಬೆಳೆದಿದೆ. ಆದರೆ ರೈತರ ಸಮಸ್ಯೆ ಮಾತ್ರ ಬಗೆಹರಿದಿಲ್ಲ. ಕೃಷಿಕರು ಹೊರತುಪಡಿಸಿ ಉಳಿದ ಕ್ಷೇತ್ರಗಳಲ್ಲಿ ಕೆಲಸ ಮಾಡುವವರು ಆರಾಮವಾಗಿದ್ದಾರೆ. ರೈತರು ಸಾಲದಲ್ಲಿ ಮುಳುಗುತ್ತಿದ್ದಾರೆ. ಇದರಿಂದ ಮನನೊಂದು ಕೆಲವರು ಆತ್ಮಹತ್ಯೆಗೆ ಶರಣಾಗುತ್ತಿದ್ದಾರೆ. ರೈತ ದೇಶದ ಒಡೆಯ ಎನ್ನುತ್ತಾರೆ. ಆದರೆ ವಾಸ್ತವವಾಗಿ ಆತನ ಪರಿಸ್ಥಿತಿ ತೀರಾ ಹದಗೆಟ್ಟಿದೆ. ಸಾಮಾನ್ಯವಾಗಿ ಅವನನ್ನು ಕಡೆಗಣಿಸಲಾಗುತ್ತಿದೆ.
ಕೃಷಿಕರು ಉಳಿದೆಲ್ಲರಿಗಿಂತ ಏಕೆ ಸಮಸ್ಯೆಯಲ್ಲಿದ್ದಾರೆಂಬ ಚಿಂತನೆ ಆಗಬೇಕಿದೆ. ರೈತರು ಉತ್ತಮವಾಗಿದ್ದರೆ ಮಾತ್ರ ದೇಶ ಸುಭಿಕ್ಷವಾಗಲು ಸಾಧ್ಯ. ಆ ನಿಟ್ಟಿನಲ್ಲಿ ಭಾರತೀಯ ಕಿಸಾನ ಸಂಘವು ರೈತರು ಸ್ವಾವಲಂಬಿ ಬದುಕು ಸಾಗಿಸಲು, ಸಫಲ ಗ್ರಾಮ ಮಾಡಲು ಹಾಗೂ ಸಮರ್ಥ ಭಾರತ ನಿರ್ಮಿಸುವ ಉದ್ದೇಶದೊಂದಿಗೆ ಗ್ರಾಮ ಮಟ್ಟದಿಂದ ಕಾರ್ಯ ಮಾಡುತ್ತಿದೆ ಎಂದರು.
ಬಿಕೆಎಸ್ ಕರ್ನಾಟಕ ಪ್ರದೇಶ ಸಮಿತಿ ನೂತನ ಅಧ್ಯಕ್ಷ ಭೀಮಸೇನ ಕೋಕರೆ ಮಾತನಾಡಿ, ಹವಾಮಾನ ವೈಪರೀತ್ಯದಿಂದ ಬೆಳೆದ ಬೆಳೆ ಹಾನಿಯಾಗುತ್ತಿರುವ ಬಗ್ಗೆ, ಇದರಿಂದ ರೈತರು ನಷ್ಟ ಹೊಂದುತ್ತಿರುವ ಕುರಿತು ತಂತ್ರಜ್ಞಾನಾಧರಿತ ಚಿಂತನೆ ನಡೆಸುವ ಬಗ್ಗೆ ಸರಕಾರಕ್ಕೆ ಸಂಘದಿಂದ ಒತ್ತಡ ಹೇರಬೇಕು. ಆ ಮೂಲಕ ರೈತಪರ ಕೆಲಸಗಳನ್ನು ಮಾಡಬೇಕಿದೆ. ರೈತರು ಸ್ವಾವಲಂಬಿ ಬದುಕು ಕಟ್ಟಿಕೊಳ್ಳಬೇಕಿದೆ. ಆ ನಿಟ್ಟಿನಲ್ಲಿ ತಾಂತ್ರಿಕವಾಗಿ ಬೆಳೆಯಬೇಕು. ನಮ್ಮ ಹಕ್ಕು ಪ್ರತಿಪಾದಿಸಬೇಕಿದೆ ಎಂದರು.
ಬಿಕೆಎಸ್ ಕರ್ನಾಟಕ ಉತ್ತರ ಪ್ರಾಂತ ಅಧ್ಯಕ್ಷ ಗುರುನಾಥ ಬಗಲಿ ಅಧ್ಯಕ್ಷತೆ ವಹಿಸಿದ್ದರು. ಬಿಕೆಎಸ್ ರಾಷ್ಟ್ರೀಯ ಅಧ್ಯಕ್ಷ ಐ.ಎನ್. ಬಸವೇಗೌಡ, ಅ.ಭಾ. ಕಾರ್ಯಕಾರಿಣಿ ಸದಸ್ಯೆ ವೀಣಾ ಸತೀಶ, ರಾಜ್ಯಾಧ್ಯಕ್ಷ ಪುಟ್ಟಸ್ವಾಮಿಗೌಡ, ಕರ್ನಾಟಕ ಉತ್ತರ ಪ್ರಾಂತ ಪ್ರಧಾನ ಕಾರ್ಯದರ್ಶಿ ರಾಘವೇಂದ್ರ ಜಾಗಿರದಾರ, ವಸಂತಮ್ಮ, ರಾಜೇಂದ್ರ ರಾಮಾಪುರ, ವಿವೇಕ ಮೋರೆ ಮೊದಲಾದವರಿದ್ದರು.
ಇದೇ ಸಂದರ್ಭದಲ್ಲಿ 2021-24ನೇ ಸಾಲಿಗಾಗಿ ಬಿಕೆಎಸ್ ಕರ್ನಾಟಕ ಪ್ರದೇಶ ಸಮಿತಿ ಹಾಗೂ ಉತ್ತರ ಪ್ರಾಂತ ಸಮಿತಿ ನೂತನ ಪದಾಧಿಕಾರಿಗಳನ್ನು ಘೋಷಿಸಲಾಯಿತು. ಮಾಧವ ಹೆಗಡೆ ಸ್ವಾಗತಿಸಿದರು. ರಮೇಶ ಕೊರವಿ ನಿರೂಪಿಸಿದರು. ಗಂಗಾಧರ ಕಾಸರಘಟ್ಟ ವಂದಿಸಿದರು.
ಸಮ್ಮೇಳನದಲ್ಲಿ ಕೈಗೊಂಡ ನಿರ್ಣಯಗಳು
ಉತ್ತರ ಕರ್ನಾಟಕದ ಕೃಷ್ಣಾ (ಯುಕೆಪಿ-3) ಸೇರಿದಂತೆ ನೀರಾವರಿ ಯೋಜನೆಗಳನ್ನು ವಿಳಂಬ ಮಾಡದೆ ಪೂರ್ಣಗೊಳಿಸಬೇಕು.
ಪ್ರವಾಹ ಹಾಗೂ ಹವಾಮಾನ ವೈಪರೀತ್ಯದಿಂದ ಉಂಟಾದ ಬೆಳೆ ಹಾನಿಗೆ ತಕ್ಷಣವೇ ಯೋಗ್ಯ ಪರಿಹಾರ ನೀಡಬೇಕು.
ಕಾಡು ಪ್ರಾಣಿಗಳಿಂದ ಉಂಟಾದ ಬೆಳೆಹಾನಿಗೆ ಅಗತ್ಯ ಕ್ರಮ ಹಾಗೂ ಸೂಕ್ತ ಪರಿಹಾರ ನೀಡಬೇಕು.
ಕೆರೆ ತುಂಬಿಸುವ ಯೋಜನೆಗಳು ಆಮೆಗತಿಯಲ್ಲಿ ನಡೆಯುತ್ತಿದ್ದು, ಅವುಗಳನ್ನು ಆದ್ಯತೆಯುಲ್ಲಿ ಶೀಘ್ರ ಪೂರ್ಣಗೊಳಿಸಬೇಕು.
ಭೂ ಕುಸಿತ, ರಸ್ತೆ, ಸೇತುವೆಗಳು ಅತಿಯಾದ ಮಳೆಯಿಂದ ಮತ್ತು ಪ್ರವಾಹದಿಂದ ಹಾನಿಗೊಳಗಾಗಿವೆ. ಅವುಗಳನ್ನು ತಕ್ಷಣ ಪುನರ್ ನಿರ್ಮಿಸಬೇಕೆಂದು ಪ್ರಾಂತ ಸಮ್ಮೇಳನದಲ್ಲಿ ಒಕ್ಕೊರಲಿನಿಂದ ನಿರ್ಣಯ ಕೈಗೊಳ್ಳಲಾಯಿತು.