Advertisement

ನಗರ ವ್ಯಾಪ್ತಿಯ ರಸ್ತೆಗಳಿಗೆ ತೇಪೆ ಕಾರ್ಯ ಆರಂಭ

10:26 AM Oct 14, 2017 | Team Udayavani |

ಮಹಾನಗರ: ನಿರಂತರ ಮಳೆಯ ಕಾರಣದಿಂದ ತನ್ನ ವ್ಯಾಪ್ತಿಯ ಬಹುತೇಕ ರಸ್ತೆಗಳು ಕೆಟ್ಟುಹೋಗಿ ಸಂಚಾರ ಕಷ್ಟವಾದ ಹಿನ್ನೆಲೆಯಲ್ಲಿ ಹೊಂಡ ಮುಚ್ಚುವ ಕೆಲಸಕ್ಕೆ ಪಾಲಿಕೆ ಮುಂದಾಗಿದೆ.

Advertisement

ಹೊಂಡ ಮುಚ್ಚುವಂತೆ ಸಾರ್ವಜನಿಕರು ಪ್ರತಿಭಟನೆ ಸಹಿತ ವಿವಿಧ ರೀತಿಯಲ್ಲಿ ಪಾಲಿಕೆಯ ಗಮನ ಸೆಳೆದಿದ್ದರು. ಮಳೆ ನಿಂತ ಕೂಡಲೇ ದುರಸ್ತಿ ಆರಂಭಿಸುವುದಾಗಿ ಪಾಲಿಕೆ ಹೇಳಿತ್ತು.

ಬುಧವಾರ ಪಡೀಲ್‌ನ ಅಳಪೆ ಕ್ರಾಸ್‌ನಿಂದ ಗುಂಡಿ ಮುಚ್ಚುವ ಕೆಲಸ ಶುರು ಮಾಡಲಾಗಿದೆ. ಮಳೆ ಬರದಿದ್ದರೆ ದುರಸ್ತಿ ಕಾರ್ಯ ಮುಂದುವರಿಯಲಿದೆ. ಅಳಪೆ ಮೇಘನಗರ, ಪಡೀಲ್‌ನ ಬಜಾಲ್‌ ಕ್ರಾಸ್‌, ಪಂಪ್‌ವೆಲ್‌ ವ್ಯಾಪ್ತಿಯಲ್ಲಿ ಗುರುವಾರವೂ ಹೊಂಡ ಮುಚ್ಚುವ ಕೆಲಸ ನಡೆದಿದೆ.

ವಾಹನ ನಿಬಿಡ ಪ್ರದೇಶವಾದ ಹಂಪನಕಟ್ಟೆ ವ್ಯಾಪ್ತಿಯಲ್ಲೂ ಹೊಂಡಗಳಿಗೆ ತೇಪೆ ಕೆಲಸ ಆರಂಭಿಸಲಾಗಿದೆ. ಇದಾದ ಬಳಿಕ ಬಹಳಷ್ಟು ಸಮಸ್ಯೆಯಾಗುತ್ತಿರುವ ಪಂಪ್‌ವೆಲ್‌-ಕಂಕನಾಡಿ ದ್ವಿಪಥ ರಸ್ತೆ, ಕಂಕನಾಡಿ ಬೈಪಾಸ್‌ ರಸ್ತೆ ಹಾಗೂ ಬೆಂದೂರ್‌ವೆಲ್‌ ರಸ್ತೆಯ ಹೊಂಡ ಮುಚ್ಚುವ ಕೆಲಸ ನಡೆಯಲಿದೆ. ಅನಂತರ ಜ್ಯೋತಿ, ಬಂದರು ರಸ್ತೆ, ಸೆಂಟ್ರಲ್‌ ಮಾರ್ಕೆಟ್‌ ರಸ್ತೆ, ನೆಲ್ಲಿಕಾಯಿ ರಸ್ತೆ ಸಹಿತ ಇತರ ಕಡೆಗಳಲ್ಲಿ ಹೊಂಡ ಮುಚ್ಚುವ ಕೆಲಸ ನಡೆಯಲಿದೆ.

ಎರಡನೇ ಹಂತದಲ್ಲಿ ಪಾಲಿಕೆಯ 60 ವಾರ್ಡ್‌ಗಳ ಪೈಕಿ ಕಾರ್ಪೊರೇಟರ್‌ಗಳ ಸೂಚನೆ ಮೇರೆಗೆ ಆಯಾ ವ್ಯಾಪ್ತಿಯ ಹೊಂಡ ಮುಚ್ಚುವ ಕೆಲಸ ನಡೆಸಲು ಅಧಿಕಾರಿಗಳು ತೀರ್ಮಾನಿಸಿದ್ದಾರೆ. ಮೊದಲಿಗೆ ತೇಪೆ ಹಾಕಿ, ಆ ಬಳಿಕ ಡಾಮರು ಹಾಕುವ ಬಗ್ಗೆ ನಿರ್ಧರಿಸಲಾಗಿದೆ.

Advertisement

ಸಿಟಿ ಆಸ್ಪತ್ರೆ ರಸ್ತೆ; ಚರಂಡಿ ಕಾಮಗಾರಿ
ಕದ್ರಿ-ಮಲ್ಲಿಕಟ್ಟೆ ರಸ್ತೆಯ ಸಿಟಿ ಆಸ್ಪತ್ರೆಯಿಂದ ಎಡಭಾಗದಲ್ಲಿ ಹಾದು ಹೋಗುವ ರಸ್ತೆಯಲ್ಲಿ ಚರಂಡಿ ಕಾಮಗಾರಿ ಹಿನ್ನೆಲೆಯಲ್ಲಿ ಕದ್ರಿ ದೇವಸ್ಥಾನಕ್ಕೆ ಹೋಗುವ ಒಳ ರಸ್ತೆಯನ್ನು ಮುಚ್ಚಲಾಗಿದೆ. ಆಸ್ಪತ್ರೆಯ ಮುಂಭಾಗದ ಮುಖ್ಯ ಚರಂಡಿಯು ನಿತ್ಯ ಸಮಸ್ಯೆ ಸೃಷ್ಟಿಸುತ್ತಿದ್ದ ಹಿನ್ನೆಲೆಯಲ್ಲಿ ಇದನ್ನು ಪೂರ್ಣ ರೀತಿಯಲ್ಲಿ ಸರಿಪಡಿಸಲು ಪಾಲಿಕೆ ಮುಂದಾಗಿದ್ದು, ಕಾಮಗಾರಿಮುಗಿಯುವ ವರೆಗೆ ಇಲ್ಲಿ ಸಂಚಾರ ನಿರ್ಬಂಧಿಸಲಾಗಿದೆ.

ಪಂಪ್‌ವೆಲ್‌ನಿಂದ ಕಂಕನಾಡಿಗೆ ಹೋಗುವ ಗಣೇಶ್‌ ಮೆಡಿಕಲ್‌ ಮುಂಭಾಗದಲ್ಲಿ ಒಂದು ತಿಂಗಳಿನಿಂದ ಮ್ಯಾನ್‌ಹೋಲ್‌ ಕಾಮಗಾರಿ ನಡೆಯುತ್ತಿದ್ದು, ಇಲ್ಲೂ ಬೆಳಗ್ಗೆ ಹಾಗೂ ಸಂಜೆ ಈ ರಸ್ತೆಯಲ್ಲಿ ಟ್ರಾಫಿಕ್‌ ಸಮಸ್ಯೆಯೂ ಕಾಡುತ್ತಿದೆ. 

ನಿರಂತರ ಕಾರ್ಯಾಚರಣೆ
ಮಂಗಳೂರು ವ್ಯಾಪ್ತಿಯಲ್ಲಿನ ಹೊಂಡ ತುಂಬಿದ ರಸ್ತೆಗೆ ತೇಪೆ ಹಚ್ಚುವ ಕೆಲಸವನ್ನು ಬುಧವಾರದಿಂದ ಆರಂಭಿಸಲಾಗಿದೆ. ಮಳೆ ಬಾರದಿದ್ದರೆ, ನಗರದ ಎಲ್ಲ ರಸ್ತೆಯ ಹೊಂಡಗಳಿಗೆ ತೇಪೆ ಕಾರ್ಯ ಮುಂದುವರಿಯುವುದು. ವಾಹನ ಸವಾರರಿಗೆ ಯಾವುದೇ ಸಮಸ್ಯೆ ಆಗದಂತೆ ಕಾಮಗಾರಿ ನಡೆಸಲು ಅಧಿಕಾರಿಗಳಿಗೆ ಸ್ಪಷ್ಟ ಸೂಚನೆ ನೀಡಲಾಗಿದೆ.
ಕವಿತಾ ಸನಿಲ್‌, ಮೇಯರ್‌

Advertisement

Udayavani is now on Telegram. Click here to join our channel and stay updated with the latest news.

Next