Advertisement

12-13ರಂದು “ಪರ್ವ’ಮಹಾರಂಗ ಪ್ರಯೋಗ

10:16 AM Mar 31, 2022 | Team Udayavani |

ಧಾರವಾಡ: ಎಸ್‌.ಎಲ್‌.ಬೈರಪ್ಪನವರ ಮೇರು ಕೃತಿ “ಪರ್ವ’ ಕಾದಂಬರಿ ಆಧರಿಸಿದ ಮಹಾರಂಗ ಪ್ರಯೋಗವು ನಗರದ ಸೃಜನಾ ರಂಗಮಂದಿರದಲ್ಲಿ ಏ.12 ಮತ್ತು 13 ರಂದು ಪ್ರದರ್ಶನಗೊಳ್ಳಲಿದೆ ಎಂದು ಮೈಸೂರು ರಂಗಾಯಣದ ನಿರ್ದೇಶಕ ಅಡ್ಡಂಡ ಸಿ. ಕಾರ್ಯಪ್ಪ ಹೇಳಿದರು.

Advertisement

ಇಲ್ಲಿನ ರಂಗಾಯಣದಲ್ಲಿ ಬುಧವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಮಹಾ ರಂಗಪ್ರಯೋಗ “ಪರ್ವ’ ರಾಜ್ಯದ ಬೇರೆ ಬೇರೆ ಜಿಲ್ಲೆಗಳಲ್ಲಿ ರಾಷ್ಟ್ರದ ಐದು ಪ್ರಮುಖ ಸ್ಥಳಗಳಲ್ಲಿ ಪ್ರದರ್ಶನ ಗೊಳ್ಳಬೇಕೆಂಬ ಯೋಜನೆಯನ್ನು ಮೈಸೂರು ರಂಗಾಯಣ ರೂಪಿಸಿದೆ. ಧಾರವಾಡದ ಸೃಜನ ರಂಗಮಂದಿರದಲ್ಲಿ ಏ.12 ಹಾಗೂ 13 ರಂದು ಎರಡು ದಿನಗಳ ಕಾಲ ಪ್ರದರ್ಶನಗೊಳ್ಳಲಿದೆ. ಪ್ರತಿದಿನ ಬೆಳಿಗ್ಗೆ 10:30 ಗಂಟೆಗೆ ನಾಟಕ ಆರಂಭವಾಗುತ್ತದೆ. ನಾಲ್ಕು ವಿರಾಮಗಳು ಸೇರಿ 8 ತಾಸುಗಳ ನಾಟಕ, ಮಧ್ಯೆ ಊಟಕ್ಕೆ 30 ನಿಮಿಷಗಳ ವಿರಾಮ. ಇನ್ನುಳಿದಂತೆ ತಲಾ 10 ನಿಮಿಷಗಳ ಮೂರು ಚಹಾ ವಿರಾಮ ಇರುತ್ತದೆ ಎಂದರು.

ಈ ಮಹಾ ರಂಗಪ್ರಯೋಗದ ಖರ್ಚು ವೆಚ್ಚ ದೊಡ್ಡ ಪ್ರಮಾಣದಲ್ಲಿರುವುದರಿಂದ ಮತ್ತು ದೀರ್ಘ‌ ಪ್ರದರ್ಶನದ ಶ್ರಮ ಎಲ್ಲವನ್ನೂ ಪರಿಗಣಿಸಿ 200 ರೂ. ಬೆಲೆಯ ಟಿಕೆಟ್‌ ಗಳನ್ನು ನಿಗದಿಗೊಳಿಸಲಾಗಿದೆ. ಧಾರವಾಡ ರಂಗಾಯಣ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಕಚೇರಿಯಲ್ಲಿ ಟಿಕೆಟ್‌ಗಳು ಲಭ್ಯವಿರುತ್ತವೆ. ರಂಗಾಯಣದ ವೆಬ್‌ಸೈಟ್‌ //www.rangayana.org/ ಮೂಲಕ ಆನ್‌ಲೈನ್‌ ನಲ್ಲಿ ಟಿಕೆಟ್‌ ಪಡೆಯಬಹುದಾಗಿದೆ ಎಂದರು.

ಇದೇ ಸಂದರ್ಭದಲ್ಲಿ ಪರ್ವ ಮಹಾರಂಗ ಪ್ರಯೋಗದ ಭಿತ್ತಿಪತ್ರಗಳು, ಕೈಪಿಡಿ ಬಿಡುಗಡೆ ಮಾಡಲಾಯಿತು.

ವಾರ್ತಾ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ಮಂಜುನಾಥ ಡೊಳ್ಳಿನ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಕುಮಾರ್‌ ಬೆಕ್ಕೇರಿ ಇದ್ದರು.

Advertisement

ಕನ್ನಡ ಕಾಯಕ ವರ್ಷದಲ್ಲಿ “ಕನ್ನಡ ರಂಗಭೂಮಿ’ ವಿಶ್ವದ ಮತ್ತು ಭಾರತೀಯ ರಂಗಭೂಮಿಯಲ್ಲಿ ಒಂದು ಮೈಲಿಗಲ್ಲಾಗಿ ನಿಲ್ಲಬೇಕೆಂಬ ಮೈಸೂರು ರಂಗಾಯಣದ ಕನಸು ನನಸಾಗಿದೆ. ಪರ್ವ ಈಗಾಗಲೇ ಇಪ್ಪತ್ತು ಪ್ರದರ್ಶನಗಳನ್ನು ಮುಗಿಸಿದೆ. ನಮ್ಮ ರಂಗಭೂಮಿ ಸಾಹಸಕ್ಕೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಆರ್ಥಿಕ ನೆರವು ನೀಡಿ ಸಹಕರಿಸಿದೆ. ನಾಟಕದ ಸಿದ್ಧತೆಗೆ 50 ಲಕ್ಷ ರೂ.ಗಳನ್ನು ಬಿಡುಗಡೆ ಮಾಡಿದೆ. ಈ ಹಣದಲ್ಲಿ ಕಳೆದ ಒಂದು ವರ್ಷದಿಂದ ಪರ್ವಕ್ಕಾಗಿ ಆಯ್ಕೆ ಮಾಡಿಕೊಂಡ ಸರಿ ಸುಮಾರು 35ಕ್ಕೂ ಹೆಚ್ಚು ಕಲಾವಿದರಿಗೆ ಮಾಸಿಕ ಸಂಭಾವನೆ ನೀಡುತ್ತ ಬಂದಿದ್ದೇವೆ. 38ಲಕ್ಷ ರೂ.ಗಳನ್ನು ಸಂಭಾವನೆಗಾಗಿ ವೆಚ್ಚ ಮಾಡಿದ್ದೇವೆಂದು ಮೈಸೂರು ರಂಗಾಯಣ ನಿರ್ದೇಶಕ ಅಡ್ಡಂಡ ಸಿ. ಕಾರ್ಯಪ್ಪ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next