Advertisement

ಅರಮನೆಯ ಅಂಬಾರಿ ನಮ್ಮದೇ:  ಡಾ.ಪ್ರಮೋದಾದೇವಿ

06:00 AM Sep 17, 2018 | Team Udayavani |

ಮೈಸೂರು: ಅರಮನೆಯ ಅಂಬಾರಿ ನಮ್ಮ ವೈಯಕ್ತಿಕ ಆಸ್ತಿ. ಹಿಂದೆಯೂ ಅದು ನಮ್ಮ ಆಸ್ತಿಯೇ ಆಗಿತ್ತು. ಈಗಲೂ ನಮ್ಮದೆ, ಮುಂದೆಯೂ ಅದು ನಮ್ಮ ಆಸ್ತಿಯೇ ಆಗಿರುತ್ತದೆ. ಇದರಲ್ಲಿ ಯಾವುದೇ ಅನುಮಾನ ಬೇಡ ಎಂದು ರಾಜವಂಶಸ್ಥೆ ಡಾ.ಪ್ರಮೋದಾದೇವಿ ಒಡೆಯರ್‌ ಸ್ಪಷ್ಟಪಡಿಸಿದ್ದಾರೆ.

Advertisement

ಭಾನುವಾರ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು. ಅಂಬಾರಿ ನೀಡುವ ಹಾಗೂ ರಾಜವಂಶಸ್ಥರಿಗೆ ಸರ್ಕಾರ ರಾಜಧನ ನೀಡುವ ಕುರಿತ ಆಕ್ಷೇಪಕ್ಕೆ ಪ್ರತಿಕ್ರಿಯಿಸಿದ ಅವರು, ಅಂಬಾರಿ ವಿಚಾರಕ್ಕೆ ವ್ಯಕ್ತಿಯೊಬ್ಬರು ನ್ಯಾಯಾಲಯದಲ್ಲಿ ಕೇಸ್‌ ಹಾಕಿಕೊಂಡಿದ್ದರು. ಅವರ ನಡವಳಿಕೆಗಳಿಗೆ ಹೆಚ್ಚು ಆದ್ಯತೆ ನೀಡುವ ಅಗತ್ಯವಿಲ್ಲ. ಈ ಹಿಂದೆಯೇ ನ್ಯಾಯಾಲಯ ಅಂಬಾರಿ ನಮ್ಮ ಆಸ್ತಿ ಎಂದು ಘೋಷಿಸಿದೆ. ಹೀಗಾಗಿ, ಅಂಬಾರಿಗೆ ಗೌರವ ಧನ ಪಡೆಯುವ ಬಗ್ಗೆ ಚಕಾರ ಎತ್ತುವುದು ಸರಿಯಲ್ಲ ಎಂದು ಹೇಳಿದರು.

ಸರ್ಕಾರದ್ದು ಕೇವಲ ನಾಡಹಬ್ಬ: ರಾಜ್ಯ ಸರ್ಕಾರ ಆಚರಿಸುವುದು ಕೇವಲ ನಾಡಹಬ್ಬ. ರಾಜ್ಯ ಸರ್ಕಾರ 1981ರಿಂದ ಜನರಿಗಾಗಿ ನಾಡಹಬ್ಬವನ್ನು ಆಚರಣೆ ಮಾಡುತ್ತಿದೆ. ಆದರೆ, ನಾವು ಮಾಡುವುದು ನವರಾತ್ರಿ ದಸರಾ ಹಬ್ಬ. ಹೀಗಾಗಿ, ಅರಮನೆಯಲ್ಲಿ ನಾವು ಮಾಡುವ ನವರಾತ್ರಿ ಆಚರಣೆಗಳು ಸಾಂಪ್ರದಾಯಿಕ ಮತ್ತು ಪಾರಂಪರಿಕವಾಗಿ ನಡೆದುಕೊಂಡು ಬಂದಿದೆ. ದಸರಾ ಎನ್ನುವ ಹೆಸರನ್ನು ಎಲ್ಲಾ ಕಡೆಗಳಲ್ಲೂ ಇಟ್ಟಿರುವುದರಿಂದ ಇಲ್ಲಿಯೂ ಇಡಲಾಗಿದೆ. ಆದ್ದರಿಂದ ಸರ್ಕಾರ ಆಚರಿಸುವ ದಸರಾ ಪೋಸ್ಟರ್‌ಗಳಲ್ಲಿ ರಾಜಮನೆತನದವರ ಭಾವಚಿತ್ರ ಹಾಕದೆ ಇರುವುದಕ್ಕೆ ನಮಗೆ ಯಾವುದೇ ಬೇಸರವಿಲ್ಲ. ಅರಮನೆಯಲ್ಲಿ ನಡೆಯುವ ನವರಾತ್ರಿ ಉತ್ಸವಕ್ಕೆ ಅ.4ರ ನಂತರ ಸಿದ್ಧತೆ ಆರಂಭಗೊಳ್ಳಲಿದ್ದು, ಖಾಸಗಿ ದರ್ಬಾರ್‌ ಸೇರಿದಂತೆ ಎಲ್ಲಾ ಆಚರಣೆಗಳು ಎಂದಿನಂತೆ ನಡೆಯಲಿದೆ ಎಂದರು.

ನನಗೆ ರಾಜಕೀಯದ ಬಗ್ಗೆ ಆಸಕ್ತಿ ಇಲ್ಲ, ಈ ಬಗ್ಗೆ ಈಗಾಗಲೇ ಪ್ರತಿಕ್ರಿಯೆ ನೀಡಿದ್ದೇನೆ. ಜನರ ಅಪೇಕ್ಷೆಯಂತೆ ರಾಜಕಾರಣದಲ್ಲೇ ಎಲ್ಲವನ್ನು ಮಾಡಲು ಸಾಧ್ಯವಿಲ್ಲ. ಬೇರೆ ಚಟುವಟಿಕೆ ಮೂಲಕವೂ ಜನರ ಸೇವೆ ಮಾಡಬಹುದು.
– ಡಾ.ಪ್ರಮೋದಾದೇವಿ ಒಡೆಯರ್‌, ರಾಜವಂಶಸ್ಥೆ.

Advertisement

Udayavani is now on Telegram. Click here to join our channel and stay updated with the latest news.

Next