Advertisement

ಮಳೆಯ ಅಬ್ಬರಕ್ಕೆ ನೆಲಕಚ್ಚಿದ ಭತ್ತದ ಬೆಳೆ: ಮರು ಬಿತ್ತನೆಗೆ ಮುಂದಾದ ರೈತರು; ಬೀಜದ ಕೊರತೆ

12:58 AM Jul 16, 2022 | Team Udayavani |

ಕುಂದಾಪುರ/ ಕೋಟ: ಭಾರೀ ಮಳೆಯಿಂದಾಗಿ ಕರಾವಳಿಯಲ್ಲಿ ಅಪಾರ ಪ್ರಮಾಣದ ಭತ್ತದ ಬೆಳೆ ನಾಶವಾಗಿದೆ. ಗದ್ದೆಯಲ್ಲಿ ನೀರು ನಿಂತಿರುವ ಕಾರಣ ನಾಟಿ ಮಾಡಿರುವ ನೇಜಿ ಕೊಳೆತಿದೆ. ಬಿತ್ತನೆ ಮಾಡಿರುವಲ್ಲಿ ಮಳೆನೀರಿನೊಂದಿಗೆ ಕೊಚ್ಚಿಕೊಂಡು ಹೋಗಿ ಮುಂಗಾರು ಹಂಗಾಮಿನ ಬೆಳೆಯೇ ನಾಶವಾಗಿರುವುದರಿಂದ ರೈತರು ಮರು ಬಿತ್ತನೆಗೆ ಮುಂದಾಗಿದ್ದಾರೆ. ಆದರೆ ಬಿತ್ತನೆ ಬೀಜದ ಕೊರತೆ ತಲೆದೋರಿದೆ.

Advertisement

ಇಲಾಖೆಯ ಮಾಹಿತಿಯಂತೆ ಈವರೆಗೆ ಉಡುಪಿ ಜಿಲ್ಲೆಯಲ್ಲಿ 186 ಹೆಕ್ಟೇರ್‌, ದ.ಕ. ದಲ್ಲಿ 216.8 ಹೆಕ್ಟೇರ್‌ ಸೇರಿದಂತೆ ಒಟ್ಟು 402.8 ಹೆಕ್ಟೇರ್‌ ಪ್ರದೇಶದಲ್ಲಿ ಹಾನಿಯಾಗಿದೆ. ಹಾನಿಯ ಸಮೀಕ್ಷೆ ಇನ್ನೂ ಪೂರ್ಣಗೊಳ್ಳದೆ ಇರುವುದರಿಂದ ನಷ್ಟದ ಪ್ರಮಾಣ ಹೆಚ್ಚಾಗುವ ಸಾಧ್ಯತೆಗಳಿವೆ. ಅಂದಾಜಿನ ಪ್ರಕಾರ ಉಭಯ ಜಿಲ್ಲೆಗಳಲ್ಲಿ ಸಾವಿರ ಹೆಕ್ಟೇರ್‌ಗೂ ಮಿಕ್ಕಿ ಭತ್ತದ ಬೆಳೆ ನಾಶವಾಗಿದೆ.

ಉಡುಪಿಯಲ್ಲಿ 1,900 ಕ್ವಿಂ. ಬಿತ್ತನೆ ಬೀಜ ವಿತರಿಸಲಾಗಿದ್ದು, 13,526 ಹೆಕ್ಟೇರ್‌ ಬಿತ್ತನೆಯಾಗಿದೆ. ದ.ಕ.ದಲ್ಲಿ ಕೇವಲ 505 ಕ್ವಿಂ. ಬಿತ್ತನೆ ಬೀಜ ವಿತರಿಸಿದ್ದು, ಈವರೆಗೆ 1,500 ಹೆಕ್ಟೇರ್‌ ಬಿತ್ತನೆಯಾಗಿದ್ದು, ಆ. 15ರ ವರೆಗೂ ನಾಟಿ ಕಾರ್ಯ ನಡೆಯುತ್ತದೆ.

ಬಿತ್ತನೆ ಬೀಜ ಪೂರೈಸಲು ಆಗ್ರಹ
ಭಾರೀ ಮಳೆ, ನೆರೆಯಿಂದಾಗಿ ಹಾನಿಗೀ ಡಾಗಿರುವ ಭತ್ತದ ಗದ್ದೆಗಳಲ್ಲಿ ಮರು ಬಿತ್ತನೆಗೆ ರೈತರು ಮುಂದಾಗಿದ್ದು, ಬಿತ್ತನೆ ಬೀಜ ಲಭ್ಯವಾಗದೆ ತೊಂದರೆಯಾಗಿದೆ. ಈ ಬಗ್ಗೆ ಸರಕಾರ ಗಮನಿಸಿ ಅಗತ್ಯವಿರುವ ರೈತರಿಗೆ ಬಿತ್ತನೆ ಬೀಜ ನೀಡಬೇಕು ಎಂದು ರೈತ ಸಂಘದ ತ್ರಾಸಿ ವಲಯಾಧ್ಯಕ್ಷ ಶರತ್‌ ಕುಮಾರ್‌ ಶೆಟ್ಟಿ ಆಗ್ರಹಿಸಿದ್ದಾರೆ.

ಮರು ಖರೀದಿಗೆ ಸಮಸ್ಯೆ: ಕೃಷಿ ಇಲಾಖೆಯ ನಿಯಮದಂತೆ ಒಂದು ಪಹಣಿ ಪತ್ರದಲ್ಲಿ ಒಮ್ಮೆ ಬೀಜ ಖರೀದಿಸಿದರೆ 3 ವರ್ಷ ಖರೀದಿಸಲು ಸಾಧ್ಯವಿಲ್ಲ. ಈಗಾಗಲೇ ಬೀಜ ಖರೀದಿಸಿ ಬೆಳೆ ನಾಶವಾದವರಿಗೆ ಇಲಾಖೆಯಿಂದ ಮತ್ತೆ ಖರೀದಿ ಕಷ್ಟ. ಆದರೆ ವಿಶೇಷ ಪರಿಸ್ಥಿತಿಯೆಂದು ಪರಿಗಣಿಸಿ ಬೀಜಪೂರೈಸಬೇಕು ಎಂದು ರೈತರು ಮನವಿ ಮಾಡಿದ್ದಾರೆ.

Advertisement

ಮರುಬಿತ್ತನೆಗೆ ಎಂಒ4 ಸೂಕ್ತವಲ್ಲ
ರೈತರು ಮರು ಬಿತ್ತನೆಗೂ ಎಂಒ4ನ ಮೊರೆಹೊಗುತ್ತಿದ್ದಾರೆ. ಆದರೆ ಈ ತಳಿ ಕಟಾವಿಗೆ ಬರಲು ಕನಿಷ್ಠ 135 ರಿಂದ 140 ದಿನಗಳು ಬೇಕು. ಈಗಾಗಲೇ ಬಿತ್ತನೆ ಅವಧಿ ತಡವಾಗಿರುವುದರಿಂದ ಇದನ್ನು ಬಳಸಿದಲ್ಲಿ ಕಟಾವು ಇನ್ನಷ್ಟು ತಡವಾಗಲಿದೆ. ಫಸಲು ಕಟ್ಟುವ ಸಮಯ ನೀರಿನ ಕೊರತೆ ಉಂಟಾಗಿ ಸಮಸ್ಯೆಯಾಗಬಹುದು. ಆದ್ದರಿಂದ ಜ್ಯೋತಿ, ಉಮಾ, ಎಂ-21 ಇತ್ಯಾದಿ ಅಲ್ಪಾವಧಿ ತಳಿಯ ಬೀಜ ಬಿತ್ತಿ ನಿಗದಿತ ಅವಧಿಯಲ್ಲಿ ಕಟಾವು ಕಾರ್ಯ ಕೈಗೊಳ್ಳಬಹುದು ಎನ್ನುತ್ತಾರೆ ಕೃಷಿ ವಿಜ್ಞಾನಿಗಳು.

ಉಡುಪಿಯಲ್ಲಿ ಸಂಭವಿಸಿದ ಪ್ರಕೃತಿ ವಿಕೋಪ ನಿರ್ವಹಣ ಸಭೆಯಲ್ಲಿ ಬೇಡಿಕೆಗೆ ತಕ್ಕಂತೆ ಸಬ್ಸಿಡಿ ದರದಲ್ಲಿ ತುರ್ತಾಗಿ ಬಿತ್ತನೆ ಬೀಜ ಪೂರೈಸಲು ಕೃಷಿ ಅಧಿಕಾರಿಗಳಿಗೆ ಸೂಚಿಸಿದ್ದೇನೆ.
– ಶೋಭಾ ಕರಂದ್ಲಾಜೆ, ಕೇಂದ್ರ ಸಚಿವೆ

ರೈತರ ಬೇಡಿಕೆಗೆ ತಕ್ಕಂತೆ ಬೀಜ ಪೂರೈಕೆಗೆ ಪ್ರಯತ್ನಿಸಲಾಗುವುದು. ಒಂದು ಆರ್‌ಟಿಸಿಯಲ್ಲಿ ಒಮ್ಮೆ ಖರೀದಿಸಿದವರಿಗೆ ಮತ್ತೊಮ್ಮೆ ಖರೀದಿಸಲು ಸಾಧ್ಯವಾಗದಿರುವ ಸಮಸ್ಯೆಯನ್ನು ಇಲಾಖೆಯ ಗಮನಕ್ಕೆ ತರಲಾಗುವುದು. ದ.ಕ.ದಲ್ಲಿ 300 ಕ್ವಿಂ., ಉಡುಪಿಯ ವಿವಿಧ ರೈತ ಸೇವಾ ಕೇಂದ್ರದಲ್ಲಿ ಸುಮಾರು 80 ಕ್ವಿಂ. ಬಿತ್ತನೆ ಬೀಜ ದಾಸ್ತಾನಿದೆ.
– ಕೆಂಪೇಗೌಡ / ಸೀತಾ
ಉಡುಪಿ / ದ.ಕ. ಜಂಟಿ ಕೃಷಿ ನಿರ್ದೇಶಕರು

-ಪ್ರಶಾಂತ್‌ ಪಾದೆ/
ರಾಜೇಶ್‌ ಗಾಣಿಗ ಅಚ್ಲಾಡಿ

Advertisement

Udayavani is now on Telegram. Click here to join our channel and stay updated with the latest news.

Next