ಚಿತ್ತಾಪುರ: ರಾಷ್ಟ್ರವ್ಯಾಪಿ ಅನಿರ್ದಿಷ್ಟ ಕಾಲ ಮುಷ್ಕರಕ್ಕೆ ಕರೆ ನೀಡಿರುವ ಹಿನ್ನೆಲೆಯಲ್ಲಿ ಪಟ್ಟಣದ ನಾಗಾವಿ ಲಾರಿ ಮಾಲೀಕರ ಸಂಘದ ಅಧ್ಯಕ್ಷ ಮಲ್ಲೇಶಿ ಮಾಕಾ ನೇತೃತ್ವದಲ್ಲಿ ಲಾರಿ ಮಾಲೀಕರು ಪ್ರತಿಭಟನೆ ನಡೆಸಿದರು.
ಪಟ್ಟಣದಿಂದ ಕಲಬುರಗಿ, ಯಾದಗಿರಿ, ಮಳಖೇಡ, ಸೇಡಂ, ಕಾಳಗಿ, ಶಹಾಬಾದ, ವಾಡಿ, ಇಟಗಾ ಮತ್ತು ನಾಲವಾರ್‌ಗೆ ಸಂಪರ್ಕಿಸುವ ಮುಖ್ಯ ಹೆದ್ದಾರಿಯಲ್ಲಿ ನೂರಾರು ಸಂಖ್ಯೆಯಲ್ಲಿ ಸರಕು, ಸಾಮಾನು ತುಂಬಿದ್ದ ಲಾರಿಗಳು, ಟ್ಯಾಂಕರ್ ಗಳು ಪಟ್ಟಣದ ಹೊರ ವಲಯದ ಗಂಗಾ ಪರಮೇಶ್ವರಿ ಕಾಲೇಜಿನ ಹತ್ತಿರ ಸಾಲಾಗಿ ನಿಂತಿದ್ದವು.
ತಾಲೂಕಿನ ಇಟಗಾ ಗ್ರಾಮದ ಓರಿಯಂಟ್ ಸಿಮೆಂಟ್ ಕಾರ್ಖಾನೆ ಹಾಗೂ ವಾಡಿ ಎಸಿಸಿ ಸಿಮೆಂಟ್ ಕಂಪನಿಗೆ ಪ್ರತಿದಿನ ಹೆಚ್ಚಿನ ಸಂಖ್ಯೆಯಲ್ಲಿ ಲಾರಿಗಳು ಹೋಗುತ್ತಿದ್ದವು. ಇಟಗಾ ಹಾಗೂ ವಾಡಿ ಕಡೆ ಹೋಗುವ ರಸ್ತೆಗಳು ವಾಹನಗಳಿಲ್ಲದೆ ಬಿಕೋ ಎನ್ನುತ್ತಿವೆ. ಸ್ಥಳೀಯ ಲಾರಿ ಮಾಲೀಕರು ರಸ್ತೆಯಲ್ಲಿ ನಿಂತು ಬರುವ ಲಾರಿಗಳ ಚಾಲಕರ ಮನವೊಲಿಸಿ ಮುಷ್ಕರಕ್ಕೆ ಬೆಂಬಲಿಸುವಂತೆ ಮನವಿ ಮಾಡುತ್ತಿದ್ದರು.
ಮಾ. 30 ರಿಂದ ಮುಷ್ಕರ ಆರಂಭಿಸಿದ್ದು, ಹೆಚ್ಚಿನ ಇನ್ಸೂರೆನ್ಸ್ ಪ್ರಿಮಿಯಮ್ ತಡೆ ಹಿಡಿಯಬೇಕು. ಹೆಚ್ಚಿನ ಆರ್ ಟಿಒ ತೆರಿಗೆ ವಿಸದಂತೆ ತಡೆಹಿಡಿಯಬೇಕು. ಹಳೆ ವಾಹನಗಳನ್ನು ಮುಂದುವರಿಸಬೇಕು. ವೇಗ ನಿಯಂತ್ರಣ ಅಳವಡಿಸಿರುವದನ್ನು ಹಿಂದಕ್ಕೆ ಪಡೆಯಬೇಕು. ಟೋಲ್ ಮುಕ್ತ ಭಾರತವನ್ನಾಗಿ ಮಾಡಬೇಕು.
ಮರಳು ಸಾಗಾಣಿಕೆ ಅವಕಾಶ ಕಲ್ಪಿಸಬೇಕು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸಬೇಕೆಂದು ಒತ್ತಾಯಿಸಿದರು. ಲಾರಿ ಮಾಲೀಕರ ಸಮಸ್ಯೆ, ತೊಂದರೆಗೆ ಸ್ಪಂದಿಸಬೇಕು. ನ್ಯಾಯಯುತವಾದ ಬೇಡಿಕೆಗಳನ್ನು ಸರ್ಕಾರ ಈಡೇರಿಸುವವರೆಗೂ ಮುಷ್ಕರ ಮುಂದುವರಿಯಲಿದೆ ಎಂದು ಹೇಳಿದರು.
ನಾಗಾವಿ ಮಾಲೀಕರ ಸಂಘದ ಉಪಾಧ್ಯಕ್ಷ ®ಜಮೋದ್ದಿನ್ ಅಹ್ಮದ್, ಪದಾಕಾರಿಗಳಾದ ಖಾಜಾ ಬಾದಲ, ಸಾಧೀಕ, ಖಾಜಾ ಪಾಶಾ, ರಾಜು ವಾಡಿ, ಸಾಬಣ್ಣ ಭೈರಿ, ಕಾಶಪ್ಪ ಭೈರಿ, ಶಿವಣ್ಣ ಭಜಂತ್ರಿ, ಸಲೀಮ ದಂಡೋತಿ ಇದ್ದರು.