Advertisement

ಇನ್ನೆರಡು ಗ್ಯಾರಂಟಿ ಇಂದು ಆರಂಭ – ಇಂದಿನಿಂದ ಬಳಸುವ ವಿದ್ಯುತ್‌ ಲೆಕ್ಕ ಸರಕಾರದ ಖಾತೆಗೆ

09:45 AM Jul 01, 2023 | Team Udayavani |

ಬೆಂಗಳೂರು: ಸರಕಾರದ ಬಹುನಿರೀಕ್ಷಿತ ಮತ್ತೆರಡು ಗ್ಯಾರಂಟಿಗಳಾದ “ಗೃಹಜ್ಯೋತಿ” ಮತ್ತು “ಅನ್ನಭಾಗ್ಯ”ಕ್ಕೆ ಶನಿವಾರ ಚಾಲನೆ ದೊರೆಯಲಿದೆ. ಫ‌ಲಾನುಭವಿಗಳಿಗೆ ತತ್‌ಕ್ಷಣಕ್ಕೆ ಇವುಗಳ ಅನುಕೂಲ ಅರಿವಿಗೆ ಬಾರದಿರಬಹುದು. ಆದರೆ ಈ ಸಂಬಂಧದ ಪ್ರಕ್ರಿಯೆಗೆ ಅಧಿಕೃತ ಚಾಲನೆ ದೊರಕಿರುವುದರಿಂದ ಕೆಲವೇ ದಿನಗಳಲ್ಲಿ ಲಾಭ ಸಿಗಲಿದೆ.

Advertisement

ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದಂತೆ ಜುಲೈ 1ರಿಂದ ಬಳಸುವ ವಿದ್ಯುತ್‌ಗೆ ಗ್ರಾಹಕರು ಬಿಲ್‌ ಪಾವತಿಸಬೇಕಿಲ್ಲ. 200 ಯೂನಿಟ್‌ವರೆಗಿನ ವಿದ್ಯುತ್‌ ಬಿಲ್‌ ಅನ್ನು ಸಂಪೂರ್ಣವಾಗಿ ಸರಕಾರ ಭರಿಸಲಿದೆ. ಅದರಂತೆ ಶನಿವಾರದಿಂದ ಗೃಹ ಬಳಕೆದಾರರು ಉಪಯೋಗಿಸುವ ವಿದ್ಯುತ್‌ನ ಲೆಕ್ಕ ಸರಕಾರದ ಖಾತೆಗೆ ಹೋಗಲಿದೆ. ಎಂದಿನಂತೆ ತಿಂಗಳಾಂತ್ಯಕ್ಕೆ ಅದರ ಮೊತ್ತವನ್ನು ಸರಕಾರ ನೇರವಾಗಿ ಆಯಾ ವಿದ್ಯುತ್‌ ಸರಬರಾಜು ಕಂಪೆನಿ (ಎಸ್ಕಾಂ)ಗಳಿಗೆ ನೀಡಲಿದೆ.

ಅದರಂತೆ ರಾಜ್ಯದಲ್ಲಿ 2.20 ಲಕ್ಷ ಗೃಹಬಳಕೆ ವಿದ್ಯುತ್‌ ಗ್ರಾಹಕರಿದ್ದು, ಆ ಪೈಕಿ ಶೇ. 90ರಷ್ಟು ಜನ ಮಾಸಿಕ 200 ಯೂನಿಟ್‌ಗಿಂತ ಕಡಿಮೆ ಬಳಸುವವರಾಗಿದ್ದು, ಅವರೆಲ್ಲರಿಗೂ ಯೋಜನೆ ಲಾಭ ಸಿಗಲಿದೆ. ಆದರೆ ಇದಕ್ಕಾಗಿ ಸೇವಾಸಿಂಧು ಪೋರ್ಟಲ್‌ನಲ್ಲಿ ಆಧಾರ್‌ ಮತ್ತು ಆರ್‌.ಆರ್‌. ಸಂಖ್ಯೆ ಜೋಡಣೆ ಮಾಡುವುದು ಕಡ್ಡಾಯವಾಗಿದೆ. ಇದಕ್ಕೆ ಪೂರಕವಾಗಿ ನಿತ್ಯ ಸರಾಸರಿ 7-8 ಲಕ್ಷ ಜನ ಪೋರ್ಟಲ್‌ನಲ್ಲಿ ಅರ್ಜಿ ಸಲ್ಲಿಸುತ್ತಿದ್ದು, ಸುಮಾರು 86 ಲಕ್ಷ ಜನ ಈಗಾಗಲೇ ಹೆಸರು ನೋಂದಾಯಿಸಿಕೊಂಡಿದ್ದಾರೆ. ಇದಕ್ಕೆ ಕೊನೆಯ ದಿನಾಂಕ ನಿಗದಿ ಮಾಡದಿರುವುದರಿಂದ ಉಳಿದವರು ಹಂತ ಹಂತವಾಗಿ ಅರ್ಜಿ ಸಲ್ಲಿಸಬಹುದು ಎಂದು ಎಸ್ಕಾಂಗಳು ಸ್ಪಷ್ಟಪಡಿಸಿವೆ.

ಹಂತಹಂತವಾಗಿ ನಗದು ವರ್ಗಾವಣೆ
ಅನ್ನಭಾಗ್ಯ ಯೋಜನೆ ಅಡಿ ಅಕ್ಕಿ ಬದಲಿಗೆ ಹಣ ನೀಡುವ ಯೋಜನೆಯೂ ಶನಿವಾರ ಆರಂಭಗೊಳ್ಳಲಿದೆ. ಆದರೆ ಒಂದೇ ದಿನದಲ್ಲಿ ಫ‌ಲಾನುಭವಿಗಳ ಖಾತೆಗೆ ಹಣ ಜಮೆ ಕಷ್ಟ. ಹಂತ ಹಂತವಾಗಿ ನಗದು ವರ್ಗಾವಣೆ ಆಗಲಿದೆ. ಇದಕ್ಕಾಗಿ ಫ‌ಲಾನುಭವಿಗಳ ಸಂಖ್ಯೆ, ಆಧಾರ್‌ ಮತ್ತು ಬ್ಯಾಂಕ್‌ ಖಾತೆ ಜೋಡಣೆ ಆಗಿರಬೇಕಾಗುತ್ತದೆ.

ಸರಕಾರ ಅಕ್ಕಿ ಬದಲಿಗೆ ಹಣ ನೀಡುವುದಾಗಿ ಘೋಷಿಸಿದ ಬೆನ್ನಲ್ಲೇ ಈ ನಿಟ್ಟಿನಲ್ಲಿ ಕಾರ್ಯಪ್ರವೃತ್ತವಾಗಿದೆ. ಆದರೆ ಪಡಿತರ ಕಾರ್ಡ್‌ದಾರರಲ್ಲಿ ಶೇ. 90ರಷ್ಟು ಕುಟುಂಬಗಳ ಮುಖ್ಯಸ್ಥರು ಮಹಿಳೆಯರಾಗಿದ್ದಾರೆ. ಅವರಲ್ಲಿ ಕೆಲವರು ಬ್ಯಾಂಕ್‌ ಖಾತೆಗಳನ್ನು ಹೊಂದಿಲ್ಲ. ಕೆಲವೆಡೆ ಆಧಾರ್‌ ಸಂಖ್ಯೆಯೂ ಜೋಡಣೆ ಆಗಿಲ್ಲ. ಈ ಹಿನ್ನೆಲೆಯಲ್ಲಿ ಆಹಾರ, ನಾಗರಿಕ ಪೂರೈಕೆ ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಗೆ ಇದು ಸದ್ಯಕ್ಕೆ ಸವಾಲಾಗಿದೆ.

Advertisement

ಗೃಹಲಕ್ಷ್ಮೀ ವರ
ಗೃಹಲಕ್ಷ್ಮೀ ಯೋಜನೆಯಡಿ ಪ್ರತಿ ಕುಟುಂಬದ ಯಜಮಾನಿಗೆ ಮಾಸಿಕ 2 ಸಾವಿರ ರೂ. ನೀಡುವುದಾಗಿ ಸರಕಾರ ಘೋಷಿಸಿರುವ ಕಾರಣ ಕೆಲವರು ಉಳಿತಾಯ ಖಾತೆ ತೆರೆಯಲು ಆರಂಭಿಸಿದ್ದಾರೆ. ಖಾತೆ ಹೊಂದಿದವರು ಆಧಾರ್‌ ಸಂಖ್ಯೆ ಜೋಡಣೆ ಮಾಡಿಕೊಳ್ಳುತ್ತಿದ್ದಾರೆ. ಇದು ಆಹಾರ ಇಲಾಖೆಗೆ ತುಸು ಅನುಕೂಲ ಆಗಬಹುದು ಎಂದು ಲೆಕ್ಕಾಚಾರ ಹಾಕಲಾಗಿದೆ.

ಅಂತ್ಯೋದಯ ಕಾರ್ಡ್‌ ಹೊಂದಿದ 10,89,990 ಕುಟುಂಬಗಳಿದ್ದು, 44,77,119 ಸದಸ್ಯರಿದ್ದಾರೆ. ಅದೇ ರೀತಿ, ಆದ್ಯತಾ ಕುಟುಂಬ (ಬಿಪಿಎಲ್‌)ಗಳಿದ್ದು, 3,97,00,791 ಸದಸ್ಯರಿದ್ದಾರೆ. ಒಟ್ಟಾರೆ ಫ‌ಲಾನುಭವಿಗಳ ಸಂಖ್ಯೆ 4,41,77,910. ಇದನ್ನು ಪ್ರಸ್ತುತ ತಲಾ ಅಂತ್ಯೋದಯ ಕುಟುಂಬಕ್ಕೆ 35 ಕೆಜಿ ಹಾಗೂ ಬಿಪಿಎಲ್‌ ಹೊಂದಿದ ಕುಟುಂಬದ ಪ್ರತಿ ಸದಸ್ಯರಿಗೆ ತಲಾ 5 ಕೆಜಿ ಅಕ್ಕಿ ನೀಡಲಾಗುತ್ತಿದೆ. ಹೆಚ್ಚುವರಿ ತಲಾ 5 ಕೆಜಿಗೆ ಲೆಕ್ಕಹಾಕಿ ಪ್ರತಿ ವ್ಯಕ್ತಿಗೆ 170 ರೂ. ಪಾವತಿಸಲಿದೆ.

ಗೃಹಲಕ್ಷ್ಮೀ ಯೋಜನೆ ಶೀಘ್ರ ಚಾಲನೆ
ಈ ಮಧ್ಯೆ ಗೃಹಲಕ್ಷ್ಮೀ ಯೋಜನೆಗೆ ಚಾಲನೆ ಮತ್ತು ಅರ್ಜಿ ನೋಂದಣಿ ಪ್ರಕ್ರಿಯೆಯನ್ನು ಸರಕಾರ ಯಾವಾಗಿನಿಂದ ಎಂಬುದನ್ನು ಇನ್ನೂ ನಿಗೂಢವಾಗಿ ಇಟ್ಟಿದೆ.
ಈಗ ಎರಡು ಯೋಜನೆಗಳ ಜತೆಗೆ ಅದನ್ನೂ ಆರಂಭಿಸಿದರೆ, ಸರ್ವರ್‌ ಮೇಲೆ ಒತ್ತಡ ಆಗಲಿದೆ. ಇನ್ನಷ್ಟು ಮಂದಗತಿಯಲ್ಲಿ ನೋಂದಣಿ ಪ್ರಕ್ರಿಯೆ ಸಾಗಲಿದೆ. ಈ ತಾಂತ್ರಿಕ ಕಾರಣದ ಹಿನ್ನೆಲೆಯಲ್ಲಿ ಸರಕಾರ ಸರ್ವರ್‌ ಮೇಲ್ದರ್ಜೆಗೇರಿಸುವುದು ಸಹಿತ ಹಲವು ಸಿದ್ಧತೆಗಳೊಂದಿಗೆ ಆರಂಭಿಸಲು ನಿರ್ಧರಿಸಿದೆ. ಮುಖ್ಯಮಂತ್ರಿ ಘೋಷಿಸಿರುವ ಪ್ರಕಾರ ಆಗಸ್ಟ್‌ 16ರಿಂದ ಯೋಜನೆಗೆ ಚಾಲನೆ ಸಿಗುವ ನಿರೀಕ್ಷೆ ಇದೆ.

Advertisement

Udayavani is now on Telegram. Click here to join our channel and stay updated with the latest news.

Next