Advertisement

Karnataka Govt,.: ಸಂಪುಟ ಹುತ್ತಕ್ಕೆ ಈಗಲೇ ಕೈಹಾಕಲು ಸಿಎಂ ನಿರಾಸಕ್ತಿ?

01:03 AM Nov 28, 2024 | Team Udayavani |

ಬೆಂಗಳೂರು: ಸಂಪುಟ ಪುನಾರಚನೆ ಅಥವಾ ವಿಸ್ತರಣೆಗೆ ಪಕ್ಷ, ಹೈಕಮಾಂಡ್‌ ತಯಾರಿದ್ದರೂ ಮುಖ್ಯಮಂತ್ರಿ ಸಿದ್ದರಾಮಯ್ಯ ಮಾತ್ರ ಹಿಂಜರಿಯುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ. ಉಪಚುನಾವಣೆ ಗೆಲುವಿನ ಬಳಿಕ ಬಿ. ನಾಗೇಂದ್ರ ಅವರ ಮರು ಸೇರ್ಪಡೆ ಯೋಚನೆಯಲ್ಲಿದ್ದ ಸಿದ್ದರಾಮಯ್ಯ ಮುಂದೆ ಇಡೀ ಸಂಪುಟ ಪುನಾರಚಿ ಸುವ ಆಲೋಚನೆ ಸುಳಿಯುತ್ತಿಲ್ಲ.

Advertisement

ಆದರೆ ಪುನಾರಚನೆ ಬಗ್ಗೆ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಸೇರಿದಂತೆ ಹಲವರು ಸುಳಿವು ನೀಡಿದ್ದು, ಕೆಲವು ಸಚಿವರೂ ದನಿಗೂಡಿಸಿದ್ದಾರೆ. ಚಳಿಗಾಲದ ಅಧಿವೇಶನದ ಬಳಿಕ ಸಂಪುಟ ಪುನಾರಚನೆ ಆಗುತ್ತದೆ ಎನ್ನುವ ಮಾತುಗಳು ಕಾಂಗ್ರೆಸ್‌ ಪಡಸಾಲೆಯಲ್ಲಿ ಇವೆ.

ಡಿ. 9ರಿಂದ 20ರ ವರೆಗೆ ಬೆಳಗಾವಿ ಅಧಿವೇಶನ, ಅನಂತರದ ಎರಡು ದಿನ ಮಂಡದ್ಯದಲ್ಲಿ ಅಖೀಲ ಭಾರತ ಮಟ್ಟದ ಸಾಹಿತ್ಯ ಸಮ್ಮೇಳನ, ಬಳಿಕ ಮತ್ತೆ ಬೆಳಗಾವಿಯಲ್ಲಿ ಎಐಸಿಸಿ ಅಧಿವೇಶನಗಳು ಇರುವುದರಿಂದ ಮುಖ್ಯಮಂತ್ರಿ ವ್ಯಸ್ತರಾಗಲಿದ್ದಾರೆ. ಇದೆಲ್ಲ ಮುಗಿಯುವ ವೇಳೆಗೆ ಜನವರಿ ಅಥವಾ ಫೆಬ್ರವರಿಯಲ್ಲಿ ಜಂಟಿ ಅಧಿವೇಶನ ಹಾಗೂ ಬಜೆಟ್‌ ಅಧಿವೇಶನಗಳು ಸಾಲಾಗಿ ಬರಲಿದ್ದು, ಅದರತ್ತ ಸಹ ಗಮನ ಹರಿಸಬೇಕಿದೆ.

ಜೇನುಗೂಡಿಗೆ ಕೈಹಾಕದಿರಲು ತೀರ್ಮಾನ
ಮೂರು ಕ್ಷೇತ್ರಗಳಲ್ಲೂ ಕಾಂಗ್ರೆಸ್‌ ಗೆದ್ದಿದೆ. ಇನ್ನು ಸರಕಾರ ರಚನೆಯಾಗಿ ಒಂದೂವರೆ ವರ್ಷವಷ್ಟೇ ಆಗಿರುವುದರಿಂದ ಸಂಪುಟದಲ್ಲಿ ಯಾವುದೇ ಹುದ್ದೆ ಖಾಲಿಯೂ ಇಲ್ಲ. ಪುನಾರಚನೆ ಮಾಡಬೇಕಾದರೆ ಒಂದಷ್ಟು ಸಚಿವರನ್ನು ಕೈಬಿಡಬೇಕು. ಜೇನುಗೂಡಿಗೆ ಕೈಹಾಕುವ ಬದಲು ಸುಮ್ಮನಿರುವುದು ಒಳಿತು ಎಂಬ ನಿರ್ಧಾರಕ್ಕೆ ಸಿದ್ದರಾಮಯ್ಯ ಬಂದಿದ್ದಾರೆ ಎಂದು ಅವರ ಆಪ್ತಮೂಲಗಳು ಹೇಳಿವೆ.

ಬಜೆಟ್‌ ತಯಾರಿಯತ್ತ ಚಿತ್ತ
ಒಂದೆಡೆ ಶಾಸಕರಿಗೆ ಅನುದಾನ ಸಿಗದ ಅಸಮಾಧಾನಗಳು ಗ್ಯಾರಂಟಿ ಯೋಜನೆಗಳತ್ತ ಹೊರಳುತ್ತಿದ್ದು, ಲೋಕಸಭೆ ಚುನಾವಣೆ, ಉಪ ಚುನಾವಣೆಗಳ ಬಳಿಕ ಸರಕಾರ ಗ್ಯಾರಂಟಿ ಯೋಜನೆಗಳನ್ನು ನಿಲ್ಲಿಸಲಿದೆ ಎಂಬ ವಿಪಕ್ಷಗಳ ಆರೋಪಗಳಿಗೆ ಪುಷ್ಟಿ ಕೊಟ್ಟಂತಾಗುತ್ತಿದೆ. ಸಾಲದ್ದಕ್ಕೆ ಇತ್ತೀಚೆಗೆ ಬಿಪಿಎಲ್‌ ಕಾರ್ಡ್‌ ರದ್ದತಿ ವಿಚಾರವು ವಿವಾದದ ಸ್ವರೂಪ ಪಡೆದಿದ್ದು, ಇದಕ್ಕೆಲ್ಲ ಇತಿಶ್ರೀ ಹಾಡಿ ಆಗಿದೆ. ಜತೆಗೆ ಮುಂದಿನ ಬಜೆಟ್‌ನಲ್ಲಾದರೂ ಶಾಸಕರಿಗೆ ಅನುದಾನಗಳನ್ನು ಒದಗಿಸಲೇಬೇಕಾದ ಅನಿವಾರ್ಯ ಇದ್ದು, ಸಂಪನ್ಮೂಲ ಕ್ರೋಡೀಕರಣದತ್ತ ಸಿಎಂ ಚಿತ್ತ ಹರಿಸಲಿದ್ದಾರೆ.

Advertisement

ಬಜೆಟ್‌ ಅನಂತರ ಸಂಪುಟ ಪುನಾರಚನೆ?
ಸದ್ಯಕ್ಕೆ ನಾಗೇಂದ್ರರನ್ನು ಸಂಪುಟಕ್ಕೆ ಸೇರಿಸಿಕೊಳ್ಳುವುದಷ್ಟೇ ಸಿದ್ದರಾಮಯ್ಯ ಮನಸ್ಸಿನಲ್ಲಿದೆ. ಬಜೆಟ್‌ ಅಧಿವೇಶನದ ಅನಂತರ ಸಂಪುಟ ಪುನಾರಚನೆ ಮಾಡುವ ಪ್ರಸ್ತಾವ ಚರ್ಚೆಗೆ ಬರುವ ಸಾಧ್ಯತೆ ಇದೆ. ಜತೆಗೆ ಹೈಕಮಾಂಡ್‌ ಬಳಿ ಸಂಪುಟ ಸೇರಬೇಕಾದವರ ಪಟ್ಟಿ ಸಿದ್ಧವಿರುವುದರಿಂದ ಹೈಕಮಾಂಡ್‌ಗೆ ಹೇಗೆ ಮನವರಿಕೆ ಮಾಡಿಕೊಡುತ್ತಾರೆ ಎಂಬುದಿನ್ನೂ ಸ್ಪಷ್ಟವಾಗಿಲ್ಲ.

ಏಕೆ ನಿರಾಸಕ್ತಿ?
1.ಸರಕಾರ ರಚನೆಯಾಗಿ ಈಗಷ್ಟೇ ಒಂದೂವರೆ ವರ್ಷ ಆಗಿದ್ದರಿಂದ ಇನ್ನಷ್ಟು ಕಾಯುವುದಕ್ಕೆ ಸಿಎಂ ಒಲವು
2.ಮುಡಾ, ವಾಲ್ಮೀಕಿ ಅಭಿವೃದ್ಧಿ ನಿಗಮ ಸೇರಿ ಹಲವು ಆರೋಪಗಳು ಇನ್ನೂ ಚಾಲ್ತಿಯಲ್ಲಿರುವುದರಿಂದ ಈ ನಿರ್ಧಾರ?
3.ಸಂಪುಟದಲ್ಲಿ ಸದ್ಯ ಯಾವುದೇ ಹುದ್ದೆ ಖಾಲಿ ಇಲ್ಲ. ಒಂದೊಮ್ಮೆ ವಿಸ್ತರಣೆ ಮಾಡಬೇಕಂದರೆ ನಾಗೇಂದ್ರ ಮಾತ್ರ ಸೇರ್ಪಡೆ ಸಾಧ್ಯತೆ
4.ಬಜೆಟ್‌ ತಯಾರಿಯತ್ತ ಸಿಎಂ ಸಿದ್ದರಾಮಯ್ಯ ಗಮನ, ಶಾಸಕರಿಗೆ ಅನುದಾನ ಒದಗಿಸಲು ಸಿಎಂ ಕಸರತ್ತು

Advertisement

Udayavani is now on Telegram. Click here to join our channel and stay updated with the latest news.

Next