ಬೆಂಗಳೂರು: ಸಾರ್ವಜನಿಕರಿಗೆ ರಾಜಭವನ ವೀಕ್ಷಣೆಗೆ ಮತ್ತೂಮ್ಮೆ ಅವಕಾಶ ಕಲ್ಪಿಸಲಾಗಿದ್ದು, ವಾರಾಂತ್ಯದ ಹಿನ್ನೆಲೆಯಲ್ಲಿ ಶನಿವಾರ-ಭಾನುವಾರ ಸಾವಿರಾರು ಮಂದಿ ಭೇಟಿ ನೀಡಿದ್ದಾರೆ. ರಾಜ್ಯ ಸರ್ಕಾರದ ಸಂವಿಧಾನ ಮುಖ್ಯಸ್ಥರಾದ ರಾಜ್ಯಪಾಲರ ಕಾರ್ಯ ಮತ್ತು ಆವಾಸ ಸ್ಥಾನವಾಗಿರುವ ರಾಜಭವನ “ಹೈ ಸೆಕ್ಯೂರಿಟಿ’ ಪ್ರದೇಶಗಳಲ್ಲೊಂದು. ಭದ್ರತೆಯ ದೃಷ್ಟಿಯಿಂದ ರಾಜಭವನಕ್ಕೆ ಸಾರ್ವಜನಿಕರ ಪ್ರವೇಶ ಹಾಗೂ ಭೇಟಿ ನಿಷೇಧವಿರುತ್ತದೆ.
ಆದರೆ, ಸಾಮಾನ್ಯ ಜನರಲ್ಲಿ ರಾಜಭವನದ ಕುರಿತು ಇರುವ ಕುತೂಹಲ ತಣಿಸಲು, ಶತಮಾನಕ್ಕೂ ಹೆಚ್ಚು ಇತಿಹಾಸವಿರುವ ಪಾರಂಪರಿಕ ಕಟ್ಟಡದ ವೈಭವ, ಇತಿಹಾಸ ಪರಿಚಯಿಸಲೆಂದು ಕಳೆದ ವರ್ಷ ಸ್ವಾತಂತ್ರ್ಯದಿನಾಚರಣೆ ಸಂದರ್ಭದಲ್ಲಿ 15 ದಿನಗಳ ಮಟ್ಟಿಗೆ ರಾಜ್ಯಪಾಲ ವಜುಭಾಯಿ ವಾಲಾ ಅವರು ಸಾರ್ವಜನಿಕ ಭೇಟಿಗೆ ಅವಕಾಶ ಕಲ್ಪಿಸಿಕೊಟ್ಟಿದ್ದರು. ಈ ಮತ್ತೂಮ್ಮೆ ಸಾರ್ವಜನಿಕ ವೀಕ್ಷಣೆ ಅವಕಾಶ ನೀಡಲಾಗಿದೆ.
ಉಚಿತ ಪ್ರವೇಶ – ನೋಂದಣಿ ಕಡ್ಡಾಯ: ಈ ಬಾರಿ ಆ.17ರಿಂದ 31ರವರೆಗೆ ಸಂಜೆ 4ರಿಂದ 7.30ರ ತನಕ ರಾಜಭವನಕ್ಕೆ ಸಾರ್ವಜನಿಕರ ಭೇಟಿ ನೀಡುವ ಅವಕಾಶವಿದ್ದು, ಇದಕ್ಕಾಗಿ ರಾಜಭವನ ಅಧಿಕೃತ ವೆಬ್‌ಸೈಟ್ //rajbhavan.kar.nic.in ನಲ್ಲಿ ಹೆಸರು, ಮೊಬೈಲ್ ಸಂಖ್ಯೆ ಇ-ಮೇಲ್ ಹಾಗೂ ಆಧಾರ್ ಸಂಖ್ಯೆಯನ್ನು ನೀಡಿ ಕಡ್ಡಾಯ ನೋಂದಣಿ ಮಾಡಿಕೊಳ್ಳಬೇಕು. ನೋಂದಣಿ ಬಳಿಕ ರಾಜಭವನದಿಂದ ಅಧಿಕೃತವಾಗಿ ನಿಮ್ಮ ಇ-ಮೇಲ್ ಅಥವಾ ಮೊಬೈಲ್ ನಂಬರ್‌ಗೆ ಯಾವ ದಿನ, ಎಷ್ಟು ಗಂಟೆಗೆ ವೀಕ್ಷಣೆಗೆ ಬರಬೇಕು ಎಂದು ಖಚಿತ ಪಡಿಸಲಾಗುತ್ತದೆ. ನೋಂದಣಿ ಹಾಗೂ ಪ್ರವೇಶ ಸಂಪೂರ್ಣ ಉಚಿತವಾಗಿರುತ್ತದೆ.
ಸಾವಿರಾರು ಮಂದಿ ಭೇಟಿ: ಶನಿವಾರ ಹಾಗೂ ಭಾನುವಾರ ಬೆಂಗಳೂರು ನಗರ ಮಾತ್ರವಲ್ಲದೇ ರಾಜ್ಯದ ನಾನಾ ಭಾಗಗಳಿಂದ ಆಗಮಿಸುವ ಸಾವಿರಾರು ಮಂದಿ ರಾಜಭವನಕ್ಕೆ ಭೇಟಿ ನೀಡಿ ಅಲ್ಲಿನ ಸೊಬಗನ್ನು ಕಣ್ತುಂಬಿಕೊಂಡಿದ್ದಾರೆ. 20 ಮಂದಿಯ ಒಂದು ತಂಡ ಮಾಡಿ ಇಡೀ ರಾಜಭವನ ಸುತ್ತಾಡಿಸಲಾಗುತ್ತದೆ. ಮಾಹಿತಿ ತಿಳಿಸಲು ಮಾಗದರ್ಶಕರನ್ನು (ಗೈಡ್) ನೇಮಕ ಮಾಡಲಾಗಿದೆ. ರಾಜಭವನದ ಗಾಜಿನ ಮನೆ, ಬ್ಯಾಂಕ್ವೆಟ್ ಹಾಲ್, ವಿಶೇಷ ಕೊಠಡಿ, ಉದ್ಯಾನ ವೀಕ್ಷಣೆ ಮಾಡಿ ರಾಜಭವನ ಐತಿಹಾಸ ಹಾಗೂ ಮಾಹಿತಿ ಕುರಿತು ಕಿರುಚಿತ್ರವನ್ನು ನೋಡಬಹುದಾಗಿದೆ. ಆನಂತರ ಕಾಫಿ, ಟೀ, ಹಾಲು, ಬಿಸ್ಕೆಟ್ ವಿತರಣೆ ವ್ಯವಸ್ಥೆಯನ್ನೂ ಮಾಡಲಾಗಿದೆ.