ಕಡಬ: ಗ್ರಾಮೀಣ ಭಾಗದ ಸರಕಾರಿ ಶಾಲೆಯಾದರೂ ಸ್ಥಳೀಯ ಜನರ ನೆರವಿನೊಂದಿಗೆ ವಿದ್ಯಾರ್ಥಿಗಳಿಗೆ ಉತ್ತಮ ಗುಣಮಟ್ಟದ ಶಿಕ್ಷಣ ನೀಡುತ್ತಿರುವ ಪಿಜಕಳ ಕಿರಿಯ ಪ್ರಾಥಮಿಕ ಶಾಲೆಯು ಮುಂದಿನ ದಿನಗಳಲ್ಲಿ ಪ್ರಾಥಮಿಕ ಶಾಲೆಯಾಗಿ ಪದೋನ್ನತಿ ಪಡೆಯಲಿ ಎಂದು ಶಾಸಕಿ ಶಕುಂತಳಾ ಟಿ. ಶೆಟ್ಟಿ ಅವರು ನುಡಿದರು. ಅವರು ಕಡಬದ ಪಿಜಕಳ ಸರಕಾರಿ ಕಿ.ಪ್ರಾ. ಶಾಲೆಯ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಶಾಲಾ ಆವರಣ ಗೋಡೆ ಉದ್ಘಾಟಿಸಿ ಮಾತನಾಡಿದರು.
ಬಳಿಕ ಜರಗಿದ ವಾರ್ಷಿಕೋತ್ಸವದ ಸಭಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಜಿ.ಪಂ. ಸದಸ್ಯ ಪಿ.ಪಿ. ವರ್ಗೀಸ್ ಅವರು ಶಾಲಾ ಚಟುವಟಿಕೆಗಳ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದರು. ಶಾಲಾ ಪ್ರಮುಖರ ಬೇಡಿಕೆಯಂತೆ ಶಾಲೆಗೆ ಕುಡಿಯುವ ನೀರಿಗಾಗಿ ಕೊಳವೆ ಬಾವಿ ಮತ್ತು ನೀರಿನ ಟ್ಯಾಂಕ್ ನಿರ್ಮಿಸಲು ಅನುದಾನ ಒದಗಿಸುವ ಭರವಸೆ ನೀಡಿದರು.
ತಾ.ಪಂ. ಸದಸ್ಯ ಫಝಲ್ ಕೋಡಿಂಬಾಳ ಅವರು ಅಧ್ಯಕ್ಷತೆ ವಹಿಸಿದ್ದರು. ಗ್ರಾ.ಪಂ. ಸದಸ್ಯರಾದ ಹರ್ಷ ಕೋಡಿ, ಸರೋಜಿನಿ ಆಚಾರ್ಯ, ಎಪಿಎಂಸಿ ಸದಸ್ಯೆ ಪುಲಸ್ತ್ಯಾ ರೈ, ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಪುತ್ತೂರು ತಾಲೂಕು ಅಧ್ಯಕ್ಷ ಸುರೇಶ್‌ಕುಮಾರ್ ಪಿ.ಎಂ., ಕಡಬ ಸರಕಾರಿ ಪ.ಪೂ. ಕಾಲೇಜಿನ ಉಪನ್ಯಾಸಕ ಹರಿಶಂಕರ ಕೆ.ಎಂ., ಕಡಬ ಶ್ರೀ ದುರ್ಗಾಂಬಿಕಾ ಅಮ್ಮನವರ ದೇವಸ್ಥಾನದ ವ್ಯವಸ್ಥಾಪನ ಸಮಿತಿಯ ಅಧ್ಯಕ್ಷ ಜನಾರ್ದನ ಗೌಡ ಪಣೆಮಜಲು, ನಿವೃತ್ತ ಮುಖ್ಯ ಶಿಕ್ಷಕರಾದ ಸಾಂತಪ್ಪ ಗೌಡ ಪಿಜಕಳ, ಸುಂದರ ಗೌಡ ಪಣೆಮಜಲು, ಶಾಲಾಭಿವೃದ್ಧಿ ಸಮಿತಿಯ ಮಾಜಿ ಅಧ್ಯಕ್ಷ ದಯಾನಂದ ಗೌಡ, ಸಿಆರ್‌ಪಿ ಕುಮಾರ್ ಅವರು ಅತಿಥಿಗಳಾಗಿ ಆಗಮಿಸಿದ್ದರು. ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷೆ ವಿಜಯಾ ಯತೀಂದ್ರ ಕುಮಾರ್, ಶಾಲಾ ನಾಯಕಿ ದಿವ್ಯಶ್ರೀ ಪಿ. ಉಪಸ್ಥಿತರಿದ್ದರು.
ನೂಜಿಬಾಳ್ತಿಲ ಪಿಡಿಒ ಆನಂದ ಗೌಡ ಅವರು ಸ್ವಾಗತಿಸಿ, ಮುಖ್ಯ ಶಿಕ್ಷಕಿ ಚೇತನಾ ವರದಿ ಮಂಡಿಸಿದರು. ಅಂಗನವಾಡಿ ಕಾರ್ಯಕರ್ತೆ ಗಂಗಮ್ಮ ಸ್ಪರ್ಧಾ ವಿಜೇತರ ಪಟ್ಟಿ ವಾಚಿಸಿದರು. ಸಚಿನ್ ಪಿಜಕಳ ನಿರೂಪಿಸಿ, ಆನಂದ ಕೋಂಕ್ಯಾಡಿ ವಂದಿಸಿದರು. ಸಭಾ ಕಾರ್ಯಕ್ರಮದ ಬಳಿಕ ಅಂಗನವಾಡಿ ಪುಟಾಣಿಗಳು, ಶಾಲಾ ವಿದ್ಯಾರ್ಥಿಗಳಿಂದ ವಿವಿಧ ಮನೋರಂಜನ ಕಾರ್ಯಕ್ರಮಗಳು ಜರಗಿದವು.
ಬಹುಮಾನ ವಿತರಣೆ, ಸಮ್ಮಾನ
ವಿವಿಧ ಸ್ಪರ್ಧಾ ವಿಜೇತರಾದ ಅಂಗನವಾಡಿ ಪುಟಾಣಿಗಳಿಗೆ, ಶಾಲಾ ವಿದ್ಯಾರ್ಥಿಗಳಿಗೆ, ಹಿರಿಯ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು. ಶಾಲೆಯ ಅಭಿವೃದ್ಧಿಯಲ್ಲಿ ಪ್ರಮುಖ ಪಾತ್ರ ವಹಿಸುತ್ತಿರುವ ಮುಖ್ಯಶಿಕ್ಷಕಿ ಚೇತನಾ ಹಾಗೂ ಗೌರವ ಶಿಕ್ಷಕಿ ಪವಿತ್ರಾ ಅವರನ್ನು ಊರವರು ಹಾಗೂ ಶಾಲಾಭಿವೃದ್ಧಿ ಸಮಿತಿಯ ವತಿಯಿಂದ ಸಮ್ಮಾನಿಸಿ ಗೌರವಿಸಲಾಯಿತು.