Advertisement
2008ರಲ್ಲಿ ಕ್ಷೇತ್ರ ಪುನರ್ ವಿಂಗಡನೆಯಾದ ನಂತರ ಎರಡು ಚುನಾವಣೆಯಲ್ಲಿ ಬಿಜೆಪಿಯ ಎಸ್.ಆರ್.ವಿಶ್ವನಾಥ್ ಶಾಸಕರಾಗಿ ಆಯ್ಕೆಯಾಗಿದ್ದಾರೆ. ಮೊದಲ ಅವಧಿಯಲ್ಲಿ ಆಡಳಿತ ಪಕ್ಷದ ಶಾಸಕರಾಗಿ ಸಾಕಷ್ಟು ಅನುದಾನ ತಂದು ಕೆಲಸ ಮಾಡಿದ್ದ ಅವರು, ಎರಡನೇ ಅವಧಿಯಲ್ಲಿ ಪ್ರತಿಪಕ್ಷದ ಶಾಸಕರಾಗಿ ಅಂದುಕೊಂಡಷ್ಟು ಕೆಲಸ ಮಾಡಿಲ್ಲ ಎಂಬುದು ಕ್ಷೇತ್ರದಲ್ಲಿ ಕೇಳಿಬರುತ್ತಿರುವ ಅಭಿಪ್ರಾಯ.
Related Articles
Advertisement
ಕ್ಷೇತ್ರ ವ್ಯಾಪ್ತಿಯ ನಗರ ಪ್ರದೇಶಕ್ಕೆ ಕಾವೇರಿ ನೀರು ಬರುತ್ತಿದ್ದು, ಹೊಸದಾಗಿ ಸೇರ್ಪಡೆಯಾಗಿರುವ ಹಳ್ಳಿಗಳಿಗೆ ಇನ್ನೂ ಕಾವೇರಿ ನೀರು ತಲುಪಿಲ್ಲ. ಬೋರ್‌ವೆಲ್‌ಗಳಿಂದಲೇ ನೀರು ಸರಬರಾಜು ಮಾಡಲಾಗುತ್ತಿದೆ. ಸಮಾಧಾನದ ಸಂಗತಿ ಎಂದರೆ ಹಳ್ಳಿಗಳಲ್ಲಿ ಶುದ್ಧ ಕುಡಿಯುವ ನೀರಿನ ಘಟಕಗಳ ಮೂಲಕ ನೀರು ಸರಬರಾಜು ಮಾಡಲಾಗುತ್ತಿದೆ.
ರಾಜಾನುಕುಂಟೆ, ಅಲ್ಲಾಳಸಂದ್ರಗಳಲ್ಲಿ ಫ್ಲೈಓವರ್ ಮಾಡಲಾಗಿದೆ. ನಗರ ಪ್ರದೇಶದ ಕೆರೆಗಳ ಅಭಿವೃದ್ಧಿ ಪಡಿಸಲಾಗಿದ್ದು, ಪುಟ್ಟೇನಹಳ್ಳಿ ಕೆರೆ ಅಭಿವೃದ್ಧಿ ಕಾಮಗಾರಿ ಈಗಲೂ ನಡೆಯುತ್ತಿದೆ. ಗ್ರಾಮೀಣ ಪ್ರದೇಶದಲ್ಲಿ ವಾಲ್ಮೀಕಿ ಭವನ, ಅಂಬೇಡ್ಕರ್ ಭ ವನ, ಕನಕ ಭವನ, ಸ್ತ್ರೀ ಶಕ್ತಿ ಭವನಗಳೇ ಗ್ರಾಮೀಣ ಭಾಗದ ಅಭಿವೃದ್ಧಿ ಮಾದರಿ.
ಕ್ಷೇತ್ರದಲ್ಲಿ ಪ್ರಾಥಮಿಕ ಶಾಲೆಯಿಂದ ಪಿಜಿವರೆಗೂ ಒಂದೇ ಕ್ಯಾಂಪಸ್‌ನಲ್ಲಿ ವಿದ್ಯಾಭ್ಯಾಸ ನಡೆಸಲು ಸರ್ಕಾರಿ ಕಾಲೇಜು ಅಭಿವೃದ್ಧಿ ಪಡಿಸಲಾಗಿದೆ. ಸರ್ಕಾರಿ ಆಸ್ಪತ್ರೆ ಕೂಡ ನವೀಕರಣಗೊಳಿಸುವ ಕೆಲಸ ನಡೆದಿದೆ. ಹಳೆಯ ಯಲಹಂಕ ಮತ್ತು ಯಲಹಂಕ ನ್ಯೂಟೌನ್‌ಗಳಿಗೆ ಸಾಕಷ್ಟು ವ್ಯತ್ಯಾಸ ಕಂಡುಬರುತ್ತದೆ. ಅರ್ಕಾವತಿ ನದಿ ಇದೇ ಕ್ಷೇತ್ರದಲ್ಲಿ ಹಾದು ಹೋಗಿದ್ದು, ನದಿ ಪುನಶ್ಚೇತನಕ್ಕೆ ಶಾಸಕರು ಪಾದಯಾತ್ರೆ ಮಾಡಿದರೂ ಯಾವುದೇ ಪ್ರಯೋಜನವಾಗಿಲ್ಲ.
ಹಿಂದಿನ ಫಲಿತಾಂಶ-ಎಸ್.ಆರ್. ವಿಶ್ವನಾಥ್ (ಬಿಜೆಪಿ)- 75,507
-ಬಿ.ಚಂದ್ರಪ್ಪ (ಜೆಡಿಎಸ್)- 57,110
-ಗೋಪಾಲಕೃಷ್ಣ ಎಂ.ಎನ್. (ಕಾಂಗ್ರೆಸ್)- 52,372 ಶಾಸಕರು ಏನಂತಾರೆ?
ಕಳೆದ ಹತ್ತು ವರ್ಷಗಳ ಅವಧಿಲ್ಲಿ ಕ್ಷೇತ್ರದಾದ್ಯಂತ ರಸ್ತೆ, ಕುಡಿಯುವ ನೀರು, ಶಿಕ್ಷಣ, ಆರೋಗ್ಯ ಕ್ಷೇತ್ರಗಳಿಗೆ ಆದ್ಯತೆ ನೀಡಿ ಕೆಲಸ ಮಾಡಲಾಗಿದೆ. ಗ್ರಾಮೀಣ ಪ್ರದೇಶದಲ್ಲಿ ಎಲ್ಲ ಹಳ್ಳಿಗಳಿಗೂ ಶುದ್ಧ ಕುಡಿಯುವ ನೀರಿನ ಘಟಕ ಸ್ಥಾಪನೆಯಾಗಿದೆ. ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ನಿರೀಕ್ಷಿಸಿದಷ್ಟು ಅನುದಾನ ಬಾರದ ಕಾರಣ ಅಂದುಕೊಂಡಷ್ಟು ಕೆಲಸ ಸಾಧ್ಯವಾಗಿಲ್ಲ.
-ಎಸ್.ಆರ್.ವಿಶ್ವನಾಥ್ ಕ್ಷೇತ್ರದ ಮಹಿಮೆ: ಯಲಹಂಕ ನಾಡಪ್ರಭು ಕೆಂಪೇಗೌಡರ ಜನ್ಮಭೂಮಿ. ಹೀಗಾಗಿ, ಕೆಂಪೇಗೌಡರ ವಂಶಸ್ಥರ ಕೋಟೆಯ ಅವಶೇಷಗಳು, ಕೆಂಪೇಗೌಡರ ಕಾಲದಲ್ಲಿ ನಿರ್ಮಾಣವಾದ ದೇವಾಲಯಗಳು ಈಗಲೂ ಇವೆ. ಈ ಭಾಗದಲ್ಲಿ ನಡೆಯುವ ಮಾಕಳಿ ಭೀಮೇಶ್ವರ ಜಾತ್ರೆ, ಮಧುರೆ ಶನಿಮಹಾತ್ಮ ಸ್ವಾಮಿ ದೇವಾಲಯ ಜಾತ್ರೆ ಇಲ್ಲಿ ಪ್ರಸಿದ್ಧಿ ಪಡೆದಿವೆ. ಒಂದೊಮ್ಮೆ ಬೆಂಗಳೂರಿಗೆ ಕುಡಿಯಲು ನೀರು ನೀಡಿದ್ದ ಹೆಸರಘಟ್ಟ ಕೆರೆ, ಸಾವಿರಾರು ಮಂದಿಗೆ ಉದ್ಯೋಗ ನೀಡಿರುವ ರೈಲ್ವೆ ಅಚ್ಚು ಮತ್ತು ಗಾಲಿ ಕಾರ್ಖಾನೆ ಈ ಕ್ಷೇತ್ರದಲ್ಲಿವೆ. ಕ್ಷೇತ್ರದ ಬೆಸ್ಟ್ ಏನು?: ಗ್ರಾಮೀಣ ಪ್ರದೇಶಗಳು ಸಾಕಷ್ಟು ಅಭಿವೃದ್ಧಿ ಕಂಡಿದ್ದು, ಕೊಳವೆ ಬಾವಿ ನೀರು ಪೂರೈಕೆಯಾಗುವ ಪ್ರದೇಶಗಳಲ್ಲಿ ಶುದ್ಧ ಕುಡಿಯುವ ನೀರಿನ ಘಟಕಗಳನ್ನು ಸ್ಥಾಪಿಸಲಾಗಿದೆ. ಪ್ರಾಥಮಿಕ ಶಾಲೆಯಿಂದ ಸ್ನಾತಕೋತ್ತರ ಪದವಿ ವರೆಗೂ ಒಂದೇ ಕ್ಯಾಂಪಸ್‌ನಲ್ಲಿ ವಿದ್ಯಾಭ್ಯಾಸ ನಡೆಸಲು ಸರ್ಕಾರಿ ಕಾಲೇಜು ಅಭಿವೃದ್ಧಿ ಪಡಿಸಲಾಗಿದೆ. ಕ್ಷೇತ್ರದ ದೊಡ್ಡ ಸಮಸ್ಯೆ?: ಗ್ರಾಮೀಣ ಪ್ರದೇಶದಲ್ಲಿ ಕೆರೆಗಳ ಅಭಿವೃದ್ಧಿಯಾಗಿಲ್ಲ. ಅರ್ಕಾವತಿ ಪುನಶ್ಚೇತನ ಕಾರ್ಯಗತವಾಗಿಲ್ಲ. ಹೊಸದಾಗಿ ಬಿಬಿಎಂಪಿಗೆ ಸೇರ್ಪಡೆಯಾಗಿರುವ ಪ್ರದೇಶಗಳಲ್ಲಿ ಮೂಲ ಸೌಕರ್ಯಗಳ ಕೊರತೆ ಇದೆ. ಹಳೇ ಯಲಹಂಕ ಪ್ರದೇಶದ ಕಿರಿದಾದ ರಸ್ತೆಗಳಿಂದ ಸಂಚಾರ ದಟ್ಟಣೆ ಸಮಸ್ಯೆ ತೀವ್ರವಾಗಿದೆ. ಆಕಾಂಕ್ಷಿಗಳು
-ಬಿಜೆಪಿ- ಎಸ್.ಆರ್. ವಿಶ್ವನಾಥ್
-ಕಾಂಗ್ರೆಸ್- ಗೋಪಾಕೃಷ್ಣ, ಕೇಶವ, ರಾಜಣ್ಣ, ವಿಧಾನಪರಿಷತ್ ಸದಸ್ಯ ನಾರಾಯಣಸ್ವಾಮಿ
-ಜೆಡಿಎಸ್- ನಿವೃತ್ತ ಎಸ್ಪಿ ಕೃಷ್ಣಪ್ಪ ಜನ ದನಿ
ವಿಶ್ವನಾಥ್ ಶಾಸಕರಾದ ಮೇಲೆ ಕ್ಷೇತ್ರದಲ್ಲಿ ಅಭಿವೃದ್ಧಿ ಮಾಡಿದ್ದಾರೆ. ರಸ್ತೆಗಳು, ಮೋರಿ ಸಮುದಾಯಭವನಗಳು, ಯಲಹಂಕ ಕೆರೆ ಅಭಿವೃದ್ಧಿ ಮಾಡಿದ್ದಾರೆ. ಹೇಳಿದ ಕೆಲಸ ಮಾಡುತ್ತಿದ್ದು, ಸಮಸ್ಯೆಗೆ ನೇರವಾಗಿ ಸ್ಪಂದಿಸುತ್ತಾರೆ.
-ಅಂಬರೀಷ್ ಹಳೇ ಯಲಹಂಕದಲ್ಲಿ ರಸ್ತೆ, ಸಮುದಾಯ ಭವನ, ಹೊಸ ಬಸ್ ನಿಲ್ದಾಣ, ಸರ್ಕಾರಿ ಆಸ್ಪತ್ರೆ ಅಭಿವೃದ್ಧಿ ಮಾಡಿದ್ದಾರೆ. ಹೌಸಿಂಗ್ ಬೋರ್ಡ್‌ನಿಂದ ಮನೆ ಕಟ್ಟಿಸಿಕೊಟ್ಟಿದ್ದಾರೆ. ಹಿಂದಿಗೆ ಹೋಲಿಸಿದರೆ ಅಪರಾಧ ಪ್ರಕರಣ ಕಡಿಮೆಯಾಗಿವೆ.
-ರವಿಶಂಕರ್ ಕ್ಷೇತ್ರಕ್ಕೆ ಹೊಸದಾಗಿ ಸೇರಿದ ಗ್ರಾಮಗಳಿಗೆ ಕಾವೇರಿ ನೀರು ಬರುವುದಿಲ್ಲ. ಬೋರ್‌ವೆಲ್ ಮೂಲಕ ನೀರು ಕೊಡುತ್ತಾರೆ. ನಮ್ಮದೇನಾದರೂ ಕೆಲಸ ಇದ್ದರೆ ನೇರವಾಗಿ ಶಾಸಕರ ಬಳಿ ಹೋಗುತ್ತೇವೆ. ರೌಡಿಸಂ ಕಡಿಮೆಯಾಗಿದೆ.
-ರಾಜು ನಮದು ಹಳ್ಳಿ. ಕುಡಿಯಲು ಬೋರ್‌ವೆಲ್ ನೀರು ಸಿಗುತ್ತಿದೆ. ರಸ್ತೆಗಳು ಟಾರ್ ಭಾಗ್ಯ ಕಂಡಿವೆ. ಯಾರ ಹತ್ತಿರವೂ ಸಮಸ್ಯೆ ಹೇಳಿಕೊಂಡು ಹೋಗುವುದಿಲ್ಲ. ಹೀಗಾಗಿ ಯಾರೇ ಬಂದರೂ ನಮಗೆ ತೊಂದರೆಯೂ ಇಲ್ಲ, ಅನುಕೂಲವೂ ಇಲ್ಲ.
-ತಾಯವ್ವ * ಶಂಕರ ಪಾಗೋಜಿ