Advertisement

ಸಾಂದರ್ಭಿಕ “ಸಮತೋಲಿತ ಬಜೆಟ್‌’

11:33 PM Feb 02, 2022 | Team Udayavani |

ಸಂಸದೀಯ ಪ್ರಜಾಪ್ರಭುತ್ವದಲ್ಲಿ ಬಜೆಟ್‌ಗಳು ಹಲವಾರು ಉದ್ದೇಶಗಳನ್ನು ಹೊಂದಿರುತ್ತವೆ. ಭಾಗಶಃ, ಅವು ವಾರ್ಷಿಕ ಹಣಕಾಸು ವರದಿಗಳಾಗಿರುತ್ತವೆ, ಇದು ವಾಡಿಕೆಯಾದರೂ ನಿರ್ಣಾಯಕವಾದುದು; ಅಲ್ಲದೇ ಅವು ನೀತಿ ಉದ್ದೇಶದ ವರದಿಗಳೂ ಆಗಿರುತ್ತವೆ. ಖಾಸಗಿ ವಲಯದಂತೆ, ಸರಕಾರಗಳು ತಮ್ಮ ಗ್ರಾಹಕರನ್ನು ಆಯ್ಕೆ ಮಾಡಲು ಸಾಧ್ಯವಿಲ್ಲ. ಸರಕಾರ ಎಲ್ಲರಿಗೂ ಸೇವೆ ಸಲ್ಲಿಸಬೇಕು. ಸರಕಾರವು “ಪ್ರಮುಖ ಸಾಮರ್ಥ್ಯಗಳ” ಮೇಲೆ ಗಮನ ಕೇಂದ್ರೀಕರಿಸುವ ಅವಕಾಶವನ್ನೂ ಹೊಂದಿಲ್ಲ – ಅದು ಸಂಸತ್ತು ನಿರೀಕ್ಷಿಸುವ ಎಲ್ಲವನ್ನೂ ಮಾಡಬೇಕು. ಸರಕಾ ರವು ಅನೇಕ ವಿಷಯಗಳನ್ನು ಉಚಿತವಾಗಿ ಒದಗಿಸುತ್ತದೆ. ಆದ್ದರಿಂದ ಬೇಡಿಕೆಯು ಯಾವುದೇ ಕಾರ್ಯಸಾಧ್ಯವಾದ ಪೂರೈಕೆ ಅಥವಾ ಸಾಮರ್ಥ್ಯಕ್ಕಿಂತ ಹೆಚ್ಚಾಗಿರುತ್ತದೆ. ಸರಕಾರ ತೆರಿಗೆಗಳನ್ನು ಸಂಗ್ರಹಿಸುತ್ತದೆ. ಅವುಗಳು ಅನಿವಾರ್ಯವಾದಷ್ಟು ಜನಪ್ರಿಯವಲ್ಲ. ಈ ಎಲ್ಲ ಕಾರಣಗಳಿಗಾಗಿ, ಬಜೆಟ್‌ ಸಿದ್ಧಪಡಿಸುವುದು ಅತ್ಯಂತ ಸಂಕೀರ್ಣ ವಾದ ಸಮತೋಲಿತ ಕೆಲಸವಾಗಿದೆ.

Advertisement

2022-23ರ ಬಜೆಟ್‌ ಈ ವಿಲಕ್ಷಣ ಸಂದರ್ಭಕ್ಕೆ ಸೂಕ್ತವಾಗಿದೆ. ಕೃಷಿ, ಆರೋಗ್ಯ, ಶಿಕ್ಷಣ ಮತ್ತು ಕಲ್ಯಾಣ ಕಾರ್ಯಕ್ರಮಗಳಿಗೆ ಬೆಂಬಲವನ್ನು ಮುಂದು ವರಿಸುತ್ತ ಎರಡನೇ ವರ್ಷವೂ ಸಾರ್ವಜನಿಕ ಹೂಡಿಕೆಯಲ್ಲಿ ಹೆಚ್ಚಳದ ಮೂಲಕ ಬೆಳವಣಿಗೆ ಮತ್ತು ಉದ್ಯೋಗವನ್ನು ಹೆಚ್ಚಿಸುವುದು ಇದರ ದೊಡ್ಡ ಧ್ಯೇಯವಾಗಿದೆ. ಬಂಡವಾಳ ವೆಚ್ಚದ ಬಜೆಟ್‌ ಅನ್ನು ಶೇ.35 ರಷ್ಟು ಹೆಚ್ಚಿಸಲಾಗಿದೆ. ಪ್ರಧಾನಮಂತ್ರಿ ಗತಿಶಕ್ತಿ ಕಾರ್ಯಕ್ರಮವು ಮೂಲ ಸೌಕರ್ಯದಲ್ಲಿ ಕೇವಲ ಪರಿಮಾಣಾತ್ಮಕ ವಿಸ್ತರಣೆಯ ಗುರಿಯನ್ನು ಹೊಂದಿಲ್ಲ, ಬದಲಿಗೆ ನಿಖರವಾದ ಯೋಜನೆಯ ಮೂಲಕ ಗುಣಾತ್ಮಕತೆಯಲ್ಲಿ ಹೆಚ್ಚಳದ ಉದ್ದೇಶವನ್ನೂ ಹೊಂದಿದೆ. ನಾವು ರಸ್ತೆ ಮತ್ತು ರೈಲು, ರೈಲು ಮತ್ತು ಮೆಟ್ರೋ, ಬಂದರು ಮತ್ತು ರಸ್ತೆ, ಇತ್ಯಾದಿಗಳ ನಡುವೆ ಸಮನ್ವಯದ ಕೊರತೆಯನ್ನು ಹೊಂದಿದ್ದೇವೆ. ಸಮಗ್ರ ಯೋಜನೆ ಮತ್ತು ಅನುಷ್ಠಾನಗೊಳಿಸುವಿಕೆಯು ದೇಶೀಯ ಉತ್ಪಾದಕತೆ ಮತ್ತು ರಫ್ತು ಸ್ಪರ್ಧಾತ್ಮಕತೆ ಯನ್ನು ಗಣನೀಯವಾಗಿ ಹೆಚ್ಚಿಸುತ್ತದೆ.

ಲಾಭದಾಯಕ ಉದ್ಯೋಗವನ್ನು ಸೃಷ್ಟಿಸುವುದು ಮತ್ತೊಂದು ಆದ್ಯತೆ ಯಾಗಿದೆ. ಬಂಡವಾಳ ವೆಚ್ಚದಲ್ಲಿನ ಹೆಚ್ಚಳವು ನೇರವಾಗಿ ಮತ್ತು ಪರೋಕ್ಷ ವಾಗಿ ಲಕ್ಷಾಂತರ ಉದ್ಯೋಗಗಳನ್ನು ಸೃಷ್ಟಿಸುತ್ತದೆ (ಇತರ ವಲಯಗಳ ಮೇಲೆ ಅದರ ಗುಣಕ ಪರಿಣಾಮದ ಮೂಲಕ). ಈ ಬಾರಿಯ ವೈಶಿಷ್ಟ್ಯ ವೆಂದರೆ, ರಾಜ್ಯಗಳಿಗೆ ಅವುಗಳ ಸಾಮಾನ್ಯ ಸಾಲದ ಮಿತಿಗೆ ಹೆಚ್ಚುವರಿಯಾಗಿ, ಬಂಡವಾಳ ವೆಚ್ಚಕ್ಕಾಗಿ 1 ಲಕ್ಷ ಕೋಟಿ ರೂ. ಗಳ ಬಡ್ಡಿ ರಹಿತ 50 ವರ್ಷಗಳ ಅವಧಿಯ ಸಾಲಗಳನ್ನು ಒದಗಿಸಿರುವುದು. ಎಂಎಸ್‌ಎಂಇಗಳಿಗೆ 2 ಲಕ್ಷ ಕೋಟಿ ಹೊಸ ಸಾಲ ನೀಡಲು ಸಾಲ ಖಾತ್ರಿ ಯೋಜನೆಯನ್ನು ಪರಿಷ್ಕರಿಸಲಾಗುತ್ತಿದೆ. ಆತಿಥ್ಯ, ಪ್ರವಾಸೋದ್ಯಮ ಮತ್ತು ಸಂಬಂಧಿತ (ಸಾಂಕ್ರಾಮಿಕ- ಸಂತ್ರಸ್ತ) ವಲಯಗಳಿಗೆ ಹೆಚ್ಚುವರಿ ಸಾಲವನ್ನು ಹೆಚ್ಚು ಯಶಸ್ವಿಯಾದ ತುರ್ತು ಸಾಲ ಖಾತ್ರಿ ಯೋಜನೆಯ ಮೂಲಕ ಒದಗಿಸಲಾಗುತ್ತಿದೆ. ಪ್ರಧಾನ ಮಂತ್ರಿ ಗ್ರಾಮ ಸಡಕ್‌ ಯೋಜನೆಯ ವೆಚ್ಚವನ್ನು ಶೇ.27ರಷ್ಟು ಹೆಚ್ಚಿಸಲಾಗಿದೆ. ಇದಲ್ಲದೆ, ಕೆಲವು ಆದ್ಯತೆಯ ಕ್ಷೇತ್ರಗಳಿಗೆ ಸಂಬಂಧಿಸಿದಂತೆ ರಾಜ್ಯಗಳು ತಮ್ಮ ಪಾಲನ್ನು ಪೂರೈಸಲು ಅವುಗಳಿಗೆ ಪೂರಕ ಆರ್ಥಿಕ ಬೆಂಬಲವನ್ನು ಒದಗಿಸಲಾಗುತ್ತದೆ.

ರಸಗೊಬ್ಬರ ಸಬ್ಸಿಡಿ ಮತ್ತು ಧಾನ್ಯ ಖರೀದಿ ಸೇರಿದಂತೆ ಕೃಷಿಗೆ ಬೆಂಬಲ ನೀಡಲು ಸಾಕಷ್ಟು ಅವಕಾಶಗಳನ್ನು ಕಲ್ಪಿಸಲಾಗಿದೆ. ಚಾಲ್ತಿಯಲ್ಲಿರುವ ರಾಷ್ಟ್ರೀಯ ಆರೋಗ್ಯ ಮಿಷನ್‌ ಮತ್ತು ಆಯುಷ್‌ ಕಾರ್ಯಕ್ರಮಗಳ ಹೊರತಾಗಿ, ಹೊಸ ಪಿಎಂ ಆತ್ಮನಿರ್ಭರ ಭಾರತ ಆರೋಗ್ಯ ಮೂಲ  ಸೌಕರ್ಯ ಮಿಷನ್‌ ಭಾರತದ ಆರೋಗ್ಯ ಕ್ಷೇತ್ರದ ಸಾಮರ್ಥ್ಯವನ್ನು ಶಾಶ್ವತ ವಾಗಿ ಮೇಲ್ದರ್ಜೆಗೈರಿಸುತ್ತದೆ. ಸಾಮಾನ್ಯ ಯೋಜನೆಗಳ ಮಾನದಂಡಗಳಿಗೆ ಹೊಂದಿಕೆಯಾಗದ ಯೋಜನೆಗಳಿಗಾಗಿ ಹೊಸ, ಹೊಂದಿಕೊಳ್ಳುವ, ಅಗತ್ಯ-ಆಧಾರಿತ “ಈಶಾನ್ಯಕ್ಕಾಗಿ ಪ್ರಧಾನಮಂತ್ರಿಯವರ ಅಭಿವೃದ್ಧಿ ಉಪಕ್ರಮ” ಪ್ರಾರಂಭಿಸಲಾಗಿದೆ. ಹಣಕಾಸು ಆಯೋಗದ ಶಿಫಾರಸುಗಳಿಗೆ ಅನುಗುಣವಾಗಿ, 130 ಕೇಂದ್ರ ಪ್ರಾಯೋಜಿತ ಯೋಜನೆಗಳನ್ನು ಪರಿಷ್ಕರಿಸಿ 65 ಯೋಜನೆಗಳಾಗಿ ಪುನಾರಚಿಸಲಾಗಿದೆ, ಇದು ಹೆಚ್ಚಿನ ನಮ್ಯತೆ ಮತ್ತು ಪರಿಣಾಮಕ್ಕೆ ಅನುವು ಮಾಡಿಕೊಡುತ್ತದೆ.

ಇಂದಿನ ಆರ್ಥಿಕ ಸಂಕಷ್ಟಗಳನ್ನು ನಿಭಾಯಿಸಿಕೊಂಡು, ನಾಳಿನ ನೀತಿ ಸಮಸ್ಯೆಗಳನ್ನು ಬಗೆಹರಿಸಲು ಬಜೆಟ್‌ ಅಡಿಪಾಯ ಹಾಕುತ್ತದೆ. ಇದು ವಿಶ್ವ ದರ್ಜೆಯ ಸ್ಥಳೀಯ ರೈಲ್ವೇ ತಂತ್ರಜ್ಞಾನ, ಕೃಷಿಗಾಗಿ ‘ಕಿಸಾನ್‌ ಡ್ರೋನ್‌ಗಳು’, ‘ಸೇವೆಯಾಗಿ ಡ್ರೋನ್‌ಗಳು’, ಡಿಜಿಟಲ್‌ ಆರೋಗ್ಯ ಮಾಹಿತಿ, ಟೆಲಿ ಮೆಡಿಸಿನ್‌, ಎಲೆಕ್ಟ್ರಾನಿಕ್‌ ಪಾಸ್‌ಪೋರ್ಟ್‌ಗಳು, ಡಿಜಿಟಲ್‌ ಕರೆನ್ಸಿ, ಸ್ವತ್ಛ ಸಾರ್ವ ಜನಿಕ ಸಾರಿಗೆ, ಬ್ಯಾಟರಿ ವಿನಿಮಯ, ಹಸುರು ಹೈಡ್ರೋಜನ್‌, ಕಲ್ಲಿದ್ದಲು ಅನಿಲೀಕರಣ ಮತ್ತು ಸಾರ್ವತ್ರಿಕ ಆಪ್ಟಿಕ್‌ ಫೈಬರ್‌ ಲಭ್ಯತೆ ಸೇರಿದಂತೆ 2047 ರ ಭಾರತಕ್ಕಾಗಿ ವ್ಯಾಪಕವಾಗಿ, ಎಚ್ಚರಿಕೆಯಿಂದ ರೂಪಿಸಿದ ನಿಧಿ ಹಂಚಿಕೆ ಮತ್ತು ನೀತಿಗಳನ್ನು ಒಳಗೊಂಡಿದೆ. ಕ್ರಿಪ್ಟೋ ಉಪಕರಣಗಳ ತೆರಿಗೆಯಲ್ಲಿ ಸ್ಪಷ್ಟತೆ, ಲೋಪದೋಷಗಳನ್ನು ನಿವಾರಿಸುವುದು ಮತ್ತು ಎಸ್‌ಇಝಡ್‌ಗಳಕಸ್ಟಮ್ಸ್ ಆಡಳಿತದ ಆಧುನೀಕರಣವು ಬಜೆಟ್‌ನ ಪ್ರಮುಖ ಲಕ್ಷಣಗಳಾಗಿವೆ.

Advertisement

ದಾರ್ಶನಿಕ ಸಿ. ಸುಬ್ರಹ್ಮಣ್ಯ ಭಾರತಿ ಅವರು ತಮ್ಮ “ಭಾರತ ದೇಶಂ” ಕವಿತೆಯಲ್ಲಿ, ಬಂಗಾಲ ಕೊಲ್ಲಿಗೆ ಸೇರುವ ಹೆಚ್ಚುವರಿ ನೀರಿನಲ್ಲಿ ಮಧ್ಯ ಭಾರತ ದಲ್ಲಿ ಬೆಳೆಗಳನ್ನು ಬೆಳೆಯುವ ಕನಸು ಕಂಡಿದ್ದರು. ಅವರು 1921ರಲ್ಲಿ ನಿಧನ ಹೊಂದಿದರು. ಈಗ ನೂರು ವರ್ಷಗಳ ಅನಂತರ ಕೆನ್‌-ಬೆಟ್ವಾ ಯೋಜನೆ ಯ ಮೂಲಕ ಮೊದಲ ನದಿ ಜೋಡಣೆ ಯೋಜನೆ ಪ್ರಾರಂಭವಾಗಿದೆ.

ಸ್ಥೂಲ-ಆರ್ಥಿಕ ಸ್ಥಿರತೆಯನ್ನು ಕಾಪಾಡಲು ಇವೆಲ್ಲವನ್ನೂ ಒಂದು ಎಚ್ಚರಿಕೆಯ ವಿತ್ತೀಯ ನೀತಿಯೊಂದಿಗೆ ಸಂಯೋಜಿಸಲಾಗಿದೆ. ಸಾಂಕ್ರಾ ಮಿಕ- ಸಂಬಂಧಿತ ಖರ್ಚು ಮತ್ತು ಬಂಡವಾಳ ಹಿಂದೆಗೆತ ಕೊರತೆಗಳ ಹೊರತಾಗಿಯೂ, ಹೆಚ್ಚಿನ ಆದಾಯದ ಬೆಳವಣಿಗೆ ಮತ್ತು ಬಿಗಿಯಾದ ವೆಚ್ಚ ನಿಯಂತ್ರಣವು 2021-22ರ ವಿತ್ತೀಯ ಕೊರತೆಯು ಜಿಡಿಪಿಯ ಶೇ. 6.9ರಷ್ಟರಲ್ಲಿ ಇರುವಂತೆ ಮಾಡಿದೆ. ಇದು ಒಂದು ವರ್ಷದ ವಿತ್ತೀಯ ಕೊರತೆಯಲ್ಲಿ ಅತೀ ದೊಡ್ಡ ಕಡಿತವಾಗಿದೆ. ಮುಂದಿನ ವರ್ಷ, ಕೊರತೆಯು ಜಿಡಿಪಿಯ ಶೇ. 6.4ರಷ್ಟಿರಲಿದೆ ಎಂದು ನಿರೀಕ್ಷಿಸಲಾಗಿದೆ.

ಬಂಡವಾಳ ವೆಚ್ಚಕ್ಕಾಗಿ ರಾಜ್ಯಗಳಿಗೆ ವಿಶೇಷ ವರ್ಗಾವಣೆಗಳನ್ನು ಹೊರತುಪಡಿಸಿದರೆ, ವಿತ್ತೀಯ ಕೊರತೆಯು ಕೇವಲ ಶೇ. 6.0ರಷ್ಟಿದೆ ಎಂಬುದು ಗಮನಾರ್ಹ ವಾಗಿದೆ. ಆದಾಯ ಕೊರತೆಯು ಶೇ. 4.7ರಿಂದ 3.8ಕ್ಕೆ ತೀವ್ರವಾಗಿ ಕುಸಿಯುತ್ತದೆ ಎಂದು ಅಂದಾಜಿಸಲಾಗಿದೆ. ಹೊಸ ತೆರಿಗೆಗಳನ್ನು ವಿಧಿಸದೆಯೇ, 2020-21ರ ಅಂಕಿಅಂಶ ಶೇ. 9.2ರಿಂದ 2025-26ರ ವೇಳೆಗೆ ಜಿಡಿಪಿಯ ಶೇ. 4.5 ಅನ್ನು ತಲುಪುವ ಕಳೆದ ಬಜೆಟ್‌ನ ಘೋಷಣೆಗೆ ಈ ಬಜೆಟ್‌ ಬದ್ಧವಾಗಿದೆ.

ಅರ್ಥಶಾಸ್ತ್ರದಲ್ಲಿ, ಸಮತೋಲಿತ ಬಜೆಟ್‌ ಎಂದರೆ ಖರ್ಚು ಆದಾಯಕ್ಕೆ ಸಮನಾಗಿರುವುದು. ಆದರೆ 2022-23ರ ಬಜೆಟ್‌ ವಿಭಿನ್ನ ಅರ್ಥದಲ್ಲಿ ಸಮತೋಲಿತ ಬಜೆಟ್‌ ಎನಿಸಿದೆ. ಭವಿಷ್ಯದ ದೃಷ್ಟಿಕೋನ, ವಿವೇಕಯುತ ಮಹತ್ವಾಕಾಂಕ್ಷೆಯೊಂದಿಗೆ ವರ್ತಮಾನದಲ್ಲಿ ಕ್ರಿಯೆಯನ್ನು ಸಮತೋಲನಗೊಳಿಸುವುದು.

– ಟಿ.ವಿ.ಸೋಮನಾಥನ್‌,
ಕಾರ್ಯದರ್ಶಿ, ಕೇಂದ್ರ ಹಣಕಾಸು ಸಚಿವಾಲಯ

Advertisement

Udayavani is now on Telegram. Click here to join our channel and stay updated with the latest news.

Next