ಮುಂಬಯಿ, ಜೂ. 27: ನಗರದಲ್ಲಿ ಕೋವಿಡ್-19 ಪ್ರಕರಣಗಳು ಕಡಿಮೆಯಾಗುವುದರೊಂದಿಗೆ, ಆಸ್ಪತ್ರೆಗಳಲ್ಲಿ ಖಾಲಿ ಇರುವ ಹಾಸಿಗೆಗಳ ಸಂಖ್ಯೆ ಜೂನ್ ಮೊದಲ ವಾರಕ್ಕೆ ಹೋಲಿಸಿದರೆ ಪ್ರಸ್ತುತ ಶೇ. 18ರಷ್ಟು ಹೆಚ್ಚಾಗಿದೆ ಎಂದು ಮುಂಬಯಿ ಮಹಾನಗರ ಪಾಲಿಕೆಯ ಅಂಕಿಅಂಶಗಳು ತಿಳಿಸಿವೆ.
ಅಲ್ಲದೆ ಬಿಎಂಸಿ ನಡೆಸುವ ಆಸ್ಪತ್ರೆಗಳಲ್ಲಿ ಸೋಂಕಿತರ ಸಂಖ್ಯೆಯಲ್ಲೂ ಇಳಿಕೆ ಕಂಡುಬಂದಿದೆ. ಜೂನ್ 6ರಂದು ಕೋವಿಡ್ ಆಸ್ಪತ್ರೆಗಳು ಮತ್ತು ಕೊರೊನಾ ಹೆಲ್ಸತ್ ಸೆಂಟರ್‌ಗಳಲ್ಲಿ ಸೋಂಕಿತರಿಗೆ ಒಟ್ಟು 9,092 ಹಾಸಿಗೆಗಳನ್ನು ಕಾಯ್ದಿರಿಸಲಾಗಿತ್ತು. ಈ ಪೈಕಿ 8,570 ಹಾಸಿಗೆಗಳು ಭರ್ತಿಯಾಗಿದ್ದು, 522 ಹಾಸಿಗೆಗಳು ಖಾಲಿ ಇವೆ. ಪ್ರಕರಣಗಳ ಏರಿಕೆಯ ನಿರೀಕ್ಷೆಯಲ್ಲಿ, ಬಿಎಂಸಿ ಕಳೆದ 18 ದಿನಗಳಲ್ಲಿ ಹಾಸಿಗೆಯ ಸಂಖ್ಯೆಯನ್ನು 3,000ಕ್ಕೆ ಹೆಚ್ಚಿಸಿದೆ. ಪ್ರಸ್ತುತ ಬಿಎಂಸಿಯ ಈ ಆಸ್ಪತ್ರೆಗಳಲ್ಲಿ 12,130 ಹಾಸಿಗೆಗಳಿದ್ದು, ಅದರಲ್ಲಿ 2,923 ಹಾಸಿಗೆಗಳು ಲಭ್ಯವಿದೆ.
ಹಾಸಿಗೆಗಳ ಸಂಖ್ಯೆಯಲ್ಲೂ ಹೆಚ್ಚಳ : ವೇಗವಾಗಿ ಚೇತರಿಕೆ ದರ ಮತ್ತು ಕಡಿಮೆ ಪ್ರಕರಣಗಳೊಂದಿಗೆ ನಗರದಲ್ಲಿ ಈಗ ಹೆಚ್ಚಿನ ಹಾಸಿಗೆಗಳು ಲಭ್ಯವಿದೆ. ಅನೇಕ ಸೋಂಕಿತರು ವಿಶೇಷವಾಗಿ ವೆಂಟಿಲೇಟರ್ ಬೆಂಬಲದ ಅಗ್ಯವಿರುವವರನ್ನು ಕೋವಿಡ್ ಆಸ್ಪತ್ರೆಗಳಿಗೆ ಹಿಂದೆಯೇ ದಾಖಲಿಸಲಾಗಿತ್ತು, ಇಂತಹ ಗಂಭೀರ ಸೋಂಕಿತರ ಸಂಖ್ಯೆಯೂ ಪ್ರಸ್ತುತ ಕಡಿಮೆಯಾಗುತ್ತಿದೆ ಎಂದು ರಾಜ್ಯದ ಕೋವಿಡ್ -19 ಕಾರ್ಯಪಡೆಯ ಸದಸ್ಯ ಡಾ| ಶಶಾಂಕ್ ಜೋಶಿ ಹೇಳಿದರು. ಖಾಲಿ ಇರುವ ಹಾಸಿಗೆಗಳಲ್ಲಿ ಹೆಚ್ಚಿನವು ತೀವ್ರ ನಿಗಾ ಘಟಕದಲ್ಲಿ (ಐಸಿಯು) ಇದ್ದು, ಅದರ ಸಾಮರ್ಥ್ಯವನ್ನು ಇತ್ತೀಚೆಗೆ 1,102 ಹಾಸಿಗೆಗಳಿಂದ 1,362ಕ್ಕೆ ಹೆಚ್ಚಿಸಲಾಗಿದೆ. ಜೂನ್ 24ರ ಹೊತ್ತಿಗೆ, 108 ಐಸಿಯು ಹಾಸಿಗೆಗಳು (ಶೇ. 7.9) ಲಭ್ಯವಿತ್ತು. ಪರೇಲ್‌ನ ಕೆಇಎಂ ಆಸ್ಪತ್ರೆಯ ಡೀನ್ ಡಾ| ಹೇಮಂತ್ ದೇಶ್ಮುಖ್ ಅವರು ಒಟ್ಟು ಹಾಸಿಗೆಗಳಲ್ಲಿ ಶೇ. 25ರಷ್ಟು ಖಾಲಿಯಾಗಿಲ್ಲ ಎಂದು ತಿಳಿಸಿದ್ದಾರೆ.
ಸೋಂಕು ಪ್ರಕರಣದ ಒತ್ತಡ ಕಡಿಮೆಯಾಗಿದೆ : ಆಸ್ಪತ್ರೆಯಲ್ಲಿ ಸೋಂಕು ಪ್ರಕರಣಗಳ ಒತ್ತಡ ಕಡಿಮೆಯಾಗಿದೆ ಎಂದು ಲೋಕಮಾನ್ಯ ತಿಲಕ್ ಜನರಲ್ ಆಸ್ಪತ್ರೆಯ ಉಸ್ತುವಾರಿ ಡಾ| ರಮೇಶ್ ಭರ್ಮಲ್ ಅವರು ಹೇಳಿದ್ದಾರೆ. ನಾವು ಹೆಚ್ಚಿನ ಹಾಸಿಗೆಗಳನ್ನು ವ್ಯವಸ್ಥೆ ಮಾಡಿದ್ದು. ಸದ್ಯ ಪರಿಸ್ಥಿತಿ ಮೊದಲಿಗಿಂತ ಉತ್ತಮವಾಗಿದೆ. ಈಗ ನಾವು ಪ್ರತಿದಿನ 30-40 ಹಾಸಿಗೆಗಳನ್ನು ಖಾಲಿ ಹೊಂದಿದ್ದೇವೆ ಎಂದು ಅವರು ಹೇಳಿದರು. ಪ್ರಸ್ತುತ 5,901 ಮಂದಿ ಸೋಂಕಿತರು ಆಮ್ಲಜನಕ ಸೌಲಭ್ಯ ಹೊಂದಿರುವ ಹಾಸಿಗೆಗಳಲ್ಲಿದ್ದಾರೆ ಎಂದು ಬಿಎಂಸಿಯ ಅಂಕಿ ಅಂಶಗಳು ತಿಳಿಸಿದೆ.