Advertisement

ಬಾಪೂಜಿ ಸೇವಾ ಕೇಂದ್ರಗಳಲ್ಲಿನ ಆನ್‌ಲೈನ್‌ ಸೇವೆಗಳಿಗೆ “ಕತ್ತರಿ’ ​​​​​

06:15 AM Oct 20, 2018 | |

ಬೆಂಗಳೂರು: ರಾಜ್ಯದ ಗ್ರಾಮ ಪಂಚಾಯಿತಿಗಳಲ್ಲಿ ಬಾಪೂಜಿ ಸೇವಾ ಕೇಂದ್ರಗಳ ಮೂಲಕ ಹಳ್ಳಿಯ ಜನತೆಗೆ ಆನ್‌ಲೈನ್‌ನಲ್ಲಿ ಒದಗಿಸಲಾಗುತ್ತಿದ್ದ ಸೇವೆಗಳಿಗೆ “ಕತ್ತರಿ’ ಬಿದ್ದಿದೆ. ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್‌ ಇಲಾಖೆಯ 43 ಸೇವೆಗಳ ಸಂಖ್ಯೆಯನ್ನು 25ಕ್ಕೆ ಇಳಿಸಲಾಗಿದೆ.

Advertisement

ಬಾಪೂಜಿ ಸೇವಾ ಕೇಂದ್ರಗಳ ಮೂಲಕ ಸದ್ಯ ಒದಗಿಸಲಾಗುತ್ತಿರುವ 43 ಸೇವೆಗಳ ಪೈಕಿ ಕೆಲವೊಂದು ಫ‌ಲಾನುಭವಿ ಸಂಬಂಧಿತ, ತೆರಿಗೆ ಪಾವತಿ ಸಂಬಂಧಿತ ಸೇವೆಗಳು ಆಗಿರುವುದರಿಂದ ಹಾಗೂ ಕೆಲವೊಂದು ಸೇವೆಗಳನ್ನು ಆನ್‌ಲೈನ್‌ ಮೂಲಕ ಒದಗಿಸಲು ಗ್ರಾಪಂಗಳಿಂದ ಸಾಧ್ಯವಿಲ್ಲದಿರುವುದರಿಂದ ಸೇವೆಗಳ ಸಂಖ್ಯೆಯನ್ನು ಪರಿಷ್ಕರಿಸಲು ಇಲಾಖೆ ಮುಂದಾಗಿದೆ.

ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆಯ (ಇ-ಆಡಳಿತ) ಅಪರ ಮುಖ್ಯ ಕಾರ್ಯದರ್ಶಿಗಳ ಅಧ್ಯಕ್ಷತೆಯಲ್ಲಿ ಬಾಪೂಜಿ ಸೇವಾ ಕೇಂದ್ರಗಳಲ್ಲಿನ ಸೇವೆಗಳನ್ನು ಪರಿಷ್ಕರಿಸುವ ಬಗ್ಗೆ ತೀರ್ಮಾನ ತೆಗೆದುಕೊಳ್ಳಲಾಗಿತ್ತು. ಅದರಂತೆ, ಬಾಪೂಜಿ ಸೇವಾ ಕೇಂದ್ರಗಳಲ್ಲಿ ಉಂಟಾಗುತ್ತಿರುವ ಸಮಸ್ಯೆಗಳಿಗೆ ಸಂಬಂಧಿಸಿದಂತೆ ಗ್ರಾಮೀಣಾಭಿವೃದ್ಧಿ ಇಲಾಖೆ ಪ್ರಧಾನ ಕಾರ್ಯದರ್ಶಿಯವರ ಅಧ್ಯಕ್ಷತೆಯಲ್ಲಿ ಇತ್ತೀಚೆಗೆ ನಡೆದ ಸಭೆಯಲ್ಲಿ ಸೇವೆಗಳನ್ನು ಪರಿಷ್ಕರಿಸಲಾಗಿದೆ.

ಹಾಗಾಗಿ, ಬಾಪೂಜಿ ಸೇವಾ ಕೇಂದ್ರಗಳಲ್ಲಿ ಒದಗಿಸಲಾಗುತ್ತಿದ್ದ ಗ್ರಾಮೀಣಾಭಿವೃದ್ಧಿ ಇಲಾಖೆಗೆ ಸಂಬಂಧಿಸಿದ 43 ಸೇವೆಗಳನ್ನು ಇದೀಗ 25 ಸೇವೆಗಳನ್ನಾಗಿ ಪರಿಷ್ಕರಿಸಲಾಗಿದೆ. ಈ ಸಂಬಂಧ ತಂತ್ರಾಂಶದಲ್ಲಿ ಸೂಕ್ತ ಮಾರ್ಪಾಡುಗಳನ್ನು ಮಾಡಿಕೊಳ್ಳಲು ಎನ್‌ಐಸಿಗೆ ಸೂಚಿಸಲಾಗಿದೆ. ಪರಿಷ್ಕೃತ ಸೇವೆಗಳನ್ನು ಕಡ್ಡಾಯವಾಗಿ ಇ-ಸ್ವತ್ತು ತಂತ್ರಾಂಶದ ಫಾರಂ-9 ಮತ್ತು ಫಾರಂ 11ಎ ಮಾದರಿಯಲ್ಲಿ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಡಿಜಿಟಲ್‌ ಸಹಿಯೊಂದಿಗೆ ವಿತರಿಸಲು ತೀರ್ಮಾನಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಗ್ರಾಮೀಣ ಜನತೆಯು ತಮ್ಮ ಸಾಮಾಜಿಕ, ಶೈಕ್ಷಣಿಕ, ವಾಣಿಜ್ಯ ಮತ್ತು ಕೃಷಿ ಚಟುವಟಿಕೆಗಳಿಗಾಗಿ ವಿವಿಧ ಇಲಾಖೆಗಳಿಂದ ಹಲವಾರು ದಾಖಲೆಗಳನ್ನು ಪಡೆದುಕೊಳ್ಳುವ ಅವಶ್ಯಕತೆ ಇರುತ್ತದೆ. ಈ ದಾಖಲೆಗಳನ್ನು ತ್ವರಿತವಾಗಿ ಒಂದೇ ಸೂರಿನಡಿ ಒದಗಿಸಲು 2016ರಲ್ಲಿ ರಾಜ್ಯ ಸರ್ಕಾರ ನಿರ್ಧರಿಸಿತ್ತು. ಅದರಂತೆ, ಗ್ರಾಮೀಣಾಭಿವೃದ್ಧಿ ಇಲಾಖೆಯ 43 ಸೇವೆಗಳು, ಕಂದಾಯ ಇಲಾಖೆಯ 40 ಹಾಗೂ ಇತರ 17 ಸೇವೆಗಳನ್ನು ಸೇರಿಸಿ ಒಟ್ಟು ವಿವಿಧ 100 ಸೇವೆಗಳನ್ನು ಆನ್‌ಲೈನ್‌ ಮೂಲಕ ಒದಗಿಸಲು ಗ್ರಾಪಂಗಳಲ್ಲಿ “100-ಬಾಪೂಜಿ ಸೇವಾ ಕೇಂದ್ರ’ಗಳನ್ನು ಸ್ಥಾಪಿಸಲಾಗಿತ್ತು.

Advertisement

ಅದಕ್ಕಾಗಿ ಮೊದಲ ಹಂತದಲ್ಲಿ 2 ಸಾವಿರ, ನಂತರ 3,141  ಸೇರಿ ಒಟ್ಟು 5,141 ಗ್ರಾಪಂಗಳಲ್ಲಿ ಬಾಪೂಜಿ ಸೇವಾ ಕೇಂದ್ರಗಳನ್ನು ಸ್ಥಾಪಿಸಲಾಗಿದೆ. ಅಲ್ಲದೆ, ಈ ವರ್ಷದ ಆರಂಭದಲ್ಲಿ 535 ಗ್ರಾಪಂಗಳನ್ನು ಬಾಪೂಜಿ ಸೇವಾ ಕೇಂದ್ರಗಳ ವ್ಯಾಪ್ತಿಗೆ ಸೇರಿಸಲಾಗಿದೆ. ಈ ಕೇಂದ್ರಗಳಲ್ಲಿ ಗ್ರಾಮೀಣಾಭಿವೃದ್ಧಿ ಇಲಾಖೆಯ 43 ಸೇವೆಗಳನ್ನು ನೀಡಲಾಗುತ್ತಿತ್ತು. ಹೆಚ್ಚು ಜನರಿಗೆ ಅನುಕೂಲವಾಗಲಿ ಎಂಬ ಉದ್ದೇಶದಿಂದ ಕಂದಾಯ ಇಲಾಖೆಯ ಮತ್ತು ಇತರ ಕೆಲವು ಸೇವೆಗಳನ್ನೂ ಸಹ ಸೇರಿಸಲಾಗಿತ್ತು. ಈಗ ಗ್ರಾಮೀಣಾಭಿವೃದ್ಧಿ ಇಲಾಖೆಯ ಸೇವೆಗಳನ್ನು ಪರಿಷ್ಕರಿಸಲಾಗುತ್ತಿದೆ. ಇದರಿಂದ ಜನರಿಗೆ ಯಾವುದೇ ಅನಾನೂಕೂಲ ಆಗುವುದಿಲ್ಲ. ಬದಲಿಗೆ ಒಳ್ಳೆಯದೇ ಆಗುತ್ತದೆ ಎಂದು ಅಧಿಕಾರಿಗಳು ಸ್ಪಷ್ಟನೆ ನೀಡಿದ್ದಾರೆ.

ಯಾವ್ಯಾವ ಸೇವೆಗಳು:
ವಸತಿ ಮತ್ತು ವಾಣಿಜ್ಯ ಕಟ್ಟಡದ ನಿರ್ಮಾಣ ಅನುಮತಿ ಪತ್ರ, ಕಾಮಗಾರಿ ಮುಕ್ತಾಯ ಪ್ರಮಾಣಪತ್ರ, ಆಸ್ತಿ ತೆರಿಗೆ ಪಾವತಿ, ಮನ್ನಾ, ಭೂಪರಿವರ್ತನೆ ಅರ್ಜಿ, ನೀರಿನ ಸಂಪರ್ಕ ಮತ್ತು ಶುಲ್ಕ ಪಾವತಿ ಅರ್ಜಿ, ವಿಶೇಷ ಘಟಕ ಯೋಜನೆಗಳ ಅರ್ಜಿ, ವಸತಿ, ಉಚಿತ ನಿವೇಶನ ಪಡೆಯಲು ಅರ್ಜಿ, ಉದ್ಯೋಗ ಖಾತರಿ ಯೋಜನೆಯಡಿ ಕೆಲಸಕ್ಕೆ ಅರ್ಜಿ, ವ್ಯಾಪಾರ ಪರವಾನಿಗೆ ಮತ್ತು ಅದರ ನವೀಕರಣಕ್ಕೆ ಅರ್ಜಿ, ಜನಸಂಖ್ಯೆ, ಬೆಳೆ, ಜಾನುವಾರು ಗಣತಿ, ಬಿಪಿಎಲ್‌ ಪಟ್ಟಿಗೆ ಅರ್ಜಿ ಈ ರೀತಿ ಹಳ್ಳಿಗಳಲ್ಲಿ ಸಾರ್ವಜನಿಕರಿಗೆ ದಿನನಿತ್ಯದ ಬದುಕಿನಲ್ಲಿ ತುರ್ತಾಗಿ ಬೇಕಾಗುವ ತೀರಾ ಅನಿವಾರ್ಯ ಮತ್ತು ಅವಶ್ಯಕ ವಿವಿಧ 43 ಸೇವೆಗಳನ್ನು ಒದಗಿಸಲಾಗುತ್ತಿತ್ತು, ಅದರಲ್ಲಿ ಇದೀಗ ಕೆಲವು ಸೇವೆಗಳನ್ನು ತೆಗೆಯಲಾಗಿದೆ.

ಬಾಪೂಜಿ ಸೇವಾ ಕೇಂದ್ರಗಳಲ್ಲಿ ನೀಡಲಾಗುತ್ತಿದ್ದ ಗ್ರಾಮೀಣಾಭಿವೃದ್ಧಿ ಇಲಾಖೆಯ 43 ಸೇವೆಗಳನ್ನು ಪರಿಷ್ಕರಿಸಲಾಗಿದೆ. ಕೆಲವೊಂದು ಸೇವೆಗಳು, ನಿಜವಾಗಿ ಸೇವೆಗಳಾಗಿರಲಿಲ್ಲ, ಅವುಗಳಿಂದ ಕಾರ್ಯದ ಒತ್ತಡ ಹೆಚ್ಚಾಗುತ್ತಿತ್ತು. ಅದಕ್ಕಾಗಿ ಕೇವಲ ಸೇವಾ ರೂಪದ ಸೇವೆಗಳನ್ನು ಉಳಿಸಿಕೊಂಡು, ಉಳಿದವುಗಳನ್ನು ಕಡಿತ ಮಾಡಲಾಗಿದೆ.
– ಶ್ರೀನಿವಾಸ ಮಾರಂಗಪ್ಪನವರ್‌, ನಿರ್ದೇಶಕ, ಇ-ಆಡಳಿತ.

– ರಫೀಕ್‌ ಅಹ್ಮದ್‌

Advertisement

Udayavani is now on Telegram. Click here to join our channel and stay updated with the latest news.

Next