ಹೀಗಂತ, ಕೆಲ ಚಿತ್ರಗಳು ಪೋಸ್ಟರ್ ಹಾಕಿ ಪತ್ರಿಕೆಗಳಲ್ಲಿ ಜಾಹಿರಾತು ಕೊಡುವುದನ್ನು ಎಲ್ಲರೂ ಗಮನಿಸಿರುತ್ತಾರೆ. ಈಗ ಅದೇ ಹೆಸರನ್ನಿಟ್ಟುಕೊಂಡು ಈ ವಾರ ಚಿತ್ರ ಬಿಡುಗಡೆಯಾಗುತ್ತಿದೆ. ಈ “ಮುಂದಿನ ಬದಲಾವಣೆ’ ಚಿತ್ರಕ್ಕೆ ಪ್ರವೀಣ್ ಭೂಷಣ್ ನಿರ್ದೇಶಕರು. ಅಷ್ಟೇ ಅಲ್ಲ, ಹೀರೋ ಕೂಡ ಆಗಿದ್ದಾರೆ. ಜೊತೆಗೆ ಕಥೆ ಬರೆದು ಐದು ಹಾಡುಗಳಿಗೆ ಸಾಹಿತ್ಯವನ್ನೂ ರಚಿಸಿದ್ದಾರೆ. ಚಿತ್ರದ ಶೀರ್ಷಿಕೆಯೇ ಹೇಳುವಂತೆ, ಇದೊಂದು ಚಿತ್ರಮಂದಿರದ ಸುತ್ತ ನಡೆಯುವ ಕಥೆ. ಒಂದು ಥಿಯೇಟರ್ ಇಟ್ಟುಕೊಂಡು ಏನೆಲ್ಲಾ ಕಥೆ ಹೆಣೆಯಲಾಗಿದೆ ಎಂಬ ಕುತೂಹಲವಿದ್ದರೆ, ಜನ “ಮುಂದಿನ ಬದಲಾವಣೆ’ ಬಯಸಿ ಹೋಗಬಹುದು. ಶೇ.60 ರಷ್ಟು ಭಾಗ ಚಿತ್ರಮಂದಿರದಲ್ಲಿ ಕಥೆ ಸಾಗಲಿದೆ. ಹಾಗಾಗಿ, ಚಿತ್ರಕ್ಕೆ “ಮುಂದಿನ ಬದಲಾವಣೆ’ ಎಂಬ ಶೀರ್ಷಿಕೆ ಇಡಲಾಗಿದೆ ಎಂಬುದು ನಿರ್ದೇಶಕರ ಮಾತು. ಇನ್ನು, ಬೆಂಗಳೂರಿನ ಎಚ್‌ಎಂಟಿ ಚಿತ್ರಮಂದಿರದಲ್ಲಿ ಚಿತ್ರೀಕರಣಗೊಂಡಿದೆ. ಉಳಿದಂತೆ ತುಮಕೂರು, ದೇವರಾಯನದುರ್ಗ, ಚಿಕ್ಕನಾಯಕನಹಳ್ಳಿಯಲ್ಲಿ ಚಿತ್ರೀಕರಿಸಲಾಗಿದೆ. ಇಲ್ಲಿ ಕಥೆಗಿಂತ ಮನರಂಜನೆ ಮುಖ್ಯ ಎಂದು ಅರಿತಿರುವ ನಿರ್ದೇಶಕರು, ಅದಕ್ಕೆ ಹೆಚ್ಚು ಒತ್ತು ನೀಡಿದ್ದಾರಂತೆ.
ಕಥೆ ಬಗ್ಗೆ ಹೇಳುವುದಾದರೆ, ಒಂದು ಕಾಲೇಜು ಹುಡುಗರ ಗುಂಪು, ಚಿತ್ರ ನೋಡಲು ಚಿತ್ರಮಂದಿರಕ್ಕೆ ಹೋದಾಗ, ಅಲ್ಲಿ ಒಂದಷ್ಟು ಘಟನೆಗಳು ನಡೆಯುತ್ತವೆ. ಅಷ್ಟೇ ಅಲ್ಲ, ನಾಯಕ ತನ್ನ ಗೆಳೆಯರ ಜೊತೆ ಕಾಲೇಜ್‌ಗೆ ಬಂಕ್ ಮಾಡಿ, ಚಿತ್ರಮಂದಿರಕ್ಕೆ ಹೋದಾಗ ಅಲ್ಲಿ, ಹಳೆಯ ಪ್ರೇಯಸಿಯ ದರ್ಶನವಾಗುತ್ತೆ. ಅಲ್ಲೊಂದು ಕಥೆ ಬಿಚ್ಚಿಕೊಂಡು ಫ್ಯಾ$Éಶ್‌ಬ್ಯಾಕ್‌ಗೆ ಕರೆದೊಯ್ಯುತ್ತೆ. ಆಮೇಲೆ ಏನೆಲ್ಲಾ ಆಗುತ್ತೆ ಎಂಬುದು ಕಥೆ. ಇನ್ನು, ಇಲ್ಲಿರುವ ಪ್ರತಿ ಪಾತ್ರಕ್ಕೂ ಒಂದೊಂದು ಹಿನ್ನೆಲೆಯನ್ನು ಕಟ್ಟಿಕೊಡಲಾಗಿದೆಯಂತೆ.
ಚಿತ್ರದಲ್ಲಿ ಸಂಗೀತಾ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ಉಳಿದಂತೆ ಚಿತ್ರದಲಿ ಕಾವ್ಯಾಗೌಡ, ಮಾಲಾಶ್ರೀ, ಅಶ್ವಿನಿರಾವ್, ಆರ್ಯನ್ ಸೇರಿದಂತೆ ಹಲವರು ನಟಿಸಿದ್ದಾರೆ. ಕಾರ್ತಿಕ್‌ವೆಂಕಟೇಶ್ ಸಂಗೀತ ನೀಡಿದರೆ, ಕೋಟೇಶ್ವರ್ ಅವರ ಛಾಯಾಗ್ರಹಣವಿದೆ. ಇನ್ನು, ಸಹೋದರನಿಗಾಗಿ ಫಣಿಭೂಷಣ್ ಚಿತ್ರವನ್ನು ನಿರ್ಮಿಸಿದ್ದಾರೆ.