ಬೆಂಗಳೂರು: ಬಿಬಿಎಂಪಿಯ 52ನೇ ಮೇಯರ್ ಆಗಿ ಕಳೆದ ಶುಕ್ರವಾರ ಆಯ್ಕೆಯಾದ ಗಂಗಾಂಬಿಕೆ ಅವರು ಸೋಮವಾರ ಮೇಯರ್ ಕಚೇರಿಯಲ್ಲಿ ಅಧಿಕೃತವಾಗಿ ಪದಗ್ರಹಣ ಮಾಡಲಿದ್ದಾರೆ.
ನೂತನ ಮೇಯರ್ ಆಗಿ ಶುಕ್ರವಾರ ಆಯ್ಕೆಯಾಗಿದ್ದ ಅವರು ಪಾಲಿಕೆಯ ನಿಯಂತ್ರಣ ಕೊಠಡಿ, ಕೆ.ಆರ್.ಮಾರುಕಟ್ಟೆ ಪರಿಶೀಲನೆ ನಡೆಸಿದರೂ, ಮೇಯರ್ ಕಚೇರಿಗೆ ಪ್ರವೇಶಿಸಿರಲಿಲ್ಲ. ಸೋಮವಾರ ಬೆಳಗ್ಗೆ 9.30ಕ್ಕೆ ಮೇಯರ್ ಕಚೇರಿಯಲ್ಲಿ ಪೂಜಾ ಕಾರ್ಯಕ್ರಮದ ನಂತರದಲ್ಲಿ ಅಧಿಕೃತವಾಗಿ ಮೇಯರ್ ಖುರ್ಚಿಯಲ್ಲಿ ಕುಳಿತುಕೊಳ್ಳಲಿದ್ದಾರೆ.
ಪರಿಸರ ಜಾಗೃತಿ ಮೆರೆದ ಮೇಯರ್: ಮೇಯರ್ ಆಗಿ ಪದಗ್ರಹ ಮಾಡುವ ಆಹ್ವಾನ ಪತ್ರವನ್ನು ವಾಟ್ಸಪ್ ಮೂಲಕ ಹಂಚಿರುವ ಅವರು, ತಮ್ಮ ಬೆಂಬಲಿಗರಿಗೆ ಪರಿಸರದ ಕುರಿತು ಜಾಗೃತಿ ಮೂಡಿಸುವ ಕೆಲಸ ಮಾಡಿದ್ದಾರೆ. ಆಹ್ವಾನ ಪತ್ರಿಕೆಯಲ್ಲಿ ಎಲ್ಲರನ್ನೂ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವಂತೆ ಆಹ್ವಾನಿಸಿರುವ ಅವರು ಪರಿಸರದ ಹಿತದೃಷ್ಟಿಯಿಂದ ಹೂವಿನ ಬೊಕ್ಕೆ ಹಾಗೂ ಹಾರಗಳನ್ನು ತರದಂತೆ ಕೋರಿದ್ದಾರೆ.
ಸೋಮವಾರದಿಂದಲೇ ನಗರದ ವಿವಿಧ ಭಾಗಗಳಲ್ಲಿ ಪರಿಶೀಲನಾ ಸಭೆಗಳನ್ನು ಹಮ್ಮಿಕೊಳ್ಳಲು ಸಿದ್ಧತೆ ನಡೆಸಿದ್ದು, ಸಾರ್ವಜನಿಕರು ತಮ್ಮನ್ನು ಭೇಟಿ ಮಾಡಿ ಸಮಸ್ಯೆಗಳನ್ನು ಹೇಳಿಕೊಳ್ಳಬಹುದಾಗಿದೆ. ಜತೆಗೆ ತಮ್ಮ ಕಚೇರಿಗೆ ಕರೆ ಮಾಡಿಯೂ ಸಮಸ್ಯೆಗಳನ್ನು ಹೇಳಬಹುದಾಗಿದ್ದು, ಸಾಧ್ಯವಾದಷ್ಟು ಬೇಗ ಅವುಗಳನ್ನು ಪರಿಹರಿಸಲು ಮುಂದಾಗುತ್ತೇನೆ. ಜತೆಗೆ ಮಧ್ಯಾಹ್ನ 3 ಗಂಟೆಯಿಂದ ಸಾರ್ವಜನಿಕರ ಭೇಟಿಗೆ ಲಭ್ಯವಾಗುತ್ತೇನೆ.
-ಗಂಗಾಂಬಿಕೆ, ಮೇಯರ್