ಧಾರವಾಡ: ಬಿಆರ್‌ಟಿಎಸ್ ಯೋಜನೆಯಡಿ ಹಳೆ ಬಸ್ ನಿಲ್ದಾಣದಲ್ಲಿ ನಿರ್ಮಿಸಲಾಗುತ್ತಿರುವ ನೂತನ ಬಸ್ ನಿಲ್ದಾಣ ಕಾಮಗಾರಿ ಆದಷ್ಟು ಬೇಗ ಪೂರ್ಣಗೊಳಿಸಲು ಆಯುಕ್ತ ದರ್ಪಣ ಜೈನ್ ಅವರೊಂದಿಗೆ ಚರ್ಚಿಸಲಾಗುವುದು ಎಂದು ಶಾಸಕ ಅರವಿಂದ ಬೆಲ್ಲದ ಹೇಳಿದರು.
ನಗರದ ಹಳೇ ಬಸ್ ನಿಲ್ದಾಣದಲ್ಲಿ ಬಿಆರ್ ಟಿಎಸ್ ಯೋಜನೆಯಡಿ ನಿರ್ಮಿಸಲಾಗುತ್ತಿರುವ ನೂತನ ಬಸ್ ನಿಲ್ದಾಣ ಕಾಮಗಾರಿ ವೀಕ್ಷಿಸಿದ ಬಳಿಕ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು. ಕಾಮಗಾರಿ ವಿಳಂಬ ಕಂಡು ಗುತ್ತಿಗೆದಾರನಿಗೆ ನೀಡಿದ್ದ ಟೆಂಡರ್ ರದ್ದುಗೊಳಿಸಿ ಈಗ ಹೊಸ ಗುತ್ತಿಗೆದಾರರಿಗೆ ಕಾಮಗಾರಿ ನೀಡಲಾಗಿದೆ.
ಹೊಸ ಗುತ್ತಿಗೆದಾರರಿಗೆ ಏಪ್ರಿಲ್-ಮೇ ತಿಂಗಳೊಳಗೆ ಕಾಮಗಾರಿ ಪೂರ್ಣಗೊಳಿಸಲು ಅವಧಿ ನೀಡಲಾಗಿತ್ತು. ಆದರೆ ಸದ್ಯದ ಪರಿಸ್ಥಿತಿಯಲ್ಲಿ ಅಷ್ಟರೊಳಗೆ ಪೂರ್ಣಗೊಳ್ಳುವ ನಿರೀಕ್ಷೆ ಇಲ್ಲ. ಹೀಗಾಗಿ ಈ ಅವಧಿಯನ್ನು ಸೆಪ್ಟೆಂಬರ್‌ವರೆಗೆ ವಿಸ್ತರಿಸಲಾಗಿದ್ದು, ಅಷ್ಟರೊಳಗೆ ಈ ಕಾಮಗಾರಿ ಪೂರ್ಣಗೊಳಿಸುವ ಗುರಿ ನೀಡಲಾಗಿದೆ.
ಈ ನಿಟ್ಟಿನಲ್ಲಿ ಆಯುಕ್ತ ದರ್ಪಣ ಜೈನ್ ಅವರೊಂದಿಗೆ ಚರ್ಚಿಸಲಿದ್ದು, ಇದಕ್ಕೆ ಬೇಕಾದ ಅಗತ್ಯ ಸಹಕಾರ, ಸೌಲಭ್ಯ, ಅನುದಾನ ನೀಡುವಿಕೆಯಲ್ಲಿ ವಿಳಂಬ ಮಾಡಬಾರದು ಎಂದರು. ನೂತನ ಬಸ್ ನಿಲ್ದಾಣ ಕಾಮಗಾರಿ ವಿಳಂಬದಿಂದ ಜನರು, ವ್ಯಾಪಾರಸ್ಥರಿಗೆ ಸಾಕಷ್ಟು ತೊಂದರೆ ಆಗಿದ್ದು, ಆದಷ್ಟು ಬೇಗ ಕಾಮಗಾರಿ ಪೂರ್ಣಗೊಳ್ಳಬೇಕಿದೆ.
ಈ ಹಿಂದೆ ಬಿಆರ್‌ಟಿಎಸ್ ರೂಪಿಸಿದ್ದ ಯೋಜನೆಯಲ್ಲಿ ಬಸ್ ನಿಲ್ದಾಣದಲ್ಲಿ ಪಾರ್ಕಿಂಗ್ ವ್ಯವಸ್ಥೆಯೇ ಇರಲಿಲ್ಲ. ಕೊನೆಗೆ ಈ ಬಗ್ಗೆ ಗಮನ ಸೆಳೆದಾಗ ಈಗ ನಾಲ್ಕು ಚಕ್ರಗಳ 15 ವಾಹನ ಹಾಗೂ 250 ದ್ವಿಚಕ್ರ ವಾಹನ ನಿಲುಗಡೆಗೆ ಯೋಜನೆ ರೂಪಿಸಲಾಗಿದ್ದು, ಆದರೆ ಇದು ಕೂಡ ಸಾಲದು.
ಕನಿಷ್ಠ 1000 ದ್ವಿಚಕ್ರ ವಾಹನಗಳು ನಿಲುಗಡೆ ಅವಕಾಶ ಆಗುವಂತೆ ಯೋಜನೆ ರೂಪಿಸುವ ಕುರಿತು ಆಯುಕ್ತರ ಗಮನ ಸೆಳೆಯಲಾಗುವುದು ಎಂದು ಸ್ಪಷ್ಟಪಡಿಸಿದರು. ವಿವಿಧ ಇಲಾಖೆಗಳ ಯೋಜನೆಗಳ ಮಧ್ಯೆ ಹೊಂದಾಣಿಕೆ ಇಲ್ಲ. ಹೀಗಾಗಿ ಬೇಕಾಬಿಟ್ಟಿ ಕಾಮಗಾರಿ ಆಗುತ್ತಿದ್ದು, ಇಲಾಖೆಗಳ ಮಧ್ಯೆ ಹೊಂದಾಣಿಕೆ ತಂದು ಏಕರೂಪದಲ್ಲಿ ಕಾಮಗಾರಿ ಕೈಗೊಳ್ಳುವ ಅಗತ್ಯವಿದೆ.
ಈ ನಿಟ್ಟಿನಲ್ಲಿ ಸರಕಾರ ಗಮನ ಹರಿಸಬೇಕಿದೆ ಎಂದರು. ಪಾಲಿಕೆ ಸದಸ್ಯರಾದ ಶಿವು ಹಿರೇಮಠ, ವಿಜಯಾನಂದ ಶೆಟ್ಟಿ, ಸಂಜಯ ಕಪಟಕರ, ಮೋಹನ ರಾಮದುರ್ಗ ಸೇರಿದಂತೆ ಬಿಆರ್ ಟಿಎಸ್ ಯೋಜನೆಯ ಅಧಿಕಾರಿಗಳು ಇದ್ದರು.