Advertisement

ಆರ್ಥಿಕ ಸ್ಥಿತಿ ಆಧೋಗತಿಗೆ ಕೃಷಿ ನಿರ್ಲಕ್ಷ್ಯ ಕಾರಣ

09:16 PM Nov 11, 2019 | Lakshmi GovindaRaju |

ಚಿಕ್ಕಬಳ್ಳಾಪುರ: ದೇಶ‌ದಲ್ಲಿ ಹೇರಳವಾಗಿ ಉದ್ಯೋಗಾವಕಾಶ ಸೃಷ್ಟಿಸುವ ಬಹುದೊಡ್ಡ ಕ್ಷೇತ್ರವಾದ ಕೃಷಿ ರಂಗವನ್ನು ಇಂದು ಆಳುವ ಸರ್ಕಾರಗಳು ಸಂಪೂರ್ಣ ನಿರ್ಲಕ್ಷ್ಯಿಸುತ್ತಿರುವ ಪರಿಣಾಮ ದೇಶದ ಇಂದಿನ ಆರ್ಥಿಕ, ಸಾಮಾಜಿಕ ಅಧೋಗತಿಗೆ ಕಾರಣವಾಗಿ ನಿರುದ್ಯೋಗ, ಬಡತನ, ಹಸಿವು, ಅಸಮಾನತೆ ಮುಂದುವರಿದಿದೆ ಎಂದು ಸುಪ್ರೀಂಕೋರ್ಟ್‌ ವಿಶ್ರಾಂತ ನ್ಯಾಯಮೂರ್ತಿ ವಿ.ಗೋಪಾಲಗೌಡ ತಿಳಿಸಿದರು.

Advertisement

ರಾಜ್ಯ ಕಾನೂನು ವಿಶ್ವ ವಿದ್ಯಾಲಯದ ದಶಮಾನೋತ್ಸವದ ಪ್ರಯುಕ್ತ ನಗರದ ಕೆಂಪೇಗೌಡ ಕಾನೂನು ಮಹಾ ವಿದ್ಯಾಲಯದ ಸಹಯೋಗದೊಂದಿಗೆ ನಗರದ ಒಕ್ಕಲಿಗರ ಕಲ್ಯಾಣ ಮಂಟಪದಲ್ಲಿ ಸೋಮವಾರ ಆಯೋಜಿಸಲಾಗಿದ್ದ “ರೈತಪರ ಕಾನೂನುಗಳ ಸಂರಕ್ಷಣೆ’ ಕುರಿತಾದ ವಿಚಾರ ಸಂಕಿರಣದಲ್ಲಿ ವಿಷಯ ಮಂಡಿಸಿದರು.

ದಿವಾಳಿಯತ್ತ: ಕೃಷಿ ಎಂದರೆ ಕೇವಲ ರಾಗಿ, ನವಣೆ, ಭತ್ತ ಬೆಳೆಯುವುದಲ್ಲ. ಕೃಷಿ ವ್ಯಾಪ್ತಿಗೆ ಹೈನುಗಾರಿಕೆ, ತೋಟಗಾರಿಕೆ, ರೇಷ್ಮೆ, ಮೀನುಗಾರಿಕೆ ಸೇರುತ್ತದೆ. ಆದರೆ ಸರ್ಕಾರಗಳು ಕೃಷಿಗೆ ಹೆಚ್ಚಿನ ಆದ್ಯತೆ ಕೊಡುತ್ತಿಲ್ಲ. ಭೂ ಅಭಿವೃದ್ಧಿಗೆ ಪ್ರಾಧಾನ್ಯತೆ ನೀಡುತ್ತಿಲ್ಲ. ಎಲ್ಲವನ್ನೂ ವಿದೇಶಿ ಬಹುರಾಷ್ಟ್ರೀಯ ಕಂಪನಿಗಳ ಕೇಂದ್ರೀಕೃತವಾದ ಕೃಷಿ ಪದ್ಧತಿಗಳನ್ನು ರೂಪಿಸುತ್ತಿರುವುದರಿಂದ ದೇಶ ಕೃಷಿ ಕ್ಷೇತ್ರ ದಿವಾಳಿಯತ್ತ ಸಾಗಿದೆ ಎಂದು ಆತಂಕ ವ್ಯಕ್ತಪಡಿಸಿದರು.

ಧ್ವನಿ ಎತ್ತುವವರೇ ಇಲ್ಲ: ರೈತರ, ಕೃಷಿಕೂಲಿಕಾರರ ಜ್ವಲಂತ ಸಮಸ್ಯೆಗಳ ಬಗ್ಗೆ ಧ್ವನಿ ಎತ್ತುವವರು ಇಂದು ದೇಶದ ಸಂಸತ್ತು ಹಾಗೂ ವಿಧಾನಸಭೆಗಳಲ್ಲಿ ಇಲ್ಲ. ಪರಿಣಾಮ ದೇಶದ ಕೃಷಿ ಕ್ಷೇತ್ರದ ಸಮಸ್ಯೆಗಳಿಗೆ ಪರಿಹಾರ ಸಿಗದೇ ಅವಸಾನದ ಅಂಚಿಗೆ ಬಂದು ತಲುಪಿದೆ. ದೇಶದ ಕೃಷಿ ಭೂಮಿ ದಿನೇ ದಿನೇ ಕಡಿಮೆಯಾಗುತ್ತಿದ್ದು ಭಾರತ ಭವಿಷ್ಯದ ದಿನಗಳಲ್ಲಿ ತೀವ್ರ ಆಹಾರದ ಸಮಸ್ಯೆ ಎದುರಿಸಲಿದೆ ಎಂದು ತಿಳಿಸಿದರು.

ವೈಜ್ಞಾನಿಕ ಬೆಲೆ ಇಲ್ಲ: ದೇಶದಲ್ಲಿ ಕೈಗಾರಿಕೆಗಳಲ್ಲಿ ಉತ್ಪಾದಿಸುವ ಪ್ರತಿ ವಸ್ತುವಿಗೆ ನಿಗದಿತ ಬೆಲೆ ಇದೆ. ಆದರೆ ಲಕ್ಷಾಂತರ ರೂ, ಸಾಲ ಮಾಡಿ ಬಿತ್ತನೆ ಬೀಜ, ರಸಗೊಬ್ಬರ ಖರೀದಿ ಮಾಡಿ ಬೆಳೆ ತೆಗೆಯುವ ರೈತನ ಬೆಳೆಗೆ‌ ಬೆಲೆಗೆ ಮಾರುಕಟ್ಟೆಯಲ್ಲಿ ಇಂದಿಗೂ ವೈಜ್ಞಾನಿಕ ಬೆಲೆ ನಿಗದಿಪಡಿಸಿಲ್ಲ ಎಂದರು.

Advertisement

ಅಧ್ಯಕ್ಷತೆ ವಹಿಸಿದ್ದ ರಾಜ್ಯ ಕಾನೂನು ವಿಶ್ವ ವಿದ್ಯಾಲಯದ ಕುಲಪತಿ ಡಾ.ಪಿ.ಈಶ್ವರಭಟ್‌ ಮಾತನಾಡಿ, ರಾಜ್ಯ ಕಾನೂನು ಮಹಾ ವಿದ್ಯಾಲಯಕ್ಕೆ 10 ವರ್ಷ ತುಂಬಿದ ಹಿನ್ನೆಲೆಯಲ್ಲಿ ರಾಜ್ಯದ ಉದ್ದಗಲಕ್ಕೂ ದಶಮಾನೋತ್ಸವ ಮೂಲಕ ಕಾನೂನು ವಿದ್ಯಾರ್ಥಿಗಳಲ್ಲಿ ಜ್ಞಾನಾರ್ಜನೆ ಹೆಚ್ಚಿಸಲು ವಿವಿಧ ವಿಷಯಗಳ ಕುರಿತು ಚರ್ಚೆ, ಸಂವಾದ, ಚಿಂತನ, ಮಂಥನ ರೂಪಿಸಲಾಗುತ್ತಿದೆ. ಈ ಮೂಲಕ ಖ್ಯಾತ ನ್ಯಾಯಮೂರ್ತಿಗಳನ್ನು ಹಾಗೂ ನ್ಯಾಯವಾದಿಗಳನ್ನು ನಾಡಿಗೆ ಪರಿಚಯಿಸುವ ಕೆಲಸ ಮಾಡುತ್ತಿದೆ ಎಂದರು.

ವೇದಿಕೆಯಲ್ಲಿ ಕೆಂಪೇಗೌಡ ಕಾನೂನು ಮಹಾ ವಿದ್ಯಾಲಯದ ಪ್ರಾಂಶುಪಾಲೆ ಪ್ರೊ.ಬಿ.ಜಿ.ಶೋಭಾ, ಕೆಂಪೇಗೌಡ ಕಾನೂನು ಮಹಾ ವಿದ್ಯಾಲಯದ ಆಡಳಿತ ಮಂಡಳಿ ಅಧ್ಯಕ್ಷ ಪಿ.ಎ.ಮೋಹನ್‌, ಒಕ್ಕಲಿಗರ ಸಂಘದ ಅಧ್ಯಕ್ಷ ಜಿ.ಆರ್‌.ನಾರಾಯಣಸ್ವಾಮಿ, ತಾಪಂ ಅಧ್ಯಕ್ಷ ಬಿ.ಎಂ.ರಾಮುಸ್ವಾಮಿ, ವಕೀಲರ ಸಂಘದ ಮಾಜಿ ಅಧ್ಯಕ್ಷ ಪ್ರಕಾಶ್‌, ಆರ್‌.ಶ್ರೀನಿವಾಸ್‌, ಕೆಂಪೇಗೌಡ ಕಾನೂನು ಮಹಾ ವಿದ್ಯಾಲಯದ ಆಡಳಿತ ಮಂಡಳಿ ಸದಸ್ಯರು ಇದ್ದರು.

ರೈತನ ಬೆನ್ನುಮೂಳೆ ಮುರಿಯುವ ಕೆಲಸ: ರೈತರಿಗೆ ಆರ್ಥಿಕ, ಸಾಮಾಜಿಕ ಹಾಗೂ ರಾಜಕೀಯವಾಗಿ ಸಮಾನ ಅವಕಾಶ ಕಲ್ಪಿಸುವ ಕೆಲಸವನ್ನು ಕೇಂದ್ರ, ರಾಜ್ಯ ಸರ್ಕಾರಗಳು ಮಾಡಬೇಕು. ಆದರೆ, ದೇಶದ ಬೆನ್ನಲುಬು ರೈತ ಎಂದು ಹೇಳಿಕೊಂಡು ರೈತನ ಬೆನ್ನುಮೂಳೆ ಮುರಿಯುವ ಕೆಲಸವನ್ನು ಸರ್ಕಾರಗಳು ಮಾಡುತ್ತಿವೆ.

ದೇಶದಲ್ಲಿ ಇಂದಿಗೂ ಸಮಾನವಾಗಿ ಭೂಮಿ ಹಂಚಿಕೆ ಮಾಡಿಲ್ಲ. ಕೃಷಿಗೆ ಬೇಕಾದ ಗುಣಮಟ್ಟದ ಬಿತ್ತನೆ ಬೀಜ. ರಸಗೊಬ್ಬರ, ನೀರಾವರಿ, ವಿದ್ಯುತ್‌ ಮತ್ತಿತರ ಮೂಲ ಸೌಕರ್ಯ ಕಲ್ಪಿಸುತ್ತಿಲ್ಲ. ದೇಶದಲ್ಲಿ ಹೊಸ ಆರ್ಥಿಕ ನೀತಿಗಳ ಜಾರಿ ಪರಿಣಾಮ ಕೃಷಿ ರಂಗದ ಮೇಲೆ ಸಾಕಷ್ಟು ದುಷ್ಪರಿಣಾಮ ಬೀರಿವೆ ಎಂದು ಸುಪ್ರೀಂಕೋರ್ಟ್‌ ವಿಶ್ರಾಂತ ನ್ಯಾಯಮೂರ್ತಿ ವಿ.ಗೋಪಾಲಗೌಡ ಕಳವಳ ವ್ಯಕ್ತಪಡಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next