ಸಿಂಧನೂರು: ವೀರಶೈವ ಸಮುದಾಯದ ಭಾಗವಾದ ಬಣಜಿಗ ಸಮಾಜ ಅನೇಕ ರೀತಿಯಲ್ಲಿ ಸಮಾಜ ಸೇವೆಯಲ್ಲಿ ತೊಡಗಿದೆ. ಯಾವುದೇ ಹೊಸ ಪೀಠ ರಚಿಸಿಕೊಳ್ಳದ ಸಮುದಾಯ ಮಠಗಳ ಸೇವೆಯಲ್ಲಿ ತೊಡಗಿಸಿಕೊಂಡಿದ್ದು, ಇದೀಗ ಸಂಘಟಿತವಾಗಿ ಸೌಲಭ್ಯ ಪಡೆಯಲು ಮುಂದಾಗಬೇಕಿದೆ ಎಂದು ಬಣಜಿಗ ಸಮಾಜದ ಮುಖಂಡ ಸಿದ್ರಾಮಪ್ಪ ಕಾಡ್ಲೂರು ಹೇಳಿದರು.
ನಗರದ ಗಂಗಾವತಿ ರಸ್ತೆಯಲ್ಲಿರುವ ಎನ್.ಶಿವನಾಗಪ್ಪ ಕಾಂಪ್ಲೆಕ್ಸ್‌ನಲ್ಲಿ ಭಾನುವಾರ ಕರ್ನಾಟಕ ರಾಜ್ಯ ಬಣಜಿಗ ಕ್ಷೇಮಾಭಿವೃದ್ಧಿ ಸಂಘ ಬೆಂಗಳೂರು, ತಾಲೂಕು ಘಟಕ ಹಾಗೂ ಯುವ ಘಟಕದಿಂದ ಏರ್ಪಡಿಸಿದ್ದ ಸಂಘಟನೆಯ ಸಂಸ್ಥಾಪನಾ ದಿನಾಚರಣೆ ಕಾರ್ಯಕ್ರಮದಲ್ಲಿ ಬಸವಣ್ಣ, ಅಕ್ಕಮಹಾದೇವಿ ಮತ್ತು ಮಲ್ಲಿಕಾರ್ಜುನ ಅಗಡಿ ಅವರ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿ, ಮಾತನಾಡಿದರು.
ಯುವ ಘಟಕದ ಉಪಾಧ್ಯಕ್ಷ ಶರಣಪ್ಪ ಮಾಲಿ ಪಾಟೀಲ್ ಮಾತನಾಡಿ, ಏಪ್ರಿಲ್ ತಿಂಗಳಲ್ಲಿ ಅಕ್ಕಮಹಾದೇವಿ ಜಯಂತಿ ಆಚರಿಸಬೇಕಾಗಿದ್ದು, ಅದರೊಂದಿಗೆ ಮೂರ್ತಿ ಪ್ರತಿಷ್ಟಾಪನೆ ಮಾಡಬೇಕಾಗಿದೆ. ಕಾರಣ ಸಮಾಜದ ಹಿರಿಯರು ಸಹಕರಿಸಬೇಕು ಎಂದರು.
ವೀರಶೈವ ಲಿಂಗಾಯತ ಮಹಾಸಭಾ ತಾಲೂಕು ಘಟಕದ ಅಧ್ಯಕ್ಷ ಶಿವಕುಮಾರ ಜವಳಿ ಮಾತನಾಡಿ, ಬಣಜಿಗ ಸಮಾಜವು ರಾಜ್ಯಕ್ಕೆ ಏಳು ಮುಖ್ಯಮಂತ್ರಿಗಳನ್ನು ಕೊಟ್ಟ ಹೆಗ್ಗಳಿಕೆ ಹೊಂದಿದೆ. 2003ರಲ್ಲಿ ಬಣಜಿಗ ಸಮಾಜ ಪ್ರಾರಂಭವಾಗಿದ್ದು, 2005ರಲ್ಲಿ ಬೃಹತ್ ಸಮಾವೇಶ ನಡೆಸಿ ರಾಜ್ಯದಲ್ಲಿ ಗಮನ ಸೆಳೆದಿದೆ ಎಂದರು.
ಯುವ ಘಟಕದ ಗೌರವಾಧ್ಯಕ್ಷ ಸಂತೋಷ, ಮಾಜಿ ಅಧ್ಯಕ್ಷ ಗುಂಡಪ್ಪ ಬಳಿಗಾರ, ಉಪನ್ಯಾಸಕ ಬಸವರಾಜ ಬಳಿಗಾರ ಮಾತನಾಡಿದರು. ಇದೇ ಸಂದರ್ಭದಲ್ಲಿ ರಾಷ್ಟ್ರೀಯ ಮಟ್ಟದ ನೀಟ್ ಪರೀಕ್ಷೆಯಲ್ಲಿ 648ನೇ ರ್‍ಯಾಂಕ್ ಪಡೆದ ಸಿದ್ದಾರ್ಥ ಜವಳಿ, ಗ್ರಾಪಂ ಸದಸ್ಯೆಯರಾದ ಶರಣಮ್ಮ ಶರಬಣ್ಣ, ದಾಕ್ಷಾಯಿಣಿ ನಾಗರಾಜ, ದಿದ್ದಗಿ ಕೃಷಿ ಪತ್ತಿನ ಸಹಕಾರ ಸಂಘದ ಸದಸ್ಯ ಮಹಾಂತೇಶ, ಎಸ್ ಡಿಎಂಸಿ ಅಧ್ಯಕ್ಷ ಸೂಗಪ್ಪ ಅವರನ್ನು ಸನ್ಮಾನಿಸಲಾಯಿತು. ಮುಖಂಡರಾದ ಸಿದ್ರಾಮಪ್ಪ ಮಾಡಸಿರವಾರ, ಶಾಂತಪ್ಪ ಚಿಂಚಿರಕಿ, ಎಂ.ಲಿಂಗಪ್ಪ ದಢೇಸುಗೂರ, ಎನ್.ಅಮರೇಶ, ಬಸವರಾಜ ತೊಂತನಾಳ, ವಿರೂಪಾಕ್ಷಪ್ಪ ಕೆಂಗಲ್, ಡಾ| ಮಲ್ಲಿಕಾರ್ಜುನ ಗಿಣಿವಾರ, ಚಂದ್ರಶೇಖರ ಯರದಿಹಾಳ ಇದ್ದರು.