ದೇರಳಕಟ್ಟೆ : ಆರೋಗ್ಯ ಶಿಕ್ಷಣ ನೀಡುವ ಶಿಕ್ಷಣ ಸಂಸ್ಥೆಗಳ ಪ್ರಾಧ್ಯಾಪಕರು ಮತ್ತು ಉಪನ್ಯಾಸಕರು ಸಂಶೋಧನಾ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವುದ ರೊಂದಿಗೆ ಪದವಿ ಮತ್ತು ಸ್ನಾತಕೋತ್ತರ ಪದವಿ ವಿದ್ಯಾರ್ಥಿಗಳನ್ನು ಸಂಶೋಧನಾ ಕಾರ್ಯಗಳಲ್ಲಿ ತೊಡಗಿಸಿಕೊಳ್ಳುವತ್ತ ಮಾರ್ಗದರ್ಶನ ನೀಡುವ ಕಾರ್ಯ ಮಾಡಿದರೆ ವಿದ್ಯಾರ್ಥಿಗಳು ಹೊಸ ಸವಾಲುಗಳನ್ನು ಎದುರಿಸಲು ಸಾಧ್ಯ ಎಂದು ನಿಟ್ಟೆ ವಿಶ್ವವಿದ್ಯಾನಿಲಯದ ಕುಲಾಧಿಪತಿ ಎನ್. ವಿನಯ ಹೆಗ್ಡೆ ಅಭಿಪ್ರಾಯಪಟ್ಟರು.
ಅವರು ನಿಟ್ಟೆ ಇನ್‌ಸ್ಟಿಟ್ಯೂಟ್ ಆಫ್ ಆರ್ಕಿಟೆಕ್ಚರ್ ಆಡಿಟೋರಿಯಂನಲ್ಲಿ ನಿಟ್ಟೆ ವಿಶ್ವವಿದ್ಯಾನಿಲಯದ ನಿಟ್ಟೆ ಗುಲಾಬಿ ಶೆಟ್ಟಿ ಸ್ಮಾರಕ ಫಾರ್ಮಸುಟಿಕಲ್ ಇನ್‌ಸ್ಟಿಟ್ಯೂಟ್‌ನ ಆಶ್ರಯದಲ್ಲಿ ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್ (ಐಸಿಎಂಆರ್) ಪ್ರಾಯೋಜಕತ್ವದಲ್ಲಿ “ರೋಲ್ ಆಫ್ ಆರ್ಗಾನಿಕ್ ಕೆಮಿಕಲ್ ಇಂಟರ್ ಮೀಡಿಯೇಟ್ಸ್ ಇನ್ ಕಾಗ್ನಿಟಿವ್ ಡಿಸಾರ್ಡರ್ ಆ್ಯಂಡ್ ಮೆಂಟಲ್ ಹೆಲ್ತ್’ ವಿಚಾರದಲ್ಲಿ ನಡೆದ ಎರಡು ದಿನಗಳ ರಾಷ್ಟ್ರೀಯ ವಿಚಾರ ಸಂಕಿರಣಕ್ಕೆ ಚಾಲನೆ ನೀಡಿ ಮಾತನಾಡಿದರು.
ಔಷಧ ಶಿಕ್ಷಣ ಶಾಸ್ತ್ರದಲ್ಲಿ ಮುಖ್ಯವಾಗಿ ಸಂಶೋಧನಾಧಾರಿತ ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ಅಗತ್ಯ. ಹೊಸ ಹೊಸ ವಿಚಾರ ಗಳಿಗೆ ಸಂಬಂಧಿಸಿದ ಕಲಿಕೆಯಲ್ಲಿ ತೊಡಗಿಸಿಕೊಳ್ಳುವುದರೊಂದಿಗೆ ವಿಶ್ವ ವಿದ್ಯಾನಿಲಯಗಳು, ಶಿಕ್ಷಣ ಸಂಸ್ಥೆಗಳು ಇಂಡಸ್ಟ್ರಿಗಳೊಂದಿಗೆ ಸಹಯೋಗ ಮಾಡಿ ಕೊಂಡು ಸಂಶೋಧನಾ ಕಲಿಕೆಗೆ ಹೆಚ್ಚಿನ ಆದ್ಯತೆ ನೀಡಬೇಕು ಎಂದರು.
ನಿಟ್ಟೆ ವಿಶ್ವವಿದ್ಯಾನಿಲಯದ ಉಪಕುಲತಿ ಪ್ರೊ| ರಮಾನಂದ ಶೆಟ್ಟಿ ಮಾತನಾಡಿ ಔಷಧೀಯ ವಿಜ್ಞಾನ ಕ್ಷೇತ್ರದಲ್ಲಿ ಸಂಶೋ ಧನೆ ಶೈಕ್ಷಣಿಕ ಕಾರ್ಯದ ಒಂದು ಅಂಗ ವಾಗಿದ್ದು, ಇದರಿಂದ ಸಮುದಾಯ ಆರೋಗ್ಯ ಕ್ಷೇತ್ರಕ್ಕೆ ತನ್ನ ಕೊಡುಗೆಯನ್ನು ನೀಡಬಹುದು ಎಂದರು.
ಕಾರ್ಯಕ್ರಮದಲ್ಲಿ ಮಣಿಪಾಲ ವಿಶ್ವ ವಿದ್ಯಾನಿಲಯದ ವಿಶ್ರಾಂತ ಉಪಕುಲಪತಿ ಪ್ರೊ| ಬಿ.ಎಂ. ಹೆಗ್ಡೆ ವಿಶೇಷ ಉಪನ್ಯಾಸ ನೀಡಿದರು.
ನಿಟ್ಟೆ ಗುಲಾಬಿ ಶೆಟ್ಟಿ ಸ್ಮಾರಕ ಇನ್‌ಸ್ಟಿಟ್ಯೂಟ್ ಆಫ್ ಫಾರ್ಮಸುಟಿಕಲ್ಸ್ ನ ಪ್ರಾಂಶುಪಾಲ ಡಾ| ಸಿ.ಎಸ್. ಶಾಸ್ತ್ರಿ ಸ್ವಾಗತಿಸಿದರು. ಡಾ| ಜೆನ್ನಿಫೆರ್ ಕಾರ್ಯ ಕ್ರಮ ನಿರ್ವಹಿಸಿದರು. ವಿಚಾರ ಸಂಕಿರಣ ಆಯೋಜನಾ ಸಮಿತಿ ಕಾರ್ಯದರ್ಶಿ ಡಾ| ರೇವಣ ಸಿದ್ದಪ್ಪ ವಿಚಾರ ಸಂಕಿರಣದ ಮಾಹಿತಿ ನೀಡಿದರು. ಸಹ ಸಂಘಟನ ಕಾರ್ಯದರ್ಶಿ ವಿಜಯ್ ವಂದಿಸಿದರು.