ಹೊಸದಿಲ್ಲಿ: “ಇಂಡಿಯಾ’ ಹೆಸರನ್ನು ಬಿಟ್ಟು, “ಭಾರತ’ ಎಂಬ ಹೆಸರಿನಲ್ಲಿ ದೇಶವನ್ನು ಕರೆಯುವಂತೆ ಮಾಡಲು ಸುಪ್ರೀಂಕೋರ್ಟ್‌ನಿಂದ ಸಾಧ್ಯವಿಲ್ಲ. ಸಂವಿಧಾನದಲ್ಲಿಯೇ ಆ ಹೆಸರನ್ನು ಪ್ರಸ್ತಾವ ಮಾಡಲಾಗಿದೆ ಎಂದು ಮುಖ್ಯ ನ್ಯಾಯಮೂರ್ತಿ ನೇತೃತ್ವದ ನ್ಯಾಯಪೀಠ ಬುಧವಾರ ಅಭಿಪ್ರಾಯಪಟ್ಟಿದೆ. ಮಾತ್ರವಲ್ಲದೆ ಈ ಬಗ್ಗೆ ಸಂವಿಧಾನ ತಿದ್ದುಪಡಿ ಅಗತ್ಯವಿಲ್ಲ ಎಂದಿದೆ. ಆದರೆ ಈ ನಿಟ್ಟಿನಲ್ಲಿ ಅರ್ಜಿದಾರರು ಕೇಂದ್ರ ಸರಕಾರಕ್ಕೆ ಮನವಿ ಮಾಡಿಕೊಳ್ಳಬಹುದಾಗಿದೆ ಎಂದು ಸ್ಪಷ್ಟಪಡಿಸಿದೆ. ಸಂವಿಧಾನದ 1ನೇ ವಿಧಿಗೆ ತಿದ್ದುಪಡಿ ತರುವ ಮೂಲಕ ಬದಲಾವಣೆ ತರಬೇಕು ಎಂದು ಕೋರಿ ಹೊಸದಿಲ್ಲಿಯ ವ್ಯಕ್ತಿಯೊಬ್ಬರು ಸುಪ್ರೀಂಕೋರ್ಟ್‌ಗೆ ಅರಿಕೆ ಮಾಡಿದ್ದರು. ಭಾರತ ಎಂಬ ಹೆಸರು ದೇಶವಾಸಿಗಳಲ್ಲಿ ರಾಷ್ಟ್ರ ಭಕ್ತಿಯ ಭಾವವನ್ನು ಹೆಚ್ಚಿಸುತ್ತದೆ. ಜತೆಗೆ, ಇದರಿಂದ ಸ್ವಾತಂತ್ರ್ಯಕ್ಕಾಗಿ ಹೋರಾಡಿ ಮಡಿದವರಿಗೂ ನ್ಯಾಯ ಒದಗಿಸಿದಂತಾಗುತ್ತದೆ ಎಂಬುದು ಅರ್ಜಿದಾರರ ವಾದವಾಗಿತ್ತು.