ಮೈಸೂರು: ನಂಜನಗೂಡು ಗ್ರಾಮಾಂತರ ಪೇದೆಯೊಬ್ಬರಿಗೆ ಕೋವಿಡ್-19 ಖಚಿತವಾದ ಹಿನ್ನೆಲೆಯಲ್ಲಿ ಅವರ ಪ್ರಾಥಮಿಕ ಸಂಪರ್ಕದಲ್ಲಿದ್ದ ಮೈಸೂರು ಎಎಸ್ಪಿ ಸೇರಿದಂತೆ 22 ಮಂದಿ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿಯನ್ನುಕ್ವಾರಂಟೈನ್ ಮಾಡಲಾಗಿದೆ. ಜಿಲ್ಲೆಯ ನಂಜನಗೂಡು ಗ್ರಾಮಾಂತರ ಠಾಣೆ ಪೇದೆಯೊಬ್ಬರಿಗೆ ಕೋವಿಡ್ 19 ಸೋಂಕು ದೃಢಪಟ್ಟಿರುವ ಹಿನ್ನೆಲೆಯಲ್ಲಿ ಪೇದೆ ಪ್ರಾಥಮಿಕ ಹಾಗೂ ದ್ವಿತೀಯ ಸಂಪರ್ಕದಲ್ಲಿದ್ದವ ರನ್ನು ಕ್ವಾರಂಟೈನ್ ಮಾಡಲಾಗಿದೆ.
ಸೋಂಕಿತ ಪೇದೆಯ ದ್ವಿತೀಯ ಸಂಪರ್ಕಿತರೆಂದು ದಕ್ಷಿಣ ವಲಯ ಐಜಿಪಿ ವಿಪುಲ್‌ಕುಮಾರ್, ಎಸ್ಪಿ ರಿಷ್ಯಂತ್, ಗ್ರಾಮಾಂತರ ವಿಭಾಗ ಡಿವೈಎಸ್ಪಿ ಸುಮಿತ್ ಸೇರಿದಂತೆ ಸುಮಾರು 50 ಮಂದಿ ಪೊಲೀಸರನ್ನು ಹೋಂ ಕ್ವಾರಂಟೈ ನ್‌ಗೆ ಒಳಪಡಿಸಲಾಗಿದೆ. ಜೊತೆಗೆ ಮೈಸೂರಿನ ಜಲಪುರಿ ಯಲ್ಲಿರುವ ಎಸ್ಪಿ ಕಚೇರಿಯಲ್ಲಿ ನಗರ ಪಾಲಿಕೆಯ ಸಿಬ್ಬಂದಿ ಸಂಪೂರ್ಣ ಸ್ಯಾನಿಟೈಸ್ ಮಾಡಿದ್ದು, ಸೋಂಕು ನಿವಾರಕ ದ್ರಾವಣ ಸಿಂಪಡಿಸಿದ್ದಾರೆ.
ಪೇದೆಗೆ ಸೋಂಕು ಹರಡಿದ್ದು ಹೇಗೆ: ತಿ.ನರಸೀಪುರ ಠಾಣೆಯಲ್ಲಿ 50 ಬುಲೆಟ್ ನಾಪತ್ತೆ ಪ್ರಕರಣದ ತನಿಖೆಗೆ ರಚಿಸಿದ್ದ ವಿಶೇಷ ತಂಡದಲ್ಲಿದ್ದ ಬಹುತೇಕರನ್ನು ಕ್ವಾರಂಟೈನ್ ಮಾಡಲಾಗಿದೆ. ಆರೋಪಿ ಮುಖ್ಯಪೇದೆ ಕೃಷ್ಣೇಗೌಡ ಬಂಧನ ನಂತರ ಎಎಸ್ಪಿ ಸ್ನೇಹಾ ನೇತೃತ್ವದಲ್ಲಿ ಪ್ರಕರಣದ ತನಿಖೆ ಚುರುಕುಗೊಂಡಿತ್ತು. ಈ ಪ್ರಕರಣದಲ್ಲಿ ಸಹಾಯಕರಾಗಿ ನಂಜನಗೂಡು ಠಾಣೆಯ ಪೇದೆಯನ್ನು ನಿಯೋಜಿಸಲಾಗಿತ್ತು.
ನಂಜನಗೂಡಿನಲ್ಲಿದ್ದ ಪೇದೆಗೆ ಅನಾರೋಗ್ಯ ಕಾಣಿಸಿಕೊಂಡಿದ್ದು, ವೈದ್ಯರ ಬಳಿ ಚಿಕಿತ್ಸೆ ಪಡೆದು ಕೋವಿಡ್ 19 ಪರೀಕ್ಷೆಗೂ ಒಳಗಾಗಿದ್ದರು. ಪೇದೆಗೆ ಸೋಂಕು ದೃಢಪಟ್ಟ ಹಿನ್ನೆಲೆಯಲ್ಲಿ ಭಾನುವಾರವೇ ಎಸ್ಪಿ ಕಚೇರಿಯನ್ನು ಸಂಪೂರ್ಣ ಸ್ಯಾನಿಟೈಸ್ ಮಾಡಲಾಗಿದೆ. ಅಲ್ಲದೆ, ಪೇದೆ ಪ್ರಾಥಮಿಕ ಮತ್ತು ದ್ವಿತೀಯ ಸಂಪರ್ಕದಲ್ಲಿದ್ದವರು ಗುರುತಿಸಿ ಕ್ವಾರಂಟೈನ್ ಮಾಡಲಾಗಿದೆ. ಎಸ್ಪಿ ಕಚೇರಿಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಸಿಬ್ಬಂದಿಗೆ ಮನೆಯಿಂದಲೇ ಕಾರ್ಯ ನಿರ್ವಹಿಸಲು ಸೂಚಿಸಲಾಗಿದೆ.
ಮತ್ತೊಂದು ಹೊಸ ಪ್ರಕರಣ: ಜಿಲ್ಲೆಯಲ್ಲಿ ಸೋಮವಾರವೂ ಮತ್ತೂಂದು ಹೊಸ ಪ್ರಕರಣ ದಾಖಲಾಗಿದ್ದು, ಒಟ್ಟು ಸೋಂಕಿತರ ಸಂಖ್ಯೆ 170ಕ್ಕೇರಿದೆ. ಬೆಂಗಳೂರು ಪ್ರಯಾಣ ಹಿನ್ನೆಲೆ ಹೊಂದಿರುವ ವ್ಯಕ್ತಿಯಲ್ಲಿ ಸೋಂಕು ದೃಢಪಟ್ಟಿದ್ದು, ಆತನನ್ನು ಜಿಲ್ಲಾ ಕೋವಿಡ್ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಜಿಲ್ಲೆಯಲ್ಲಿ 58 ಮಂದಿ ಸಕ್ರಿಯ ಸೋಂಕಿತರಿದ್ದು, 112 ಮಂದಿ ಸೋಂಕಿತರು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಈವರೆಗೆ 7,847 ಮಂದಿ 14 ದಿನಗಳ ಕ್ವಾರಂಟೈನ್ ಮುಗಿಸಿದ್ದು, 1,783 ಮಂದಿ ಕ್ವಾರಂಟೈನ್‌ನಲ್ಲಿದ್ದಾರೆ ಎಂದು ಜಿಲ್ಲಾಧಿಕಾರಿ ಅಭಿರಾಂ ಶಂಕರ್ ತಿಳಿಸಿದ್ದಾರೆ.
ನಂಜನಗೂಡು ಗ್ರಾಮಾಂತರ ಪೊಲೀಸ್ ಠಾಣೆ ಸ್ಥಳಾಂತರ
ನಂಜನಗೂಡು: ಕೋವಿಡ್ 19 ಸೋಂಕಿತ ಪೇದೆ ಓಡಾಡಿದ ನಂಜನಗೂಡು ಗ್ರಾಮಾಂತರ ಪೊಲೀಸ್ ಠಾಣೆಯನ್ನು (ಡಿವೈಎಸ್ಪಿ ಕಾರ್ಯಾಲಯ ಸೇರಿದಂತೆ) ತಾತ್ಕಾಲಿಕವಾಗಿ ಪಟ್ಟಣ ಠಾಣೆಗೆ ಸ್ಥಳಾಂತರಿಸಿ ಅಲ್ಲಿನ ಸುಮಾರು 50ಕ್ಕೂ ಹೆಚ್ಚು ಪೇದೆಗಳನ್ನು ಕೋವಿಡ್ 19 ಪರೀಕ್ಷೆಗೆ ಒಳಪಡಿಸಲಾಗಿದೆ. ತಾಲೂಕಿನಲ್ಲಿ 10ಕ್ಕೂ ಹೆಚ್ಚು ಮಂದಿ ಸೋಂಕಿತರಿದ್ದು, 100ಕ್ಕೂ ಹೆಚ್ಚು ಮಂದಿ ಬೇರೆ ರಾಜ್ಯಗಳಿಂದ ಬಂದವರನ್ನು ಹೋಂ ಕ್ವಾರೆಂಟೈನ್‌ಗೆ ಒಳಪಡಿಸಿದೆ.