Advertisement

ಏಳು ವರ್ಷ ಬಳಿಕ ಕೊಲೆ ರಹಸ್ಯ ಬಯಲು

06:23 AM Feb 17, 2019 | Team Udayavani |

ಆತನ ಹೆಸರು ಸೆಲ್ವಕುಮಾರ್‌. ಪತ್ನಿ ಹಾಗೂ ಇಬ್ಬರು ಮಕ್ಕಳಿದ್ದ ಚಿಕ್ಕ ಸಂಸಾರ. ಜೀವನ ನಿರ್ವಹಣೆಗೆ ಕಟ್ಟಡ ನಿರ್ಮಾಣ ಕೆಲಸ ಮಾಡುತ್ತಿದ್ದ ಸೆಲ್ವಕುಮಾರ್‌ ಆದಾಯ ಕಡಿಮೆ ಇದ್ದರೂ, ಕುಟುಂಬದಲ್ಲಿ ಪ್ರೀತಿಗೆ ಕೊರತೆಯಿರಲಿಲ್ಲ. 2009ರ ಅಕ್ಟೋಬರ್‌ 1ರಂದು ದಸರಾ ಸಂಭ್ರಮ ಮನೆಮಾಡಿತ್ತು.

Advertisement

ಪತ್ನಿ ಹಾಗೂ ಮಕ್ಕಳಿಗೆ ಹೊಸಬಟ್ಟೆ, ಸಿಹಿ ತಿಂಡಿ ಕೊಡಿಸಿ, ಎಣ್ಣೆ ಸ್ನಾನ ಮಾಡಿ ಹೊಸ ಬಟ್ಟೆ ಉಟ್ಟ ಸೆಲ್ವಕುಮಾರ್‌, ಮಧ್ಯಾಹ್ನದ ಹೊತ್ತಿಗೆ ಬಾಬುಸಾಬ್‌ ಪಾಳ್ಯದತ್ತ ಹೋಗಿ ಬರುತ್ತೇನೆ ಎಂದು ಪತ್ನಿಗೆ ಹೇಳಿಹೋಗಿದ್ದ. ಮಕ್ಕಳಿಗೆ ಊಟ ಮಾಡಿಸಿದ ಪತ್ನಿ ಉಷಾ, ಪತಿ ಒಟ್ಟಿಗೆ ಊಟ ಮಾಡಲು ತಡರಾತ್ರಿವರೆಗೂ ಕಾದು ನಿದ್ರೆಗೆ ಜಾರಿದ್ದರು. ಆದರೆ ಸೆಲ್ವಕುಮಾರ್‌ ಮನೆಗೆ ಬರಲೇ ಇಲ್ಲ.

ಆತ ಕೆಲಸ ಮಾಡುತ್ತಿದ್ದ ಜಾಗ, ಸ್ನೇಹಿತರು, ಸಂಬಂಧಿಕರ ಮನೆಗಳು ಸೇರಿ ಎಲ್ಲೆಡೆ ಹುಡುಕಾಡಿದರೂ ಸಣ್ಣ ಸುಳಿವೂ ಸಿಕ್ಕಿರಲಿಲ್ಲ. ನಿಗೂಢವಾಗಿ ನಾಪತ್ತೆಯಾಗಿದ್ದ ಸೆಲ್ವಕುಮಾರ್‌ಗಾಗಿ ಭರ್ತಿ ಏಳು ವರ್ಷ ಕಾದ ಪತ್ನಿ ಹಾಗೂ ಮಕ್ಕಳಿಗೆ ನಿರಾಸೆಯೇ ಕಾದಿತ್ತು.

2015ರ ಜುಲೈನಲ್ಲಿ ಹೆಣ್ಣೂರು ಪೊಲೀಸ್‌ ಠಾಣೆಯಲ್ಲಿ ದಾಖಲಾಗಿದ್ದ ಪ್ರೇಮ ಪ್ರಕರಣವೊಂದರ ತನಿಖೆ ನಡೆಸುತ್ತಿದ್ದ ತನಿಖಾ ತಂಡ, ಯುವಕನೊಬ್ಬನನ್ನು ವಿಚಾರಣೆ ನಡೆಸುತ್ತಿತ್ತು. ಈ ವೇಳೆ ಯುವಕ ತಾನು ಪ್ರೀತಿಸಿದ ಯುವತಿಯ ಸೋದರಮಾವ ಯಾರನ್ನೋ ಕೊಲೆ ಮಾಡಿದ್ದಾರಂತೆ ಎಂದು ಹೇಳಿದ್ದ. ಈ ಸುಳಿವು ಆಧರಿಸಿ ಆ ವ್ಯಕ್ತಿ ಯಾರೆಂದು ತಿಳಿಯಲು ತಂಡ ತನಿಖೆ ಆರಂಭಿಸಿತ್ತು.

ಯುವಕ ನೀಡಿದ ಹೇಳಿಕೆ, ಸೆಲ್ವಕುಮಾರ್‌ ಪತ್ನಿ ನೀಡಿದ್ದ ದೂರಿನ ಅನ್ವಯ ತನಿಖೆ ಚುರುಕುಗೊಳಿಸಿದ ಪೊಲೀಸರಿಗೆ, ಸೆಲ್ವಕುಮಾರ್‌ ಮನೆಯಿಂದ ನಾಪತ್ತೆಯಾದ ದಿನ ಜೂಜಾಡುವಾಗ ಮೋಹನ್‌ ಎಂಬಾತನ ಜತೆ ಜಗಳವಾಡಿದ್ದ ವಿಚಾರ ಗೊತ್ತಾಗಿತ್ತು. ಈ ಹಿನ್ನೆಲೆಯಲ್ಲಿ  ಮೋಹನ್‌ನನ್ನು ಬಂಧಿಸಿ ವಿಚಾರಿಸಿದಾಗ  ಏಳು ವರ್ಷಗಳ ಹಿಂದೆ ಸೆಲ್ವಕುಮಾರ್‌ನನ್ನು ಕೊಂದಿದ್ದ ರಹಸ್ಯ ಬಾಯ್ಬಿಟ್ಟಿದ್ದ.

Advertisement

ಮನೆ ಹಿತ್ತಲಲ್ಲಿ ಶವ ಹೂತ: 2009ರ ಅ.1ರಂದು ಮಧ್ಯಾಹ್ನ ಮನೆಯಿಂದ ಹೊದ ಸೆಲ್ವಕುಮಾರ್‌, ವೈಟ್‌ಹೌಸ್‌ ಹಿಂಭಾಗದಲ್ಲಿದ್ದ ಮೋಹನ್‌ ವಾಸವಿದ್ದ ಶೆಡ್‌ಬಳಿ ಹೋಗಿ, ಸ್ನೇಹಿತರ ಜತೆ ಇಸ್ಪೀಟ್‌ ಆಡಿದ್ದ. ಜೂಜಾಟದಲ್ಲಿ ಮೋಹನ್‌ ಹಣ ಕಳೆದುಕೊಂಡರೆ, ಸೆಲ್ವಕುಮಾರ್‌ ಹಣ ಗೆದ್ದಿದ್ದ. ರಾತ್ರಿಯಾಗುತ್ತಿದ್ದಂತೆ ಉಳಿದ ಸ್ನೇಹಿತರು ಹೊರಟುಹೋಗಿದ್ದರು.

ಸೆಲ್ವಕುಮಾರ್‌ ಬಳಿ ಇದ್ದ ಹಣ ಲಪಟಾಯಿಸಲು ಸಂಚು ರೂಪಿಸಿದ ಮೋಹನ್‌, ಮದ್ಯಪಾನಕ್ಕೆ ಆಹ್ವಾನವಿಟ್ಟು, ಮೋಸದಿಂದ ಸೆಲ್ವಕುಮಾರ್‌ಗೆ ಕಬ್ಬಿಣದ ರಾಡ್‌ನಿಂದ ಹೊಡೆದು ಕೊಲೆ ಮಾಡಿದ್ದ. ಬಳಿಕ ತನ್ನ ಶೆಡ್‌ ಹಿಂಭಾಗದಲ್ಲಿರುವ ಬಿದಿರು, ಬೇಲಿ ಬೆಳೆದ ಜಾಗದಲ್ಲಿ ಒಬ್ಬನೇ ಗುಂಡಿ ತೋಡಿ ಶವ ಹೂತಿದ್ದ.

ನಂತರ ಸೆಲ್ವಕುಮಾರ್‌ ಬಗ್ಗೆ ಯಾರೇ ಕೇಳಿದರೂ ತನಗೇನೂ ಗೊತ್ತಿಲ್ಲ ಎಂಬಂತೆ ನಟಿಸುತ್ತಿದ್ದ. ಕೆಲವು ದಿನಗಳ ನಂತರ ಶೆಡ್‌ ಖಾಲಿ ಮಾಡಿಕೊಂಡು ಹೋದ ಮೋಹನ್‌, ಮತ್ತೆ ಅದೇ ಶೆಡ್‌ಗೆ ಬಂದು, ಶವ ಹೂತ ಜಾಗ ಪರಿಶೀಲಿಸುತ್ತಿದ್ದ.

ಅಸ್ಥಿಪಂಜರದ ಮೂಳೆಯ ಡಿಎನ್‌ಎನಲ್ಲಿ ಸೆಲ್ವಕುಮಾರ್‌: ಸೆಲ್ವಕುಮಾರ್‌ನನ್ನು ತಾನೇ ಕೊಂದಿದ್ದಾಗಿ ತಪ್ಪೊಪ್ಪಿಕೊಂಡ ಬಳಿಕ ಆರೋಪಿ ಮೋಹನ್‌ನನ್ನು ಜತೆ ತೆರಳಿ ಶವ ಹೂತ ಜಾಗ ಪರಿಶೀಲಿಸಿದಾಗ, ಅಲ್ಲಿ ಗಿಡಗಂಟಿ ಬೆಳೆದಿದ್ದವು.

ವಿಧಿವಿಜ್ಞಾನ ಪ್ರಯೋಗಾಲಯದ ಸಿಬ್ಬಂದಿ (ಎಫ್ಎಸ್‌ಎಲ್‌) ಎಸಿಪಿ, ಮ್ಯಾಜಿಸ್ಟ್ರೇಟ್‌ ಸಮ್ಮುಖದಲ್ಲಿ ಶವ ಹೂತ ಸ್ಥಳದಲ್ಲಿ ಅಗೆದಾಗ, ಮೂಳೆಗಳು ಪತ್ತೆಯಾದವು. ಆ ಮೂಳೆಗಳು ಸೆಲ್ವಕುಮಾರ್‌ನದ್ದೇ ಎಂದು ಖಚಿತಪಡಿಸಲು ಅವರ ತಾಯಿಯ ಡಿಎನ್‌ ಪರೀಕ್ಷೆ ಮಾಡಿಸಿದ ಬಳಿಕ ಅದು ಸೆಲ್ವಕುಮಾರ್‌ನದ್ದೇ ಎಂದು ಖಚಿತವಾಗಿತ್ತು.

ಮಾತಿನ ಭರದಲ್ಲಿ ಎಡವಟ್ಟು ಮಾಡಿದ್ದ ಮೋಹನ್‌: ಸೆಲ್ವಕುಮಾರ್‌ನನ್ನು ಕೊಲೆಗೈದು ಮೃತದೇಹ ಹೂತು ಹಾಕಿದ್ದ ಮೋಹನ್‌ ಕೆಲವು ವರ್ಷಗಳ ಕಾಲಸುಮ್ಮನೇ ಇದ್ದ. ಬಳಿಕ, ಮನೆಯಲ್ಲಿ ಸ್ನೇಹಿತರ ಜತೆ ಕುಡಿದು ಮಾತನಾಡುವಾಗ “ನನ್ನ ಹತ್ಯ ಯಾರೂ ಜಾಸ್ತಿ ಆಡಬಾರ್ಧು. ನನ್ನ ಬಗ್ಗೆ ಗೊತ್ತಿಲ್ಲ ನಿಮಗೆ. ನಾನು ಕೊಲೆ ಮಾಡಿದ್ದೀನಿ ಗೊತ್ತಾ?’ ಎಂದು ಹೇಳುತ್ತಿದ್ದ.

ಆದರೆ, ಆತ ಯಾವುದೇ ಅಪರಾಧ ಕೃತ್ಯಗಳಲ್ಲಿ ಭಾಗಿಯಾಗಿರದ ಕಾರಣ, ಆತನ ಮಾತನ್ನು ಯಾರೂ ಗಂಭೀರವಾಗಿ ಪರಿಗಣಿಸಿರಲಿಲ್ಲ. ಮೋಹನ್‌ನ ಈ ಮಾತುಗಳನ್ನು ಆತನ ಸಹೋದರಿಯ ಮಗಳು ಕೇಳಿಸಿಕೊಂಡಿದ್ದಳು. ಯುವಕನೊಬ್ಬನನ್ನು ಪ್ರೀತಿಸುತ್ತಿದ್ದ ಆಕೆ, ಪ್ರಿಯತಮನನ್ನು ಹೆದರಿಸಲು “ನೀನು ಕೈ ಕೊಟ್ಟರೆ ಪರಿಣಾಮ ನೆಟ್ಟಗಿರಲ್ಲ. ನಮ್ಮ ಮಾವ ಕೊಲೆ ಮಾಡಿದ್ದಾರೆ.

ಹಾಗಂತ ಅವರೇ ಹೇಳುತ್ತಿರುತ್ತಾರೆ’ ಎಂದು ಎಚ್ಚರಿಕೆ ನೀಡಿದ್ದಳು. ಬಳಿಕ ಇವರಿಬ್ಬರ ಪ್ರೇಮ ಪ್ರಕರಣ ಪೊಲೀಸ್‌ ಠಾಣೆ ಮೆಟ್ಟಿಲೇರಿತ್ತು. ಯುವಕನನ್ನು ಬಂಧಿಸಿ ವಿಚಾರಣೆ ನಡೆಸುವಾಗ ಆತ ತನ್ನ ಪ್ರಿಯತಮೆಯ ಮಾವ ಕೊಲೆ ಮಾಡಿರುವ ವಿಚಾರವನ್ನು ಪೊಲೀಸರಿಗೆ ಹೇಳಿದ್ದು ಕೊಲೆಗಾರನ ಪತ್ತೆಗೆ ಸಹಕಾರಿಯಾಯಿತು ಎಂದು ಹೆಸರು ತನಿಖಾ ತಂಡದಲ್ಲಿದ್ದ ಅಧಿಕಾರಿಯೊಬ್ಬರು ತಿಳಿಸಿದರು.

ವಿಚಾರಣೆ ಹಂತದಲ್ಲಿ ಪ್ರಕರಣ: ಹೆಣ್ಣೂರು ಠಾಣೆಯಲ್ಲಿ 2015ರಲ್ಲಿ ಇನ್ಸ್‌ಪೆಕ್ಟರ್‌ ಆಗಿದ್ದ ಇನ್ಸ್‌ಪೆಕ್ಟರ್‌ ಎಚ್‌.ಲಕ್ಷ್ಮೀನಾರಾಯಣ ಪ್ರಸಾದ್‌ ನೇತೃತ್ವದ ತಂಡ ಏಳು ವರ್ಷಗಳ ಹಿಂದೆ ನಡೆದಿದ್ದ ಸೆಲ್ವಕುಮಾರ್‌ ಕೊಲೆ ಪ್ರಕರಣವನ್ನು  ಬೇಧಿಸಿತ್ತು. ಸೆಲ್ವಕುಮಾರ್‌ ಕೊಲೆ ಆರೋಪಿ ಮೋಹನ್‌ ಪ್ರಸ್ತುತ ಜೈಲಿನಲ್ಲಿದ್ದು, ಆತನ ವಿರುದ್ಧ ತನಿಖಾ ತಂಡ ಸಲ್ಲಿಸಿದ್ದ ದೋಷಾರೋಪ ಪಟ್ಟಿ ಅನ್ವಯ ಪ್ರಕರಣ ವಿಚಾರಣೆ ಹಂತದಲ್ಲಿದೆ.

* ಮಂಜುನಾಥ ಲಘುಮೇನಹಳ್ಳಿ 

Advertisement

Udayavani is now on Telegram. Click here to join our channel and stay updated with the latest news.

Next