ಕೆ.ಆರ್.ಪುರ: ನಿವೇಶನ ವಿಚಾರಕ್ಕಾಗಿ ವ್ಯಕ್ತಿಯೊಬ್ಬನನ್ನು ದುಷ್ಕರ್ಮಿಗಳು ಕೊಂದ ಘಟನೆ ಹಳೇ ಮದ್ರಾಸ್ ರಸ್ತೆಯ ಹೇವನ್ ಹೋಟೆಲ್ ಬಳಿ ಗುರುವಾರ ನಡೆದಿದೆ. ಮಂಜುನಾಥ್ ಅಲಿ ಯಾಸ್ ವಾಟರ್ ಮಂಜು (30) ಕೊಲೆಯಾದವನು. ನಿವೇಶನ ವಿಚಾರವಾಗಿ ಸ್ಥಳೀಯ ಚರಣ್‌ರಾಜು ಜತೆ ಮಂಜು ಗಲಾಟೆ ಮಾಡಿಕೊಂಡಿದ್ದ. ಇದೇ ವಿಚಾರವಾಗಿ ಘಟನೆ ನಡೆದಿರುವ ಸಾಧ್ಯತೆಯಿದ್ದು, ಆರೋಪಿಗಳ ಪತ್ತೆಗೆ ನಾಲ್ಕು ತಂಡ ರಚಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಹೋಟೆಲ್ ಮತ್ತು ಅಂಗಡಿಗಳಿಗೆ ನೀರಿನ ಕ್ಯಾನ್ ಪೂರೈಸುವ ಕೆಲಸ ಮಾಡುತ್ತಿದ್ದ ಮಂಜು, ಪ್ರಿಯಾಂಕನಗರದಲ್ಲಿ ಪತ್ನಿ ಜತೆ ವಾಸವಾಗಿದ್ದ. ಮಂಜುನಾಥ್ ವಿರುದ್ಧ 2014-15ರಲ್ಲಿ ಕೊಲೆಯತ್ನ, ದೊಂಬಿ, ಗಲಾಟೆ, ಹಲವು ಪ್ರಕರಣಗಳ ಆರೋಪವಿದ್ದು, ಜೈಲಿಗೆ ಹೋಗಿ ಬಿಡುಗಡೆಯಾಗಿದ್ದ.
ಈ ಮಧ್ಯೆ ನಾಲ್ಕು ವರ್ಷಗಳ ಹಿಂದೆ ಶೀಗೇಹಳ್ಳಿ ನಿವಾಸಿ ಚರಣರಾಜ ಎಂಬಾತನಿಂದ ನಿವೇಶನ ಖರೀದಿ ಮಾಡಿದ್ದ ಮಂಜನಾಥ್ ಮನೆ ನಿರ್ಮಿಸಿದ್ದ. ಆದರೆ, ಈ ನಿವೇಶನದ ಮಾಲೀಕ ಚರಣರಾಜನಿಗೆ ಪೂರ್ತಿ ಹಣ ಪಾವತಿಸಿರಲಿಲ್ಲ. ಇದೇ ಕಾರಣಕ್ಕಾಗಿ ಮಂಜುನಾಥನ ಹೆಸರಿಗೆ ನಿವೇಶನ ನೊಂದಣಿಯಾಗಿರಲಿಲ್ಲ. ಈ ಸಂಬಂಧ ಬುಧವಾರ ರಾತ್ರಿ ಚರಣರಾಜ ಮತ್ತು ಮಂಜುನಾಥ ಮಧ್ಯೆ ಶೀಗೇಹಳ್ಳಿಯಲ್ಲಿ ಗಲಾಟೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ನಾಲ್ವರಿಂದ ಕೊಲೆ: ಗುರುವಾರ ಮಧ್ಯಾಹ್ನ 2 ಗಂಟೆ ಸುಮಾರಿಗೆ ಭಟ್ಟರಹಳ್ಳಿಯ ಹಳೇ ಮದ್ರಾಸ್ ರಸ್ತೆ ಸಮೀಪದ ಹೆವನ್ ಹೋಟೆಲ್‌ಗೆ ನೀರಿನ ಕ್ಯಾನ್ ವಿತರಿಸಲು ತೆರಳಿದ್ದ ಮಂಜುನಾಥ್‌ನನ್ನು ಎರಡು ದ್ವಿಚಕ್ರಗಳಲ್ಲಿ ಬಂದ ನಾಲ್ವರು ದುಷ್ಕರ್ಮಿಗಳು ಅಡ್ಡಗಟ್ಟಿ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿದರು. ಸಾರ್ವಜನಿಕವಾಗಿಯೇ ಬರ್ಬರವಾಗಿ ಹತ್ಯೆಗೈದು ಪರಾರಿಯಾಗಿದ್ದಾರೆ. ಈ ವಿಷಯ ತಿಳಿದು ಸ್ಥಳಕ್ಕೆ ಭೇಟಿ ನೀಡಿದ್ದ ಕೆ.ಆರ್.ಪುರ ಪೊಲೀಸರು ಸ್ಥಳ ಪರಿಶೀಲನೆ ನಡೆಸಿದ್ದು, ಮೃತ ದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ.
ಪ್ರಿಯಾಂಕನಗರದ ನಿವೇಶನ ಸಂಬಂಧ ಅರೋಪಿ ಚರಣರಾಜ ಮತ್ತು ಮೃತ ಮಂಜುನಾಥ ನಡುವೆ ಹಣಕಾಸಿನ ವ್ಯಾಜ್ಯವಿತ್ತು. ಹಣಕಾಸಿನ ವಿಚಾರವಾಗಿ ಬುಧವಾರ ರಾತ್ರಿ ಇಬ್ಬರ ನಡುವೆ ವಾಗ್ವಾದ ನಡೆದಿದೆ. ಈ ಹಿನ್ನೆಲೆಯಲ್ಲಿ ಚರಣರಾಜ, ಮುರಳಿ, ರಘು ಹಾಗೂ ಲಿಂಗರಾಜ ಮೇಲೆ ಶಂಕೆ ವ್ಯಕ್ತವಾಗಿದ್ದು, ಆರೋಪಿಗಳ ಪತ್ತೆಗೆ ನಾಲ್ಕು ವಿಶೇಷ ತಂಡ ರಚಿಸಲಾಗಿದೆ ಎಂದು ವೈಟ್‌ಫೀಲ್ಡ್ ವಲಯದ ಡಿಸಿಪಿ ಅಬ್ದುಲ್ ಅಹದ್ ತಿಳಿಸಿದರು.