Advertisement

ಹಣ ಬೇಕೆಂದು ಪೀಡಿಸಿದ ಸ್ನೇಹಿತನ ಕೊಲೆ

12:15 PM Jul 14, 2018 | |

ಬೆಂಗಳೂರು: ಕುಡಿಯಲು ಹಣ ನೀಡುವಂತೆ ಪೀಡಿಸುತ್ತಿದ್ದ ಯುವಕನನ್ನು ಸ್ನೇಹಿತನೇ ಹತ್ಯೆಗೈದ ಘಟನೆ ವಿವೇಕನಗರದ ಈಜಿಪುರದಲ್ಲಿ ಶುಕ್ರವಾರ ಬೆಳಗ್ಗೆ ನಡೆದಿದೆ. ಈಜಿಪುರದ ಇಂದಿರಾಗಾಂಧಿ ನಗರ ನಿವಾಸಿ ಆಕಾಶ್‌ (23) ಕೊಲೆಯಾದವ. ಈ ಸಂಬಂಧ ಮಹೇಂದ್ರ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.

Advertisement

ನಿತ್ಯ ಮದ್ಯ ಸೇವಿಸುತ್ತಿದ್ದ ಆಕಾಶ್‌, ಮದ್ಯ ಕೊಳ್ಳಲು ಹಣ ನೀಡುವಂತೆ ಪ್ರತಿ ದಿನ ಸ್ನೇಹಿತ ಮಹೇಂದ್ರನನ್ನು ಪೀಡಿಸುತ್ತಿದ್ದ. ಹಣ ಕೇಳಬೇಡ ಎಂದು ಸಾಕಷ್ಟು ಬಾರಿ ಹೇಳಿದ್ದರೂ ಪೀಡಿಸುವುದನ್ನು ಬಿಟ್ಟಿರಲಿಲ್ಲ. ಗುರುವಾರ ರಾತ್ರಿ ಮತ್ತೆ ಹಣಬೇಕೆಂದು ಕಾಡಿದ್ದು, ಕೋಪಗೊಂಡ ಮಹೇಂದ್ರ,  ಮಾರಕಾಸ್ತ್ರದಿಂದ ಆಕಾಶ್‌ ಮೇಲೆ ಹಲ್ಲೆ ನಡೆಸಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

ಇಂದಿರಾನಗರದ ತನ್ನ ಅಜ್ಜಿ ಮನೆಯಲ್ಲಿದ್ದ ಆಕಾಶ್‌, ನಿರುದ್ಯೋಗಿಯಾಗಿದ್ದ. ಈ ಮಧ್ಯೆ ವಿಪರೀತ ಮದ್ಯದ ಚಟ ಅಂಟಿಸಿಕೊಂಡಿದ್ದ. ಗುರುವಾರ ರಾತ್ರಿ ಈಜಿಪುರ ಸ್ಮಶಾನದ ಬಳಿಯಿರುವ ಬಾರ್‌ನಲ್ಲಿ ಮದ್ಯ ಸೇವಿಸಿದ್ದಾನೆ. ಹೊರಗೆ ಬರುವಾಗ ಎದುರಾದ ಮಹೇಂದ್ರನಿಗೆ ಮತ್ತೆ ಕುಡಿಯಲು ದುಡ್ಡು ಕೊಂಡುವಂತೆ ಪೀಡಿಸಿದ್ದಾನೆ. ಹಣ ಕೊಡಲು ನಿರಾಕರಿಸಿದಾಗ ಇಬ್ಬರ ನಡುವೆ ವಾಗ್ವಾದ ನಡೆದಿದೆ.

ಇದರಿಂದ ಕೋಪಗೊಂಡ ಮಹೇಂದ್ರ ಅಲ್ಲೇ ಇದ್ದ ಎಳನೀರು ಕೊಚ್ಚುವ ಮಚ್ಚಿನಿಂದ ಆಕಾಶ್‌ನ ತಲೆ ಮತ್ತು ಭುಜಕ್ಕೆ ಹೊಡೆದಿದ್ದಾನೆ. ಪರಿಣಾಮ ರಕ್ತಸ್ರಾವವಾಗಿದೆ. ಆದರೂ, ಆಸ್ಪತ್ರೆ ಅಥವಾ ಮನೆಗೆ ತೆರಳದ ಆಕಾಶ್‌ ಈಜಿಪುರದ ಸ್ಮಶಾನಕ್ಕೆ ಹೋಗಿ ಮಲಗಿದ್ದಾನೆ. ತೀವ್ರರಕ್ತಸ್ರಾವದಿಂದ ಆಕಾಶ್‌ ಸ್ಥಳದಲ್ಲೇ ಮೃತಪಟ್ಟಿದ್ದಾನೆ.

ಶುಕ್ರವಾರ ಬೆಳಗ್ಗೆ 8 ಗಂಟೆ ಸುಮಾರಿಗೆ ಆಕಾಶ್‌ ಶವ ಕಂಡ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದರು. ಸ್ಥಳಕ್ಕೆ ತೆರಳಿ ಪರಿಶೀಲಿಸಿದಾಗ ಕೊಲೆ ಪ್ರಕರಣ ಬೆಳಕಿಗೆ ಬಂದಿದೆ. ಗುರುವಾರ ಸಂಜೆ ಅಜ್ಜಿ ಮನೆಗೆ ಬಂದ ಮೃತ ಆಕಾಶ್‌, ನನಗೆ ಕೆಲಸ ಸಿಕ್ಕಿದೆ ತಮಿಳುನಾಡಿಗೆ ಹೋಗಿ ಬರುತ್ತೇನೆ ಎಂದು ಹೇಳಿ ಹೋಗಿದ್ದ ಎಂದು ಹೇಳಲಾಗಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next