Advertisement

ಮುಂಬೈನಲ್ಲಿ ಎಟಿಎಂ ಕದ್ದು ನಗರದಲ್ಲಿ ಮೋಜುಮಸ್ತಿ ಮಾಡುತ್ತಿದ್ದವರ ಸೆರೆ

11:43 AM Aug 09, 2017 | Team Udayavani |

ಬೆಂಗಳೂರು: ಐಷಾರಾಮಿ ಜೀವನ ನಡೆಸಲು ಮುಂಬೈನ ಕೆಲ ಎಟಿಎಂಗಳಲ್ಲಿ ಹಣ ಕಳವು ಮಾಡಿ ನಗರಕ್ಕೆ ಬಂದು ಮೂರು ತಿಂಗಳಿಂದ ತಲೆಮರೆಸಿಕೊಂಡಿದ್ದ ಮೂವರು ಆರೋಪಿಗಳನ್ನು ಕಬ್ಬನ್‌ಪಾರ್ಕ್‌ ಪೊಲೀಸರು ಬಂಧಿಸಿದ್ದಾರೆ.

Advertisement

ಮುಂಬೈ ಮೂಲದ ರಾಕೇಶ್‌ (24), ವಿಜಯ್‌ ಭಾನುಶಾಲಿ (24) ಹಾಗೂ ಚಡಿಲಾಲ್‌ ಗುಪ್ತ (22) ಬಂಧಿತರು. ಇವರಿಂದ 4.28 ಕೋಟಿ ರೂ. ಕಳವು ಮಾಡಿದ ಹಣದಿಂದ ಖರೀದಿಸಿದ್ದ ಚಿನ್ನಾಭರಣಗಳು ಹಾಗೂ ದುಬಾರಿ ಮೌಲ್ಯದ ಮೊಬೈಲ್‌ಗ‌ಳನ್ನು ವಶಕ್ಕೆ ಪಡೆಯಲಾಗಿದೆ. ಮೂವರು ಮುಂಬೈನ ಮೂರು ಎಟಿಎಂ ಕೇಂದ್ರಗಳಲ್ಲಿ 34 ಲಕ್ಷ ರೂ. ಕಳವು ಮಾಡಿದ್ದಾರೆ.

ಬಳಿಕ ಐಷಾರಾಮಿ ಜೀವನ ನಡೆಸಲು ನಾನಾ ಪ್ರವಾಸಿ ತಾಣಗಳಿಗೆ ಭೇಟಿ ನೀಡಿ ನಂತರ ಲ್ಯಾವೆಲ್ಲಿ ರಸ್ತೆಯಲ್ಲಿರುವ ಸದರನ್‌ ಸ್ಟಾರ್‌ ಹೋಟೆಲ್‌ನಲ್ಲಿ 3-4 ತಿಂಗಳುಗಳಿಂದ ನೆಲೆಸಿದ್ದರು. ಈ ಮಾಹಿತಿ ಮೇರೆಗೆ ದಾಳಿ ನಡೆಸಿ ಆರೋಪಿಗಳನ್ನು ಬಂಧಿಸಲಾಯಿತು  ಎಂದು ಕೇಂದ್ರ ವಿಭಾಗದ ಡಿಸಿಪಿ ಚಂದ್ರಗುಪ್ತಾ ತಿಳಿಸಿದ್ದಾರೆ.

ಆರೋಪಿ ರಾಕೇಶ್‌ ಮುಂಬೈಯಲ್ಲಿ ಖಾಸಗಿ ಕಂಪನಿಯೊಂದರಲ್ಲಿ ಕ್ಯಾಷ್‌ ಕಸ್ಟೋಡಿಯನ್‌ ಆಗಿ ಕಾರ್ಯನಿರ್ವಹಿಸುತ್ತಿದ್ದು, ವಿಜಯ್‌ ಕೋರಿಯರ್‌ ಕಚೇರಿಯಲ್ಲಿ ಕೆಲಸ ಮಾಡಿಕೊಂಡಿದ್ದ. ಇನ್ನು ಮೂರನೇ ಆರೋಪಿ ಗುಪ್ತ ಯಾವುದೇ ಕೆಲಸಕ್ಕೆ ಹೋಗುತ್ತಿರಲಿಲ್ಲ. ರಾಕೇಶ್‌ಗೆ ಎಟಿಎಂಗಳಿಗೆ ಹಣ ತುಂಬುವ ಕೆಲಸ ನೀಡಲಾಗಿತ್ತು. ಹಾಗಾಗಿ ಆತನಿಗೆ ಎಟಿಎಂ ಮಷಿನ್‌ಗಳ ಕೀಗಳು ಹಾಗೂ ಪಾಸ್‌ವರ್ಡ್‌ಗಳ ಬಗ್ಗೆ ಹೆಚ್ಚು ಅರಿವಿತ್ತು. 

ಮೋಜಿನ ಜೀವನ ನಡೆಸಲು ತನ್ನ ಸ್ನೇಹಿತರ ಜತೆ ಸೇರಿ ಭದ್ರತಾ ಸಿಬ್ಬಂದಿಗಳಿಲ್ಲದ ಎಟಿಎಂಗಳನ್ನು ಗುರಿಯಾಗಿಸಿಕೊಂಡು ಕೀ ಹಾಗೂ ಪಾಸ್‌ವರ್ಡ್‌ ಬಳಸಿ ಹಣ ದೋಚುತ್ತಿದ್ದರು. ಮೇ 15 ಮತ್ತು 16ರಂದು ಮುಂಬೈನ ಕೊಲೆಗಾಂವ್‌, ಸೊನಾರ್‌ಪಡ್‌ ಮತ್ತು ಪಿಸಾವಲಿಯಾ ಪ್ರದೇಶದಲ್ಲಿನ ಮೂರು ಎಟಿಎಂಗಳಲ್ಲಿ ಸುಮಾರು 34 ಲಕ್ಷ ರೂ. ಹಣವನ್ನು ಕಳವು ಮಾಡಿದ್ದರು.

Advertisement

ಈ ಸಂಬಂಧ ಮುಂಬೈಯಲ್ಲಿ ಆರೋಪಿಗಳ ಮೇಲೆ ಪ್ರಕರಣಗಳು ದಾಖಲಾಗಿದ್ದವು. ಪೊಲೀಸರಿಂದ ತಲೆಮರೆಸಿಕೊಳ್ಳುವ ಸಲುವಾಗಿ ಆರೋಪಿಗಳು, ದೆಹಲಿಯ ಕುಲುಮನಾಲಿ, ಅಮೃತ್‌ಸರ್‌, ಜಮ್ಮು, ಗೋವಾ, ಪೂನಾಗಳ ಪ್ರವಾಸಿ ತಾಣಗಳಿಗೆ ಭೇಟಿ ನೀಡಿ, ಐಷಾರಾಮಿ ಜೀವನ ನಡೆಸುತ್ತಿದ್ದರು ಎಂದು ಅವರು ತಿಳಿಸಿದರು.

ಜೂನ್‌ನಲ್ಲೇ ಬಂದಿದ್ದ ಆರೋಪಿಗಳು
ಜೂನ್‌ 23ರಂದೆ ಬೆಂಗಳೂರಿಗೆ ಬಂದಿದ್ದ ಆರೋಪಿಗಳು ಇಲ್ಲಿನ ಸದರನ್‌ ಸ್ಟಾರ್‌ ಹೋಟೆಲ್‌ನಲ್ಲಿ ತಂಗಿದ್ದರು. ಅಕ್ಕ-ಪಕ್ಕದ ಬಾರ್‌ ಮತ್ತು ಪಬ್‌ಗಳಿಗೆ ನಿತ್ಯ ಹೋಗುತ್ತಿದ್ದರು. ಅಲ್ಲದೇ ಆ.7ರಂದೆ ಕೊಠಡಿ ಖಾಲಿ ಮಾಡಿ ಮುಂಬೈಗೆ ಹೋಗುವ ತಯಾರಿಯಲ್ಲಿದ್ದರು ಎಂದು ವಿಚಾರಣೆ ವೇಳೆ ತಿಳಿದು ಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ತಪಾಸಣೆ ವೇಳೆ ಪತ್ತೆ
ಸಾಮಾನ್ಯವಾಗಿ ಆ.15ರಂದು ಸ್ವಾತಂತ್ಯ ದಿನಾಚರಣೆ ಪ್ರಯುಕ್ತ ನಗರಾದ್ಯಂತ ಎಲ್ಲಾ ಹೋಟೆಲ್‌ಗ‌ಳು, ಪ್ರವಾಸಿಗಳಲ್ಲಿರುವ ವಸತಿ ಗೃಹಗಳು ಹಾಗೂ ಶಂಕಾಸ್ಪದ ಸ್ಥಳಗಳಲ್ಲಿ ತಪಾಸಣೆ ನಡೆಸಲಾಗುತ್ತದೆ. ಇದೇ ರೀತಿ ತಮ್ಮ ವ್ಯಾಪ್ತಿಯ ಎಂ.ಜಿ.ರಸ್ತೆ, ಲ್ಯಾವೆಲ್ಲಿ ರಸ್ತೆ ಸೇರಿದಂತೆ ಕೆಲ ಹೋಟೆಲ್‌ಗ‌ಳಲ್ಲಿ ಅತಿಥಿಗಳ ಬಗ್ಗೆ ತಪಾಸಣೆ ನಡೆಸುವ ಸಂದರ್ಭದಲ್ಲಿ ಆರೋಪಿಗಳ ಬಗ್ಗೆ ಮಾಹಿತಿ ಸಿಕ್ಕಿತ್ತು.

ಈ ಸಂಬಂಧ ಅವರನ್ನು ವಿಚಾರಣೆ ನಡೆಸಿದಾಗ ಆರಂಭದಲ್ಲಿ ವಿವರ ನೀಡಲು ನಿರಾಕರಿಸಿದರು. ಅಲ್ಲದೇ ಜೂನ್‌ ತಿಂಗಳಿಂದ ಇದುವರೆಗೂ ಯಾವುದೇ ಕೆಲಸಕ್ಕೆ ಹೋಗದೆ ತಂಗಿರುವುದು ಅನುಮಾನಕ್ಕೆ ಕಾರಣವಾಯಿತು. ಈ ಹಿನ್ನೆಲೆಯಲ್ಲಿ ಠಾಣೆಗೆ ಕರೆದೊಯ್ದು ವಿಚಾರಣೆ ತೀವ್ರಗೊಳಿಸಿದಾಗ ಕಳವು ಮಾಡಿರುವ ವಿಚಾರ ಬಾಯಿಬಿಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next