ಬೆಂಗಳೂರು: ಚಿನ್ನದಂಗಡಿಯಲ್ಲಿ ಕದ್ದಿದ್ದ ಚಿನ್ನಾಭರಣಗಳನ್ನು ಮತ್ತೂಂದು ಜ್ಯುವೆಲ್ಲರಿಯಲ್ಲಿ ಮಾರಾಟ ಮಾಡಲು ಬಂದಿದ್ದ ಕ್ಯಾಬ್ ಚಾಲಕನನ್ನು ಸುಬ್ರಹ್ಮಣ್ಯಪುರ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಸುಂಕದಕಟ್ಟೆ ನಿವಾಸಿ ಬಿ.ಎಸ್. ಲಿಖಿತ್ (25) ಬಂಧಿತ. ಆರೋಪಿಯಿಂದ 9 ಲಕ್ಷ ರೂ. ಮೌಲ್ಯದ 126 ಗ್ರಾಂ ಚಿನ್ನಾಭರಣ ವಶಕ್ಕೆ ಪಡೆಯಲಾಗಿದೆ ಎಂದು ನಗರ ಪೊಲೀಸ್ ಆಯುಕ್ತ ಬಿ.ದಯಾನಂದ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.
ಆರೋಪಿ ಠಾಣೆ ವ್ಯಾಪ್ತಿಯ ಉತ್ತರಹಳ್ಳಿ ಸರ್ಕಲ್ ಬಳಿಯ ಜ್ಯುವೆಲ್ಲರಿ ಶಾಪ್ ಮುಂದೆ ಚಿನ್ನದ ಸರಗಳ ಮಾರುವ ಸಲುವಾಗಿ ಅನುಮಾನಾಸ್ಪದವಾಗಿ ಓಡಾಡುತ್ತಿದ್ದ. ಈ ಮಾಹಿತಿ ಮೇರೆಗೆ ಠಾಣೆಯ ಎಎಸ್ಐ ಗುರುಮೂರ್ತಿ ಮತ್ತು ಸಿಬ್ಬಂದಿ ಸ್ಥಳಕ್ಕೆ ತೆರಳಿ ಆರೋಪಿಯನ್ನು ವಶಕ್ಕೆ ಪಡೆದು ಪರಿಶೀಲಿಸಿದಾಗ, ಬ್ಯಾಗ್ನಲ್ಲಿ ಚಿನ್ನದ ಸರಗಳು ಪತ್ತೆಯಾಗಿದೆ. ನಂತರ ಠಾಣೆಗೆ ಕರೆದೊಯ್ದು ವಿಚಾರಣೆ ನಡೆಸಿದಾಗ ಕಳ್ಳತನದ ಬಗ್ಗೆ ತಪ್ಪೊಪ್ಪಿಕೊಂಡಿದ್ದಾನೆ ಎಂದರು.
ವಂಚನೆ ಪ್ರಕರಣದಲ್ಲಿ ಜಾಮೀನು ಪಡೆದು ಬಿಡುಗಡೆಯಾದ ಬಳಿಕ ಆರೋಪಿ ಕ್ಯಾಬ್ ಚಾಲಕನಾಗಿ ಕೆಲಸ ಮಾಡುತ್ತಿದ್ದ. ನ.7ರಂದು ಪ್ರಯಾಣಿಕರೊಬ್ಬರನ್ನು ಡ್ರಾಪ್ ಮಾಡಲು ಚಂದಾಪುರಕ್ಕೆ ಹೋಗಿದ್ದಾನೆ. ಈ ವೇಳೆ ಗ್ರಾಹಕನ ಸೋಗಿನಲ್ಲಿ ಚಿನ್ನಾಭರಣ ಮಳಿಗೆಯೊಂದಕ್ಕೆ ಹೋದ ಆರೋಪಿ, ಚಿನ್ನದ ಸರ ಮತ್ತು ಉಂಗುರ ತೋರಿಸುವಂತೆ ಹೇಳಿದ್ದಾನೆ. ಅಂಗಡಿ ಮಾಲೀಕರ ಚಿನ್ನದ ಸರ ತೋರಿಸಿದ್ದಾನೆ. ಬಳಿಕ ಆರೋಪಿ ಉಂಗುರ ತೋರಿಸುವಂತೆ ಹೇಳಿದ್ದ. ಆಗ ಮಾಲಿಕರು ಉಂಗುರ ತರಲು ಮಳಿಗೆಯ ಒಳಗಡೆ ಇರುವ ಮತ್ತೂಂದು ಕೋಣೆಗೆ ಹೋಗಿದ್ದಾರೆ. ಈ ಸಂದರ್ಭದಲ್ಲಿ ಆರೋಪಿ ಹತ್ತಾರು ಚಿನ್ನದ ಸರಗಳು ಇದ್ದ ಬಾಕ್ಸ್ ಸಮೇತ ಕದ್ದು ಪರಾರಿಯಾಗಿದ್ದ. ಈ ಸಂಬಂಧ ಸೂರ್ಯನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಆದರೆ, ಆರೋಪಿ ಸುಳಿವು ಸಿಕ್ಕಿರಲಿಲ್ಲ. ಈ ಮಧ್ಯೆ ಆರೋಪಿ ಸುಬ್ರಹ್ಮಣ್ಯಪುರ ಠಾಣೆ ವ್ಯಾಪ್ತಿಯ ಜ್ಯುವೆಲ್ಲರಿ ಶಾಪ್ ಬಳಿ ಕಳವು ಚಿನ್ನದ ಸರಗಳ ಮಾರಾಟ್ಕಕೆ ಬಂದಾಗ ಸಿಕ್ಕಿದ್ದಿದ್ದಾನೆ ಎಂದು ಪೊಲೀಸ್ ಆಯುಕ್ತರು ಹೇಳಿದರು.
ಬೇಲ್ಗಾಗಿ ಲಕ್ಷಾಂತರ ರೂ. : ಆರೋಪಿ ಈ ಹಿಂದೆ ನಗರದ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುವಾಗ 25 ಲಕ್ಷ ರೂ. ವಂಚನೆ ಮಾಡಿದ್ದ. ಈ ಸಂಬಂಧ ದ ಡಿಸೆಂಬರ್ನಲ್ಲಿ ಆರೋಪಿಯನ್ನು ಪೊಲೀಸರು ಬಂಧಿಸಿದ್ದರು. ನಂತರ ಜಾಮೀನಿಗಾಗಿ ವಕೀಲರ ಶುಲ್ಕ ಪಾವತಿಸಲು ಲಕ್ಷಾಂತರ ರೂ. ಸಾಲ ಮಾಡಿಕೊಂಡಿದ್ದ.. ಸುಬ್ರಹ್ಮಣ್ಯಪುರ ಠಾಣಾಧಿಕಾರಿ ಎಂ.ಎಸ್.ರಾಜು ನೇತೃತ್ವದಲ್ಲಿ ಕಾರ್ಯಾಚರಣೆ ನಡೆದಿದೆ.