Advertisement

30 ರು.ಗೆ ಮೊಬೈಲ್‌ನಲ್ಲೇ ಸಿನಿಮಾ

09:49 AM Apr 05, 2019 | Team Udayavani |

ಕನ್ನಡ ಚಿತ್ರರಂಗದಲ್ಲಿ ಚಿತ್ರಮಂದಿರಗಳ ಸಮಸ್ಯೆ ಬಗ್ಗೆ ಎಲ್ಲರಿಗೂ ಗೊತ್ತು. ದೊಡ್ಡ ನಿರ್ಮಾಪಕರು ಹೇಗೋ ಚಿತ್ರಮಂದಿರಗಳನ್ನು ಹೊಂದಿಸಿಕೊಂಡು ಸಿನಿಮಾ ಪ್ರದರ್ಶನ ಮಾಡುತ್ತಾರೆ. ಆದರೆ, ಚಿಕ್ಕ ನಿರ್ಮಾಪಕರ ಸಮಸ್ಯೆ ಕೇಳ್ಳೋರು ಯಾರು? ಹೀಗಿರುವಾಗಲೇ ಅಂತಹ ಸಣ್ಣ ಬಜೆಟ್‌ ಚಿತ್ರ ನಿರ್ಮಾಪಕರಿಗೊಂದು ಹೊಸ ವೇದಿಕೆ ಸೃಷ್ಟಿಯಾಗುತ್ತಿದೆ.

Advertisement

ಅದು ಬೇರೇನೂ ಅಲ್ಲ, ಕ್ಯೂ ಸ್ಟಾರ್‌ ಎಂಬ ಹೊಸ ಆ್ಯಪ್‌. ಈ ಆ್ಯಪ್‌ ಮೂಲಕ ನೊಂದ ನಿರ್ಮಾಪಕರಿಗೆ ಹೇಗೆಲ್ಲಾ ಸಹಾಯ ಆಗುತ್ತೆ ಎಂಬ ಕುರಿತು ಸ್ವತಃ ಆ್ಯಪ್‌ ಹುಟ್ಟು ಹಾಕುತ್ತಿರುವ ಮುರಳಿ ಸ್ಪಷ್ಟಪಡಿಸುವುದು ಹೀಗೆ. “ಪ್ರತಿ ಚಿತ್ರಗಳಿಗೂ ಒಂದೊಂದು ಬಾರ್‌ಕೋಡ್‌ ಕೊಡಲಾಗುತ್ತಿದ್ದು, ಅದನ್ನು ಸ್ಕ್ಯಾನ್‌ ಮಾಡಿದರೆ, ಆ ಚಿತ್ರದ ಟ್ರೇಲರ್‌, ಟೀಸರ್‌, ಸಾಂಗ್ಸ್‌ ಸೇರಿದಂತೆ ಚಿತ್ರದ ಮಾಹಿತಿಗಳನ್ನು ಕಾಣಬಹುದು.

ನಾವೊಂದು ಕ್ಯೂ ಸ್ಟಾರ್‌ ಎಂಬ ಆ್ಯಪ್‌ ಹೊರತರುತ್ತಿದ್ದು, ಅಲ್ಲಿ ಕನ್ನಡದ ಅನೇಕ ಚಿತ್ರಗಳನ್ನು ನೋಡುವ ಅವಕಾಶ ಮಾಡಿಕೊಡುತ್ತಿದ್ದೇವೆ. ಕನ್ನಡ ಸಿನಿಮಾ ಪ್ರೇಕ್ಷಕರು ಕೇವಲ 30 ರುಪಾಯಿ ಕೊಟ್ಟರೆ ಸಿನಿಮಾ ನೋಡಬಹುದು. ಈಗ ಒಂದು ಫ್ಯಾಮಿಲಿ ಚಿತ್ರಮಂದಿರಕ್ಕೆ ಹೋಗಿ ಸಿನಿಮಾ ನೋಡಬೇಕಾದರೆ ಕನಿಷ್ಟ ಒಬ್ಬರಿಗೆ 200 ರುಪಾಯಿ ಬೇಕು.

ಕೆಲ ಚಿತ್ರಗಳು ಚಿತ್ರಮಂದಿರದಲ್ಲಿ ವಾರವೂ ಇರುವುದಿಲ್ಲ. ಹಾಗಾಗಿ ಚಿತ್ರಮಂದಿರಗಳಲ್ಲಿ ಸಿಗದ ಸಣ್ಣ ನಿರ್ಮಾಪಕರ ಚಿತ್ರಗಳನ್ನು ಈ ಹೊಸ ಆ್ಯಪ್‌ನಲ್ಲಿ ನೋಡಬಹುದು. ಆದರೆ, ಕೇವಲ ನಾಲ್ಕು ದಿನಗಳು ಮಾತ್ರ ಆ ಚಿತ್ರ ಆ್ಯಪ್‌ನಲ್ಲಿರುತ್ತದೆ. ಶುಕ್ರವಾರ, ಶನಿವಾರ, ಭಾನುವಾರ ಮತ್ತು ಸೋಮವಾರ ಮಾತ್ರ ಆ ಚಿತ್ರ ನೋಡಬಹುದಾಗಿದೆ.

ತಿಂಗಳಲ್ಲಿ ನಾಲ್ಕು ಚಿತ್ರಗಳನ್ನು ಅಪ್‌ಲೋಡ್‌ ಮಾಡುವ ಯೋಚನೆ ಇದೆ. ನಮ್ಮಲ್ಲಿ ಈಗ 3.50 ಲಕ್ಷ ಜನ ನೋಂದಣಿ ಮಾಡಿಕೊಂಡಿದ್ದಾರೆ. ಮುಂದಿನ ದಿನಗಳಲ್ಲಿ 10 ಲಕ್ಷದ ಗುರಿ ಹೊಂದಿದ್ದೇವೆ. ಅದು ತಲುಪಿದ ಕೂಡಲೇ ನಾವು ಕ್ಯೂ ಸ್ಟಾರ್‌ ಆ್ಯಪ್‌ ಮೂಲಕ ಕನ್ನಡದ ಅನೇಕ ಸಿನಿಮಾಗಳನ್ನು ತೋರಿಸುವ ಉದ್ದೇಶ ಇಟ್ಟುಕೊಂಡಿದ್ದೇವೆ.

Advertisement

ಇದು ಸಣ್ಣ ನಿರ್ಮಾಪಕರಿಗೆ ಒಂದಷ್ಟು ಸಹಾಯ ಮಾಡುವಂತಹ ಕೆಲಸವಷ್ಟೇ. ಇಲ್ಲಿ ಥಿಯೇಟರ್‌ನಲ್ಲಿ ಬಿಡುಗಡೆ ಮಾಡುವ ದಿನದಂದೇ ಆ ಚಿತ್ರವನ್ನು ಕೊಟ್ಟರೆ, ನಮ್ಮಲ್ಲೂ ನಾಲ್ಕು ದಿನ ಪ್ರದರ್ಶನ ಮಾಡುತ್ತೇವೆ. ಇದು ಮೊಬೈಲ್‌ನಲ್ಲೇ ನೋಡುವಂತಹ ಅವಕಾಶ ಕಲ್ಪಿಸಿಕೊಡಲಾಗುತ್ತದೆ. ತಿಂಗಳಿಗೆ 120 ರು. ನೋಂದಣಿಯಾದವರಿಂದ ಪಡೆದು, ಒಂದು ಸಿನಿಮಾಗೆ 30 ರು.ನಂತೆ ನಾಲ್ಕು ಚಿತ್ರ ತೋರಿಸುತ್ತೇವೆ.

ಇದು ಡಿಜಿಟಲ್‌ ಫ್ಲಾಟ್‌ಫಾರ್ಮ್ನ ಇನ್ನೊಂದು ಹಂತವಾಗಿದೆ. ಇದು ಸಣ್ಣ ಪ್ರಯತ್ನವಷ್ಟೇ. ಹಾಗಂತ ನಿರ್ಮಾಪಕರ ಸಮಸ್ಯೆ ಬಗೆಹರಿಸುವ ದೊಡ್ಡ ಪ್ರಯತ್ನವಲ್ಲ. ಇಲ್ಲಿ ಸಿನಿಮಾಗಳು ಡೌನ್‌ಲೋಡ್‌ ಆಗಲ್ಲ. ಶೇರ್‌ ಮಾಡುವ ಅವಕಾಶ ಇರಲ್ಲ. ಕೇವಲ ನಾಲ್ಕು ದಿನಗಳ ಪ್ರದರ್ಶನ ಮಾತ್ರ ಇರುತ್ತೆ. ಆದರೆ, ಎಷ್ಟು ಸಲ ಬೇಕಾದರೂ ಚಿತ್ರ ನೋಡಬಹುದು.

30 ರು. ಶುಲ್ಕದಲ್ಲಿ 15 ರುಪಾಯಿ ನಿರ್ಮಾಪಕರಿಗೆ ಹೋದರೆ, ಇನ್ನುಳಿದ 15 ರುಪಾಯಿ ಕಂಪೆನಿಗೆ ಹೋಗುತ್ತದೆ. ಸದ್ಯಕ್ಕೆ ತೆಲುಗು, ತಮಿಳು ಚಿತ್ರಗಳಿಂದಲೂ ಬೇಡಿಕೆ ಹೆಚ್ಚುತ್ತಿದೆ. ಮೇ 1 ರಿಂದ ಆ್ಯಪ್‌ಗೆ ಚಾಲನೆ ಸಿಗಲಿದೆ. ಮೊದಲ ಚಿತ್ರವಾಗಿ “ಪಯಣಿಗರು’ ಚಿತ್ರ ಪ್ರದರ್ಶನ ಮಾಡಲಾಗುತ್ತದೆ. ಇಲ್ಲಿ ಯಾವುದೇ ಪೈರಸಿ ಕಾಟ ಇರಲ್ಲ.

ಸರ್ವರ್‌ ಬೇಸ್ಡ್ ಆಗಿರುವುದರಿಂದ ನಿಮ್ಮ ಚಿತ್ರವನ್ನು ಎಷ್ಟು ಜನ ನೋಡಿದ್ದಾರೆ ಎಂಬುದು ಸ್ಪಷ್ಟವಾಗಿ ಗೊತ್ತಾಗಲಿದೆ. ಟಿವಿಯಲ್ಲಿ ನೋಡುವಂತಹ ಮಿರರಿಂಗ್‌ ವ್ಯವಸ್ಥೆ ಇಲ್ಲ. ಮೊಬೈಲ್‌ ನೋಡುವ ವರ್ಗವೇ ಇರುವುದರಿಂದ ಅಂಥವರಿಗೆ ಇದೊಂದು ಹೊಸ ವೇದಿಕೆ. ನಿರ್ಮಾಪಕರಿಗೆ ಒಳ್ಳೆಯದಾಗಬೇಕೆಂಬ ಉದ್ದೇಶ ಹೊರತು ಬೇರೇನೂ ಇಲ್ಲ.

ಇದಕ್ಕಾಗಿ ಯಾವುದೇ ಶುಲ್ಕವೂ ಚಿತ್ರತಂಡದಿಂದ ಪಡೆಯಲ್ಲ. ಎಷ್ಟು ಜನ ನೋಡುತ್ತಾರೋ, ಅಷ್ಟು ಹಣದ ಅರ್ಧದಷ್ಟು ನಿರ್ಮಾಪಕರಿಗೆ ಸಂದಾಯವಾಗಲಿದೆ. ಕನ್ನಡದಲ್ಲಿ ನೂರಾರು ಚಿತ್ರಗಳಿವೆ. ಜನರಿಗೆ ತಲುಪದೇ ಇರುವ ಸಿನಿಮಾ ಕೊಡಿ. ನಾವು ತಲುಪಿಸುತ್ತೇವೆ. ನಿಮಗೂ ಕಾಸು ಕೊಡುತ್ತೇವೆ’ ಎನ್ನುತ್ತಾರೆ ಮುರಳಿ.

Advertisement

Udayavani is now on Telegram. Click here to join our channel and stay updated with the latest news.

Next