ಅನ್ನಭಾಗ್ಯ ಯೋಜನೆಯಡಿ ಬಿಪಿಎಲ್ ಕಾರ್ಡ್‌ದಾರರಿಗೆ ಸದ್ಯ ನೀಡುತ್ತಿರುವ 5 ಕೆ.ಜಿ.ಅಕ್ಕಿ ಜತೆಗೆ ಹೆಚ್ಚುವರಿಯಾಗಿ ಐದು ಕೆಜಿ ಅಕ್ಕಿ ವಿತರಿಸುವ ಬದಲಿಗೆ ಫಲಾನುಭವಿಗಳ ಖಾತೆಗೆ ನೇರವಾಗಿ ಹಣ ಪಾವತಿಸುವ ರಾಜ್ಯ ಸರ್ಕಾರದ ನಿರ್ಧಾರ ಅತ್ಯಂತ ಸ್ವಾಗತಾರ್ಹ ಹಾಗೂ ಸಮಯೋಚಿತ. ಇದರೊಂದಿಗೆ ಕಳೆದ ಒಂದು ತಿಂಗಳಿಂದ ಅನ್ನಭಾಗ್ಯ ಯೋಜನೆಯಡಿ ಅಕ್ಕಿ ವಿತರಣೆ ಸಂಬಂಧ ಉಂಟಾಗಿದ್ದ ಗೊಂದಲ-ಸಮಸ್ಯೆ-ವಿವಾದಗಳು ಬಹುತೇಕ ಬಗೆಹರಿದಂತಾಗಿದೆ.
ಚುನಾವಣಾ ಪೂರ್ವದಲ್ಲಿ ಕಾಂಗ್ರೆಸ್ ಘೋಷಿಸಿದ್ದ 5 ಗ್ಯಾರಂಟಿಗಳ ಪೈಕಿ 10 ಕೆಜಿ ಅಕ್ಕಿ ವಿತರಣೆಯೂ ಒಂದು. ಈ ಯೋಜನೆ ಜಾರಿಗೆ ಕೇಂದ್ರದಿಂದ ಹೆಚ್ಚುವರಿ ಅಕ್ಕಿ ಖರೀದಿಸಲು ರಾಜ್ಯ ಸರ್ಕಾರ ನಡೆಸಿದ ಎಲ್ಲಾ ಪ್ರಯತ್ನಗಳು ಕೈಕೊಟ್ಟವು. ಈ ಬೆಳವಣಿಗೆ ರಾಜಕೀಯ ವಾಕ್ಸಮರಕ್ಕೂ ದಾರಿ ಮಾಡಿಕೊಟ್ಟಿತ್ತು. ಭತ್ತ ಬೆಳೆಯುವ ಪ್ರಮುಖ ರಾಜ್ಯಗಳಾದ ಛತ್ತೀಸಗಡ, ತೆಲಂಗಾಣ, ಆಂಧ್ರಪ್ರದೇಶದಿಂದ ಅಕ್ಕಿ ಸಿಗ ಲಿಲ್ಲ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೇಂದ್ರ ಗೃಹ ಸಚಿವ ಅಮಿತ್ ಶಾ ಹಾಗೂ ರಾಜ್ಯ ಆಹಾರ ಸಚಿವ ಕೆ.ಎಚ್.ಮುನಿಯಪ್ಪ ಅವರು ಕೇಂದ್ರ ಆಹಾರ ಹಾಗೂ ನಾಗರಿಕ ಪೂರೈಕೆ ಸಚಿವ ಪಿಯೂಷ್ ಗೋಯಲ್ ಅವರನ್ನು ಭೇಟಿ ಮಾಡಿ ಮನವಿ ಮಾಡಿದರೂ ಸ್ಪಂದನೆ ಸಿಗಲಿಲ್ಲ. ಎಫ್ಸಿಐನಿಂದ ಕೆಜಿಗೆ 34 ರೂ.ನಂತೆ ಖರೀದಿಸಲು ಸಿದ್ದವಿದ್ದರೂ ಕೇಂದ್ರ ಒಪ್ಪಲಿಲ್ಲ. ಜತೆಗೆ ಎನ್‌ಸಿಎಫ್, ನಾಫೆಡ್, ಕೇಂದ್ರೀಯ ಭಂಡಾರಗಳು ಎಫ್ಸಿಐಗಿಂತ ಹೆಚ್ಚು ದರ ಕೋಟ್ ಮಾಡಿದ್ದವು. ಹೀಗಾಗಿ ದುಬಾರಿ ಬೆಲೆ ನೀಡಿ ಅಕ್ಕಿ ಖರೀದಿಸಿ ವಿತರಣೆ ಬದಲಿಗೆ ಅಷ್ಟೇ ಹಣ ನೀಡುವ ತೀರ್ಮಾನ ನ್ಯಾಯಸಮ್ಮತವಾಗಿದೆ.
ಮಾಸಿಕ 2.28 ಲಕ್ಷ ಮೆಟ್ರಿಕ್ ಟನ್ ಅಕ್ಕಿ ಅಲಭ್ಯತೆ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಅಕ್ಕಿ ಬದಲಿಗೆ ಅಂದರೆ ಅಕ್ಕಿ ಖರೀದಿಗೆ ವ್ಯಯವಾಗುತ್ತಿದ್ದ ಹಣವನ್ನೇ ಈಗ ಕಾರ್ಡ್‌ದಾರರಿಗೆ ಪಾವತಿಸಲು ನಿರ್ಧರಿಸಿದೆ. ಹೀಗಾಗಿ 85 ಲಕ್ಷ ಕಾರ್ಡ್‌ದಾರ ಫಲಾನುಭವಿಗಳಿಗೆ ಅಕ್ಕಿ ಬದಲಿಗೆ ತಮ್ಮ ಖಾತೆಗೆ ಹಣ ಸೇರುತ್ತಿದೆ. ಬಿಪಿಎಲ್ ಕಾರ್ಡ್‌ನಲ್ಲಿ ಹೆಸರಿರುವ ಎಲ್ಲಾ ಮಂದಿಗೂ ತಲಾ 170 ರೂ.ಗಳಂತೆ ಅಂದರೆ ಕನಿಷ್ಟ 4 ಮಂದಿ ಇದ್ದರೆ ಆ ಮನೆಗೆ 680 ರೂ. ಇಲ್ಲವೇ ಐದು ಮಂದಿ ಇದ್ದರೆ 850 ರೂ. ದೊರೆಯಲಿದೆ. ಇದಕ್ಕಾಗಿ ಸರ್ಕಾರ ಪ್ರತಿ ತಿಂಗಳು 750 ರಿಂದ 800 ಕೋಟಿ ರೂ.ಗಳನ್ನು ವ್ಯಯ ಮಾಡಲಿದೆ. ಈ ನಿರ್ಧಾರದೊಂದಿಗೆ ರಾಜ್ಯ ಸರ್ಕಾರ ಮುಂದಿನ ವಾರದಿಂದ ಆರಂಭವಾಗಲಿರುವ ಅಧಿವೇಶನದಲ್ಲಿ ಪ್ರತಿಪಕ್ಷಗಳಿಂದ ಎದುರಾಗಬಹುದಾಗಿದ್ದ ಟೀಕಾಸ್ತ್ರಗಳನ್ನು ತಪ್ಪಿಸಿಕೊಂಡಂತೆ ಅಂದರೆ ಬೀಸೋದೊಣ್ಣೆಯಿಂದ ಪಾರಾದಂತೆ ಅಗಿದೆ.
ಅನ್ನಭಾಗ್ಯ ಯೋಜನೆಯ ಅಕ್ಕಿ ಪಡೆದ ಫಲಾನುಭವಿಗಳು ತಮಗೆ ಹೆಚ್ಚುವರಿಯಾದ ಅಕ್ಕಿಯನ್ನು ಕಾಳಸಂತೆಯಲ್ಲಿ ಮಾರಾಟ ಮಾಡಿ ಅದರಿಂದ ಬಂದ ಹಣವನ್ನು ತಮಗಿಷ್ಟ ಬಂದಂತೆ ವೆಚ್ಚ ಮಾಡುತ್ತಾರೆ ಎಂಬುದು ಮೊದಲಿನಿಂದಲೂ ಇರುವ ಆರೋಪ. ಈಗ ಸರ್ಕಾರವೇ ಅಕ್ಕಿ ಬದಲಿಗೆ ಹಣವನ್ನು ಖಾತೆಗೆ ಹಾಕುವುದರಿಂದ ಈ ಹಣ ದುರ್ಬಳಕೆ ಆಗಬಾರದು. ಸರ್ಕಾರ ಯಾವ ಉದ್ದೇಶಕ್ಕೆ ಹಣ ಕೊಟ್ಟಿದೆಯೋ ಅದೇ ಉದ್ದೇಶಕ್ಕೆ ಹಣ ಬಳಸಿದರೆ ಸೂಕ್ತ. ವಿಶೇಷವಾಗಿ ಅಕ್ಕಿ ಬದಲಿಗೆ ಹಣ ಹಾಕುವುದರಿಂದ ಇಡೀ ವ್ಯವಸ್ಥೆ ಪಾರದರ್ಶಕವಾಗಿರುತ್ತದೆ. ಅಕ್ಕಿ ಖರೀದಿ ಟೆಂಡರ್‌ನಲ್ಲಿ ಗೋಲ್‌ಮಾಲ್, ಸಾಗಣೆ ವೆಚ್ಚ ದುಬಾರಿ, ಕಳಪೆ ಅಕ್ಕಿ ಪೂರೈಕೆ, ಸಕಾಲಕ್ಕೆ ಬಾರದ ಅಕ್ಕಿ, ನ್ಯಾಯ ಬೆಲೆ ಅಂಗಡಿಗಳಲ್ಲಿ ತೂಕದಲ್ಲಿ ಮೋಸ, ಅಕ್ಕಿ ಪಡೆಯಲು ನೂಕುನುಗ್ಗಲು ಈ ರೀತಿಯ ಟೀಕೆಗಳಿಂದಲೂ ಸರ್ಕಾರ ಮುಕ್ತವಾಗಿರುತ್ತದೆ. ಹೀಗಾಗಿ ಸರ್ಕಾರದ ನಿರ್ಧಾರ ಪ್ರಶಂಸನೀಯವಾದುದು.