Advertisement

ಅಪೌಷ್ಟಿಕತೆ ನಿವಾರಣೆಗೆ ಮಾತೃಪೂರ್ಣ ಯೋಜನೆ ಸಹಕಾರಿ

09:20 PM Mar 16, 2020 | Lakshmi GovindaRaj |

ಸಕಲೇಶಪುರ: ಮಹಿಳೆಯರಲ್ಲಿ ರಕ್ತ ಹೀನತೆ ಮತ್ತು ಅಪೌಷ್ಟಿಕತೆ ನಿವಾರಿಸಲು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಿಂದ ಮಾತೃಪೂರ್ಣ ಯೋಜನೆ ಮತ್ತು ಪೋಷಣ್‌ ಕಾರ್ಯಕ್ರಮದಡಿ ಜಾಗೃತಿ ಮೂಡಿಸಲಾಗುತ್ತಿದೆ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಧಿಕಾರಿ ದಿಲೀಪ್‌ ಹೇಳಿದರು.

Advertisement

ತಾಲೂಕಿನ ಹೆಬ್ಬಸಾಲೆ ಗ್ರಾಮ ಪಂಚಾಯಿತಿಯಿಂದ ಮೇಳಳ್ಳಿ ಸಮುದಾಯ ಭವನದಲ್ಲಿ ಹಮ್ಮಿಕೊಂಡಿದ್ದ ವಿಶೇಷ ಮಹಿಳಾ ಗ್ರಾಮ ಸಭೆಯಲ್ಲಿ “ಮಹಿಳೆ ಮತ್ತು ಸರ್ಕಾರದ ಯೋಜನೆಗಳು’ ವಿಷಯ ಕುರಿತು ಮಾತನಾಡಿ ಗರ್ಭಿಣಿಯರು ಹಾಗೂ ಬಾಣಂತಿಯರಿಗೆ ಮಾತೃಪೂರ್ಣ ಯೋಜನೆ ಅಡಿಯಲ್ಲಿ ಅಂಗನವಾಡಿಗಳ ಮುಖಾಂತರ ಮೊಟ್ಟೆ ಹೆಸರುಕಾಳು, ಮೊಳಕೆ ಕಟ್ಟಿದ ಕಾಳು ಸೇರಿದಂತೆ ಬಿಸಿಯೂಟ ನೀಡಲಾಗುತ್ತಿದೆ. ಅಪೌಷ್ಟಿಕತೆಯಿಂದ ಬಳಲುತ್ತಿರುವ ಮಕ್ಕಳಿಗೆ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುವುದು ಎಂದರು.

ಸೌಲಭ್ಯದ ಬಗ್ಗೆ ಮಾಹಿತಿ: ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಜಿ.ಆರ್‌. ಹರೀಶ್‌ ಮಾತನಾಡಿ, ಗ್ರಾಪಂಚಾಯಿತಿಯಿಂದ ಉದ್ಯೋಗ ಖಾತ್ರಿ ಯೋಜನೆ, ವಸತಿ ಯೋಜನೆ, ಆಯುಷ್ಮಾನ್‌ ಕಾರ್ಡ್‌ ವಿತರಣೆ, ದಿವ್ಯಾಂಗರಿಗೆ ನೀಡುವ ಸೌಲಭ್ಯಗಳ ಬಗ್ಗೆ ಸಮಗ್ರ ಮಾಹಿತಿ ನೀಡಿದರು. ಮಹಿಳೆಯರಿಗೆ ಪಂಚಾಯತ್‌ ರಾಜ್‌ ಕಾಯಿದೆಯಲ್ಲಿ ಗ್ರಾಮ ಪಂಚಾಯಿತಿ ಚುನಾವಣೆಗಳಲ್ಲಿ ಸ್ಪರ್ಧಿಸಲು ಶೇ.50ರಷ್ಟು ಮೀಸಲಾತಿ ನೀಡಲಾಗಿದೆ.

ಗ್ರಾಮ ಪಂಚಾಯಿತಿಯಿಂದ ನಡೆಯುವ ವಾರ್ಡ್‌ ಸಭೆಗಳು, ಗ್ರಾಮ ಸಭೆಗಳಿಗೆ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು ಎಂಬ ಉದ್ದೇಶದಿಂದಲೇ ಸರ್ಕಾರ ಮಹಿಳಾ ಗ್ರಾಮ ಸಭೆಗಳನ್ನು ನಡೆಸುತ್ತಿದೆ. ಆಯಾ ಗ್ರಾಮದ ಮಹಿಳೆಯರು ಮೂಲ ಸೌಕರ್ಯಗಳ ಬಗ್ಗೆ ಪಂಚಾಯಿತಿ ಆಡಳಿತದ ಗಮನಕ್ಕೆ ತಂದು ಸೌಲಭ್ಯ ಪಡೆಬೇಕು ಎಂದರು.

ಮಹಿಳಾ ದೌರ್ಜನ್ಯ ಕಾಯಿದೆ ಹಾಗೂ ಪೋಕ್ಸೋ ಕಾಯಿದೆ ಬಗ್ಗೆ ನ್ಯಾಯವಾದಿ ಜ್ಯೋತಿ ರಾಜ್‌ಕುಮಾರ್‌ ಮಾಹಿತಿ ನೀಡಿದರು. ಕುಂಬರಡಿ ಸರ್ಕಾರಿ ಪ್ರಾಥಮಿಕ ಆರೋಗ್ಯ ಘಟಕದ ವೈದ್ಯಾಧಿಕಾರಿ ಡಾ. ಮಂಜುನಾಥ್‌ ಮಹಿಳೆಯರ ಆರೋಗ್ಯದ ಕುರಿತು ಮಾತನಾಡಿದರು.

Advertisement

ಗರ್ಭಿಣಿಯರಿಗೆ ಸೀಮಂತ: ಹೆಬ್ಬಸಾಲೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಆರ್ಥಿಕವಾಗಿ ಹಿಂದುಳಿದ ಕುಟುಂಬಗಳ 8 ಮಂದಿ ಗರ್ಭಿಣಿಯರಿಗೆ ಸೀಮಂತ ಕಾರ್ಯ ನಡೆಸಲಾಯಿತು. ಕೂಲಿ ಕಾರ್ಮಿಕ ಕುಟುಂಬದ ಮಹಿಳೆಯರಿಗೆ ಸರ್ಕಾರದ ಸೌಲಭ್ಯಗಳನ್ನು ಸ್ವಯಂ ಪ್ರೇರಿತರಾಗಿ ಒದಗಿಸುತ್ತಿರುವ ಸಮಾಜ ಸೇವಕಿ ಶಾಶ್ವತ ಶೆಟ್ಟಿ ಅವರನ್ನು ಸನ್ಮಾನಿಸಲಾಯಿತು.

ಕಾರ್ಯಕ್ರಮಕ್ಕೂ ಮೊದಲು ಮಹಿಳೆಯರಿಗೆ ಆಟೋಟ ಸ್ಪರ್ಧೆ ಹಗೂ ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿ ಬಹುಮಾನ ನೀಡಲಾಯಿತು. ಗ್ರಾಪಂ ಅಧ್ಯಕ್ಷೆ ಮೈಮುನಾ, ಉಪಾಧ್ಯಕ್ಷ ವೆಂಕಟೇಶ್‌, ಅಭಿವೃದ್ಧಿ ಅಧಿಕಾರಿ ಎಚ್‌.ವಿ. ವತ್ಸಲಾ ಕುಮಾರಿ ಹಾಗೂ ಸದಸ್ಯರು ಇದ್ದರು. ಸುಮಾರು 500ಕ್ಕೂ ಹೆಚ್ಚು ಮಹಿಳೆಯರು ಭಾಗವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next