ಹೊಸಪೇಟೆ: ಸರಕಾರಿ ಆಸ್ಪತ್ರೆಯಲ್ಲಿ ಮೃತಪಟ್ಟ ವೃದ್ಧೆಯ ಮೃತದೇಹವನ್ನು ಆಕೆಯ ಮಗ ಹೆಗಲ ಮೇಲೆ ಹೊತ್ತೂಯ್ದ ಅಮಾನವೀಯ ಘಟನೆ ಬಳ್ಳಾರಿ ಜಿಲ್ಲೆ ಹೊಸಪೇಟೆಯಲ್ಲಿ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ. ವೃದ್ಧೆಯ ಮೃತದೇಹವನ್ನು ಹೊತ್ತೂಯ್ಯುವ ವಿಡಿಯೋ ಈಗ ವೈರಲ್ ಆಗಿದ್ದು ಆಸ್ಪತ್ರೆಯಲ್ಲಿ ಸ್ಟ್ರೆಚರ್ ಇತ್ತೋ ಅಥವಾ ವೈದ್ಯರ ಮೇಲಿನ ಕೋಪದಿಂದ ಶವವನ್ನು
ಹೊತ್ತೂಯ್ಯಲಾಯಿತೆ ಎಂಬುದು ತಿಳಿದು ಬರಬೇಕಿದೆ.
ತಾಲೂಕಿನ ಮರಿಯಮ್ಮನಹಳ್ಳಿ ಹೋಬಳಿಯ ಗಾಳೆಮ್ಮನ ಗುಡಿ ಗ್ರಾಮದವರಾದ ಮಾರೆಪ್ಪ (76), ಪತ್ನಿ ತಿಪ್ಪಮ್ಮ (70) ಎಂಬ ವೃದ್ಧ ದಂಪತಿ ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದು ಭಾನುವಾರ ಬೆಳಗಿನ ಜಾವ ಆಸ್ಪತ್ರೆಗೆ ದಾಖಲಾಗಿದ್ದರು. ಇವರಿಬ್ಬರಿಗೂ ಚಿಕಿತ್ಸೆ ನೀಡಲಾಗಿದ್ದು ಭಾನುವಾರ ರಾತ್ರಿಯವರೆಗೂ ಆಸ್ಪತ್ರೆಯಲ್ಲೇ ಇದ್ದಾರೆ. ರಾತ್ರಿ ಪಾಳಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ವೈದ್ಯರು ಸಹ
ಇವರ ತಪಾಸಣೆ ನಡೆಸಿದ್ದರು ಎಂದು ತಿಳಿದುಬಂದಿದೆ. ಆದರೆ ಚಿಕಿತ್ಸೆಗೆ ಸ್ಪಂದಿಸದ ವೃದ್ಧ ದಂಪತಿ ಮೃತಪಟ್ಟಿದ್ದಾರೆ.
ವೈದ್ಯರ ನಿರ್ಲಕ್ಷದಿಂದಲೇ ಇಬ್ಬರೂ ಮೃತಪಟ್ಟಿದ್ದಾರೆಂದು ಸಂಬಂಧಿಕರು ಆರೋಪಿಸಿದ್ದಾರೆ. ಇದೇ ಸಮಯದಲ್ಲಿ ಅಪಘಾತದಲ್ಲಿ ಗಾಯಗೊಂಡವರನ್ನು ಆಸ್ಪತ್ರೆಗೆ ಕರತರಲಾಗಿದ್ದು ಆ ಸಮಯದಲ್ಲೇ ಮೃತ ತಾಯಿಯ ಶವವನ್ನು ಮಗ ತನ್ನ ಹೆಗಲ ಮೇಲೆ ಹೊತ್ತು ಆಸ್ಪತ್ರೆಯಿಂದ ತೆರಳಿದ್ದಾನೆ. ವಾರ್ಡ್‌ನಿಂದ ಶವ ಸಾಗಿಸಲು ಸ್ಟ್ರೆಚರ್ ಇತ್ತೋ ಅಥವಾ ಇರಲಿಲ್ಲವೋ ಎಂಬುದು ತಿಳಿದು ಬರಬೇಕಿದೆ. ಆಸ್ಪತ್ರೆಗೆ ದಾಖಲಾದ ವೃದ್ಧ ದಂಪತಿಗೆ ಸೂಕ್ತ ಚಿಕಿತ್ಸೆ ನೀಡಲಾಗಿದೆ. ಯಾವ ವೈದ್ಯರೂ ನಿರ್ಲಕ್ಷ ವಹಿಸಿಲ್ಲ. ಆದರೆ ಮೃತ ದೇಹ ಹೊತ್ತಯ್ದ ಬಗ್ಗೆ ಮಾಹಿತಿ ಇಲ್ಲ. ಘಟನೆ ಕುರಿತು ಸಿಬ್ಬಂದಿಯನ್ನು ವಿಚಾರಿಸಲಾಗುವುದು ಎಂದು ಆಸ್ಪತ್ರೆ ಪ್ರಭಾರಿ ವೈದ್ಯಾಧಿಕಾರಿ ಡಾ| ಸಲೀಂ ತಿಳಿಸಿದ್ದಾರೆ. ಈ ಘಟನೆ ಕುರಿತು ಪೊಲೀಸ್ ಠಾಣೆಯಲ್ಲಿ ಯಾವುದೇ ಪ್ರಕರಣ ದಾಖಲಾಗಿಲ್ಲ.
ಸ್ಟ್ರೆಚರ್ ಸಿಗದೆ ವೃದ್ಧೆಯ ಶವ ಹೊತ್ತೂಯುತ್ತಿರುವ ದೃಶ್ಯ.